ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತೆಯ ನೇವರಿಕೆ; ಪ್ರೇಮದ ಕನವರಿಕೆ

Last Updated 15 ಜೂನ್ 2018, 10:51 IST
ಅಕ್ಷರ ಗಾತ್ರ

ಚಿತ್ರ: ಅಮ್ಮ ಐ ಲವ್‌ ಯು

ನಿರ್ಮಾಪಕರು: ಬಿ.ಎಸ್‌. ದ್ವಾರಕೀಶ್‌, ಯೋಗೀಶ್‌ ದ್ವಾರಕೀಶ್‌

ನಿರ್ದೇಶನ: ಕೆ.ಎಂ. ಚೈತನ್ಯ

ತಾರಾಗಣ: ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಪ್ರಕಾಶ್‌ ಬೆಳವಾಡಿ, ಸಿತಾರಾ, ಚಿಕ್ಕಣ್ಣ, ಬಿರಾದಾರ್, ರವಿ ಕಾಳೆ

ಸಿದ್ಧಾರ್ಥನಿಗೆ ಅಮ್ಮನೇ ಸರ್ವಸ್ವ. ಜೀವನದಲ್ಲಿ ನೊಂದ ಜೀವಗಳಿಗೆ ಆಕೆ ಚೈತನ್ಯ ನೀಡುವ ದೀಪ. ಗಾಢ ಕತ್ತಲ ಬದುಕಿನ ನಡುವೆ ಬಣ್ಣ ಬಣ್ಣದ ಆಸೆ ಚಿಗುರೊಡೆಸಿ ದಾರಿ ತೋರಿಸಿದ ತ್ಯಾಗಮಯಿ. ತನ್ನ ಉದ್ಯಮವನ್ನು ಮಗನೇ ಮುನ್ನಡೆಸಬೇಕೆಂಬ ಹಂಬಲ ಆಕೆಯದ್ದು. ವಿದೇಶದಿಂದ ಉನ್ನತ ಶಿಕ್ಷಣ ಪಡೆದು ತಾಯ್ನಾಡಿಗೆ ಬಂದ ಮಗನಿಗೆ ಗಾರ್ಮೆಂಟ್‌ನ ಜವಾಬ್ದಾರಿಯನ್ನೂ ಒಪ್ಪಿಸುತ್ತಾಳೆ. ಒಮ್ಮೆ ಗಾರ್ಮೆಂಟ್‌ನಲ್ಲಿ ಸಂಭವಿಸಿದ ಅವಘಡದಿಂದ ಕೋಮಾಕ್ಕೆ ಜಾರುತ್ತಾಳೆ. ಆಗ ಸಿದ್ಧಾರ್ಥನಿಗೆ ದಿಕ್ಕುಕಾಣದಾಗುತ್ತದೆ.

ಜೀವದಾತೆಯ ಮಮತೆ, ವಾತ್ಸಲ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವಳ ಮನಸ್ಸು ಅರ್ಥ ಮಾಡಿಕೊಂಡು ಸಾಗುವ ಹೃದಯ ಇರಬೇಕು ಎನ್ನುವುದನ್ನು ‘ಅಮ್ಮ ಐ ಲವ್‌ ಯು’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ. ಇದು ತಮಿಳಿನ ‘ಪಿಚ್ಚೈಕಾರನ್‌’ ಚಿತ್ರದ ರಿಮೇಕ್ ಆಗಿದ್ದು, ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ.

ಅಮ್ಮನ ಜೀವ ಉಳಿಸಲು ಭಿಕ್ಷಾಟನೆ ಮಾಡುವ ಸಿದ್ಧಾರ್ಥ (ಚಿರಂಜೀವಿ ಸರ್ಜಾ) ಚಿತ್ರದ ಕೇಂದ್ರಬಿಂದು. ಆತ ಆಗರ್ಭ ಶ್ರೀಮಂತ. ಆದರೆ, ಕೋಮಾದಲ್ಲಿರುವ ತಾಯಿಯನ್ನು ಬದುಕಿಸಿಕೊಳ್ಳಲು ಮಾಡುವ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ. ದಿಕ್ಕುತೋಚದ ಆತನಿಗೆ ಸ್ವಾಮೀಜಿಯ ಮಾತುಗಳೇ ಮಾರ್ಗದರ್ಶನವಾಗುತ್ತವೆ. ನವಲತ್ತೆಂಟು ದಿನಗಳ ಕಾಲ ತನ್ನ ಗುರುತು ಮುಚ್ಚಿಟ್ಟು ಭಿಕ್ಷಾಟನೆ ಮಾಡುತ್ತಾನೆ.

ಭಿಕ್ಷುಕರ ಬದುಕಿನ ಏರಿಳಿತ ಮತ್ತು ಜೀವನದ ಅರ್ಥ ಎರಡನ್ನೂ ಹೊಸೆದು ಸೊಗಸಾಗಿ ಸಿನಿಮಾ ಕಟ್ಟಲಾಗಿದೆ. ಒಂದೆಡೆ ಭಿಕ್ಷೆ ಬೇಡಿ ಹರಕೆ ತೀರಿಸುವ ಮೂಲಕ ಅಮ್ಮನ ಪ್ರೀತಿ ಪಡೆಯಲು ಹೊರಟ ಮಗ, ಮತ್ತೊಂದೆಡೆ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ ಈ ಎರಡೂ ಪಾತ್ರಗಳು ಜೀವನ ಸಂಗ್ರಾಮದ ಎರಡು ದಿಕ್ಕುಗಳಾಗಿ ಕಾಣುತ್ತವೆ. ಪ್ರೀತಿಯೇ ಈ ಎರಡೂ ದಿಕ್ಕುಗಳ ಮೂಲವೂ ಆಗಿದೆ.

ಮೊದಲಾರ್ಧ ಮಮತೆ, ಪ್ರೀತಿಯ ಹುಡುಕಾಟದಲ್ಲಿ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆಯಲ್ಲಿನ ಬಿಗಿತನ ನೋಡುಗರ ಮನತಟ್ಟುತ್ತದೆ. ಅಮ್ಮನ ಜೀವ ಉಳಿಸಲು ಭಿಕ್ಷುಕನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಸೊಗಸಾಗಿ ನಟಿಸಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಅವರದು ಅಚ್ಚುಕಟ್ಟಾದ ನಟನೆ. ಅಮ್ಮನಾಗಿ ಸಿತಾರಾ ಇಷ್ಟವಾಗುತ್ತಾರೆ. ಜಿಪುಣ ಉದ್ಯಮಿಯ ಪಾತ್ರದಲ್ಲಿ ಪ್ರಕಾಶ್‌ ಬೆಳವಾಡಿ ನಗೆಯುಕ್ಕಿಸುತ್ತಾರೆ. ಚಿಕ್ಕಣ್ಣ, ಬಿರಾದಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗುರುಕಿರಣ್‌ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಶೇಖರ್‌ಚಂದ್ರ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ಮಗನೊಬ್ಬ ತಾಯಿಗಾಗಿ ಮಾಡುವ ತ್ಯಾಗದ ಕಥೆ ಆಧರಿಸಿದ ಸಿನಿಮಾಗಳು ವಿರಳ. ರಿಮೇಕ್‌ ಆದರೂ ‘ಅಮ್ಮ ಐ ಲವ್‌ ಯು’ ಸ್ವಲ್ಪಮಟ್ಟಿಗೆ ಈ ಕೊರತೆ ನೀಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT