ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಊರಲ್ಲಿ ಮುಳುಗಡೆಯ ಭೀತಿ!

ಅಭಿವೃದ್ಧಿ ಕಾಣದ ಹಿರೆಕರೆ ಕೋಡಿಯ ಮಾರ್ಗl ಅಪಾಯದ ಅಂಚಿನಲ್ಲಿ ತಗ್ಗು ಪ್ರದೇಶಗಳು
Last Updated 15 ಜೂನ್ 2018, 11:31 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಹೊಳಲ್ಕೆರೆ’ ಹೆಸರೇ ಹೇಳುವಂತೆ ಕೆರೆಗಳ ಊರಾಗಿದ್ದು, ಪಟ್ಟಣದ ಸುತ್ತ ಮೂರು ಕೆರೆಗಳು ಆವರಿಸಿವೆ. ಪೂರ್ವಕ್ಕೆ ಹೊನ್ನೆಕೆರೆ, ಉತ್ತರಕ್ಕೆ ಹಿರೆಕೆರೆ, ದಕ್ಷಿಣಕ್ಕೆ ಕೆಸರುಗಟ್ಟೆ ಕೆರೆಗಳಿದ್ದು, ಪಟ್ಟಣವು ಪರ್ಯಾಯ ದ್ವೀಪದಂತಿದೆ. ಪ್ರತಿ ಮಳೆಗಾಲದಲ್ಲೂ ಪಟ್ಟಣದ ತಗ್ಗು ಪ್ರದೇಶ, ಕೆರೆ, ಕಾಲುವೆಗಳ ತೀರದಲ್ಲಿ ವಾಸಿಸುವ ನಾಗರಿಕರು ಸಂಕಷ್ಟ ಅನುಭವಿಸುವುದು ತಪ್ಪುವುದಿಲ್ಲ.

ದುರಸ್ತಿ ಕಾಣದ ಕೋಡಿ ಪ್ರದೇಶ: ಪಟ್ಟಣದ ದಾವಣಗೆರೆ ರಸ್ತೆಯಲ್ಲಿರುವ ಹಿರೆಕೆರೆ ಅತಿದೊಡ್ಡ ಕೆರೆಯಾಗಿದ್ದು, ಕೆರೆಯ ಕೋಡಿ ಅಭಿವೃದ್ಧಿ ಕಾಣದೆ ಹಾಳಾಗಿದೆ. ಕೋಡಿಯ ಹಳ್ಳ ದಾವಣಗೆರೆ, ಶಿವಮೊಗ್ಗ ರಸ್ತೆಗಳನ್ನು ಸಂಪರ್ಕಿಸಿದ್ದು, ಕೋಡಿಗೆ ನಿರ್ಮಿಸಿರುವ ಸೇತುವೆಯೂ ಹಾಳಾಗಿದೆ. ಸೇತುವೆಗೆ ತಡೆಗೋಡೆ ಇಲ್ಲದೆ ವಾಹನಗಳು ಕೋಡಿಯ ಹಳ್ಳಕ್ಕೆ ಬೀಳುವುದು ಸಾಮಾನ್ಯವಾಗಿದೆ. ಕೋಡಿಯ ಹಳ್ಳದಲ್ಲಿ ಗಿಡ, ಗಂಟಿ, ಮರ, ಗಿಡಗಳು ಬೆಳೆದಿದ್ದು, ಅನೇಕ ಭಾಗ ತ್ಯಾಜ್ಯದಿಂದ ಮುಚ್ಚಿ ಹೋಗಿದೆ.

ಹಿರೆಕೆರೆ ತುಂಬಿದಾಗ ಹೊರಬರುವ ನೀರು ಇದೇ ಮಾರ್ಗದಲ್ಲಿ ಹರಿಯ ಲಿದ್ದು, ಕೋಡಿಯಲ್ಲಿ ಹೂಳು ತುಂಬಿರುವುದರಿಂದ ನೀರು ವಸತಿ ಪ್ರದೇಶಕ್ಕೆ ನುಗ್ಗುವ ಆತಂಕ ಎದುರಾಗಿದೆ. ಕೋಡಿಯ ಅಂಚಿನಲ್ಲಿರುವ ಚನ್ನಪ್ಪ ಬಡಾವಣೆಯ ಮನೆಗಳು ಕೋಡಿ ನೀರಿಗೆ ಸಿಲುಕುವ ಭಯವಿದೆ.

‘ಏಳೆಂಟು ವರ್ಷಗಳ ಹಿಂದೆ ಕೆರೆ ಕೋಡಿ ಬಿದ್ದಾಗ ಹೆಚ್ಚು ನೀರು ಹೊರಬಂದಿತ್ತು. ಆಗ ಕೋಡಿಯ ಅಂಚಿನಲ್ಲಿದ್ದ ಮನೆಗಳು ಕುಸಿದು ಹೋಗಿದ್ದವು. ಇಲ್ಲಿನ ನಿವಾಸಿಯೊಬ್ಬ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಆದರೆ ಪಟ್ಟಣ ಪಂಚಾಯಿತಿ ಮಾತ್ರ ಜನರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂಬ ಆರೋಪ ಇಲ್ಲಿನ ನಿವಾಸಿಗಳದ್ದು.

‘ಈ ಬಾರಿ ಜೂನ್ ತಿಂಗಳಿನ ಆರಂಭದಲ್ಲೇ ಕುಡಿನೀರಕಟ್ಟೆ ಕೆರೆ ತುಂಬಿ ಕೋಡಿ ಬಿದ್ದಿದ್ದು, ಮುಂದೆ ಬರುವ ಮಳೆ ನೀರೆಲ್ಲ ಹಿರೆಕರೆ ತಲುಪುತ್ತದೆ. ಈ ವರ್ಷ ಹಿರೆಕೆರೆ ತುಂಬುವುದು ಖಾತರಿಯಾಗಿದ್ದು, ಕೋಡಿ ಭಾಗದ ಜನ ಆತಂಕದಲ್ಲಿದ್ದಾರೆ. ಪಟ್ಟಣ ಪಂಚಾಯಿತಿ ಶೀಘ್ರವೇ ಕೆರೆ ಕೋಡಿ ಜಾಗವನ್ನು ದುರಸ್ತಿ ಮಾಡಬೇಕು. ಕೋಡಿಯ ಎರಡೂ ಬದಿಯಲ್ಲಿ ಸಿಮೆಂಟ್ ತಡೆಗೋಡೆ ನಿರ್ಮಿಸಬೇಕು. ನೀರು ವಸತಿ ಪ್ರದೇಶಕ್ಕೆ ನುಗ್ಗದೆ ಕೋಡಿಯಲ್ಲೇ ಹರಿದು ಹೋಗುವಂತೆ ದುರಸ್ತಿ ಮಾಡಬೇಕು’ ಎಂದು ಚನ್ನಪ್ಪ ಬಡಾವಣೆ ನಿವಾಸಿ ಸಿ.ರವಿ ಆಗ್ರಹಿಸುತ್ತಾರೆ.

ಹಿರೆಕೆರೆ ತುಂಬಿದರೂ ಅಪಾಯ: ಹೊಸದುರ್ಗ ಮಾರ್ಗದಲ್ಲಿರುವ ಹಿರೆಕೆರೆ ಪಟ್ಟಣಕ್ಕೆ ಅಂಟಿಕೊಂಡಿದ್ದು, ಕೆರೆ ತುಂಬಿದರೆ ರಾಮಪ್ಪ ಬಡಾವಣೆಯ ಕೊನೆಯ ಭಾಗ ಮುಳುಗಡೆ ಆಗುತ್ತದೆ. ಹೆಚ್ಚು ನೀರು ಬಂದರೆ ಬಡಾವಣೆಯ ಮನೆಗಳಲ್ಲಿ ನೀರು ಬಸಿಯುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುರಿದ ಮಳೆಯಿಂದ ಕೆರೆ ತುಂಬಿದಾಗ ಈ ಪ್ರದೇಶದ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಹಿರೆಕೆರೆ ಭರ್ತಿಯಾದರೆ ಹಿನ್ನೀರು ಭಾಗವಾದ ಗಣಪತಿ ದೇವಾಲಯ ಪ್ರದೇಶ ಕೂಡ ಜಲಾವೃತ ಆಗಲಿದೆ.

ಮುಚ್ಚಿಹೋದ ರಾಜಕಾಲುವೆ: ಪಟ್ಟಣದ ಎತ್ತರದ ಪ್ರದೇಶಗಳಾದ ಚಿತ್ರದುರ್ಗ ರಸ್ತೆ, ಕೋಟೆ ಪ್ರದೇಶದಿಂದ ಬರುವ ಮಳೆನೀರು ಮುಖ್ಯವೃತ್ತದ ಮೂಲಕ ಬಸ್ ನಿಲ್ದಾಣದ ಕಡೆಗೆ ಹರಿಯುತ್ತದೆ. ಈ ಮಾರ್ಗದಲ್ಲಿ ಸುಸಜ್ಜಿತ ಚರಂಡಿ ಇಲ್ಲದೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಮುಖ್ಯವೃತ್ತದ ಪಕ್ಕದಲ್ಲಿರುವ ರಾಜ ಕಾಲುವೆ ತ್ಯಾಜ್ಯಗಳಿಂದ ಮುಚ್ಚಿ ಹೋಗಿದ್ದು, ಕಾಲುವೆಯಿಂದ ಹೊರಗೆ ರಸ್ತೆಯ ಮೇಲೆಯೇ ನೀರು ಹರಿ ಯುತ್ತದೆ. ಹೆಚ್ಚು ಮಳೆಯಾದರೆ ಸಿದ್ದರಾ ಮಪ್ಪ ಬಡಾವಣೆಯ ತಗ್ಗು ಪ್ರದೇಶವೂ ಜಲಾವೃತವಾಗುವ ಭೀತಿ ಎದುರಾಗಿದೆ.

ಕೆರೆಗಳೂ ಅಭಿವೃದ್ಧಿ ಕಂಡಿಲ್ಲ: ಪಟ್ಟಣಕ್ಕೆ ಹೊಂದಿಕೊಂಡಿರುವ ಮೂರು ಕೆರೆಗಳೂ ಯಾವುದೇ ಅಭಿವೃದ್ಧಿ ಹೊಂದಿಲ್ಲ. ಕೆರೆಗಳಲ್ಲಿ ಹೂಳು ತುಂಬಿದ್ದು, ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಮೂರೂ ಕೆರೆಗಳ ತುಂಬ ಸೀಮೆಜಾಲಿ ಬೆಳೆದಿದ್ದು, ತೆರವುಗೊಳಿಸುವ ಕಾರ್ಯವೂ ನಡೆದಿಲ್ಲ.

ಕೆರೆಗಳಲ್ಲಿನ ಸೀಮೆಜಾಲಿ, ಹೂಳು ತೆಗೆಸಿ ಹೆಚ್ಚು ನೀರು ಸಂಗ್ರಹ ಆಗುವಂತೆ ಮಾಡುವುದು, ಕೋಡಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಮೂಲಕ ತಗ್ಗು ಪ್ರದೇಶದ ನಿವಾಸಿಗಳಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಪಟ್ಟಣ ಪಂಚಾಯಿತಿ ಹಾಗೂ ಶಾಸಕರ ಮೇಲಿದೆ.

ಕೋಡಿ ನೀರು ನಮ್ಮ ಬಡಾವಣೆ ಪಕ್ಕದಲ್ಲೇ ಇರುವ ಹೊಂಡಕ್ಕೆ ಹೋಗುತ್ತದೆ. ಹೊಂಡದಲ್ಲಿ ಕೊಳಚೆ ನೀರು ಸಂಗ್ರಹ ಆಗಿರುವುದರಿಂದ ಸದಾ ದುರ್ವಾಸನೆ ಬರುತ್ತದೆ
–  ಓಂಕಾರಪ್ಪ, ನಿವಾಸಿ 

-ಸಾಂತೇನಹಳ್ಳಿ ಸಂದೇಶ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT