ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲದಲ್ಲಿ ವರುಣನ ಆರ್ಭಟ

₨ 100 ಕೋಟಿ ಅನುದಾನ ಬಿಡುಗಡೆಗೆ ಒತ್ತಾಯ
Last Updated 15 ಜೂನ್ 2018, 12:54 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆ ತನಕ ಭಾರಿ ಮಳೆಯಾಗಿದೆ. ಗುರುವಾರ ಇಡೀ ದಿನ ಮಳೆ ಬಿಡುವು ನೀಡಿತು. ಅಲ್ಲಲ್ಲಿ ತುಂತುರು ಮಳೆಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜತೆಗೆ, ಅಲ್ಲಲ್ಲಿ ಗುಡ್ಡ ಹಾಗೂ ರಸ್ತೆ ಕುಸಿತದ ಘಟನೆಗಳು ನಡೆದಿವೆ. ಹೀಗಾಗಿ, ಗುರುವಾರ ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಭಾಗಮಂಡಲವು ಜಲಾವೃತ ವಾಗಿತ್ತು. ದೇವಸ್ಥಾನ ಮುಂಭಾಗದ ಮೆಟ್ಟಿಲಿನ ತನಕವೂ ನೀರು ನಿಂತಿತ್ತು. ಸಂಜೆಯ ಬಳಿಕ ಪ್ರವಾಹ ಸ್ಥಿತಿ ಕಡಿಮೆ ಆಯಿತು. ಇಡೀ ದಿವಸ ನಾಪೋಕ್ಲು, ತಲಕಾವೇರಿ, ಮಡಿಕೇರಿ, ಐಯ್ಯಂಗೇರಿ ಸಂಪರ್ಕ ಕಡಿತವಾಗಿತ್ತು. ರ್‍ಯಾಫ್ಟಿಂಗ್‌ ಬೋಟ್‌ ಬಳಸಿ ರಸ್ತೆ ದಾಟಲಾಯಿತು.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 85.06 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1,034.72 ಮಿ.ಮೀ. ಮಳೆ ಸುರಿದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 446.64 ಮಿ.ಮೀ. ಮಳೆ ಬಿದ್ದಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 148.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.10 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇದುವರೆಗೆ 1,374.44 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿ ನಲ್ಲಿ 75.22 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 31.50 ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ 111.80, ನಾಪೋಕ್ಲು 131, ಸಂಪಾಜೆ 156, ಭಾಗಮಂಡಲ 195, ವಿರಾಜಪೇಟೆ ಕಸಬಾ 94.20, ಹುದಿಕೇರಿ 98.50, ಶ್ರೀಮಂಗಲ 88.40, ಪೊನ್ನಂಪೇಟೆ 80.20, ಅಮ್ಮತಿ 51.50, ಬಾಳೆಲೆ 38.50, ಸೋಮವಾರಪೇಟೆ ಕಸಬಾ 45.40, ಶನಿವಾರಸಂತೆ 31.40, ಶಾಂತಳ್ಳಿ 64.20, ಕೊಡ್ಲಿಪೇಟೆ 16, ಸುಂಟಿಕೊಪ್ಪ 10, ಕುಶಾಲನಗರ 22 ಮಿ.ಮೀ. ಮಳೆಯಾಗಿದೆ.

₹100 ಕೋಟಿಗೆ ಒತ್ತಾಯ: ‘ಮಳೆಯಿಂದ ಜಿಲ್ಲೆಯಲ್ಲಿ ಸುಮಾರು ₹100 ಕೋಟಿಯಷ್ಟು ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.

‘ನಗರದಲ್ಲಿ 8ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಜಿಲ್ಲೆಯಲ್ಲಿ ಮಳೆಯಿಂದ ಅಪಾರ ನಷ್ಟ ಉಂಟಾಗಿದ್ದು, ಸರ್ಕಾರ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ನಗರಸಭಾ ಸದಸ್ಯೆ ಲಕ್ಷ್ಮಿ, ಅನಿತಾ ಪೂವಯ್ಯ, ಉನ್ನಿಕೃಷ್ಣ, ಪಿ.ಡಿ. ಪೊನ್ನಪ್ಪ ಹಾಜರಿದ್ದರು.

ಶಾಸಕರಾದ ಕೆ.ಜಿ. ಬೋಪಯ್ಯ ಮಾತನಾಡಿ, ‘ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವುದರಿಂದ ಡಾ.ನಂಜುಂಡಪ್ಪ ವರದಿಯಲ್ಲಿರುವಂತೆ ಜಿಲ್ಲೆಗೆ ಪ್ರತ್ಯೇಕ ರಸ್ತೆ ಅಭಿವೃದ್ಧಿನಿಧಿ ಸ್ಥಾಪಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಅಪ್ಪಚ್ಚು ರಂಜನ್‌ ಭೇಟಿ: ಒಂದು ವಾರದಿಂದ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಉಂಟಾಗಿ ಬರೆ ಕುಸಿತದ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸುನಿಲ್ ಸುಬ್ರಮಣಿ ಭೇಟಿ ನೀಡಿ ವೀಕ್ಷಿಸಿದರು. ನಗರದ ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ದೇಚೂರು ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿ, ಬಳಿಕ ನಗರಸಭೆ ವತಿಯಿಂದ ನೀಡುವ ತಾಡಪಾಲ್‌ ವಿತರಣೆ ಮಾಡಿದರು.

ಶಾಸಕ ಅಪ್ಪಚ್ಚು ರಂಜನ್‌, ರಸ್ತೆಬದಿಗೆ ಬಿದ್ದಿರುವ ಮರ ಹಾಗೂ ಮಣ್ಣುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT