ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಹತ್ಯೆಗಿಲ್ಲ ಪೂರ್ಣವಿರಾಮ

ಮಾಧ್ಯಮ ಸ್ವಾತಂತ್ರ್ಯ, ಮಾಧ್ಯಮ ಪ್ರತಿನಿಧಿಗಳ ಕೊಲೆಗಳ ಸುತ್ತ...
Last Updated 15 ಜೂನ್ 2018, 20:00 IST
ಅಕ್ಷರ ಗಾತ್ರ

‘ರೈಸಿಂಗ್‍ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಶುಜಾತ್‍ ಬುಖಾರಿ ಅವರನ್ನು ಶ್ರೀನಗರದ ಅವರ ಕಚೇರಿ ಸಮೀಪದಲ್ಲಿ ಗುರುವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. 2016ರಲ್ಲಿ ಬೆಂಗಳೂರಿನ ತಮ್ಮ ಮನೆಯ ಸಮೀಪ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ ಹಂತಕರ ಪತ್ತೆ ಕಾರ್ಯ ಬಿರುಸು ಪಡೆದಂತಿದೆ.

ಪತ್ರಕರ್ತರ ಮೇಲೆ ದೈಹಿಕ ಹಲ್ಲೆ, ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನಿರಂತರವಾಗಿ ನಡೆಯುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹತ್ಯೆಯ ಯಾವುದೇ ಪ್ರಕರಣವೂ ತಾರ್ಕಿಕ ಅಂತ್ಯ ಕಂಡಿಲ್ಲ. ಮಾಧ್ಯಮದಲ್ಲಿ ಕೆಲಸ ಮಾಡುವವರ ಹತ್ಯೆ ಬಗ್ಗೆ ಒಂದು ನೋಟ:

ಯಾವೆಲ್ಲ ರೀತಿಯಲ್ಲಿ ಪತ್ರಕರ್ತರ ಹತ್ಯೆಗಳಾಗಿವೆ?

ಮಹಾರಾಷ್ಟ್ರದ ಪತ್ರಕರ್ತ ಸಂದೀಪ್‍ ಕೊಠಾರಿ ಅವರನ್ನು 2015ರ ಜೂನ್‍ 19 ಅಥವಾ 20ರಂದು ಹತ್ಯೆ ಮಾಡಲಾಗಿದೆ. ಅವರು ಮಧ್ಯಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮರಳು ಮಾಫಿಯಾ ಬಗ್ಗೆ ವಿಸ್ತೃತ ವರದಿಗಳನ್ನು ಮಾಡಿದ್ದರು. ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಮರಳು ಮಾಫಿಯಾವೇ ಸಂದೀಪ್‍ ಹತ್ಯೆ ಮಾಡಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಮರಳು ಮಾಫಿಯಾ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ಮಾಡಿದ ಹಲವು ಪತ್ರಕರ್ತರು ಈ ರೀತಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.

ಕೆಲವು ಪತ್ರಕರ್ತರು ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಸಂಸ್ಥೆ ಹೇಳಿದೆ. 2015ರ ಜೂನ್‍ 8ರಂದು ಉತ್ತರ ಪ್ರದೇಶದ ಷಹಾಜಹಾನ್‍ಪುರದಲ್ಲಿ ಜಗೇಂದ್ರ ಸಿಂಗ್‍ ಅವರ ಹತ್ಯೆಯಾಗಿದೆ.

ಸುಟ್ಟ ಗಾಯಗಳಿಂದ ಅವರು ಮೃತಪಟ್ಟರು. ಸಾಯುವುದಕ್ಕೆ ಮೊದಲು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ‘ಶ್ರೀಪ್ರಕಾಶ್‍ ರಾಯ್‍ ಎಂಬ ಪೊಲೀಸ್‍ ಅಧಿಕಾರಿ ತಮ್ಮ ಮೇಲೆ ಪೆಟ್ರೋಲ್‍ ಸುರಿದು ಬೆಂಕಿ ಹಚ್ಚಿದರು’ ಎಂದು ತಿಳಿಸಿದ್ದಾರೆ.

ನರೇಂದ್ರ ದಾಭೋಲ್ಕರ್ 2013ರ ಆಗಸ್ಟ್ 10ರಂದು ಮುಂಬೈಯಲ್ಲಿ ಕೊಲೆಯಾದರು. ಮೂಢನಂಬಿಕೆ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿದ್ದ ಅವರನ್ನು ‘ಸನಾತನ ಸಂಸ್ಥೆ’ಗೆ ಸೇರಿದವರು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದರೂ ಸನಾತನ ಸಂಸ್ಥೆಯು ಈ ಆರೋಪವನ್ನು ಅಲ್ಲಗಳೆದಿದೆ.

ಕಾಶ್ಮೀರದಲ್ಲಿ ಹಲವು ಪತ್ರಕರ್ತರು ಪ್ರತ್ಯೇಕತಾವಾದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಭದ್ರತಾ ಪಡೆಯ ಗುಂಡೇಟಿನಿಂದ ಪ್ರಾಣ ತೆತ್ತವರೂ ಇದ್ದಾರೆ.

ಪತ್ರಕರ್ತರ ಹತ್ಯೆಯ ಹಿಂದಿನ ಉದ್ದೇಶಗಳೇನು?

1992ರಿಂದ 2018ರ ಅವಧಿಯಲ್ಲಿ ಭಾರತದಲ್ಲಿ 74 ಪತ್ರಕರ್ತರ ಹತ್ಯೆಯಾಗಿದೆ (ಶುಜಾತ್‍ ಬುಖಾರಿ ಹತ್ಯೆಯೊಂದಿಗೆ ಇದು 75ಕ್ಕೆ ಏರಿದೆ) ಎಂದು ಕಮಿಟಿ ಟುಪ್ರೊಟೆಕ್ಟ್ ಜರ್ನಲಿಸ್ಟ್ಸ್ ಸಂಸ್ಥೆ ವರದಿ ಮಾಡಿದೆ. ಇವರ ಪೈಕಿ 26 ಹತ್ಯೆಗಳು ಯಾಕಾಗಿ ನಡೆದಿವೆ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಅಪಾಯಕಾರಿ ಸನ್ನಿವೇಶಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಹಲವು ಪತ್ರಕರ್ತರು ಜೀವ ತೆತ್ತಿದ್ದಾರೆ. ಶಂತನು ಭೌಮಿಕ್‌ ಅವರನ್ನು 2017ರ ಸೆಪ್ಟೆಂಬರ್ 20ರಂದು ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಕೊಲೆ ಮಾಡಲಾಗಿದೆ. ತ್ರಿಪುರಾದ ಎರಡು ಗುಂಪುಗಳ ನಡುವಣ ಸಂಘರ್ಷವನ್ನು ವರದಿ ಮಾಡಲು ತೆರಳಿದ್ದ ಅವರನ್ನು ಹೊಡೆದು ಕೊಲ್ಲಲಾಗಿತ್ತು.

ಅಪಾಯಕಾರಿ ಸನ್ನಿವೇಶದಲ್ಲಿ ಕರ್ತವ್ಯ ನಿರ್ವಹಿಸುವಾಗ ಹತ್ಯೆಯಾದ ಪತ್ರಕರ್ತರ ಸಂಖ್ಯೆ 14. ಉಳಿದವರ ಪೈಕಿ 34 ಮಂದಿ ಪತ್ರಕರ್ತರ ಕೊಲೆಗೆ ಮೂಲಭೂತವಾದ, ಅಕ್ರಮ ಬಯಲಿಗೆಳೆದದ್ದರ ಬಗ್ಗೆ ಆಕ್ರೋಶ, ಪೊಲೀಸ್‍ ದೌರ್ಜನ್ಯ ಇತ್ಯಾದಿ ಕಾರಣಗಳಿವೆ.

ಜಾಗತಿಕ ಮಟ್ಟದಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿ ಏನು?

‘ರಿಪೋರ್ಟರ್ಸ್‍ ವಿದೌಟ್‍ ಬಾರ್ಡರ್ಸ್‍’ ಸಂಸ್ಥೆಯು ಪ್ರತಿ ವರ್ಷ ವಿವಿಧ ದೇಶಗಳಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಅಧ್ಯಯನ ನಡೆಸಿ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ. 2018ರ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪಟ್ಟಿಯಲ್ಲಿ 138ನೇ ಸ್ಥಾನ ಪಡೆದಿದೆ.

ನಮ್ಮ ದೇಶವು 2017ರ ಶ್ರೇಯಾಂಕದಿಂದ ಎರಡು ಸ್ಥಾನ ಕುಸಿದಿದೆ. 2016ಕ್ಕಿಂತ 2017ರಲ್ಲಿ ಮೂರು ಸ್ಥಾನ ಕುಸಿತವಾಗಿದೆ. ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಲೇ ಇದೆ ಎಂಬುದನ್ನು ಇದು ಸೂಚಿಸುತ್ತದೆ.

‘ರಾಷ್ಟ್ರೀಯ ಸಂವಾದದಲ್ಲಿ ‘ದೇಶ ವಿರೋಧಿ’ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಹಿಂದೂ ರಾಷ್ಟ್ರೀಯವಾದಿಗಳು ಪ್ರಯತ್ನಿಸುತ್ತಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮದಲ್ಲಿ ಸ್ವ-ಸೆನ್ಸಾರ್‌ಶಿಪ್‌ ಹೆಚ್ಚುತ್ತಿದೆ.

ತೀವ್ರ ರಾಷ್ಟ್ರೀಯವಾದಿಗಳು ಅಂತರ್ಜಾಲದ ಮೂಲಕ ಪತ್ರಕರ್ತರಿಗೆ ಕಳಂಕ ಹಚ್ಚುವ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ದೈಹಿಕ ಹಲ್ಲೆಯ ಬೆದರಿಕೆಯನ್ನೂ ಒಡ್ಡಲಾಗುತ್ತಿದೆ’ ಎಂದು ‘ರಿಪೋರ್ಟರ್ಸ್‍ ವಿದೌಟ್‍ ಬಾರ್ಡರ್ಸ್‍’ನ 2018ರ ವರದಿ ಹೇಳಿದೆ. ಗೌರಿ ಲಂಕೇಶ್‍ ಹತ್ಯೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ರಕ್ಷಣೆಗೆ ಭಾರತೀಯ ಪತ್ರಿಕಾ ಮಂಡಳಿ ಕೈಗೊಂಡ ಕ್ರಮಗಳೇನು?

ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದನ್ನು, ಮಾತು ಅಥವಾ ಕೃತಿ ಮೂಲಕ ಬೆದರಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸುವ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದು ಮಂಡಳಿ 2015ರಲ್ಲಿ ಆಗ್ರಹಿಸಿತ್ತು.

ಪತ್ರಕರ್ತರ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದರೆ ಇಂತಹ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ತ್ವರಿತವಾಗಿ ನ್ಯಾಯ ದೊರೆಯುವಂತಾಗಲು ನಿತ್ಯ ವಿಚಾರಣೆ ನಡೆಸುವುದಕ್ಕೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

ಕೆಲಸದ ನಿರ್ವಹಣೆಯಲ್ಲಿ ಸಾವನ್ನಪ್ಪುವ ಮತ್ತು ಗಾಯಗೊಳ್ಳುವ ಪತ್ರಕರ್ತರಿಗೆ ಪರಿಹಾರ ನಿಡಬೇಕು ಎಂದು ಮಂಡಳಿ ಶಿಫಾರಸು ಮಾಡಿತ್ತು. ಪತ್ರಕರ್ತರ ಸುರಕ್ಷತೆಗಾಗಿ ಮಂಡಳಿ ರಚಿಸಿದ ಉಪ ಸಮಿತಿಯು ಈ ವರದಿ ನೀಡಿತ್ತು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಈವರೆಗೆ ಏನನ್ನೂ ಮಾಡಿಲ್ಲ.

**

ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ?

1992ರಿಂದ 2018ರ ವರೆಗೆ ಜಗತ್ತಿನಾದ್ಯಂತ ಹತ್ಯೆಯಾದ ಪತ್ರಕರ್ತರ ಸಂಖ್ಯೆ 1,919. ಅವರ ಪೈಕಿ 1,410 ಮಂದಿಯ ಕೊಲೆಯ ಹಿಂದಿನ ಉದ್ದೇಶ ಏನು ಎಂಬುದು ದೃಢಪಟ್ಟಿದೆ. ಉಳಿದ ಕೊಲೆಗಳು ನಿಗೂಢವಾಗಿಯೇ ಉಳಿದಿವೆ.

ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ಉತ್ತರ ಕೊರಿಯಾದಲ್ಲಿ 2018ರಲ್ಲಿ ಮಾಧ್ಯಮ ಪ್ರತಿನಿಧಿಗಳ ಹತ್ಯೆ ಆಗಿಲ್ಲ. ಆದರೆ, ಅಲ್ಲಿ ಸ್ವತಂತ್ರ ಮಾಧ್ಯಮವೇ ಇಲ್ಲ.

**

ಮಾಧ್ಯಮ ಸ್ವಾತಂತ್ರ್ಯ: ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸೂಚ್ಯಂಕ

ಮೊದಲ 5 ದೇಶಗಳು

1. ನಾರ್ವೆ

2. ಸ್ವೀಡನ್‌

3. ನೆದರ್‌ಲೆಂಡ್ಸ್‌

4. ಫಿನ್ಲೆಂಡ್‌

5. ಸ್ವಿಟ್ಜರ್‌ಲೆಂಡ್‌

ಕೊನೆಯ 5 ದೇಶಗಳು

1. ಉತ್ತರ ಕೊರಿಯಾ

2. ಎರಿಟ್ರಿಯಾ

3. ತುರ್ಕಮೆನಿಸ್ತಾನ್‌

4. ಸಿರಿಯಾ

5. ಚೀನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT