ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಗೋಸಿ ಸಂಸ್ಕೃತಿ...

Last Updated 15 ಜೂನ್ 2018, 20:00 IST
ಅಕ್ಷರ ಗಾತ್ರ

ಏನ್‌ ಮಾಡಾಕತ್ತೀಯಪಾ ಅಂತ ಕೇಳ್ಕೊತ್‌ ಪ್ರಭ್ಯಾ ಮನಿ ಒಳಗ್‌ ಬಂದಾಗ ಅವ್ನ ಗುರ್ತ್‌ ಹಿಡಿಯೋದ ಕಷ್ಟ ಆತು. ಬಾಯಿ, ಮೂಗಿಗೆ ಬಿಳಿ ಬಟ್ಟಿ ಕಟ್ಕೊಂಡು ಕೈಗೆ ಗವಸು ಹಾಕ್ಕೊಂಡವ್ನ ಅವತಾರ್‌ ನೋಡಿ, ‘ಇದೇನೊ ಹೊಸ ಅವತಾರಾ. ಸಣ್ಣ ಹುಡುಗ್ರು ನೋಡಿ ಅಂಜ್ಕೊಂಡು ಚೆಡ್ಡಿ ಒದ್ದೆ ಮಾಡ್ಕೊಂಡಾರ್‌’ ಎಂದೆ.

‘ನಿಫಾ ವೈರಸ್‌ ವಿರುದ್ಧ ಮುಂಜಾಗ್ರತಾ ಕ್ರಮಲೇ ಇದು. ಕೇರಳ ಎಂಎಲ್‌ಎನs ವಿಧಾನಸೌಧಕ್ಕ ಮುಖಕ್ಕ ಗೌಸ್‌ ಹಾಕ್ಕೊಂಡ್‌ ಬಂದಿದ್ದು ಟಿವ್ಯಾಗ್‌ ನೋಡಿ ಇಲ್ಲ’ ಎಂದ.

‘ಅದೇನೋ ಖರೆ. ಆದ್ರ ನಿನ್ನ ಮುಖಕ್‌ ಪುಟಗೋಸಿ ಭಾಳ್‌ ಛಲೋ ಒಪ್ತದಲೇ. ಅದ್ನ ಹಾಕ್ಕೊಂಡಿದ್ರ ನಿಫಾ ಅಷ್ಟೇ ಅಲ್ಲ ಭಾಜಪ ಜ್ವರಾ, ಆಪರೇಷನ್‌ ಕಮಲಾನೂ ಹತ್ರ ಬರುದಿಲ್ಲ ಬಿಡು’ ಎಂದು ಛೇಡಿಸಿದೆ. ನನ್ನ ಮಾತಿನಿಂದ ಸಿಟ್ಟಿಗೆದ್ದ ಪ್ರಭ್ಯಾ, ದುರುಗುಟ್ಟಿ ನೋಡಿ, ‘ಪುಟಗೋಸಿ ಪಕ್ಷದಾಂವ ನಾನಲ್ಲ, ನೀನs ಇರಬೇಕ್‌ ನೋಡ್‌’ ಎಂದು ಜೋರ್‌ ಮಾಡಿದ.

‘ಏಯ್‌ ನಾನೂ ಅಲ್ಲೋ ಮಾರಾಯಾ. ಜೆಡಿಎಸ್‌ ಪುಟಗೋಸಿ ಪಕ್ಷ ಅಂತ ಕೌಶಲ ಅಭಿವೃದ್ಧಿ ಮಂತ್ರಿ ಹೊಸ ಮಂತ್ರಾ ಉದುರಿಸಿಯಾನ್‌ ಕೇಳಿ ಇಲ್ಲ. ಅದ್ಕ ಮಂಡ್ಯದ ಜೆಡಿಎಸ್‌ ಗಂಡುಗಲಿಗಳು ಪುಟಗೋಸಿಗಳನ್ನ ಪೋಸ್ಟ್‌ನ್ಯಾಗ್‌ ಸಚಿವರಿಗೆ ಕಳಿಸಿಕೊಟ್ಟಾರ್‌. ಅನಂತಕುಮಾರ ಹೆಗಡೆ ಅವರು ಇನ್‌ಮ್ಯಾಲೆ ಪುಟಗೋಸಿ ಹೆಂಗ್‌ ಮಾರ್ಬೇಕ್‌, ಹೆಂಗ್‌ ತೊಡ್ಬೇಕ್‌ ಅನ್ನೋ ಹೊಸ ಕೌಶಲ ಕಲಿಸುವ ವ್ಯಾಪಾರಾ ಸುರು ಮಾಡಬಹುದು. ಜೆಡಿಎಸ್‌ನವ್ರು ಕಳಿಸಿಕೊಟ್ಟ ಪುಟಗೋಸಿಗಳನ್ನ ಎಣಿಸೋದ ಅವ್ರಿಗೆ ದೊಡ್ಡ ಕೆಲ್ಸ ಆಗೇದಂತ. ಕೌಶಲದ ಯಾವ್ದೂ ಕೆಲ್ಸ ಇರ್ಲಿಲಂದ್ರ ವಾರದ ಸಂತ್ಯಾಗ ಪುಟಗೋಸಿನ ಮಾರ್ಕೊಂತ ಕೂರಬಹುದು’ ಎಂದೆ.

‘ಹೌದು, ಈ ಹರಕ್‌ ಬಾಯಿ ಮಂತ್ರಿಗೆ ಪುಟಗೋಸಿ ಪಕ್ಷ ಅಂತ ಹೇಳಾಕ್‌ ಏನ್‌ ಕಾರ್ಣಾ ಇದ್ದೀತು. ಅವ್ರಿಗೆ ಪುಟಗೋಸಿ ಅಂದ್ರ ಏನ್‌ ಅಂತ್‌ ಈಗ್‌ ಗೊತ್ತಾಗಿರಬೇಕ್‌. ಪುಟಗೋಸಿ ತೊಡುವಾಗಲೆಲ್ಲ ಜೆಡಿಎಸ್‌ ನೆನಪಾಗೊ ಹಂಗ್‌ ಮಾಡಿ ಪುಕ್ಕಟೆ ಪ್ರಚಾರ ನೀಡ್ಯಾರ್‌. ಮಣ್ಣಿನ ಮಗ, ತೆನೆಹೊತ್ತ ಮಹಿಳೆ ಚಿಹ್ನೆ ಕೈಬಿಟ್ಟು ಪುಟಗೋಸಿ ಆಯ್ಕೆ ಮಾಡಿಕೊಂಡ್ರ ಮುಂದಿನ ಚುನಾವಣ್ಯಾಗ್‌ ಪೂರ್ಣ ಬಹುಮತ ಬರಬಹುದು ನೋಡ್‌. ಪುಟಗೋಸಿ ತಯಾರಿಸುವವರು ಜ್ಯೋತಿಷಿನ ಪುಸಲಾಯಿಸಿ ಅವ್ರ ಬಾಯಿಂದ ರೇವಣ್ಣಗೆ ಹೇಳಿಸಿದ್ರ ಅದು ಜಾರಿಗೆ ಬಂದ್ರು ಬರಬಹುದು’ ಎಂದ.

‘ಪುಟಗೋಸಿಯನ್ನ ಸದ್ಯಕ್ಕೆ ಪಕ್ಕಕ್ಕೆ ಇಡೋಣ. ಸಾಲಿ ಚಾಲು ಆಗ್ಯಾವ್‌. ಮಗನಿಗೆ ಛಲೋ ಸಾಲಿಗಿ ಹಾಕಿ ಇಲ್ಲ’ ಎಂದೆ. ‘ಕಾನ್ವೆಂಟ್‌ಗೆ  ಕಳಸಾಕ್‌ ನನ್ನ ಕೈಲಿ ಆಗೂದಿಲ್ಲ. ಸರ್ಕಾರಿ ಸಾಲಿಗಿ ಸೇರ‍್ಸಿನಿ. ಕಲ್ತ್‌ ಶಾಣ್ಯಾ ಆದ್ರ ಐಎಎಸ್‌ ಆಗ್ತಾನ್‌. ದಡ್ಡ ಆದ್ರ ನಮ್ಮ ಕುಮಾರಣ್ಣನ ಹಂಗ್‌ ಮುಖ್ಯಮಂತ್ರಿ ಆಗ್ತಾನ್‌. ಎಂಟನೇ ಕ್ಲಾಸ್‌ನ್ಯಾಗ್‌ ಡುಮ್ಕಿ ಹೊಡದ್ರೂ ಉನ್ನತ ಶಿಕ್ಷಣ ಸಚಿವ ಸ್ಥಾನ ಮನಿತನ್ಕ ಹುಡ್ಕೊಂಡ್‌ ಬರ್ತದ ಅಂತ ನಂಬಿನಿ’ ಅಂದ.

‘ಅಯ್ಯ, ಏನ್ರಿ ನಿಮ್ದು ಪುಟಗೋಸಿ ಪುರಾಣ, ಬ್ಯಾರೆ ಕೆಲ್ಸ ಇಲ್ಲೇನ್‌ ನಿಮ್ಗ...’ ಅಂತ ಮುಸಿ ಮುಸಿ ನಗುತ್ತಲೇ ಅಡುಗೆ ಮನೆಯಿಂದ ಹೊರಬಂದ ಅರ್ಧಾಂಗಿ, ಚಹಾದ ಕಪ್‌ ತಂದು ಕುಕ್ಕಿ, ಮಾತಿಗೆ ಸುರು ಹಚ್ಚಿಕೊಂಡ್ಳು. ‘ಪುಟಗೋಸಿ ಬಗ್ಗೆ ಚರ್ಚಾ ಮಾಡಾಕ್ ನಿಮ್ಮನ್ನ ಯಾವ ಟೀವಿಯವ್ರು ಇನ್ನೂ ಕರ್ದಿಲ್ಲೇನ್‌. ಪುಟಗೋಸಿ ಉಟಕೊಂಡs ಚರ್ಚೆ ಮಾಡಿದ್ರ ಚಾನೆಲ್‌ಗಳ ಬಿದ್ದೋಗಿರೋ ರೇಟಿಂಗ್‌ ಏಕದಂ ಏರ್ತದ ನೋಡ್ರಿ’ ಅಂದ್ಳು.

ಅಡ್ಡಬಾಯಿ ಹಾಕ್ದ ಪ್ರಭ್ಯಾ, ‘ಇಂವಾ ಬರ್ಲಿ ಬಿಡ್ಲಿ. ನಾನಂತೂ ಹೋಗಾಂವನ ನೋಡ್ರಿ ವೈನಿ’ ಅಂದ.

ಘೊಳ್ಳೆಂದು ನಕ್ಕು ತನ್ನ ಮಾತ್‌ ಮುಂದುವರೆಸಿದ ಅಕಿ, ‘ನಾವ್‌ ಕಾಲೇಜ್‌ನ್ಯಾಗ್‌ ಓದುಮುಂದ ಹರತಾಳ ಆಚರಿಸದ ಕಾಲೇಜ್‌ಗಳ ಉಡಾಳ್‌ ಹುಡುಗ್ರ ಹೆಸ್ರಿಗೆ ಹಸರ್‌ ಬಣ್ಣದ ಬಳಿ, ಕುಂಕ್ಮಾ, ಕುಬುಸದ ಖಣ ಪೋಸ್ಟ್‌ನ್ಯಾಗ್‌ ಕಳಸ್ತಿದ್ರು. ಈಗ ಮಂತ್ರಿಗs ಪುಟಗೋಸಿ ಕಳ್ಸಿ ಕೊಡೊ ಕಾಲ್‌ ಬಂದೈತಿ. ರಾಮಾ, ರಾಮಾ ರಾಜಕೀಯ ಭಾಳ್ ಕುಲಗೆಟ್ಟು ಹೋಗೈತಿ’  ಅಂತ ಗೊಣಗುತ್ತಲೇ ಅಡುಗೆ ಮನೆಗೆ ಹೋದಳು.

ರಾಮನ ಹೆಸರು ಕಿವಿಗೆ ಬೀಳುತ್ತಿದ್ದಂತೆ, ನಂಗ ಹೊಸ ರಾಮಾಯಣ ನೆನಪಾಯ್ತು. ‘ಪ್ರಭ್ಯಾ, ಖರೆ ಹೇಳ್‌, ರಾಮನಿಗೆ ಸೀತೆ ಏನ್‌ ಆಗ್ಬೇಕ್‌’ ಅಂತ ಕೇಳಿದೆ. ‘ಏಯ್ ಮಳ್ಳ, ಅದೇನೋ ಅಂತಾರಲ್ಲ. ಬೆಳತನಕ ರಾಮಾಯಣ ಕೇಳಿ ರಾಮಗ್‌ ಸೀತೆ ಏನ್‌ ಆಗ್ಬೇಕ್‌’ ಅನ್ನೊ ಹಂಗ್‌ ಆತಲ್ಲೋ. ನಿಂದು ತಲಿಗಿಲಿ ಕೆಟ್ಟದ ಏನ್‌’ ಅಂದ.

‘ತಲಿ ಕೆಟ್ಟಿರೋದು ನಂದಲ್ಲ. ನಿಮ್ಮ ಗುಜರಾತ್‌ ಸರ್ಕಾರದ್ದಲೆ. 12ನೇ ತರಗತಿ ಪುಸ್ತಕನ್ಯಾಗ್‌, ‘ರಾಮನೇ ಸೀತೆಯನ್ನು ಅಪಹರಣ ಮಾಡಿದ’ ಎಂದು ತಪ್‌ ಆಗೇದ. ಅದ್ನ ನೋಡಿ  ಮರ್ಯಾದಾ ಪುರುಷೋತ್ತಮನೂ ‘ಹೇ ರಾಮ್‌! (ರಾಮನೇ ತನ್ನ ಹೆಸರನ್ನು ಉದ್ಗರಿಸುವುದು ಸರಿಯಲ್ಲ ಅಂತ ತಪ್ಪನ್ನು ತಿದ್ದಿಕೊಂಡು) ಹೇ ಪ್ರಾಣಕಾಂತೆ! ಗಾಂಧಿ ನಾಡಲ್ಲಿ ಇಂತಹ ಅನಾಚಾರವೇ. ಎಂತಹ ಅಪದ್ದನ್ನು ಕೇಳಬೇಕಾಯಿತಲ್ಲ.

ನಾನು ನಿಂತಲ್ಲೇ ಭೂಮಿ ಬಿರಿಯಬಾರದೆ ಅಂತ ಸೀತೆ ಮುಂದೆ ಗೋಳಿಟ್ಟನಂತೆ. ಶ್ರೀರಾಮನಿಗೆ ಆದ ಈ ಅವಮಾನದ ವಿರುದ್ಧ ಸ್ವಯಂಘೋಷಿತ ಸಂಸ್ಕೃತಿ ರಕ್ಷಕರು, ಶ್ರೀರಾಮಸೇನೆ, ಕಪಿಸೇನೆ ಸೇರಿದಂತೆ ಯಾರೊಬ್ಬರೂ ಬೀದಿಗೆ ಇಳಿದಿಲ್ಲಲ್ಲೋ. ಛೆ, ರಾಮನ ಪಕ್ಷಕ್ಕೆ ಇಂಥಾ ಗತಿ ಬರಬಾರದಿತ್ತು ನೋಡ್’ ಎಂದೆ.

‘ಇದ್ನ ಇಟ್ಕೊಂಡು ಹೊಸ ರಾಮಾಯಣ ಹೊಸಿಬಹ್ದು ಬಿಡು. ಯಾರೂ ಓದದ ಕಾಂಗ್ರೆಸ್‌ ಪ್ರಣಾಳಿಕೆಯಂತಹ ಮಹಾಕಾವ್ಯ ಬರೆದ ಮಹಾ (ಮೊಯಿಲಿ) ಪುರುಷರಿಂದ ಹೊಸ ಹೊರಗುತ್ತಿಗೆ ಕಾವ್ಯ ಬರೆಸಿದರೆ ಬಿಸಿ ಬಿಸಿ ದೋಸೆಯಂತೆ ಖರ್ಚಾದೀತು. ರಾಮಾಯಣದ ಹೊಸ ಸಂಸ್ಕೃತಿ ಜಾರಿಗೆ ಬಂದೀತು ಬಿಡು’ ಎಂದು ಸಲಹೆ ನೀಡಿದ.

‘ನೀ ಸಂಸ್ಕೃತಿ ಅಂದಕೂಡ್ಲ ನನಗ್‌ ಇನ್ನೊಂದು ಮಾತ್‌ ನೆನಪಾತ್‌ ನೋಡ್‌. ಕಾಂಗ್ರೆಸ್‌ಮುಕ್ತ ಭಾರತ್‌ ನಿರ್ಮಾಣ ಮಾಡ್ತೀವಿ ಅಂತ ಬಡ್ಕೊತಿದ್ದ ಚಾಣಕ್ಯ ಖ್ಯಾತಿಯ ಬಂಡಲ್‌ ರಾಜಾ, ಈಗ ಕಾಂಗ್ರೆಸ್ ಸಂಸ್ಕೃತಿ ಮುಕ್ತ ಭಾರತ್‌ ನಿರ್ಮಾಣ್‌ ಮಾಡುದದ ಅಂತ ಮಾತ್‌ ಬದಲಿಸಿದ್ದು ಕೇಳಿ ಇಲ್ಲ. ಕಾಂಗ್ರೆಸ್‌ ಕಳೇನs ಕಿತ್‌ ಹಾಕಾಕ್s ಆಗಿಲ್ಲ. ಇನ್‌ ಕಾಂಗ್ರೆಸ್‌ ಸಂಸ್ಕೃತಿ ಮುಕ್ತ ದೇಶಾ ನಿರ್ಮಾಣ ಮಾಡೋದು ಕನಸಿನ ಮಾತ್‌ ಬಿಡು’ ಎಂದೆ.

‘ನೀ ಏನರ್‌ ಮಾಡ್ಕೊ, ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರ‍್ಣ ಅಂತ ಸುತ್ತು ಬಳಸಿ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರ್‌ ತರಬ್ಯಾಡಪಾ. ನಿಮ್ಮ ರಾಹುಲ್‌ ಬಾಬಾ ಏನ್‌ ಕಮ್ಮಿ ಅದಾನ್. ಮೊನ್ನೆ ಮೋದಿ ಅವರ‍್ನ ಟೀಕಿಸೋ ಭರದಾಗ ಕೋಕಾ ಕೋಲಾ, ಮ್ಯಾಕ್‌ಡೊನಾಲ್ಡ್‌ ಕಂಪನಿ ಸ್ಥಾಪಕರ ಬಗ್ಗೆ ಹಸಿ ಸುಳ್‌ ಹೇಳಿ ಮಾನಾ ಕಳ್ಕೊಂಡಾನ್‌, ಅದ್ಕೆನಂತಿಪಾ’ ಎಂದ.

‘ರಾಗಾ, ಬರ್ತಾ ಬರ್ತಾ ದೊಡ್ಡಾಂವ್‌ ಆಗಾಕತ್ತಾನ್‌. ಮೋದಿ ಸಾಹೇಬ್ರಿಗೆ ಸರಿಯಾಗಿ ಸವಾಲ್‌ ಒಡ್ಡಾಕತ್ತಾನ್‌ ಅಂತ ಅನ್ನುದ್ರಾಗs, ಏನಾದ್ರ ಯಡವಟ್ ಮಾಡ್ಕೊಂಡ್‌ ಬಿಟ್ತಾನ್‌ ನೋಡ್‌. ಮದ್ವಿ ಆದ್ರ ಸರಿಯಾಗಬಹ್ದು ಬಿಡು’ ಎಂದೆ.

‘ಈ ವಯಸ್ಸಿಗೆ ಅಂವ್ಗ ಯಾರ್‌ ಹೆಣ್‌ ಕೊಡ್ತಾರ್‌, ಹೋಗೋ ನಿನ್ನ...’ ಎಂದ.

‘ರಾಗಾ’ಗ ಹೆಣ್‌ ಕೊಡ್ತಾರೊ ಇಲ್ವೊ, ಸಲ್ಮಾನ್‌ ಖಾನ್‌ ಥರಾ ಅವನೂ ಯಾವಾಗ್‌ ಮದ್ವಿ ಆಗ್ತಾನ ಅನ್ನೋದು ಗೊತ್ತಿಲ್ಲ. ಆದ್ರ ನಮ್ಮ ಸಿದ್ರಾಮಣ್ಣ, 71ರ ವಯಸ್ಸಿನಲ್ಲೂ 21ರ ಯುವಕನಂತೆ ಕಾಣಾಕತ್ತಿದ್ದು, ಇನ್ನೊಂದು ಮದ್ವಿ ಮಾಡು ಹಂಗ್‌ ಇದಾರ್‌ ಅಂತ ಚಿಮ್ಮನಕಟ್ಟಿ, ಸಿದ್ರಾಮಣ್ಣಗ್ ಪೂಸಿ ಹೊಡದಾನ, ಓದಿ ಇಲ್ಲ’ ಎಂದೆ.

‘ಮಧ್ಯ ವಯಸ್ಸು ದಾಟಿದವರ, ಮುದುಕಪ್ಪರ ಗಾಂಧರ್ವ ವಿವಾಹ, ಎರಡನೇ ಮದುವೆ, ಸಾಂದರ್ಭಿಕ ಶಿಶು, ಪ್ರನಾಳ ಶಿಶುಗಳದ್ದೆ ಸುದ್ದಿ ಕೇಳಿ ತಲೆ ಚಿಟ್‌ ಹಿಡ್ತದಲೇ. ಏನಾದ್ರು ಮದ್‌ ಇದ್ರ ಹೇಳು’ ಎಂದೆ. ‘ಹಂಗಿದ್ರ ಸ್ವಲ್ಪ ರೇಡಿಯೊ ಹಚ್‌. ಯಾವ್ದರ ಹಾಡ್‌ ಕೇಳಿ ಮನ್ಸ ಹಗುರ ಮಾಡ್ಕೊ’ ಅಂತ ಹೇಳ್ದ.

ಎಫ್‌ಎಂ ಚಾಲು ಮಾಡುತ್ತಿದ್ದಂತೆ ಕೇಳಿಬಂದ, ಜಿಮ್ಮಿಗಲ್ಲು ಚಿತ್ರದ ‘ತುತ್ತು ಅನ್ನ ತಿನ್ನೋಕೆ ಹಾಡಿಗೆ... ಪ್ರಭ್ಯಾ... ಪುಟಗೋಸಿ ಚರ್ಚೆ ನೆನಪಾಗಿ– ತುಂಡು ಬಟ್ಟೆ ಸಾಕು ನನ್ನ ಮಾನಾ ಮುಚ್ಚೋಕೆ ಎಂದು ಗುನಗುನಸಾಕತ್ತಾ. ನಾನೂ ಅದ್ಕ ಸೋ ಎನ್ನುತ್ತ,... ಯಾವ್ದಾದ್ರು ಮಂತ್ರಿ ಹುದ್ದೆ ಸಿಕ್ರೆ ಸಾಕೂ ಹಾಯಾಗಿರೋಕೆ... ಎಂದು ಪೂರ್ಣ ಮಾಡುತ್ತ ಹೆಗಲ ಮ್ಯಾಲಿನ ಟಾವೆಲ್‌ ಝಾಡಿಸಿ ಎದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT