ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ತನಿಖೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪ‍ತಿ ಕರಿಸಿದ್ದಪ್ಪ ಹೇಳಿಕೆ
Last Updated 16 ಜೂನ್ 2018, 5:22 IST
ಅಕ್ಷರ ಗಾತ್ರ

ಬೆಳಗಾವಿ: ‘ಎಂಜಿನಿಯರಿಂಗ್‌ ಪದವಿಯ 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಗುರುವಾರ ನಡೆಸಿದ ಗಣಿತ–2 ವಿಷಯದ ಪ್ರಶ್ನೆಪತ್ರಿಕೆ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ಆರಂಭಿಸಲಾಗಿದೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

‘ಬೆಳಿಗ್ಗೆ 9.30ಕ್ಕೆ ಗಣಿತ ಪರೀಕ್ಷೆ ಆರಂಭಕ್ಕೆ ಅರ್ಧ ತಾಸು ಮುನ್ನ (ಬೆಳಿಗ್ಗೆ 9.04ಕ್ಕೆ) ಪ್ರಶ್ನೆ ಪತ್ರಿಕೆಯ ಪ್ರತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ ಎಂದು ಶುಕ್ರವಾರ ದೂರಲಾಗುತ್ತಿದೆ. ಇದ್ಯಾವ ಸಂಗತಿ ಗುರುವಾರ ಗಮನಕ್ಕೆ ಬಂದಿರಲಿಲ್ಲ. ಯಾವ ಕಾಲೇಜುಗಳಲ್ಲಿ ಹೀಗೆ ನಡೆದಿದೆ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸುವುದನ್ನು ಹೊರಗುತ್ತಿಗೆ ನೀಡಲಾಗುತ್ತಿತ್ತು. ಹೋದ ವರ್ಷದಿಂದ ವಿಶ್ವವಿದ್ಯಾಲಯದಿಂದಲೇ ತಂತ್ರಾಂಶ ಸಿದ್ಧಪಡಿಸಿ ಅದರ ಮೂಲಕ ಆನ್‌ಲೈನ್‌ನಲ್ಲಿ ರವಾನಿಸಲಾಗುತ್ತಿದೆ. ಪ‍ರೀಕ್ಷೆಗೆ ಅರ್ಧ ತಾಸು ಮುಂಚಿತವಾಗಿ ತಲುಪಿಸಲಾಗುತ್ತದೆ.

ಹೀಗಾಗಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯವಿಲ್ಲ. ಸಂಬಂಧಿಸಿದ ಕಾಲೇಜುಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡ ನಂತರ ಆಗಿರುವ ಸಾಧ್ಯತೆ ಇರಬಹುದು. ಈ ನಿಟ್ಟಿನಲ್ಲಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಪ್ರಶ್ನೆಪತ್ರಿಕೆ ರವಾನಿಸುವಾಗ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವ್ಯಾವ ಕಾಲೇಜಿನಲ್ಲಿ ಎಷ್ಟೊತ್ತಿಗೆ ಡೌನ್‌ಲೋಡ್‌ ಮಾಡಲಾಗಿದೆ ಎನ್ನುವ ಮಾಹಿತಿ ದೊರೆಯುತ್ತದೆ. ಅಲ್ಲದೇ, ಡೌನ್‌ಲೋಡ್‌ ಪ್ರಕ್ರಿಯೆ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುತ್ತದೆ. ಇವೆಲ್ಲ ಮಾಹಿತಿಗಳನ್ನು ಪಡೆಯಲಾಗುವುದು. ಸೋರಿಕೆ ಆಗಿರುವುದು ಖಚಿತಗೊಂಡಲ್ಲಿ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು. ಮರುಪರೀಕ್ಷೆ ನಡೆಸುವ ಕುರಿತು ಯೋಚಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಜುಲೈ 10ರವರೆಗೂ ವಿವಿಧ ವಿಷಯಗಳ ಪರೀಕ್ಷೆ ಇದೆ. ವಿದ್ಯಾರ್ಥಿಗಳು ಯಾವುದೇ ಗೊಂದಲ ಅಥವಾ ಅನುಮಾನಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಬೇಕು. ಪರೀಕ್ಷಾ ಅಕ್ರಮಕ್ಕೆ ಆಸ್ಪದವಾಗದಂತೆ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT