ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3106 ಟ್ರೈನಿ ಏರ್‌ಮನ್‌ಗಳು ಕರ್ತವ್ಯಕ್ಕೆ ಸಜ್ಜು

ಪಥಸಂಚಲನ, ವಾಯುಸೇನೆ ಏರ್‌ ವೈಸ್‌ ಮಾರ್ಸಲ್‌ರಿಂದ ಗೌರವ ವಂದನೆ ಸ್ವೀಕಾರ
Last Updated 16 ಜೂನ್ 2018, 5:30 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಕೇಂದ್ರದಲ್ಲಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 3106 ಟ್ರೈನಿ ಏರ್‌ಮನ್‌ಗಳ ನಿರ್ಗಮನ ಪಥಸಂಚಲನ ಶುಕ್ರವಾರ ನಡೆಯಿತು. ಇವರು ವಾಯು ಸೇನೆಯ ಕರ್ತವ್ಯಕ್ಕೆ ಸಜ್ಜಾಗಿದ್ದಾರೆ.

ಮುಖ್ಯ ಅತಿಥಿಯಾಗಿದ್ದ ವಾಯುಸೇನೆ ಸಿಬ್ಬಂದಿಯ ಸಹಾಯಕ ಮುಖ್ಯಸ್ಥ (ತರಬೇತಿ) ಏರ್‌ ವೈಸ್‌ ಮಾರ್ಸಲ್‌ ಎಸ್‌.ಪಿ. ಧರಕರ್‌ ಗೌರವವಂದನೆ ಸ್ವೀಕರಿಸಿದರು. ತರಬೇತಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅಭ್ಯರ್ಥಿಗಳಿಗೆ ಟ್ರೋಫಿ ಪ್ರದಾನ ಮಾಡಿದರು.

ನಂತರ ಮಾತನಾಡಿ, ‘ಕಲಿಕೆಗೆ ಕೊನೆ ಇಲ್ಲ. ಹೀಗಾಗಿ, ನಿತ್ಯವೂ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಅರಿವಿರಬೇಕು. ಬದಲಾಗುತ್ತಿರುವ ತಾಂತ್ರಿಕ ಜಗತ್ತಿಗೆ ಹೊಂದಿಕೊಳ್ಳುತ್ತಿರಬೇಕು. ವೃತ್ತಿಪರವಾದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲಿ ಪಡೆದಿರುವ ತರಬೇತಿಯನ್ನು ಕೆಲಸದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.‌‌ ‘ವಾಯುಸೇನೆಯಲ್ಲಿ ಹೆಚ್ಚಿನ ಸಾಧನೆ ತೋರುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಮೆರಿಟ್‌, ಬದ್ಧತೆ ಆಧರಿಸಿ ಸೇವೆಯಲ್ಲಿ ಮುಂದೆ ಬರಬಹುದು. ಇದಕ್ಕಾಗಿ ಶಿಸ್ತಿನಿಂದ ಇರಬೇಕು. ಆರೋಗ್ಯ, ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು. ದೇಶಕ್ಕಾಗಿ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಈ ಮೂಲಕ ಸೇನೆಯ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು’ ಎಂದು
ತಿಳಿಸಿದರು.

ಟ್ರೈನಿಗಳಾದ ರೋಹಿತ್‌ ಶರ್ಮಾ ಬೆಸ್ಟ್‌ ಆಲ್‌ರೌಂಡರ್‌, ಸಾಮಾನ್ಯ ಸೇವಾ ತರಬೇತಿಯಲ್ಲಿ ವಿವೇಕ ರಾಜೇಂದ್ರ ಖಾಡೆ, ಶೈಕ್ಷಣಿಕ ವಿಭಾಗದಲ್ಲಿ ಐಜಾಜ್‌ ಖಾನ್ ಟ್ರೋಫಿ ಪಡೆದರು. ಮೋಹಿತ್‌ ಕುಮಾರ್‌ ಸೇನ್‌ ಅತ್ಯುತ್ತಮ ಮಾರ್ಕ್ಸ್‌ಮನ್‌ ಎನಿಸಿದರು.

ಶಾಲೆಯ ಕಮಾಂಡಿಂಗ್‌ ಆಫೀಸರ್ ಅರುಣ್‌ ಭಾಸ್ಕರ್‌ ಗುಪ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT