ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌, ಬಸ್‌ ಪಾಸ್‌ಗಾಗಿ ಪ್ರತಿಭಟನೆ

Last Updated 16 ಜೂನ್ 2018, 5:38 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಬಸ್ತವಾಡದ ಗ್ರಾಮಸ್ಥರು ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಅವ್ಯವಸ್ಥೆ ಖಂಡಿಸಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಗುರುವಾರ ಮುತ್ತಿಗೆ ಹಾಕಿದರು.

ವಿದ್ಯುತ್ ಪರಿರ್ವತಕ ಸುಟ್ಟು ಅನೇಕ ದಿನಗಳು ಕಳೆದಿವೆ. ಆದರೂ ಅದನ್ನು ದುರಸ್ತಿ ಮಾಡಿಲ್ಲ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ನೀರಿಲ್ಲದೆ ಜನರು ಪರದಾಡಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಪೂಜೇರಿ, 'ಗ್ರಾಮದಲ್ಲಿ ಸಾರ್ವಜನಿಕರಿಂದ ಮನೆ ವಿದ್ಯುತ್ ₹ 20 ಲಕ್ಷ ಹಾಗೂ ವಿದ್ಯುತ್ ಪಂಪಸೆಟ್ ಬಾಕಿ ₹14 ಲಕ್ಷ ಬಾಕಿಯಿದೆ. ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ಕೂಡುವ ಉದ್ದೇಶ ಇಲ್ಲ. ವಿದ್ಯುತ್ ಬಾಕಿ ಕಟ್ಟದ ಕಾರಣ ಪರಿವರ್ತಕ ದುರಸ್ತಿ ಸಾಧ್ಯವಾಗುತ್ತಿಲ್ಲ’ ಎಂದರು.

’ ಗ್ರಾಮಸ್ಥರು ವಿದ್ಯತ್ ಬಾಕಿ ಕಟ್ಟಿ ಸಹಕರಿಸಬೇಕು. ಹೊಸ ವಿದ್ಯುತ್ ಪರಿರ್ವತಕ ಅಳವಡಿಸಲಾಗುವುದು’ ಎಂದು ಭರವಸೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಮಾಜಿ ಸಚಿವ ಎ.ಬಿ.ಪಾಟೀಲ ವಹಿಸಿದ್ದರು. ಗ್ರಾಮಸ್ಥರ ಜತೆ ಕಾಂಗ್ರೆಸ್‌ ಕಾರ್ಯಕರ್ತರು ಸಹ ಭಾಗವಹಿಸಿದ್ದರು.

ಶಾಸಕರಿಗೆ ಎಬಿವಿಪಿ ಮನವಿ

ಬೈಲಹೊಂಗಲ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್‌ ವಿತರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಸಂಜು ಪದ್ಮನ್ನವರ ಮಾತನಾಡಿ, ‘ಕೇವಲ ಪರಿಶಿಷ್ಟ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡಲಾಗುತ್ತಿದೆ. ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಪಾಸ್‌ ನೀಡಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಸಂಚಾಲಕ ಸಿದ್ಧಾರೂಢ ಹೊಂಡಪ್ಪನವರ, ಮುಖಂಡ ಮಲ್ಲಪ್ಪಾ ಬೆಳಗಾವಿ ಮಾತನಾಡಿ, ‘ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ಆಗಿದೆ. ರಾಜ್ಯದಲ್ಲಿ ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಸ್ ಪಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರೇ ಹೆಚ್ಚು ಎಂಬುದನ್ನು ಸರ್ಕಾರ ಮರೆಯಬಾರದು’ ಎಂದರು.

ವಿಠ್ಠಲ ಕುರಗುಂದ, ಶಿವಾನಂದ ಧರ್ಮಟ್ಟಿ, ಪ್ರಫುಲ ಪಾಟೀಲ, ಗುರುದೇವ ಮೆಳವಂಕಿ, ವಿಕ್ರಂ ಅಂದಾನಶೆಟ್ಟಿ, ಅಕ್ಷಯ ಗಾಣಿಗೇರ, ಹರೀಶ ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT