ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ--: ಜಿಲ್ಲೆಯಲ್ಲಿ ₹ 5.96 ಕೋಟಿ ಆಸ್ತಿ ಹಾನಿ

ಜಿಲ್ಲಾಧಿಕಾರಿ, ಶಾಸಕರಿಂದ ಹಾನಿಯ ಸ್ಥಳ ಸಮೀಕ್ಷೆ– ಮೆಸ್ಕಾಂಗೆ ₹ 3 ಕೋಟಿ ನಷ್ಟ
Last Updated 16 ಜೂನ್ 2018, 6:39 IST
ಅಕ್ಷರ ಗಾತ್ರ

ಶೃಂಗೇರಿ: ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಪ್ರಾಥಮಿಕ ಸಮೀಕ್ಷೆಯಂತೆ ಮಳೆಯಿಂದಾಗಿ ₹ 5.96 ಕೋಟಿ ಆಸ್ತಿ ಹಾನಿ ಆಗಿರುವುದನ್ನು ಅಂದಾಜಿಸಲಾಗಿದೆ. ಇದಲ್ಲದೆ, ಮೆಸ್ಕಾಂ ಇಲಾಖೆಯಲ್ಲಿ ಸುಮಾರು ₹ 3 ಕೋಟಿ ಮೌಲ್ಯದ ವಿದ್ಯುತ್‌ ಪರಿವರ್ತಕ, ಕಂಬ ಮತ್ತು ತಂತಿ ಕಡಿದು ನಷ್ಟವಾಗಿರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಶ್ರೀರಂಗಯ್ಯ ತಿಳಿಸಿದರು.

ಶೃಂಗೇರಿ ತಾಲ್ಲೂಕಿನಲ್ಲಿ ಶುಕ್ರವಾರ ವಿವಿಧ ತಾಲ್ಲೂಕುಗಳಲ್ಲಿ ಮಳೆಯಿಂದ ಸಾರ್ವಜನಿಕ ಸೊತ್ತುಗಳಿಗೆ ಹಾಗೂ ಜನಸಾಮಾನ್ಯರಿಗೆ ಆಗಿರುವ ಹಾನಿಯ ಸ್ಥಳ ಸಮೀಕ್ಷೆ ನಡೆಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 228 ಹೆಚ್ಚು ಮಳೆಯಾಗಿರುವುದು ದಾಖಲೆಯಿಂದ ಕಂಡುಬಂದಿದೆ. 20 ವರ್ಷಗಳ ನಂತರ ಈ ಪ್ರಮಾಣದ ಅತಿವೃಷ್ಟಿಯಾಗಿರುವುದನ್ನು ಅಂಕಿ ಅಂಶಗಳು ತಿಳಿಸಿವೆ. ಮಳೆಯಿಂದಾಗಿ ಒಟ್ಟು 9 ಜಾನುವಾರು ಸಾವಿಗೀಡಾಗಿದ್ದು, ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಈ ಪೈಕಿ 7 ಜಾನುವಾರಿನ ಮಾಲೀಕರಿಗೆ ಪರಿಹಾರ ಧನ ವಿತರಿಸಿದ್ದು, ಇನ್ನಿಬ್ಬರಿಗೆ ದಾಖಲೆ ಸಂಗ್ರಹಿಸಿ ನೀಡಲಿದ್ದೇವೆ’ ಎಂದು ಹೇಳಿದರು.

‘ಅಲ್ಲಲ್ಲಿ 19 ಕಚ್ಚಾ ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಇದರಲ್ಲಿ 10 ಮನೆಗಳಿಗೆ ತಲಾ ₹ 10 ಸಾವಿರದಂತೆ ಪರಿಹಾರ ಕೊಟ್ಟಿರುತ್ತೇವೆ. ಉಳಿದವರಿಗೂ ಕೊಡಲಾಗುವುದು. ಇನ್ನುಳಿದಂತೆ ಸಾರ್ವಜನಿಕ ರಸ್ತೆ, ಕಾಲುಸಂಕ, ಸೇತುವೆಗಳಿಗೆ ಅಲ್ಲಲ್ಲಿ ಹಾನಿಯಾಗಿದ್ದು, ಇವುಗಳ ದುರಸ್ತಿಗೆ ಆದ್ಯತೆ ಮೇರೆಗೆ ಅಂದಾಜುಪಟ್ಟಿ ತಯಾರಿಸಲು ನಿರ್ದೇಶನ ನೀಡಿದ್ದೇವೆ. ಬಾಳೆಹೊನ್ನೂರಿನಲ್ಲಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣವು ಸಂಪೂರ್ಣ ನೀರಿನಲ್ಲಿ ಮುಳುಗಿದ್ದರಿಂದ ಇಲ್ಲಿ ತಡೆಗೋಡೆ ಕಟ್ಟಲು ಅಂದಾಜುಪಟ್ಟಿ ಮಾಡಿಸಿ ಎಪಿಎಂಸಿಯಿಂದ ಕಟ್ಟಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಒಟ್ಟಾರೆಯಾಗಿ ಈ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನವು ಇಂದು ಎಲ್ಲೆಡೆ ಮಳೆ ಕಡಿಮೆಯಾಗಿ ಪೂರ್ವಸ್ಥಿತಿಗೆ ಮರಳಿದೆ. ಸಾರ್ವಜನಿಕರ ಸೊತ್ತುಗಳಿಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ಅಂದಾಜು ಪಟ್ಟಿಯನ್ನು ತಯಾರಿಸಲು ಸೂಚನೆ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಯಾವುದೇ ರೀತಿ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಜಿಲ್ಲಾ ಡಳಿತ ಸಜ್ಜಾಗಿದೆ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಅವರು ತಮ್ಮ ಇಲಾಖೆಯ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ಹಾನಿಯನ್ನು ಗಮನಿಸಿ ವರದಿ ತಯಾರಿಸಲು ಸೂಚನೆ ಕೊಟ್ಟಿರುತ್ತಾರೆ. ಆಗಿರುವ ಹಾನಿಗಳನ್ನು ನರೇಗಾ ಮತ್ತು ಅನ್ಯ ಯೋಜನೆ ಅಡಿಯಲ್ಲಿ ಸರಿಪಡಿಸಿ ಕೊಡಲಾಗುವುದು. ಶಾಸಕರು ಸಹ ಪರಿಸ್ಥಿತಿ ಗಮನಿಸಿ ಸ್ಥಳಕ್ಕೆ ಧಾವಿಸಿ ಬಂದು ನಮ್ಮೊಂದಿಗೆ ಸ್ಥಳ ವೀಕ್ಷಣೆ ಮಾಡಿ ಸೂಕ್ತ ಸೂಚನೆ ಕೊಟ್ಟಿರುತ್ತಾರೆ. ಧರೆ ಕುಸಿತದಿಂದ ವಾಹನ ಸಂಚಾರ ಬಂದ್ ಆಗಿದ್ದ ಚಾರ್ಮಾಡಿ ಘಾಟಿಯಲ್ಲಿ ಬಿದ್ದಿದ್ದ 9 ಮರಗಳನ್ನು ಮತ್ತು ಕುಸಿದು ಬಿದ್ದ ಮಣ್ಣನ್ನು 13 ಜೆಸಿಬಿ ಬಳಸಿ ತೆರವು ಮಾಡಿದ್ದು, ನಿನ್ನೆ ರಾತ್ರಿಯಿಂದ ಲಘು ವಾಹನಗಳಿಗೆ ಅನುಮತಿ ನೀಡಿದ್ದೆವು. ಇಂದು ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮ ಮತ್ತು ಶಾಸಕ ಟಿ.ಡಿ ರಾಜೇಗೌಡ ಶೃಂಗೇರಿಯ ಗಾಂಧಿ ಮೈದಾನದಲ್ಲಿ ಅಂಗಡಿ ಮುಂಗಟ್ಟುಗಳು ಪ್ರವಾಹಕ್ಕೆ ಮುಳುಗಿ ಹಾಳಾಗಿರುವುದನ್ನು ವೀಕ್ಷಿಸಿದರು, ಕಾವಡಿ ಸೇತುವೆಯ ಧರೆ ಕುಸಿತವನ್ನು ಪರಿಶೀಲಿಸಿದರು.

ಶೃಂಗೇರಿ ಶಾರದ ಪೀಠಕ್ಕೆ ತೆರಳಿ ಪ್ರವಾಹದಿಂದ ನೀರು ತುಂಬಿದ ಉಗ್ರಾಣ, ಭೋಜನ ಶಾಲೆ, ನರಸಿಂಹವನ ವೀಕ್ಷಿಸಿ ಶಾರದೆ, ಶಕ್ತಿಗಣಪತಿ, ತೋರಣ ಗಣಪತಿ, ದೇವಾಲಯದ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ತುರ್ತು ತಾತ್ಕಾಲಿಕ ವ್ಯವಸ್ಥೆಗಾಗಿ ನಮ್ಮಲ್ಲಿ ₹ 6 ಕೋಟಿ ಮೊತ್ತದ ಸಿಆರ್‍ಎಫ್ ನಿಧಿ ಇರುತ್ತದೆ. ಪರಿಸ್ಥಿತಿ ಅವಲೋಕಿಸಿ ಹಣ ಬಿಡುಗಡೆ ಮಾಡುತ್ತೇವೆ
ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT