ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ದಾಹ ತಣಿಸದ ಕರಬೂಜ

ಮಾರ್ಗದರ್ಶನದ ಕೊರತೆ lನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಲಾಭ
Last Updated 16 ಜೂನ್ 2018, 6:50 IST
ಅಕ್ಷರ ಗಾತ್ರ

ಚಿತ್ರದುರ್ಗ: ನೀರಿನಾಂಶ ಧಾರಾಳವಾಗಿರುವ, ದೇಹವನ್ನು ತಂಪಾಗಿಟ್ಟು ದಾಹ ನೀಗಿಸುವ ಕರಬೂಜ ಹಣ್ಣು ರೈತರ ಪಾಲಿಗೀಗ ಹೊಟ್ಟೆಯುರಿಯಾಗಿ ಪರಿಣಮಿಸಿದೆ. ಅಲ್ಪಾವಧಿ ಬೆಳೆಯಾಗಿರುವ ಕರಬೂಜ ಬೆಳೆದು ಗ್ರಾಹಕರ ಹೊಟ್ಟೆ ತಣ್ಣಗಾಗಿಸಲು ಮುಂದಾದ ರೈತರು ಬೆಲೆ ಕುಸಿತದಿಂದ ಆತಂಕದಲ್ಲಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ರೈತ ಮಹಿಳೆ ಈರಮ್ಮ ಅವರು ಎರಡು ಎಕರೆಯಲ್ಲಿ ಕರಬೂಜ ಬೆಳೆದು ಮಾರಾಟಕ್ಕೆ ಪರಿತಪಿಸುತ್ತಿದ್ದಾರೆ. ಚಿತ್ರದುರ್ಗಕ್ಕೆ ಬಂದು ಟ್ರ್ಯಾಕ್ಟರ್ ಮೂಲಕ ನಗರದ ಬೀದಿ ಬೀದಿಗಳಲ್ಲಿ ಮಾರಾಟ ಮಾಡಿದರೂ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಲಾಗಿದ್ದಾರೆ. ಬೆಳೆಗೆ ಹಾಕಿದ ಬಂಡವಾಳ ಕೂಡ ಸಿಗದೇ ಇವರ ಮೊಗದಲ್ಲಿ ನಿರಾಸೆ ತಾಂಡವವಾಡುತ್ತಿದೆ.

‘ಆಂಧ್ರಪ್ರದೇಶದಿಂದ ಒಂದು ಕೆ.ಜಿ ಕರಬೂಜ ಬೀಜಕ್ಕೆ ₹ 25 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಹನಿನೀರಾವರಿ, ಬಿತ್ತನೆ, ಬೀಜ, ಕೀಟನಾಶಕ್ಕೆ ₹ 4 ಲಕ್ಷ ಖರ್ಚಾಗಿದೆ. ಬೇಸಿಗೆ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ. ಮಳೆ ಇಲ್ಲದಿದ್ದರೂ ಒಂದು ಹಣ್ಣು ಮೂರು ಕೆಜಿವರೆಗೂ ತೂಗುವಂತೆ ಉತ್ತಮ ಇಳುವರಿ ಬಂದಿದೆ. ಮಾರ್ಗದರ್ಶನದ ಕೊರತೆಯಿಂದ ಬೀಜ ಬಿತ್ತನೆ ತಡವಾಯಿತು. ಮಳೆಗಾಲದಲ್ಲಿ ಫಸಲು ಬಂದಿರುವುದರಿಂದ ಬೆಲೆ ಕುಸಿತಗೊಂಡಿದೆ’ ಎನ್ನುತ್ತಾರೆ ಈರಮ್ಮ.

‘ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ನಿರೀಕ್ಷಿತ ಪ್ರಮಾಣದಷ್ಟು ಆದಾಯ ಸಿಗುತ್ತಿಲ್ಲ. ನಾವು ಬೆಳೆದ ಬೆಳೆಯನ್ನು ಬಿಸಾಡಲು ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಚಿತ್ರದುರ್ಗ ನಗರಕ್ಕೆ ಬಂದು ಟ್ರ್ಯಾಕ್ಟರ್ ಮೂಲಕ ನಗರದ ಎಲ್ಲ ಬೀದಿಗಳಲ್ಲಿ ಸುತ್ತಾಡಿ ಮಾರಾಟ ಮಾಡುತ್ತಿದ್ದೇವೆ. ರಂಜಾನ್ ಹಬ್ಬವಿರುವುದರಿಂದ ಮುಸ್ಲಿಮರು ಹೆಚ್ಚು ಹಣ್ಣು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಕರಬೂಜ ಬೆಳೆಯಿಂದ ಉತ್ತಮ ಆದಾಯ ಗಳಿಸಬಹುದು. ಆದರೆ ಕಾಲಕ್ಕೆ ತಕ್ಕ ಹಾಗೆ ಬೆಳೆ ಬೆಳೆಯಬೇಕು. ಇದೇ ಮೊದಲ ಬಾರಿಗೆ ನಾವು ಕರಬೂಜ ಬೆಳೆ ಹಾಕಿರುವುದರಿಂದ ಸರಿಯಾದ ಅಂದಾಜು ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಈರಮ್ಮ ಅವರ ಸಂಬಂಧಿಕರು.

–ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT