ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವಿಷಯಗಳಿಗೆ ಸ್ನಾತಕೋತ್ತರ ಕೋರ್ಸ್‌

ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳ ಬೇಡಿಕೆ
Last Updated 16 ಜೂನ್ 2018, 6:56 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ, ರಾಜ್ಯಶಾಸ್ತ್ರ ಹಾಗೂ ಭೌತ ವಿಜ್ಞಾನ ವಿಷಯಗಳಲ್ಲಿ  ಈ ವರ್ಷವಾದರೂ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಮೂರೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ತರಗತಿ ಪ್ರಾರಂಭಿಸಬೇಕೆಂದು 2016–17ನೇ ಸಾಲಿನಲ್ಲಿಯೇ ಸರ್ಕಾರ ಆದೇಶ ನೀಡಿತ್ತು. ಇದರಿಂದ ಬಯಲು ಸೀಮೆ ಹಾಗೂ ಬರದ ತಾಲ್ಲೂಕಿನ ಬಿ.ಎ, ಬಿ.ಎಸ್‌ಸಿ ಪದವಿ ಮುಗಿಸಿರುವವರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಆ ವರ್ಷ ಕೋರ್ಸ್‌ ಆರಂಭವಾಗಲಿಲ್ಲ. ಇದರಿಂದ ಬೇಸರಗೊಂಡ ತಾಲ್ಲೂಕಿನ ನೂರಾರು ಪದವೀಧರರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿಯೇ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿರುವ ಈ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಕನ್ನಡ, ರಾಜ್ಯಶಾಸ್ತ್ರ, ಭೌತ ವಿಜ್ಞಾನ ವಿಷಯಗಳ ತರಗತಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು.

ಒತ್ತಾಯಕ್ಕೆ ಮಣಿದ ಕಾಲೇಜು ಅಭಿವೃದ್ಧಿ ಸಮಿತಿ ಮುಂದಿನ ವರ್ಷದಿಂದ ಕೋರ್ಸ್‌ ಪ್ರಾರಂಭಿಸುವುದಾಗಿ ತಿಳಿಸಿತು. ಮತ್ತೆ 2017–18ನೇ ಸಾಲಿಗೆ ಕೋರ್ಸ್‌ ಆರಂಭಿಸಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಶಿಫಾರಸು ಸಲ್ಲಿಸಿತ್ತು. ಆದರೆ ವಿಶ್ವವಿದ್ಯಾಲಯ ಸೀಟು ಹಂಚಿಕೆ ಮಾಡದಿದ್ದರಿಂದ ಕಳೆದ ವರ್ಷವೂ ಕೋರ್ಸ್‌ ಪ್ರಾರಂಭ ನನೆಗುದಿಗೆ ಬಿತ್ತು. ಇದರಿಂದ ಸ್ನಾತಕೋತ್ತರ ಪದವಿ ಆಸಕ್ತ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳಿಗೆ ನಿರಾಸೆಯಾಯಿತು.

‘1983ರಲ್ಲಿ ಆರಂಭವಾದ ಈ ಕಾಲೇಜು ನ್ಯಾಕ್‌ನಿಂದ ಸಿ++ ಹಾಗೂ ಯುಜಿಸಿಯಿಂದ 2(ಎಫ್),12(ಬಿ) ಮಾನ್ಯತೆ ಪಡೆದಿದೆ. ಕಾಲೇಜು ಕಟ್ಟಡದ ನೆಲ ಮಹಡಿಯಿಂದ ಮೂರು ಅಂತಸ್ತು ಹೊಂದಿದ್ದು, ಕಟ್ಟಡ ಆಕರ್ಷಕವಾಗಿದೆ. ಹಲವು ಸುಸಜ್ಜಿತ ಬೋಧನಾ ಕೊಠಡಿಗಳನ್ನು ಹೊಂದಿದೆ. ಗುಣಾತ್ಮಕ ಬೋಧನೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಗರಿಷ್ಠ ಫಲಿತಾಂಶಕ್ಕೆ ವಿಶ್ವವಿದ್ಯಾಲಯದಲ್ಲೇ ಖ್ಯಾತಿ ಪಡೆದಿದೆ’ ಎಂಬುದು ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ನಾಗರಾಜು, ಗಿರೀಶ್‌, ಬಸವರಾಜು ಅಭಿಪ್ರಾಯ.

2017–18ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಹಾಗೂ ಇತಿಹಾಸ ಪದವಿ ಸೇರಿ ಒಟ್ಟು 1,713 ವಿದ್ಯಾರ್ಥಿಗಳು ಓದುತ್ತಿದ್ದರು. ಒಟ್ಟು 33 ಮಂದಿ ಕಾಯಂ ಹಾಗೂ 47 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಸಜ್ಜಿತ ಗ್ರಂಥಾಲಯವಿದ್ದು 60 ಸಾವಿರಕ್ಕೂ ಅಧಿಕ ವಿವಿಧ ಪುಸ್ತಕಗಳಿವೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಕಲ್ಪಿಸಲಾಗಿದೆ.

ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪ್ರತಿ ತರಗತಿ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕಟ್ಟಡದ ಸುತ್ತಮುತ್ತ ಸುಂದರ ಪರಿಸರವಿದೆ. ಮಳೆಗಾಲ ಆರಂಭವಾಯಿತೆಂದರೆ ಹಚ್ಚ ಹಸಿರಿನ ಮಧ್ಯೆ ಈ ಕಾಲೇಜು ಕಂಗೊಳಿಸುತ್ತಿರುತ್ತದೆ. ಕಟ್ಟಡದ ಪಕ್ಕದಲ್ಲಿ ವಿಶಾಲವಾದ ಕ್ರೀಡಾಂಗಣ, ವಿಜ್ಞಾನ ವಿಭಾಗದ ಸುಸಜ್ಜಿತ ಪ್ರಯೋಗಾಲಯ ಇದೆ. ವಿರಾಮದ ಅವಧಿಯಲ್ಲಿ ಅಧ್ಯಯನ ಮಾಡಲು ವಿಶಾಲವಾದ ಗ್ರಂಥಾಲಯವಿದೆ.

‘ದಾವಣಗೆರೆ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಹಲವು ವರ್ಷದ ಪರೀಕ್ಷೆಗಳ ಈ ಕಾಲೇಜಿಗೆ ಹಲವು ರ‍್ಯಾಂಕ್‌ಗಳು ಬಂದಿವೆ. ನುರಿತ ಅನುಭವಿ ಅಧ್ಯಾಪಕ ವರ್ಗವಿದೆ. ಪದವಿಯಲ್ಲಿ ಬಿ.ಎ, ಬಿ.ಎಸ್‌ಸಿ, ಬಿ.ಕಾಂ, ಬಿ.ಬಿ.ಎಂ ಹಾಗೂ ಸ್ನಾತಕೋತ್ತರ ಪದವಿಯ ಇತಿಹಾಸ ಹಾಗೂ ವಾಣಿಜ್ಯಶಾಸ್ತ್ರ ಅಧ್ಯಯನ ಕೋರ್ಸ್‌ ಈಗಾಗಲೇ ನಡೆಯುತ್ತಿವೆ. ಕಾಲೇಜಿನ ಅಭಿವೃದ್ಧಿಯ ಗುಣಮಟ್ಟ ಅಳೆಯಲು ಮುಂದಿನ ಜುಲೈನಲ್ಲಿ ನ್ಯಾಕ್‌ ಸಮಿತಿ ಭೇಟಿ ನೀಡುತ್ತಿದೆ’ ಎಂದು ಪ್ರಾಂಶುಪಾಲ ಪ್ರೊ.ಎಸ್‌.ಬಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಸಿಬಿಝಡ್ ಪದವಿ ಕೋರ್ಸ್‌ಗೆ ಒತ್ತಾಯ

ರಸಾಯನ ವಿಜ್ಞಾನ, ಜೀವ ವಿಜ್ಞಾನ ಹಾಗೂ ಸಸ್ಯಶಾಸ್ತ್ರ(ಸಿ.ಬಿ.ಝಡ್‌) ವಿಷಯಕ್ಕೆ ಸಂಬಂಧಿಸಿದಂತೆ ಪದವಿ ವಿಭಾಗ ಸ್ಥಾಪಿಸಬೇಕೆಂದು ಐದಾರು ವರ್ಷಗಳ ಹಿಂದೆಯೇ ವಿಶ್ವವಿದ್ಯಾಲಯದಿಂದ ಅನುಮೋದನೆ ಸಿಕ್ಕಿದ್ದರೂ ಕೋರ್ಸ್‌ ಆರಂಭಿಸಿಲ್ಲ. ಇದರಿಂದಾಗಿ ಈ ಕೋರ್ಸ್‌ ಪಡೆಯುವ ಆಸಕ್ತ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ತುಮಕೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಮತಿತ್ತರ ಕಾಲೇಜುಗಳಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ಬೇರೆ ನಗರಗಳಿಗೆ ಹೋಗಿ ಅಧ್ಯಯನ ಮಾಡಲು ಹಣದ ಕೊರತೆ ಇರುವ ಬಡ ವಿದ್ಯಾರ್ಥಿಗಳು ಈ ಕೋರ್ಸ್‌ನಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗ ಅವಕಾಶಗಳಲ್ಲಿ ಸಿಬಿಝಡ್‌ ಪದವಿ ಮಾಡಿದವರಿಗೆ ಹೆಚ್ಚು ಬೇಡಿಕೆ ಇದ್ದು, ಈ ಕೋರ್ಸ್‌ನ್ನು ಸಹ ಆರಂಭಿಸಬೇಕು‘ ಎಂಬುದು ಪಿಯು ಮುಗಿಸಿರುವ ತಾಲ್ಲೂಕಿನ ವಿದ್ಯಾರ್ಥಿಗಳ ಮನವಿ.

ಎಸ್‌.ಸುರೇಶ್‌, ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT