ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯಗಳ ಬಳಕೆ ಹೆಚ್ಚಲಿ

ಮಾರಾಟ ಮೇಳದಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಲಹೆ
Last Updated 16 ಜೂನ್ 2018, 9:38 IST
ಅಕ್ಷರ ಗಾತ್ರ

ಮಡಿಕೇರಿ: ‘ಸಿರಿ ಧಾನ್ಯಗಳನ್ನು ನಿತ್ಯ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವುದರಿಂದ ಮಾರಕ ಕಾಯಿಲೆಳನ್ನು ತಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಇವುಗಳ ಬಳಕೆ ಹೆಚ್ಚಾಗಬೇಕು’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಲಹೆ ನೀಡಿದರು.

ನಗರದ ಕಾವೇರಿ ಹಾಲ್‌ನಲ್ಲಿ ಶುಕ್ರವಾರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ವಿರಾಜಪೇಟೆ ತಾಲ್ಲೂಕು ಘಟಕದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಸಿರಿ ಧಾನ್ಯಗಳ ಆಹಾರ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಅವರು ಮಾತನಾಡಿದರು.

‘ರೋಗನಿವಾರಕ ಅಂಶಗಳನ್ನು ಹೊಂದಿರುವ 9 ಬಗೆಯ ಏಕದಳ ಧಾನ್ಯಗಳನ್ನು ಆರಿಸಿಕೊಂಡು ನಿತ್ಯ ಬಳಕೆ ಮಾಡುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವೆಲ್ಲವುಗಳ ತಡೆಗೆ ಸಿರಿಧಾನ್ಯಗಳ ಬಳಕೆ ರಾಮಬಾಣವಾಗಿದೆ. ಹೆಚ್ಚಾಗಿ ಮಹಿಳೆಯರು ಈ ಬಗ್ಗೆ ತಿಳಿದು ಮನೆಯಲ್ಲಿ ಪ್ರಯೋಗಿಸಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಯೋಗೇಶ್ ಮಾತನಾಡಿ, ‘ಸಿರಿ ಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಜೋಳ, ಹಾರಕ, ಬರಗು, ಕೊರಲೆ ಮುಂತಾದವುಗಳು. ಇವುಗಳನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬೆಳೆಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದು. ಎಲ್ಲರೂ ಸಿರಿಧಾನ್ಯಗಳ ಬಳಕೆಯತ್ತ ಗಮನಹರಿಸಬೇಕು’ ಎಂದು ಹೇಳಿದರು.

‘ಅಳಿವಿನಂಚಿನಲ್ಲಿರುವ ಹಾಗೂ ಅದ್ಭುತ ಆರೋಗ್ಯ ಮತ್ತು ರೋಗ ನಿವಾರಕ ಅಂಶಗಳನ್ನು ಹೊಂದಿರುವ ಒಂಬತ್ತು ಬಗೆಯ ಏಕದಳ ಧಾನ್ಯಗಳನ್ನು ಆರಿಸಿಕೊಂಡು ಅವುಗಳಿಗೆ ಸಿರಿ ಧಾನ್ಯಗಳೆಂಬ ಹೆಸರನ್ನಿಟ್ಟು, ‘ಸಿರಿ ಗ್ರಾಮೋದ್ಯೋಗ ಸಂಸ್ಥೆ’ಯು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ, ರಾಜ್ಯದ ನಾನಾ ಕಡೆ ಸಿರಿ ಧಾನ್ಯಗಳ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಸಂಸ್ಕರಣೆ ಹಾಗೂ ಮೌಲ್ಯವರ್ಧ ನೆಯ ಕೊರತೆಯಿಂದ ಕಣ್ಮರೆಯಾದ ಈ ಧಾನ್ಯಗಳ ಬಳಕೆಯನ್ನು ಮತ್ತೆ ಜನರಿಗೆ ಪರಿಚಯಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ’ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರುಣ್ ಬಾನಂಗಡ ಮಾಹಿತಿ ನೀಡಿದರು.

‘ಸಿರಿಧಾನ್ಯಗಳಿಂದ ದೇಹಕ್ಕೆ ವೈವಿಧ್ಯಮಯ ವಿಟಮಿನ್‌ಗಳು ಸಿಗುವು ದರಿಂದ ಇವು ಅನೇಕ ರೋಗಗಳಿಂದ ದೂರವಿರಲು ಸಹಕಾರಿಯಾಗಿದೆ. ಸಿರಿಧಾನ್ಯಗಳಿಂದ ರುಚಿಯಾದ ಆಹಾರ ಗಳನ್ನು ತಯಾರಿಸುವ ವಿಚಾರಗಳನ್ನು ತಿಳಿಯುವಲ್ಲಿ ಆಹಾರ ಮೇಳಗಳು ಸಹಕಾರಿಯಾಗಿವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ನಗರ ಪೊಲೀಸ್ ಠಾಣೆ ಸಿಪಿಐ ಷಣ್ಮುಗಂ, ನಗರಸಭೆ ಸದಸ್ಯೆ ಲೀಲಾ ಶೇಷಮ್ಮ, ವಿರಾಜಪೇಟೆ ತಾಲ್ಲೂಕು ಯೋಜನಾಧಿಕಾರಿ ಸದಾಶಿವಗೌಡ, ಮಡಿಕೇರಿ ವಲಯ ಮೇಲ್ವಿಚಾರಕ ಎಚ್.ಮುಕುಂದ, ರಾಣಿ ಮಾಚಯ್ಯ ಹಾಜರಿದ್ದರು.

ಜನಾಕರ್ಷಿಸಿದ ಬಗೆಬಗೆಯ ತಿನಿಸು...

ಸಿರಿ ಧಾನ್ಯಗಳಾದ ನವಣೆ, ಸಾವೆ, ಹಾರಕ, ಕೊರಲೆ, ಸಜ್ಜೆ,   ಬರಗು ಮತ್ತು ರಾಗಿ ಮತ್ತಿತರ ಧಾನ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಇವುಗಳಿಂದ ತಯಾರಿಸಿದ ಆಹಾರಗಳನ್ನು ಸಾರ್ವಜನಿಕರು ಸವಿದು ಖುಷಿಪಟ್ಟರು.

ಮಡಿಕೇರಿ ಸೇರಿದಂತೆ ವಿರಾಜಪೇಟೆ ಕಡೆಯಿಂದ ಬಂದಿದ್ದ ನೂರಾರು ಸ್ವಸಹಾಯ ಸಂಘದ ಸದಸ್ಯರು ಸಿರಿಧಾನ್ಯಗಳನ್ನು ಖರೀದಿಸಿದರು. ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳಾದ ಪುಲಾವ್, ಉಪ್ಪಿಟ್ಟು, ಬಿಸಿಬೇಳೆ ಬಾತ್‌, ಕೇಸರಿ ಬಾತ್, ಪಾಯಸ, ಗಂಜಿ, ಸಜ್ಜೆ ಹಾಲು, ರಾಗಿ ಹಾಲು, ಚಿಲ್ಲಿ ಹಾಟ್, ಜ್ಯೂಸ್, ಲಾಡು, ಬರ್ಫಿ ತಿನಿಸುಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT