ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಂಭ್ರಮದ ಈದ್‌ ಆಚರಣೆ

Last Updated 17 ಜೂನ್ 2018, 6:42 IST
ಅಕ್ಷರ ಗಾತ್ರ

ಬೆಳಗಾವಿ: ನಗರದಾದ್ಯಂತ ಮುಸ್ಲಿಮರು ಶನಿವಾರ ಶ್ರದ್ಧಾ ಭಕ್ತಿಯಿಂದ ಈದ್‌ ಉಲ್‌ ಫಿತ್ರ್‌ ಆಚರಿಸಿದರು. 30 ದಿನಗಳ ಉಪವಾಸ ವ್ರತಾಚರಣೆಯ ಕೊನೆಗೊಳಿಸುವ ದಿನವಾಗಿ ಈದ್‌ ಆಚರಿಸಲಾಗುತ್ತಿದೆ. ನಗರದ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಂತಿ ಸೌಹಾರ್ದತೆಯ ಸಂದೇಶವನ್ನು ಧರ್ಮಗುರುಗಳು ಸಾರಿದರು.

ಇಲ್ಲಿನ ಶಿವಾಜಿ ನಗರ, ಗಾಂಧಿ ನಗರ, ಆರ್‌ಟಿಒ, ಚವಾಟ ಗಲ್ಲಿ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಿದರು. ದೇವರ ನಾಮಸ್ಮರಣೆಯ ಘೋಷಣೆಗಳನ್ನು ಕೂಗಿದರು. ಘೋಷವಾಕ್ಯಗಳನ್ನು ಹೊಂದಿದ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಅಂಜುಮನ್‌– ಇ– ಇಸ್ಲಾಂ ಸಂಸ್ಥೆಯ ಈದ್ಗಾ ಮೈದಾನಕ್ಕೆ ಮೆರವಣಿಗೆ ಮೂಲಕ ಬಂದು, ಸಾಮೂಹಿಕ ಪ್ರಾರ್ಥನೆ ಮಾಡಿದರು.

ಧರ್ಮಗುರು ಮುಫ್ತಿ ಅಬ್ದುಲ್‌ ಅಜೀಜ್‌ ಕಾಜಿ ಅವರು ಕುರ್‌ಆನ್‌ ಪಠಿಸಿದರು. ಧರ್ಮ ಬೋಧನೆ ಮಾಡಿದರು. ‘ರಮ್ಜಾನ್‌ ಉಪವಾಸ ವ್ರತಾಚರಣೆಯೂ ಕೇವಲ ಶಾರೀರಿಕವಾಗಿ ಅಲ್ಲ, ಮಾನಸಿಕವಾಗಿ ಹಾಗೂ ನೈತಿಕವಾಗಿಯೂ ಸದೃಢ ಮಾಡುತ್ತದೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಬಡವರ ಸ್ಥಿತಿ ಎಲ್ಲರಿಗೂ ಅರಿವಾಗಲಿ ಎನ್ನುವ ಉದ್ದೇಶದಿಂದ ಉಪವಾಸ ಪಾಲಿಸಲಾಗುತ್ತಿದೆ. ನಮ್ಮ ಆದಾಯದ ಒಂದು ಪಾಲು ಭಾಗವನ್ನು ಬಡವರಿಗೆ ದಾನ ಮಾಡಬೇಕು ಎಂದು ಧರ್ಮದಲ್ಲಿ ಹೇಳಲಾಗಿದೆ. ಇದನ್ನು ಪಾಲಿಸುವ ಮೂಲಕ ನಿಜವಾದ ಅರ್ಥದಲ್ಲಿ ಹಬ್ಬವನ್ನು ಆಚರಿಸಬೇಕಾಗಿದೆ’ ಎಂದು ಹೇಳಿದರು.

‘ಸಮರ್ಪಕವಾಗಿ ಮಳೆಯಾಗಲಿ. ಎಲ್ಲ ಜೀವರಾಶಿಗಳಿಗೆ ಒಳ್ಳೆಯದಾಗಲಿ. ಸಮಾಜದಲ್ಲಿ ಎಲ್ಲರ ಜೊತೆ ಸೌಹಾರ್ದಯುತವಾಗಿ ಬಾಳಬೇಕು. ಭ್ರಾತೃತ್ವ ಹೊಂದಿರಬೇಕು. ಪ್ರೀತಿ– ವಾತ್ಸಲ್ಯ ಹಂಚಿಕೊಳ್ಳಬೇಕು’ ಎಂದು ನುಡಿದರು.

ಕಾಂಗ್ರೆಸ್‌ ಮುಖಂಡ ಫಿರೋಜ್‌ ಸೇಠ್‌, ಸಹೋದರ ರಾಜು ಸೇಠ್ ಸೇರಿದಂತೆ ಹಲವು ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಜನರಿಗೆ ಶುಭ ಕೋರಿದರು. ಕೋಟೆ ಕೆರೆಯ ಪಕ್ಕದ ಬಟಾಲಿಯನ್‌ ಮೈದಾನದಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬೆಳಿಗ್ಗೆ ಪ್ರಾರ್ಥನೆ ನಡೆಸಿದ ನಂತರ ಮುಸ್ಲಿಮರು ಒಬ್ಬರಿಗೊಬ್ಬರು ಆಲಿಂಗನ ಮಾಡಿ, ಹಬ್ಬದ ಶುಭಾಶಯ ಕೋರಿದರು. ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಟ್ಟೆ ಚಮಕ್‌: ಹೊಸ ಬಟ್ಟೆ, ಟೋಪಿ, ಶೂಗಳನ್ನು ತೊಟ್ಟು ಸಂಭ್ರಮ ಪಟ್ಟರು. ಹಬ್ಬದ ಆಚರಣೆಯಲ್ಲಿ ತೊಡಗಿದ್ದರಿಂದ ದರ್ಬಾರ್‌ ಗಲ್ಲಿ, ಮಾರ್ಕೆಟ್‌, ಖಡೇ ಬಜಾರ್‌ದಲ್ಲಿದ್ದ ಅಂಗಡಿಗಳನ್ನು ಮುಸ್ಲಿಮರು ಬಂದ್‌ ಮಾಡಿದ್ದರು. ಮಾರ್ಕೆಟ್‌ನಲ್ಲಿ ಜನರ ದಟ್ಟಣೆ ಕಡಿಮೆಯಾಗಿತ್ತು.

ಬಂದೋಬಸ್ತ್‌

ನಗರದ ವಿವಿಧೆಡೆ ಇರುವ ಮಸೀದಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಹಬ್ಬದ ಆಚರಣೆ ಸಂದರ್ಭದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT