ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಬಾರದ ‘ಹೈಟೆಕ್‌ ಮಾರುಕಟ್ಟೆ’

ಮಳೆಗಾಲದಲ್ಲಿ ವ್ಯಾಪಾರಸ್ಥರಿಗೆ ತಪ್ಪದ ಸಮಸ್ಯೆ; ನಗರಸಭೆ ಆಡಳಿತದ ನಿರ್ಲಕ್ಷ್ಯ
Last Updated 17 ಜೂನ್ 2018, 10:36 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಮಹದೇವಪೇಟೆಯಲ್ಲಿ ನಿರ್ಮಿಸಿರುವ ‘ಹೈಟೆಕ್‌ ತರಕಾರಿ ಮಾರುಕಟ್ಟೆ’ ಉದ್ಘಾಟನೆಗೊಂಡು ಮೂರು ತಿಂಗಳು ಸಮೀಪಿಸಿದರೂ ವ್ಯಾಪಾರಸ್ಥರ ಬಳಕೆಗೆ ಮಾತ್ರ ನೀಡಿಲ್ಲ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆಯ ಬಿಸಿ ಆ ಕಟ್ಟಡಕ್ಕೂ ತಟ್ಟಿದ್ದು, ಬೃಹತ್‌ ಕಟ್ಟಡ ನಿಷ್ಪ್ರಯೋಜಕವಾಗುತ್ತಿದೆ!

ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಬೃಹತ್‌ ಕಟ್ಟಡ ನಿರ್ಮಾಣ ಮಾಡಿದ್ದರೂ ಶುಕ್ರವಾರದ ಸಂತೆ ವೇಳೆ ವ್ಯಾಪಾರಿಗಳು ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ಪರಿಸ್ಥಿತಿಯಿದೆ. ನೀತಿಸಂಹಿತೆ ಜಾರಿ ಭಯದಲ್ಲಿ ಮಾರ್ಚ್‌ 22ರಂದು ತರಾತುರಿಯಲ್ಲಿ ಉದ್ಘಾಟನೆ ನಡೆಸಲಾಗಿತ್ತು. ಉದ್ಘಾಟನೆಗೊಂಡು ಕೆಲವೇ ದಿನಗಳಲ್ಲಿ ನೀತಿಸಂಹಿತೆ ಜಾರಿಗೊಂಡಿತ್ತು. ಹೀಗಾಗಿ, ಉಳಿಕೆ ಕಾಮಗಾರಿಗೆ ಟೆಂಡರ್‌ ಕರೆಯಲು ನಗರಸಭೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಕಟ್ಟಡ ಬಳಕೆಗೆ ಬಾರದ ಸ್ಥಿತಿಯಿದ್ದು, ಮಳೆಯ ನೀರು ಇಡೀ ಕಟ್ಟಡದ ಆವರಣಕ್ಕೆ ಬರುತ್ತಿದೆ.

ಕಳೆದ ಎರಡು ವಾರ ಮಡಿಕೇರಿಯಲ್ಲಿ ಮುಂಗಾರು ಅಬ್ಬರಿಸಿತ್ತು. ಹಳೆಯ ಕಟ್ಟಡ ಹೊರತುಪಡಿಸಿದರೆ, ಉಳಿದೆಡೆ ರಸ್ತೆಗಳಲ್ಲಿಯೇ ತಾಡಪಾಲ್‌ ಕಟ್ಟಿಕೊಂಡು ವ್ಯಾಪಾರ ನಡೆಸಲಾಗುತ್ತಿದೆ. ಸಂತೆ ನಡೆದ ಎರಡು ಶುಕ್ರವಾರವೂ ಸುರಿದ ಮಳೆಯ ನಡುವೆಯೇ ವ್ಯಾಪಾರಸ್ಥರು ವ್ಯಾಪಾರ ನಡೆಸಿದರೆ, ಗ್ರಾಹಕರು ಕೊಡೆ ಹಿಡಿದು ಖರೀದಿಸಿದರು. ಹೆಸರಿಗಷ್ಟೇ ಹೈಟೆಕ್‌ ಮಾರುಕಟ್ಟೆ ತಲೆಯೆತ್ತಿ ನಿಂತಿದೆ ಎಂದು ವ್ಯಾಪಾರಸ್ಥರು ದೂರುತ್ತಾರೆ.

ಕಳಪೆ ಕಾಮಗಾರಿ: ಈ ನಡುವೆ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಕಟ್ಟಡದ ಸುತ್ತ ಸಜ್ಜೆ ಬಿಡದ ಕಾರಣ ಮಳೆಯ ನೀರು ಒಳಬರುತ್ತಿದೆ. ಎರಡು ಅಂತಸ್ತಿನ ಕಟ್ಟಡದ ತುಂಬೆಲ್ಲಾ ಮಳೆಯ ನೀರೇ ಆವರಿಸಿ ಮುಂಗಾರು ಆರಂಭದಲ್ಲಿ ಸಮಸ್ಯೆ ತಂದೊಡ್ಡುತ್ತಿದೆ. ಇನ್ನು ಕೆಳ ಅಂತಸ್ತಿನಲ್ಲಿ ಸಂಗ್ರಹವಾದ ನೀರು ಹೋಗಲು ಚರಂಡಿಯಿಲ್ಲ. ಶೀತಮಯ ವಾತಾವರಣವಿದೆ.

‘ಮಳೆಯ ನೀರು ಒಳಪ್ರವೇಶಿಸದಂತೆ ನಾಲ್ಕು ಬದಿಯಲ್ಲೂ ಶೀಟ್‌ ಅಳವಡಿಸಬೇಕಿದೆ. ಅದಕ್ಕೆ ಟೆಂಡರ್‌ ಕರೆಯಬೇಕು. ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ತಡವಾಗಿದೆ. ತಕ್ಷಣವೇ ಕೆಲಸ ಆರಂಭಿಸುತ್ತೇವೆ. ಶೀಟ್‌ ಅಳವಡಿಸದಿದ್ದರೆ ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. 15 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಷ್ಟೊಂದು ತರಾತುರಿ ಏನಿತ್ತು?: ಕಾಮಗಾರಿ ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವ ಅಗತ್ಯವಾದರೂ ಏನಿತ್ತು. ಚುನಾವಣೆಯ ಲಾಭಕೋಸ್ಕರ ಉದ್ಘಾಟನೆ ಮಾಡಲಾಗಿತ್ತು. ಸರ್ಕಾರದ ಅನುದಾನದಿಂದ ನಡೆಯುವ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲವಾಗಬೇಕು. ಆದರೆ, ಮಡಿಕೇರಿ ನಗರಸಭೆಯ ಆಡಳಿತದಲ್ಲಿ ಸಮನ್ವಯತೆ ಕೊರತೆಯಿದೆ. ಅಧ್ಯಕ್ಷರು ಕಾಂಗ್ರೆಸ್‌ನವರು. ಉಪಾಧ್ಯಕ್ಷರು ಬಿಜೆಪಿಯವರು. ಎರಡೂ ಪಕ್ಷಗಳು ಕಚ್ಚಾಟದಲ್ಲಿಯೇ ಕಾಲಕಳೆಯುತ್ತಿವೆ. ಇದರಿಂದ ನಗರದ ಜನರು ಹೈರಾಣಾಗಿದ್ದಾರೆ. ಒಳಚರಂಡಿ (ಯುಜಿಡಿ) ಕಾಮಗಾರಿಯಿಂದ ನಗರದ ರಸ್ತೆಗಳೆಲ್ಲವೂ ಹಾಳಾಗಿವೆ. ಗೌಳಿಬೀದಿ, ಹೊಸ ಬಡಾವಣೆ, ರೇಸ್‌ ಕೋರ್ಸ್‌ ರಸ್ತೆಯಲ್ಲಿ ಗುಂಡಿಗಳೇ ದರ್ಬಾರ್ ನಡೆಸುತ್ತಿವೆ’ ಎಂದು ನಿವಾಸಿ ಸೋಮಯ್ಯ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT