ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಚೆಂಡಿನ ಅಂಗಳದ ಕುಬೇರರು ಇವರು...

Last Updated 17 ಜೂನ್ 2018, 13:01 IST
ಅಕ್ಷರ ಗಾತ್ರ

ಭಾರತ ತಂಡ ಈ ಟೂರ್ನಿಯಲ್ಲಿ ಆಡುವುದು ಯಾವಾಗ?..

ಫಿಫಾ ವಿಶ್ವಕಪ್‌ ನಡೆದಾಗಲೆಲ್ಲಾ ಅಭಿಮಾನಿಗಳು ಕೇಳುವ ಪ್ರಶ್ನೆ ಇದು.

ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿಗೂ ಈ ಪ್ರಶ್ನೆ ಎದುರಾಗಿತ್ತು. ಆಗ ಅವರು
ನಕ್ಕು ಸುಮ್ಮನಾಗಿದ್ದರು. ಹಿಂದೊಮ್ಮೆ ಭಾರತಕ್ಕೆ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು.

ಎರಡನೇ ಮಹಾಯುದ್ಧದ ನಂತರ ಬ್ರೆಜಿಲ್‌ನಲ್ಲಿ (1950) ಆಯೋಜನೆಯಾಗಿದ್ದ ವಿಶ್ವಕಪ್‌ನಿಂದ ಸ್ಕಾಟ್ಲೆಂಡ್‌, ಫ್ರಾನ್ಸ್ ಸೇರಿದಂತೆ ಕೆಲ ತಂಡಗಳು ಹಿಂದೆ ಸರಿದಿದ್ದವು. ಹೀಗಾಗಿ ಬ್ರೆಜಿಲ್‌ ಫುಟ್‌ಬಾಲ್‌ ಫೆಡರೇಷನ್‌, ಟೂರ್ನಿಗೆ ಭಾರತ ತಂಡವನ್ನು ಕಳುಹಿಸಿಕೊಡುವಂತೆ ಅಖಿಲ ಭಾರತ ಫುಟ್‌ಬಾಲ್‌ ಫೆರಡೇಷನ್‌ಗೆ (ಎಐಎಫ್‌ಎಫ್) ಮನವಿ ಮಾಡಿತ್ತು. ಭಾರತ ತಂಡದವರು 1948ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬರಿಗಾಲಿನಲ್ಲಿ ಆಡಿ ಗಮನ ಸೆಳೆದಿದ್ದೂ ಇದಕ್ಕೆ ಕಾರಣವಾಗಿತ್ತು. ಆದರೆ ವಿಶ್ವಕಪ್‌ನಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಬೂಟು ಹಾಕಿಕೊಂಡು ಆಡಬೇಕೆಂದು ಫಿಫಾ, ನಿಯಮ ರೂಪಿಸಿತ್ತು. ಆಟಗಾರರಿಗೆ ಬೂಟು ಕೊಡಿಸಲು ಆಗ ಎಐಎಫ್‌ಎಫ್‌ ಬಳಿ ಹಣ ಇರಲಿಲ್ಲ. ಹೀಗಾಗಿ ವಿಶ್ವಕಪ್‌ನಿಂದ ತಂಡ ಹಿಂದೆ ಸರಿದಿತ್ತು!

ಈ ಘಟನೆ ಆಗಿನ ಬಹುತೇಕ ಫುಟ್‌ಬಾಲ್‌ ತಂಡಗಳು ಮತ್ತು ಆಟಗಾರರ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕನ್ನಡಿ.

ಆದರೆ ಈಗ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಫುಟ್‌ಬಾಲ್‌ ಆಟಗಾರರ ವಾರ್ಷಿಕ ಆದಾಯ ಸಾವಿರ ಕೋಟಿಗಿಂತಲೂ ಹೆಚ್ಚಿದೆ. ಪ್ರಾಯೋಜತ್ವ, ಜಾಹೀರಾತು ಹೀಗೆ ವಿವಿಧ ಮೂಲಗಳಿಂದ ಫೆಡರೇಷನ್‌ಗಳಿಗೂ ಅಪಾರ ಪ್ರಮಾಣದಲ್ಲಿ ಹಣ ಸಂದಾಯವಾಗುತ್ತಿದೆ.

2012ರ ಫಿಫಾ ವರದಿಯ ಪ್ರಕಾರ ಫಿಫಾದ ವಾರ್ಷಿಕ ಆದಾಯ ಅಂದಾಜು ₹47,504 ಕೋಟಿ. ಈ ಬಾರಿ ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಿಂದ ಫಿಫಾ ಸುಮಾರು ₹ 4,14,891 ಕೋಟಿ ಲಾಭ ಗಳಿಸುವ ನಿರೀಕ್ಷೆ ಇದೆ.

ಫಿಫಾ ಅಧೀನದಲ್ಲಿ 3 ಲಕ್ಷ ಕ್ಲಬ್‌ಗಳಿವೆ. 24 ಕೋಟಿ ಆಟಗಾರರು ಫಿಫಾದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಯೂರೋಪ್‌ನ ತಂಡಗಳು ಮತ್ತು ಆಟಗಾರರು ಅತಿ ಹೆಚ್ಚು ಆದಾಯ ಹೊಂದಿದ್ದಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಪ್ರಮುಖ ತಂಡಗಳು ಮತ್ತು ಆಟಗಾರರ ಮಾರುಕಟ್ಟೆ ಮೌಲ್ಯ ಇದಕ್ಕೆ ನಿದರ್ಶನದಂತಿದೆ. ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಮತ್ತು ಬ್ರೆಜಿಲ್‌ನ ನೇಮರ್‌ ಅವರ ಮಾರುಕಟ್ಟೆ ಮೌಲ್ಯ ₹1,422 ಕೋಟಿ! ತಂಡಗಳ ಪೈಕಿ ಫ್ರಾನ್ಸ್‌ ₹8,532 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವುದು ಗಮನಾರ್ಹ.

( ಆಧಾರ: ಟ್ರಾನ್ಸ್‌ಫರ್‌ ಮಾರ್ಕೆಟ್‌. (ಜೂನ್‌ 6)

*ಆಟಗಾರರು ಮತ್ತು ತಂಡಗಳ ಮಾರುಕಟ್ಟೆ ಮೌಲ್ಯವನ್ನು ಜೂನ್‌ 14ರ ಯೂರೊ ಮೌಲ್ಯಕ್ಕೆ ಅನುಗುಣವಾಗಿ ರೂಪಾಯಿಗೆ ಪರಿವರ್ತಿಸಲಾಗಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT