ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ, ರಂಜನೆಗೆ ಸಿರಿನಾಡು

Last Updated 19 ಜೂನ್ 2018, 7:37 IST
ಅಕ್ಷರ ಗಾತ್ರ

ಟೆ ಲಿಕಾಂ ಕಂಪನಿಗಳ ಡಾಟಾ ವಾರ್‌ನಿಂದ ಇತ್ತೀಚೆಗೆ ಸ್ಮಾರ್ಟ್‌ಪೋನ್‌ಗಳ ಬಳಕೆದಾರರ ಸಂಖ್ಯೆ ಹಾಗೂ ಡಾಟಾದ ಬಳಕೆ ಹೆಚ್ಚಾಗಿದೆ. ಈ ಬದಲಾವಣೆಯಿಂದಲೇ ಟಿಸಿಲೊಡೆದ ಭಿನ್ನ ಆಲೋಚನೆಯೊಂದಿಗೆ ಅಂತರ್ಜಾಲ ಬಳಕೆದಾರರನ್ನು ನೆಚ್ಚಿಕೊಂಡು ‘ಸಿರಿನಾಡು’ ವೆಬ್‌ಟೀವಿ ಮೂಲಕ ಜನರ ಮುಂದೆ ಬರುತ್ತಿದ್ದಾರೆ ಸಾಹಿತಿ ಚಂದ್ರಶೇಖರ ಕಂಬಾರ ಅವರ ಮಗ ರಾಜಶೇಖರ ಸಿ. ಕಂಬಾರ.

ಇದೇ ತಿಂಗಳ 21ರಂದು ‘ಸಿರಿನಾಡು’ ವೆಬ್‌ಟೀವಿಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಆಪ್ತರನ್ನೊಳಗೊಂಡ ನುರಿತ ಪತ್ರಕರ್ತರ ತಂಡವನ್ನು ರಚಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಕಾರ್ಯರೂಪಕ್ಕೆ ಬಂದರೆ ‘ಸಿರಿನಾಡು’ ಕನ್ನಡದ ಮೊದಲ ವೆಬ್‌ಟೀವಿಯಾಗಲಿದೆ.

‘ಯೂಟ್ಯೂಬ್ ಚಾನೆಲ್‌ಗಳು ಈಗಾಗಲೇ ಸಾಕಷ್ಟಿವೆ. ಅವುಗಳನ್ನು ವೆಬ್‌ಟೀವಿ ಎನ್ನಲಾಗದು. ಸಿರಿನಾಡು ಯೂಟ್ಯೂಬ್ ಆಧಾರಿತ ಚಾನೆಲ್ ಅಲ್ಲ. ಸ್ವಂತ ವೇದಿಕೆ ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗಾಗಿ ‘ಸಿರಿನಾಡು’ (sirinadu) ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಅದನ್ನು ಈಗಾಗಲೇ ಲಾಂಚ್ ಮಾಡಲಾಗಿದೆ.

‘ಸ್ಯಾಟಲೈಟ್‌ ಟಿ.ವಿಗಳಿದ್ದಂತೆ ನಮ್ಮದು ಆನ್‌ಲೈನ್ ಟಿ.ವಿ. ಅಂತರ್ಜಾಲದ ಮೂಲಕ ಇದನ್ನು ನೋಡಬಹುದು. ಸಾಮಾನ್ಯ ಸುದ್ದಿ ವಾಹಿನಿಗಳಿಂತಲೂ ವಿಭಿನ್ನವಾಗಿರಲಿದೆ’. ಸಮಯವಿಲ್ಲ ಎಂಬ ಕಾರಣಕ್ಕೆ ಸಾಮಾನ್ಯ ಟೀವಿಗಳ ವೀಕ್ಷಣೆಯಿಂದ ದೂರವಾಗುತ್ತಿರುವ ಜನರು ಸ್ಮಾರ್ಟ್‌ಪೋನ್‌ಗಳ ಮೂಲಕ ಟೀವಿಗಳನ್ನು ಅಂಗೈಗೆ ತಂದಿಟ್ಟುಕೊಂಡಿದ್ದಾರೆ. ಅಂತವರಿಗೆ ‘ಸಿರಿನಾಡು’ ಹೆಚ್ಚು ಆತ್ಮೀಯವಾಗಲಿದೆ ಎಂಬುದು ರಾಜಶೇಖರ್ ಅವರ ವಿಶ್ವಾಸ.

‘ಸುದ್ದಿ ಹಾಗೂ ಮನರಂಜನೆಯನ್ನು ಗಮನದಲ್ಲಿಟ್ಟುಕೊಂಡು ‘ಸಿರಿನಾಡು’ ರೂಪಿಸಲಾಗಿದೆ. ಮಹತ್ವದ ಸುದ್ದಿಗಳನ್ನಷ್ಟೇ ಇಲ್ಲಿ ಬಿತ್ತರಿಸಲಾಗುತ್ತದೆ. ಮಹತ್ವದ ವಿಚಾರಗಳ ಬಗ್ಗೆ ನುರಿತ ವಿಶ್ಲೇಷಕರ ಚುಟುಕು ವಿವರಣೆ ಇರಲಿದೆ.’

‘ಎಲ್ಲ ವರ್ಗಕ್ಕೂ ಇಷ್ಟವಾಗುವಂತಹ ಕಾರ್ಯಕ್ರಮಗಳ ಯೋಜನೆ ಹಾಕಿಕೊಂಡಿದ್ದೇವೆ. ‘ಬುಕ್‌ ಓದಿ ಬುಕ್’ ಎಂಬ ಕಾರ್ಯಕ್ರಮದ ಮೂಲಕ ಈಚೆಗೆ ಬಿಡುಗಡೆಗೊಂಡ ಕನ್ನಡದ ಪುಸ್ತಕಗಳ ಬಗ್ಗೆ ವಿಮರ್ಶೆ ಮಾಡಿಸಲಾಗುತ್ತದೆ. ಯಾವ ಕಾರಣಕ್ಕೆ ಆ ಪುಸ್ತಕವನ್ನು ಖರೀದಿಸಿ ಓದಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಡುತ್ತೇವೆ.’

‘ಸಿನಿಮಾ ಟ್ರೇಲರ್‌ಗಳ ಮಾದರಿಯಲ್ಲಿಯೇ ನಾಟಕಗಳ ಟ್ರೇಲರ್‌ ರೂಪಿಸಲಾಗುತ್ತದೆ. ನಾಟಕ ಸಾರಾಂಶ, ನಟರು, ಪ್ರದರ್ಶನದ ಸ್ಥಳ ಹಾಗೂ ದಿನಾಂಕವನ್ನು ಆ ಟ್ರೇಲರ್ ಒಳಗೊಂಡಿರುತ್ತದೆ. ಮಹಿಳೆಯರಿಗೆ ‘ಫನ್ ಟೈಮ್’ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ಬನ್ನಂಜೆ ಗೋವಿಂದಾಚಾರ್ಯ ಅವರು ಪ್ರತಿನಿತ್ಯವೂ ವಿಷ್ಣು ಸಹಸ್ರನಾಮ ಸ್ತೋತ್ರದ ಅರ್ಥ ಮತ್ತು ವ್ಯಾಖ್ಯಾನ ಮಾಡಲಿದ್ದಾರೆ. ಅಜ್ಜಿಯಂದಿರು ಮೊಮ್ಮಕ್ಕಳಿಗಾಗಿ ಹೇಳಿಕೊಡುವ ‘ಹಳೇ ರುಚಿ ಹೊಸ ಬಗೆ’ ಮಾಡಲಿದ್ದಾರೆ.’

‘ನಮ್ಮ ಹಳ್ಳಿಗಾಡಿನ ಪ್ರತಿಭೆಗಳ ಸಾಹಸ ಪ್ರದರ್ಶನಗಳಿಗೂ ಸಿರಿನಾಡು ವೇದಿಕೆಯಾಗಲಿದೆ. ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಅನೇಕರನ್ನು ಗುರುತಿಸಿ ಅವರನ್ನು ಸಮಾಜದ ಮುನ್ನೆಲೆಗೆ ತರುವ ಪ್ರಯತ್ನವನ್ನು ಮಾಡಲಾಗುತ್ತದೆ. ನಮ್ಮ ಈ ಪ್ರಯತ್ನಕ್ಕೆ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಐಟಿ ಕಂಪನಿಗಳ ಅಧಿಕಾರಿಗಳು ಕೈಜೋಡಿಸಿದ್ದಾರೆ’ ಎಂದು ವಿವರಣೆ ನೀಡುತ್ತಾರೆ ಅವರು.

‘ನಾಡು ನಡೆದು ಬಂದ ಹಾದಿ’: ತಂದೆ ಚಂದ್ರಶೇಖರ ಕಂಬಾರ ಅವರೂ ಕರ್ನಾಟಕದ ಬಗ್ಗೆ ‘ನಾಡು ನಡೆದು ಬಂದ ಹಾದಿ’ ವಿಶೇಷ ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದಾರೆ. ಪ್ರಾರಂಭದಿಂದ ಇಲ್ಲಿಯವರೆಗಿನ ಕರ್ನಾಟಕದ ಸಂಪೂರ್ಣ ಇತಿಹಾಸವನ್ನು ಈ ಕಾರ್ಯಕ್ರಮದ ಮೂಲಕ ಸಂಚಿಕೆ ಕಟ್ಟಿಕೊಡಲಾಗುತ್ತದೆ. ಜನರ ಕುತೂಹಲ ಕೆರಳಿಸುವಂತಹ ವಿಷಯಗಳಿಂದ ಸಿರಿನಾಡು ಕೂಡಿರುತ್ತದೆ. ಚಾನೆಲ್‌ಗೆ ಉಚಿತ ಚಂದಾದಾರರಾಗಬಹುದು ಎಂದು ವಿವರಿಸಿದರು ರಾಜಶೇಖರ್.

**

ಕ್ಷೀಣಿಸುತ್ತಿದೆ ಟಿ.ವಿ ವೀಕ್ಷಕರ ಸಂಖ್ಯೆ
ಟೆಲಿವಿಷನ್ ಯುಗದ ಆರ್ಭಟ ಕಳೆಗುಂದುತ್ತಿದೆ. 2017ರಿಂದ ಈ ವರೆಗೆ ಭಾರತದಲ್ಲಿ ಶೇ 20 ಮಂದಿ ಟಿ.ವಿಗಳ ವೀಕ್ಷಣೆ ತೊರೆದಿದ್ದಾರೆ ಎಂದು ಟಿಆರ್‌ಎಐ ಹಾಗೂ ಐಎಂಎಐ ಅಧ್ಯಯನಗಳಿಂದ ಗೊತ್ತಾಗಿದೆ. ಬ್ರಾಡ್‌ಬ್ಯಾಂಡ್ ವ್ಯಾಪಕಗೊಂಡಿದ್ದು ಹಾಗೂ ಸ್ಮಾರ್ಟ್ ಪೋನ್‌ಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಾರಣ. ಆನ್‌ಲೈನ್‌ನಲ್ಲಿ ವಿಡಿಯೊ ನೋಡುವವರ ಸಂಖ್ಯೆ ಶೇ 48 ರಿಂದ 52ರಷ್ಟು ಹೆಚ್ಚಾಗಿದೆ. ಈ ವರ್ಷದ ಅಂತ್ಯಕ್ಕೆ ಅದರ ಪ್ರಮಾಣವು ಶೇ 65 ದಾಟಿದರೂ ಅಚ್ಚರಿಯೇನಲ್ಲ. ಈ ನಿಟ್ಟಿನಲ್ಲಿ ಕಡಿಮೆ ಪ್ರಮಾಣದ ಡಾಟಾಗೆ ಹೆಚ್ಚು ಮಾಹಿತಿ ನೀಡುವ ಉದ್ದೇಶವೂ ನಮಗಿದೆ ಎನ್ನುತ್ತಾರೆ ರಾಜಶೇಖರ್.

**

6 ರಿಂದ 7 ನಿಮಿಷಗಳೊಳಗೆ ಒಂದು ನಿರ್ದಿಷ್ಟ ವಿಚಾರದ ಸಂಪೂರ್ಣ ಮಾಹಿತಿಯನ್ನು ಕಟ್ಟಿಕೊಡುವ ಪ್ರಯತ್ನ ನಮ್ಮದು. ಸುದ್ದಿಗಳು ತುಂಬಾ ವಿಶ್ಲೇಷಣಾತ್ಮಕವಾಗಿ ನೀಡಿದರೆ ಅವುಗಳನ್ನು ನೋಡುವ ತಾಳ್ಮೆ ಹಾಗೂ ಸಮಯ ಜನರ ಬಳಿ ಇಲ್ಲ. ಹೀಗಾಗಿ ಈ ಮಾರ್ಗ ಆಯ್ದುಕೊಂಡಿದ್ದೇವೆ.
-ರಾಜಶೇಖರ ಶ್ರೀ ಕಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT