ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಹುದ್ದೆಗೆ ಖಾಸಗಿ ಕ್ಷೇತ್ರದಿಂದ ನೇರ ನೇಮಕ: ಪಾರದರ್ಶಕತೆ ಇರಲಿ

Last Updated 17 ಜೂನ್ 2018, 17:00 IST
ಅಕ್ಷರ ಗಾತ್ರ

ಸರ್ಕಾರದ ಹತ್ತು ಉನ್ನತ ವಲಯಗಳಲ್ಲಿ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ಪರ– ವಿರೋಧದ ಚರ್ಚೆಗಳು ನಡೆದಿವೆ. ಕೃಷಿ, ಆರ್ಥಿಕ ವ್ಯವಹಾರಗಳು ಹಾಗೂ ಮೂಲಸೌಕರ್ಯಗಳಂತಹ ವಿವಿಧ ವಲಯಗಳಲ್ಲಿ 10 ಜಂಟಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗೆ ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಭಾವಂತರಿಗೂ ಅವಕಾಶ ಕಲ್ಪಿಸಿ ಅರ್ಜಿಗಳನ್ನು ಕರೆಯಲಾಗಿದೆ.

ಅಧಿಕಾರಶಾಹಿಯ ಉನ್ನತ ಮಟ್ಟಗಳಲ್ಲಿ ತಜ್ಞರು ಹಾಗೂ ಪರಿಣತರನ್ನು ನೇಮಕ ಮಾಡುವ ಉದ್ದೇಶದ ಕೇಂದ್ರ ಸರ್ಕಾರದ ಈ ಕ್ರಮ ಆಡಳಿತ ಸುಧಾರಣೆಯತ್ತ ಇರಿಸಿದ ದಿಟ್ಟ ಹೆಜ್ಜೆ ಎನ್ನಬಹುದು. ಈಚಿನ ದಿನಗಳಲ್ಲಿ ಸಾರ್ವಜನಿಕ ಆಡಳಿತ ಸಂಕೀರ್ಣವಾಗುತ್ತಿದೆ. ಹಲವು ಕ್ಷೇತ್ರಗಳಲ್ಲಿ ನೀತಿ ನಿರೂಪಣೆ ಹಾಗೂ ನಿರ್ಧಾರಗಳ ಕೈಗೊಳ್ಳುವಿಕೆಗೆ ವಿಶೇಷ ಜ್ಞಾನ ಅಗತ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಐಎಎಸ್ ಅಧಿಕಾರಿಗಳು, ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಅಧಿಕಾರಶಾಹಿಯ ಕೇಂದ್ರಬಿಂದು. ಈ ಅಧಿಕಾರಿಗಳು ಸಾಮಾನ್ಯ ಆಡಳಿತವನ್ನು ನಿರ್ವಹಿಸುತ್ತಾರೆ.

ವಿವಿಧ ಕ್ಷೇತ್ರಗಳ ಹುದ್ದೆಗಳ ನಿರ್ವಹಣೆಯ ಮೂಲಕ ಆಡಳಿತದ ಸಾಮಾನ್ಯ ಕೌಶಲ ಹಾಗೂ ಸ್ಪರ್ಧಾತ್ಮಕತೆಯನ್ನು ಬೆಳೆಸಿಕೊಳ್ಳುತ್ತಾರೆ. ಇದು ಆಡಳಿತಕ್ಕೆ ವಿಸ್ತೃತ ನೆಲೆಯ ಸಮಗ್ರ ದೃಷ್ಟಿಕೋನವನ್ನು ಒದಗಿಸುತ್ತದೆ. ಆದರೆ ಇ‍ಪ್ಪತ್ತೈದಕ್ಕೂ ಹೆಚ್ಚು ವರ್ಷ ಪೂರೈಸಿರುವ ಉದಾರೀಕರಣದ ಯುಗ, ಆಡಳಿತದ ಅನುಭವಗಳ ಹಲವು ಆಯಾಮಗಳು ಹಾಗೂ ಸಂಕೀರ್ಣತೆಗಳನ್ನು ತೆರೆದಿಟ್ಟಿದೆ. ಹೀಗಾಗಿ, ಖಾಸಗಿ ವಲಯದ ತೀವ್ರ ಸ್ಪರ್ಧಾತ್ಮಕತೆಯಲ್ಲಿ ಜಯಿಸಿ ಬಂದವರ ಆಡಳಿತದ ಅನುಭವಗಳು ಹೊಸ ರೂಪಗಳಲ್ಲಿ ಸರ್ಕಾರಿ ಇಲಾಖೆಗಳಿಗೆ ದಕ್ಕುವುದಾದಲ್ಲಿ ತಪ್ಪೇನು? ಎಂಬ ವಾದದಲ್ಲಿ ಹುರುಳಿದೆ. ಜೊತೆಗೆ ನೀತಿ ನಿರೂಪಣೆ, ಈಗ ಅತ್ಯಂತ ಹೆಚ್ಚಿನ ಪರಿಣತಿ ಬೇಡುವ ಕೌಶಲವೂ ಆಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವೂ ಬೇಕು. ಚೈತನ್ಯಶೀಲ ಮುಕ್ತ ವ್ಯವಸ್ಥೆಯಾಗಿ ಆಡಳಿತಕ್ಕೆ ಹೊಸ ಸ್ಪರ್ಶ ನೀಡಲು ಹೊಸ ವಿಚಾರಗಳ ಶಕ್ತಿ ಸಂಚಯನ ಆಗುತ್ತಿರಲೇಬೇಕು.

ಸಾರ್ವಜನಿಕ ಆಡಳಿತಕ್ಕೆ ಖಾಸಗಿ ವಲಯದಿಂದ ನೇರ ನೇಮಕ ಮಾಡಿಕೊಳ್ಳುವ ಕ್ರಮ (ಲ್ಯಾಟೆರೆಲ್ ಎಂಟ್ರಿ) ಹೊಸದೇನೂ ಅಲ್ಲ. 1965ರಲ್ಲೇ ಮೊದಲ ಆಡಳಿತ ಸುಧಾರಣಾ ಆಯೋಗ ಈ ರೀತಿಯ ನೇಮಕಗಳಿಗೆ ಶಿಫಾರಸು ಮಾಡಿತ್ತು. ನಂತರ ಸಂವಿಧಾನದ ಕಾರ್ಯನಿರ್ವಹಣೆ ಪರಿಶೀಲನೆಯ ರಾಷ್ಟ್ರೀಯ ಆಯೋಗ (2002) ಹಾಗೂ ಎರಡನೇ ಆಡಳಿತ ಸುಧಾರಣಾ ಆಯೋಗ (2008) ನೀಡಿದ ಶಿಫಾರಸುಗಳೂ ಆಧುನಿಕ ಕಾಲದ ನೀತಿ ನಿರೂಪಣೆಗಳ ಸಂಕೀರ್ಣತೆಗಳನ್ನು ಎತ್ತಿಹೇಳಿದ್ದವು. ಇದಕ್ಕಾಗಿ ಪರಿಣತರ ನೇಮಕಾತಿ ಪರ ಶಿಫಾರಸುಗಳನ್ನೂ ಮಾಡಲಾಗಿತ್ತು. ಹಾಗೆಯೇ ನೀತಿ ಆಯೋಗ ಸಹ ತನ್ನ ಇತ್ತೀಚಿನ ಮೂರು ವರ್ಷಗಳ ಕಾರ್ಯಸೂಚಿಯಲ್ಲಿ ಖಾಸಗಿ ಕ್ಷೇತ್ರದ ಪರಿಣತರ ನೇಮಕಾತಿ ಸಮರ್ಥಿಸಿದೆ. ಹೊರಗಿನಿಂದ ಬಂದ ಪರಿಣತರು ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿರುವ ಉದಾಹರಣೆಗಳೂ ನಮ್ಮ ಕಣ್ಣೆದುರಿಗಿವೆ.

ಸ್ಯಾಮ್ ಪಿತ್ರೊಡಾ, ಭಾರತದಲ್ಲಿ ಟೆಲಿಕಾಂ ಕ್ರಾಂತಿಗೆ ಕಾರಣಕರ್ತರಾದರು. ನಂದನ್ ನಿಲೇಕಣಿ ಅವರು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ– ಆಧಾರ್ ವ್ಯವಸ್ಥೆ ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು ಇತ್ತೀಚಿನ ಉದಾಹರಣೆ. ಅರ್ಥಶಾಸ್ತ್ರಜ್ಞರಾದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹಾಗೂ ಮನಮೋಹನ ಸಿಂಗ್ ಅವರೂ ಸರ್ಕಾರದ ಆಡಳಿತಯಂತ್ರದ ಭಾಗವಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು. ಇಂತಹ ಅಪರೂಪದ ನೇಮಕಗಳು ಇನ್ನುಮುಂದೆ ಹೆಚ್ಚಾಗಬಹುದು. ಆದರೆ ಇದನ್ನು ‍ಪಾರದರ್ಶಕ ನಿಯಮಗಳ ಮೂಲಕ ಸಾಂಸ್ಥಿಕಗೊಳಿಸಬೇಕು. ಹತ್ತು  ಹೊಸ ಜಂಟಿ ಕಾರ್ಯದರ್ಶಿಗಳ ನೇಮಕಾತಿಯಿಂದ ಕೆಲಸದ ಸಂಸ್ಕೃತಿ ಬದಲಾಗಿಬಿಡುತ್ತದೆ ಎಂದು ಹೇಳಲಾಗದು.

ಅಧಿಕಾರಶಾಹಿಯ ಸ್ವರೂಪವೂ ಬದಲಾಗದೇ ಹೋಗಬಹುದು. ಆದರೆ ಈ ಹೊಸ ಕ್ರಮ ಬೇರೆಯದೇ ಒಂದು ಹೊಸ ವಿಧಾನ ಸೃಷ್ಟಿಗೆ ಕಾರಣವಾಗಬಹುದು. ಆದರೆ ಭೀತಿಗಳೂ ಸೃಷ್ಟಿಯಾಗಿವೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಕೈಗೊಳ್ಳಲಾಗುತ್ತಿರುವ ಕ್ರಮದ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಿವೆ. ಸರ್ಕಾರದ ಸಿದ್ಧಾಂತಗಳನ್ನು ಬೆಂಬಲಿಸುವವರನ್ನು ಪ್ರಮುಖ ಹುದ್ದೆಗಳಲ್ಲಿ ತುಂಬುವ ಯತ್ನ ಇದು ಎಂಬಂಥ ಟೀಕೆಗಳಿವೆ. ಈ ನೇಮಕಾತಿಯು ರಾಜಕೀಯ ಉದ್ದೇಶಗಳಿಗೆ ದುರುಪಯೋಗ ಆಗಬಾರದು. ಈ ಬಗ್ಗೆ ಭರವಸೆ ಮೂಡಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT