ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಟಿಯಾ ಪ್ರಶ್ನೆಗೆ ಎಲ್ಲಿದೆ ಉತ್ತರ?

Last Updated 17 ಜೂನ್ 2018, 17:37 IST
ಅಕ್ಷರ ಗಾತ್ರ

ರಷ್ಯಾದಲ್ಲಿ ನಡೆಯುತ್ತಿರುವ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಾಟದಲ್ಲಿ ಅರ್ಜೆಂಟೀನಾ ಮತ್ತು ಐಸ್‌ಲ್ಯಾಂಡ್ ನಡುವೆ ಶನಿವಾರ ಪಂದ್ಯ ನಡೆಯಿತು. ವಿಶ್ವ ಫುಟ್‌ಬಾಲ್‌ನಲ್ಲಿ ಐದನೆಯ ಸ್ಥಾನದಲ್ಲಿರುವ ಹಾಗೂ 22ನೇ ಸ್ಥಾನದಲ್ಲಿರುವ ತಂಡಗಳ ನಡುವಣ ಪಂದ್ಯ ಅದು.

ಐಸ್‌ಲ್ಯಾಂಡ್‌ನ ಜನಸಂಖ್ಯೆ ಮೂರು ಲಕ್ಷ ಮಾತ್ರ. ಆದರೆ ಎರಡು ವರ್ಷಗಳ ಹಿಂದೆ ಈ ದೇಶ ವಿಶ್ವ ಫುಟ್‌ಬಾಲ್‌ ಕ್ರಮಾಂಕದಲ್ಲಿ 133ನೇ ಸ್ಥಾನದಲ್ಲಿ ಇತ್ತು. ಇದು ಭಾರತ ಹೊಂದಿದ್ದ ಸ್ಥಾನಕ್ಕಿಂತ ಕಡಿಮೆ. ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಆಡುವ ಅರ್ಹತೆ ಪಡೆಯುವ ಹಾದಿಯಲ್ಲಿ ಐಸ್‌ಲ್ಯಾಂಡ್‌ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಭಾರತವು ಫುಟ್‌ಬಾಲ್‌ ಕ್ರಮಾಂಕದಲ್ಲಿ 97ನೇ ಸ್ಥಾನದಲ್ಲಿ ಇದೆ. ಹೀಗಿದ್ದರೂ ನಮ್ಮ ದೇಶದ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸಲಾಗಿಲ್ಲ.

ಅರ್ಹತಾ ಸುತ್ತಿನಲ್ಲಿ ನಮ್ಮ ದೇಶ ಇರಾನ್‌, ಗ್ವಾಮ್, ತುರ್ಕ್‌ಮೇನಿಸ್ತಾನ ಮತ್ತು ಒಮಾನ್ ವಿರುದ್ಧ ಸೆಣಸಿತು. ಆ ಗುಂಪಿನಲ್ಲಿ ನಾವು ಕಡೆಯ ಸ್ಥಾನಕ್ಕೆ ಸೀಮಿತವಾದೆವು. ಒಲಿಂಪಿಕ್ಸ್ ಹಾಗೂ ಫುಟ್‌ಬಾಲ್‌ ವಿಶ್ವಕಪ್‌ನಂತಹ ನೈಜ ಜಾಗತಿಕ ಕ್ರೀಡಾಕೂಟಗಳ ಭಾಗವಾಗಲು ಅಗತ್ಯವಿರುವ ರೀತಿಯಲ್ಲಿ ಭಾರತ ತಂಡ ಆಟ ಆಡುತ್ತದೆ ಎಂದು ನಮ್ಮಲ್ಲಿ ಅನೇಕರು ಆಶಿಸುತ್ತೇವೆ.

ಐಸ್‌ಲ್ಯಾಂಡ್‌ ಅಥವಾ ಕ್ಯಾಮರೂನ್‌ನಂತಹ ದೇಶಗಳಿಗೆ ಸಾಧ್ಯವಾಗುತ್ತಾ ಇರುವುದು ನಮಗೆ ಏಕೆ ಸಾಧ್ಯವಾಗುತ್ತಿಲ್ಲ, ಅವರು ಮಾಡಿದ್ದನ್ನು ನಾವೇಕೆ ಮಾಡುತ್ತಿಲ್ಲ ಎಂಬುದು ನಮ್ಮೆದುರಿನ ಪ್ರಶ್ನೆ. ಭಾರತ ಫುಟ್‌ಬಾಲ್‌ ತಂಡದ ಮಾಜಿ ಕಫ್ತಾನ ಬೈಚುಂಗ್ ಭುಟಿಯಾ ಅವರು ತಮ್ಮ ಅಂಕಣ ಬರಹದಲ್ಲಿ ಇದೇ ವಿಷಯದ ಬಗ್ಗೆ ಒಮ್ಮೆ; 'ಮೊದಲ ಹೆಜ್ಜೆಯಾಗಿ ನಾವು ಫುಟ್‌ಬಾಲ್‌ ಸಂಸ್ಕೃತಿಯನ್ನು ಬೆಳೆಸಬೇಕು. ಕ್ರಿಕೆಟ್ ಎನ್ನುವುದು ಒಂದು ಧರ್ಮವಾಗಿರುವ, ಇತರ ಕೆಲವು ಆಟೋಟಗಳು ಗಟ್ಟಿಯಾದ ಹೆಜ್ಜೆಗುರುತು ಮೂಡಿಸುತ್ತಿರುವ ದೇಶದಲ್ಲಿ ಈ ಕೆಲಸ ಬಹಳ ಸವಾಲಿನದ್ದು. ಆದರೆ, ಸಂಪನ್ಮೂಲಗಳು ಇಲ್ಲದ ದಕ್ಷಿಣ ಅಮೆರಿಕದ ಹಾಗೂ ಆಫ್ರಿಕಾದ ದೇಶಗಳಲ್ಲಿ ಫುಟ್‌ಬಾಲ್‌ ಆಟವನ್ನು ಜೀವಂತವಾಗಿ ಇರಿಸಿರುವುದು ಫುಟ್‌ಬಾಲ್‌ ಸಂಸ್ಕೃತಿ' ಎಂದು ಬರೆದಿದ್ದಾರೆ.

ಹಾಗಾದರೆ, ಈ ಸಂಸ್ಕೃತಿ ನಮ್ಮ ದೇಶದಲ್ಲಿ ಇಲ್ಲದಿರುವುದಕ್ಕೆ ಕಾರಣ ಏನು? ಭಾರತದಲ್ಲಿ ಫುಟ್‌ಬಾಲ್‌ ವಿಚಾರವಾಗಿ ಕೆಲವು ಅಂಶಗಳನ್ನು ಮೊದಲು ಗಮನಿಸೋಣ. ತೀರಾ ಈಚೆಗೆ, ಅಂದರೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, ಐರೋಪ್ಯ ಫುಟ್‌ಬಾಲ್‌ ಪಂದ್ಯಾಟಗಳನ್ನು ವೀಕ್ಷಿಸುವ ಆಸಕ್ತಿ ನಮ್ಮಲ್ಲಿ ಬಹಳ ಬೆಳೆದಿದೆ. ಈ ಕ್ರೀಡಾಕೂಟಗಳನ್ನು ನೋಡುವವರು ಸಾಮಾನ್ಯವಾಗಿ ನಮ್ಮಲ್ಲಿನ ನಗರವಾಸಿ ಶ್ರೀಮಂತರು. ಇಂಗ್ಲಿಷ್ ಪ್ರೀಮಿಯರ್‌ ಲೀಗ್‌ ಪಂದ್ಯಾಟವನ್ನು ನಮ್ಮ ಕ್ರೀಡಾ ವಾಹಿನಿಗಳು ನೇರ ಪ್ರಸಾರ ಮಾಡುವಷ್ಟು ಅವರ ಆಸಕ್ತಿಯು ಬೆಲೆಬಾಳುವಂಥದ್ದೂ, ವಿಸ್ತೃತವೂ ಆಗಿದೆ. ವಾಸ್ತವ ಏನೆಂದರೆ, ಇಂಗ್ಲೆಂಡಿನ ಟಿ.ವಿ. ವಾಹಿನಿಗಳಲ್ಲಿ ನೇರ ಪ್ರಸಾರ ಆಗದ ಅನೇಕ ಕ್ರೀಡಾಕೂಟಗಳು ನಮ್ಮಲ್ಲಿ ನೇರ ಪ್ರಸಾರ ಕಾಣುತ್ತವೆ. ಹಾಗಾಗಿ, ಫುಟ್‌ಬಾಲ್‌ನಲ್ಲಿ ನಮ್ಮ ಸಾಧನೆ ಹೀಗಿರುವುದಕ್ಕೆ ಕಾರಣ ಆಸಕ್ತಿಯ ಕೊರತೆ ಅಲ್ಲ.

ಕ್ರೀಡೆಯ ವಿಚಾರದಲ್ಲಿ ಭಾರತದಲ್ಲಿ ಮೂಲಸೌಕರ್ಯ ಉತ್ತಮವಾಗಿ ಇಲ್ಲ. ನಮ್ಮಲ್ಲಿ ಫುಟ್‌ಬಾಲ್‌ಗೆ ಮೀಸಲಿಟ್ಟ ಕ್ರೀಡಾಂಗಣಗಳ ಸಂಖ್ಯೆ ಹೆಚ್ಚೇನೂ ಇಲ್ಲ. ನಮಗಿಂತ ಚೆನ್ನಾಗಿ ಫುಟ್‌ಬಾಲ್‌ ಆಡುವ, ವಿಶ್ವಕಪ್‌ನಲ್ಲಿ ಸೆಣಸಾಟ ನಡೆಸುವ, ಜಾಗತಿಕ ಮಟ್ಟದಲ್ಲಿ ಹೀರೊಗಳಾಗಿ ಬೆಳೆಯುವ ಆಟಗಾರರನ್ನು ಹೊಂದಿರುವ ಕೆಲವು ಆಫ್ರಿಕನ್ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಕೂಡ ಉತ್ತಮ ಮೂಲಸೌಕರ್ಯ, ಸೂಕ್ತ ಕ್ರೀಡಾಂಗಣ ವ್ಯವಸ್ಥೆ ಇಲ್ಲ ಎಂಬುದು ನಿಜ. ಇದನ್ನು ಭುಟಿಯಾ ಗುರುತಿಸಿದ್ದಾರೆ. ಕ್ರಿಕೆಟ್ ವಿಚಾರದಲ್ಲಿ ಕೂಡ ನಮ್ಮ ಪರಿಸ್ಥಿತಿ ಹೀಗೆಯೇ ಇದೆ. ನಮ್ಮಲ್ಲಿ ತೀರಾ ಸಾಮಾನ್ಯ ಆಗಿರುವುದು ರಸ್ತೆಯ ಮೇಲೆ ಹಾಗೂ ಗಲ್ಲಿಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳೇ ವಿನಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಲ್ಲ.

ಕ್ರಿಕೆಟ್‌ಗೆ ಹೋಲಿಸಿದರೆ ಫುಟ್‌ಬಾಲ್‌ಗೆ ಕಡಿಮೆ ಮೂಲಸೌಕರ್ಯ ಸಾಕು. ಕ್ರಿಕೆಟ್‌ ಆಡಲು ಹಲವು ಸಲಕರಣೆಗಳು ಬೇಕು. ಹಾಗಾಗಿ, ಭಾರತದಲ್ಲಿ ಫುಟ್‌ಬಾಲ್‌ ಸಂಸ್ಕೃತಿ ಕಡಿಮೆ ಇರುವುದಕ್ಕೆ ಮೂಲಸೌಕರ್ಯದ ಕೊರತೆಯೇ ಕಾರಣ ಎಂದು ಹೇಳುವುದು ಕಷ್ಟ.

ಭಾರತದಲ್ಲಿ ಫುಟ್‌ಬಾಲ್‌ ಆಟವನ್ನು ಎಲ್ಲಿ ಆಡಲಾಗುತ್ತದೆ ಎಂಬುದು ಮೂರನೆಯ ಸಂಗತಿ. ಈ ಆಟ ಹೆಚ್ಚು ಜನಪ್ರಿಯ ಆಗಿರುವುದು ಈಶಾನ್ಯ ರಾಜ್ಯಗಳಲ್ಲಿ, ಗೋವಾ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ. ಇವನ್ನು ಹೊರತುಪಡಿಸಿದರೆ, ಇನ್ನೂ ಒಂದೆರಡು ಕಡೆಗಳಲ್ಲಿ ಇದು ಜನಪ್ರಿಯ ಆಗಿರಬಹುದು. ಈ ಆಟವು ಹಿಂದಿ ನಾಡಿನಲ್ಲಿ ಜನಪ್ರಿಯ ಅಲ್ಲ. ಇದು ಭಾರತದ ತಂಡದಲ್ಲಿ ಕೂಡ ಕಾಣಿಸುತ್ತದೆ. ಭಾರತೀಯ ತಂಡದಲ್ಲಿನ ಆಟಗಾರರಲ್ಲಿ ಹೆಚ್ಚಿನವರು ಈ ಮೇಲೆ ಹೇಳಿದ ಪ್ರದೇಶಗಳಿಗೆ ಸೇರಿದವರು. ಭಾರತದ ತಂಡದಲ್ಲಿ ಫರ್ನಾಂಡಿಸ್‌ಗಳು, ಗುರುಂಗ್‌ಗಳು, ಖೊಂಗ್ಜೀಗಳು ಇದ್ದಾರೆ. ಆದರೆ ಶರ್ಮಾಗಳು, ಕೊಹ್ಲಿಗಳು ಇಲ್ಲ.

ಕೆಲವು ಕಾರಣಗಳಿಂದಾಗಿ, ಹಾಕಿಯಲ್ಲಿ ಒಳ್ಳೆಯ ಸಾಧನೆ ತೋರಿರುವ ಭಾರತದ ಕೆಲವು ಪ್ರದೇಶಗಳು ಹಾಗೂ ಸಂಸ್ಕೃತಿಗಳು ಫುಟ್‌ಬಾಲ್‌ನಲ್ಲೂ ಒಳ್ಳೆಯ ಸಾಧನೆ ತೋರುತ್ತಿವೆ. ಹಾಕಿಯಂತೆ ಫುಟ್‌ಬಾಲ್‌ ಕೂಡ ಸಾಮೂಹಿಕ ಆಟ. ಕ್ರಿಕೆಟ್ ಹಾಗಲ್ಲ. ನಾನು ಹೀಗೆ ಹೇಳಿದುದರ ಅರ್ಥ ಏನು? ಕ್ರಿಕೆಟ್ ಪಂದ್ಯ ನಡೆಯುವುದು ಕೂಡ ಎರಡು ತಂಡಗಳ ನಡುವೆ ಎಂಬುದು ನಿಜ. ಆದರೂ ಇಲ್ಲೊಂದು ವ್ಯತ್ಯಾಸ ಇದೆ. ಕ್ರಿಕೆಟ್‌ ಆಟದಲ್ಲಿ ಪ್ರತಿ ಎಸೆತ ಕೂಡ ಪ್ರತ್ಯೇಕ ಹಾಗೂ ಸ್ವತಂತ್ರವಾದದ್ದು. ಇಲ್ಲಿ ಆಟ ನಡೆಯುವುದು ಇಬ್ಬರು ಪ್ರಮುಖ ಆಟಗಾರರ ನಡುವೆ (ಬೌಲರ್‌ ಮತ್ತು ಬ್ಯಾಟ್ಸ್‌ಮನ್‌). ಹಾಗೆಯೇ, ಒಬ್ಬ ಅಥವಾ ಇಬ್ಬರು ಇತರರು ಕೂಡ ಆಟದಲ್ಲಿ ಭಾಗಿಯಾಗಿರುತ್ತಾರೆ (ಕ್ಷೇತ್ರ ರಕ್ಷಕ ಮತ್ತು ಎದುರುಗಡೆಯ ವಿಕೆಟ್‌ ಬಳಿ ಇರುವ ಬ್ಯಾಟ್ಸ್‌ಮನ್‌).

ಹಾಕಿ, ಫುಟ್‌ಬಾಲ್‌ ಹಾಗೂ ವಾಲಿಬಾಲ್‌ ಆಟಗಳ ಸ್ವರೂಪವೇ ಬೇರೆ. ಎರಡೂ ಕಡೆಗಳ ಇಡೀ ತಂಡ ಆಟದುದ್ದಕ್ಕೂ ಪಾಲ್ಗೊಂಡಿರುತ್ತದೆ - ಕ್ರಿಕೆಟ್‌ನಲ್ಲಿ ಹೀಗೆ ಎಂದಿಗೂ ಆಗುವುದಿಲ್ಲ. ವ್ಯಕ್ತಿಗತ ಸಾಮರ್ಥ್ಯವು ಇಂತಹ ಕ್ರೀಡೆಗಳಲ್ಲಿ ಕ್ರಿಕೆಟ್‌ನಲ್ಲಿನ ವ್ಯಕ್ತಿಗತ ಸಾಮರ್ಥ್ಯಕ್ಕಿಂತ ಕಡಿಮೆ ಪ್ರಾಮುಖ್ಯ ಪಡೆಯುತ್ತದೆ. ಹಾಕಿಯಲ್ಲಿ ಸಾಕಷ್ಟು ಉತ್ತಮ ಸ್ಥಾನದಲ್ಲಿ ನಾವು ಇದ್ದೇವೆಯಾದರೂ ಈಗ ಅಲ್ಲಿ ನಮ್ಮ ಪ್ರಾಬಲ್ಯ ಮಾಸಿದೆ.

ಹಾಕಿ ಆಟವು ಚತುರ ಆಟಗಾರರು ಚೆಂಡನ್ನು ವಿರೋಧಿ ಪಾಳೆಯದವರಿಂದ ತಪ್ಪಿಸಿ, ಗೋಲ್‌ ಕಡೆ ಕೊಂಡೊಯ್ಯುವರ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದ ಕಾಲದಲ್ಲಿ ನಾವು ಆಟದಲ್ಲಿ ಮೇಲುಗೈ ಸಾಧಿಸಿದ್ದೆವು. ಆದರೆ ಈ ಆಟವು ಚೆಂಡನ್ನು ಒಬ್ಬ ಆಟಗಾರನಿಂದ ಇನ್ನೊಬ್ಬ ಆಟಗಾರನಿಗೆ ಪಾಸ್‌ ಮಾಡುತ್ತ ಸಾಗುವ ಆಟವಾಗಿ ಪರಿವರ್ತನೆ ಕಂಡ ನಂತರ (ಅಂದರೆ ಹೆಚ್ಚೆಚ್ಚು ಸಾಂಘಿಕ ಆಟವಾದಾಗ), ಕೃತಕ ಹುಲ್ಲುಹಾಸಿನ ಬಳಕೆ ಅಲ್ಲಿ ಶುರುವಾದಾಗ ಅಲ್ಲಿ ನಮ್ಮ ಪ್ರಾಬಲ್ಯ ಕುಸಿಯಿತು. ಹಾಗಾಗಿ, ಫುಟ್‌ಬಾಲ್‌ನಲ್ಲಿ ನಮ್ಮ ಸಾಧನೆ ಕಡಿಮೆ ಇರುವುದಕ್ಕೆ ಕಾರಣ ಮೂಲಸೌಕರ್ಯ ಕೊರತೆ ಅಥವಾ ಆಸಕ್ತಿಯ ಕೊರತೆ ಅಲ್ಲ ಎಂದು ಹೇಳಬೇಕು.

ತಂಡವಾಗಿ ಆಡಬೇಕಿರುವ ಆಟಗಳಲ್ಲಿ ನಮ್ಮನ್ನು ತಡೆದು ನಿಲ್ಲಿಸಿರುವುದು ಬೇರೆ ಏನೋ ಇದೆ. ಈ 'ಬೇರೆ ಏನೋ' ಎಂಬುದು ನಮ್ಮನ್ನು ವೈಯಕ್ತಿಕ ನೆಲೆಯಲ್ಲಿ ನಡೆಯುವ ಶೂಟಿಂಗ್‌, ಭಾರ ಎತ್ತುವುದು, ಕುಸ್ತಿ, ಟೆನಿಸ್, ಬ್ಯಾಡ್ಮಿಂಟನ್‌ ಅಥವಾ ಬಾಕ್ಸಿಂಗ್‌ನಂತಹ ಕ್ರೀಡೆಗಳಲ್ಲಿ ತಡೆದು ನಿಲ್ಲಿಸುತ್ತಿರುವಂತೇನೂ ಕಾಣುತ್ತಿಲ್ಲ (ಓದುಗರು ಗಮನಿಸಿರುವಂತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಧನೆಗಳು ಕಂಡುಬಂದಿರುವುದು ಈ ಕ್ರೀಡೆಗಳಲ್ಲಿ).

ಇದೇಕೆ ಹೀಗೆ ಎಂಬುದನ್ನು ನಾವು ಸಂಪೂರ್ಣವಾಗಿ ವಿಶ್ಲೇಷಿಸುವವರೆಗೆ ಭುಟಿಯಾ ಅವರು ಕೇಳಿರುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ. 'ನಮ್ಮಲ್ಲಿ ಫುಟ್‌ಬಾಲ್‌ ಸಂಸ್ಕೃತಿ ಏಕೆ ಇಲ್ಲ, ಅದನ್ನು ಬೆಳೆಸಲು ನಾವು ಏನು ಮಾಡಬಹುದು' ಎನ್ನುವುದು ಅವರು ಕೇಳಿರುವ ಪ್ರಶ್ನೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT