ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಮುಚ್ಚಲು ಅನುದಾನ ಕೊರತೆ ಇಲ್ಲ

ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು: ಪರಿಶೀಲನಾ ಸಭೆಯಲ್ಲಿ ಸಚಿವ ಎಚ್‌.ಡಿ ರೇವಣ್ಣ
Last Updated 18 ಜೂನ್ 2018, 4:29 IST
ಅಕ್ಷರ ಗಾತ್ರ

ಬೆಳಗಾವಿ: ‘ಗುಂಡಿಗಳನ್ನು ಮುಚ್ಚುವ ಕಾಮಗಾರಿ ಎಷ್ಟೇ ಇದ್ದರೂ ತೆಗೆದುಕೊಳ್ಳಿ, ಅದಕ್ಕೆ ಬೇಕಾಗುವಷ್ಟು ಅನುದಾನ ಒದಗಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ, ಸೇತುವೆ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಆಗಿರುವ ಹಾನಿ ಕುರಿತು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸೇತುವೆ ಹಾಗೂ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕಾಮಗಾರಿಗಳ ಬಗ್ಗೆ ಫೋಟೊ ಸಮೇತ ದಾಖಲೆ ಇಟ್ಟುಕೊಂಡಿರಬೇಕು. ಅದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಬಂದಾಗ ಮಾಹಿತಿ ನೀಡಲು ಸುಲಭವಾಗಲಿದೆ’ ಎಂದು ತಿಳಿಸಿದರು.

ಎಲ್ಲ ತಾಲ್ಲೂಕುಗಳಿಗೂ ಹಂಚಿರಿ: ‘₹10 ಕೋಟಿ ವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಜಿಲ್ಲೆಯ ವಿವಿಧ ಹಂತದ ಅಧಿಕಾರಿಗಳಿಗೇ ನೀಡಲಾಗಿದೆ.ಇದರಿಂದಾಗಿ ಅಧಿಕಾರಿಗಳು ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಅಧಿಕಾರಿಗಳು ಮಳೆ
ಗಾಲ ಮುಗಿಯುವವರೆಗೂ ಕೇಂದ್ರ ಸ್ಥಾನ ಬಿಡಬಾರದು. ಮರಗಳು ಬಿದ್ದ ಕೂಡಲೇ ತೆರವುಗೊಳಿಸಬೇಕು’ ಎಂದು ತಾಕೀತು ಮಾಡಿದರು.‌

‘ಜಿಲ್ಲಾಧಿಕಾರಿ ಖಾತೆಯಲ್ಲಿರುವ ₹ 5 ಕೋಟಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌) ಅನುದಾನವನ್ನು ಎಲ್ಲ 14 ತಾಲ್ಲೂಕುಗಳ  ರಸ್ತೆಗಳ ಸುಧಾರಣೆ ಕಾಮಗಾರಿಗೆ ಹಂಚಿಕೆ ಮಾಡಬೇಕು. ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು,  ನಗರದ ರಸ್ತೆಯನ್ನು ಇಲಾಖೆ ವ್ಯಾಪ್ತಿಗೆ ತರಲು ಪ್ರಸ್ತಾವ ಸಲ್ಲಿಸಬೇಕು’ ಎಂದು ತಿಳಿಸಿದರು.

ಚುನಾವಣೆಯಲ್ಲಿ ತೊಂದರೆಯಾಯ್ತು: ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ‘ಕರ್ನಾಟಕ ಗಡಿಯಲ್ಲಿರುವ ಚಂದೂರಟೇಕ್‌– ಟಾಕಳಿ ನಡುವಿನ ಸೇತುವೆ ನಿರ್ಮಾಣ ಕಾಮಗಾರಿಗೆ 2014ರಲ್ಲಿಯೇ ಚಾಲನೆ ನೀಡಲಾಗಿದೆ. ಆದರೆ, ಈವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕಳೆದ ಚುನಾವಣೆಯಲ್ಲಿ ನಮಗೆ ಬಹಳ ಸಮಸ್ಯೆಯಾಯಿತು. ಜನರು ಮತ ಹಾಕುವುದಕ್ಕೆ ಬರಲಿಲ್ಲ. ಅಂತೆಯೇ ಕಲ್ಲೋಳ–ಯಡೂರ ಸೇರಿದಂತೆ ನಾಲ್ಕು ಸೇತುವೆಗಳಿಗೆ ಪೂಜೆ ಮಾಡಲಾಗಿದೆ. ಆದರೆ, ಕಾಮಗಾರಿ ಆರಂಭವಾಗಿಲ್ಲ’ ಎಂದು ದೂರಿದರು.

‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. 2 ವರ್ಷದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಆಗಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ನೋಟಿಸ್‌ ಕೊಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ನೀವು ಗುತ್ತಿಗೆದಾರರಿಗೆ ಅಡಿಯಾಳಾಗಿದ್ದೀರೋ, ನಿಯಮದ ಪ್ರಕಾರ ಕೆಲಸ ಮಾಡುತ್ತೀರೋ? ಗುತ್ತಿಗೆದಾರರಿಗೆ ಅಂತಿಮ ನೋಟಿಸ್‌ ಕೊಟ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಲ್ಪಾವಧಿ ಟೆಂಡರ್‌ ಪ್ರಕ್ರಿಯೆ ನಡೆಸಿ, ಹೊಸ ಗುತ್ತಿಗೆ ಕೊಡಬೇಕು’ ಎಂದು ಸಚಿವರು ಸೂಚನೆ ನೀಡಿದರು.

ಪ್ರಸ್ತಾವ ಸಲ್ಲಿಸಿ: ಗ್ರಾಮೀಣ ಮತ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹದ ಗೆಟ್ಟಿದ್ದು,  ದುರಸ್ತಿಗೆ ಅನುದಾನ ನೀಡಬೇಕು’ ಎಂದು ಕೋರಿದರು. ‘ಮೊದಲು ರಸ್ತೆಗಳ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು. ಪಕ್ಕಾ ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿದರೆ ಅನುದಾನ ನೀಡಲಾಗುವುದು’  ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದರು.

ಬೆಳಗಾವಿ ಸಂಸದ ಸುರೇಶ ಅಂಗಡಿ, ‘ಗುತ್ತಿಗೆಯನ್ನು ಹೊರರಾಜ್ಯದವರ ಬದಲಿಗೆ ಸ್ಥಳೀಯರಿಗೆ ನೀಡಬೇಕು. ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಬೇಕು’ ಎಂದು ಕೋರಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರಿಗೆ ವಸತಿ ಕಲ್ಪಿಸಲು ಶಾಸಕರ ಭವನದ ನಿರ್ಮಾಣದ ಅಗತ್ಯವಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದರು.

ಶಾಸಕರಾದ ದುರ್ಯೋಧನ ಐಹೊಳೆ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಸಿಇಒ ಆರ್‌. ರಾಮಚಂದ್ರನ್, ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಎಸ್ಪಿ ಸುಧೀರಕುಮಾರ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ ಇದ್ದರು.

ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು
- ಎಚ್‌.ಡಿ. ರೇವಣ್ಣ, ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT