ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಿಂದ ಮರಳಿದ ಬಳಿಕ ಅಕ್ಬರ್ ಹಣೆಬರಹ ನಿರ್ಧಾರ

Last Updated 11 ಅಕ್ಟೋಬರ್ 2018, 17:58 IST
ಅಕ್ಷರ ಗಾತ್ರ

ನವದೆಹಲಿ: ಮಿ–ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ ಅಕ್ಬರ್ ಅವರುನೈಜೀರಿಯಾ ಪ್ರವಾಸದಲ್ಲಿದ್ದು, ಸ್ವದೇಶಕ್ಕೆ ವಾಪಸಾದ ಬಳಿಕ ಅವರ ಹಣೆಬರಹ ನಿರ್ಧಾರವಾಗಲಿದೆ. ಭಾರತ–ಪಶ್ಚಿಮ ಆಫ್ರಿಕಾ ಸಂಬಂಧ ಕುರಿತ ಸಮಾವೇಶದಲ್ಲಿ ಅವರು ಭಾಗಿಯಾಗಿದ್ದಾರೆ.

ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಪತ್ರಕರ್ತರಾಗಿದ್ದ ಅಕ್ಬರ್, ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರು ಮಹಿಳೆಯರು ಆರೋಪಿಸಿದ್ದರು.

‘ಅವರು ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಿಗ್ಗೆ ದೆಹಲಿಗೆ ಹಿಂದಿರುಗುವ ಸಾಧ್ಯತೆ ಇದೆ. ಅಕ್ಬರ್ ಅವರಿಗೆ ವಿದೇಶ ಪ್ರವಾಸವನ್ನು ಮೊಟಕುಗೊಳಿಸುವಂತೆ ಅಥವಾ ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಹೋಗಿಲ್ಲ’ ಎಂದು ಮೂಲಗಳು ತಿಳಿಸಿವೆ.

ಅಕ್ಬರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಅಕ್ಬರ್ ತಲೆದಂಡಕ್ಕೆ ಕಾಂಗ್ರೆಸ್ ಹಾಗೂ ಸಿಪಿಎಂ ಒತ್ತಾಯಿಸಿವೆ. ರಾಜ್ಯಸಭಾ ಸದಸ್ಯರಾಗಿರುವ ಅಕ್ಬರ್ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ ವಹಿಸಿದೆ.

ತಲೆದಂಡವೋ.. ಸಮರ್ಥನೆಗೆ ಅವಕಾಶವೋ..?: ಅಕ್ಬರ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಬುಧವಾರ ನಡೆದ ಸಂಪುಟ ಸಭೆ ಬಳಿಕ ಅನೌಪಚಾರಿಕ ಮಾತುಕತೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಧ್ಯಕ್ಷ ಅಮಿತ್ ಶಾ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕೆಲವು ಹಿರಿಯ ಸಚಿವರ ಜೊತೆ ಚರ್ಚೆ ನಡೆಸಿದರುಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಅಕ್ಬರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಮುಂಬರುವ ಐದು ರಾಜ್ಯಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಒಂದು ವೇಳೆ ಅಕ್ಬರ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ, ಮಹಿಳೆಯರ ಗೌರವ ಹಾಗೂ ಹಕ್ಕುಗಳ ಬಗ್ಗೆ ಪಕ್ಷ ಹೊಂದಿರುವ ನಿಲುವಿಗೆ ವ್ಯತಿರಿಕ್ತವಾದ ಸಂದೇಶ ರವಾನೆಯಾಗುತ್ತದೆ ಎಂಬ ಅಂಶವನ್ನು ಕೆಲ ಮುಖಂಡರು ಪ್ರಸ್ತಾಪಿಸಿದರು. ಅಕ್ಬರ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡುವ ಮೂಲಕ ದೌರ್ಜನ್ಯ ಅಥವಾ ಹಿಂಸೆಗೆ ಪಕ್ಷ ಆಸ್ಪದ ನೀಡುವುದಿಲ್ಲ ಎಂಬ ಸಂದೇಶ ರವಾನಿಸುವ ಬಗ್ಗೆ ಬಿಜೆಪಿ ಪರಿಶೀಲಿಸುತ್ತಿದೆ.

ತಮ್ಮನ್ನು ಸಮರ್ಥಿಸಿಕೊಳ್ಳಲು ಅಕ್ಬರ್ ಅವರಿಗೆ ಬಿಜೆಪಿ ಅವಕಾಶ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ವಿದೇಶದಿಂದ ಅವರು ವಾಪಸಾದ ಬಳಿಕ ಮೋದಿ ಅವರು ತಮ್ಮ ನಿವಾಸಕ್ಕೆ ಕರೆಯಿಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಅಲೋಕ್‌ ಗುಣ ಸರಿಯಿಲ್ಲ’:‘ಹಿಂದಿ ನಟ ಅಕೋಲ್‌ನಾಥ್ ಅವರು ಮಹಿಳೆಯರಿಗೆ ಕಿರುಕುಳ ನೀಡುವ ವಿಷಯ ಹಿಂದಿ ಟೆಲಿವಿಷನ್ ಕ್ಷೇತ್ರದಲ್ಲಿರುವ ಎಲ್ಲರಿಗೂ ಗೊತ್ತು’ ಎಂದು ನಟಿ ದೀಪಿಕಾ ಅಮೀನ್ ಅವರು ಗುರುವಾರ ಆರೋಪಿಸಿದ್ದಾರೆ.

‘ಸೋನು ಕೆ ಟೀಟೂ ಕಿ ಸ್ವೀಟಿ’ ಧಾರಾವಾಹಿಯಲ್ಲಿ ಅಲೋಕ್ ಜೊತೆ ದೀಪಿಕಾ ನಟಿಸಿದ್ದರು. ‘ಬಹಳ ವರ್ಷಗಳ ಹಿಂದೆ ಚಿತ್ರೀಕರಣಕ್ಕೆಂದು ಹೋಗಿದ್ದಾಗ ಅವರು ತಮ್ಮ ಕೋಣೆಗೆ ನುಗ್ಗಿದ್ದರು’ ಎಂದು ದೀಪಿಕಾ ಆರೋಪಿಸಿದ್ದಾರೆ. ಅವರು ಮದ್ಯವ್ಯಸನಿ ಕೂಡಾ ಎಂದು ಹೇಳಿದ್ದಾರೆ.

ಮಿ–ಟೂ ಅಭಿಯಾನ ಬಲಗೊಳ್ಳುತ್ತಿದ್ದು, ಆರ್‌ಎಸ್‌ಎಸ್‌ ಇದಕ್ಕೆ ಬೆಂಬಲ ಸೂಚಿಸಿದೆ. ಅಂಕಿದಾಸ್ ಅವರ ಫೇಸ್‌ಬುಕ್ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಅಭಿಯಾನವನ್ನು ಬೆಂಬಲಿಸಿದ್ದಾರೆ.

ಟ್ರಂಪ್ ಅಪಹಾಸ್ಯ: ವ್ಯಾಪಕಗೊಳ್ಳುತ್ತಿರುವ ಮಿ–ಟೂ ಅಭಿಯಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಹಾಸ್ಯ ಮಾಡಿದ್ದಾರೆ.

ಕೋರ್ಟ್‌ ಮೆಟ್ಟಿಲೇರಿದ ಆಪಾದಿತರು

ಆನ್‌ಲೈನ್‌ ನ್ಯೂಸ್ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಕಳೆದ ವರ್ಷ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಈ ಮಹಿಳೆಯು ತಮ್ಮ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡಬಾರದು ಎಂದು ಸೂಚಿಸುವಂತೆ ಕೋರಿ ಕೆಲವರು ಹೈಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡದಂತೆ ಹಾಗೂ ತಮ್ಮ ಗುರುತನ್ನು ಬಹಿರಂಗಪಡಿಸದಂತೆ ಆರೋಪಿಗಳಿಗೆ ನ್ಯಾಯಮೂರ್ತಿ
ಗಳಾದ ರಾಜೇಂದ್ರ ಮೆನನ್ ಮತ್ತು ವಿ.ಕೆ. ರಾವ್ ಅವರಿದ್ದ ನ್ಯಾಯಪೀಠವು ಸೂಚಿಸಿತು. ಅಲ್ಲದೆ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡದಂತೆಯೂ ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT