ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಗೆ ಹೊಂಚು ಹಾಕಿವೆ ಟ್ರಾನ್ಸ್‌ಫಾರ್ಮರ್

ನಗರದ ಹಲವು ಕಡೆ ತೆರೆದ ಸ್ಥಿತಿಯಲ್ಲಿರುವ ಎಲ್‌ಟಿಡಿ ಪೆಟ್ಟಿಗೆ, ಮೀಟರ್ ಬಾಕ್ಸ್‌; ಪಾದಚಾರಿಗಳಿಗೆ ತಾಗುವ ತಂತಿ
Last Updated 18 ಜೂನ್ 2018, 6:07 IST
ಅಕ್ಷರ ಗಾತ್ರ

ತುಮಕೂರು: ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್‌ ), ಸುರಕ್ಷಿತ ವಿದ್ಯುತ್‌ ಸರಬರಾಜು (ಎಲ್‌ಟಿಡಿ) ಪೆಟ್ಟಿಗೆಗಳು, ಮೀಟರ್ ಬಾಕ್ಸ್‌ಗಳು ಅನಾಹುತಕ್ಕೆ ಬಾಯ್ತೆರೆದಿವೆ.

ಎಂ.ಸಿ.ಕಾಲೊನಿಯ ಮೊದಲನೇ ಕ್ರಾಸ್‌, ಸರಸ್ವತಿ ಪುರಂ, ಶಿರಾ ಮುಖ್ಯರಸ್ತೆಯ ಇಂಡಿಯನ್‌ ಪೆಟ್ರೋಲ್‌ ಬಂಕ್‌ ಬಳಿ, ವಿಜಯನಗರ ಉದ್ಯಾನ, ಈದ್ಗಾ ಮೊಹಲ್ಲಾ ಮುಖ್ಯರಸ್ತೆ ಸೇರಿದಂತೆ ವಿವಿಧ ಕಡೆ ಈ ಸ್ಥಿತಿ ಕಾಣಬಹುದು.  ವಿದ್ಯುತ್ ಪರಿವರ್ತಕಗಳು ಕೆಲವು ಕಡೆ ಪಾದಚಾರಿ ಮಾರ್ಗಗಳಲ್ಲಿಯೇ ಇವೆ. ಇದರ ಕೆಳಗಡೆಯೇ ಎಲ್‌ಟಿಡಿ ಹಾಗೂ ಮೀಟರ್‌ ಬಾಕ್ಸ್‌ ಅಳವಡಿಸಲಾಗಿದೆ. ಇವುಗಳು ತೆರೆದ ಸ್ಥಿತಿಯಲ್ಲಿವೆ.

ಬೆಸ್ಕಾಂ ತುಮಕೂರು ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ತಲಾ ಎರಡು ಉಪ ವಿಭಾಗಳು ಬರುತ್ತವೆ. ಒಟ್ಟಾರೆ 1,700 ವಿದ್ಯುತ್‌ ಪರಿವರ್ತಕಗಳಿವೆ. ಅವುಗಳಿಗೆ ಒಂದೊಂದು ಎಲ್‌ಟಿಡಿ ಮತ್ತು ಮೀಟರ್ ಬಾಕ್ಸ್‌ ಅಳವಡಿಸಲಾಗಿದೆ. ಕ್ಯಾತ್ಸಂದ್ರ, ಚಿಕ್ಕಪೇಟೆ, ಶ್ರೀರಾಮನಗರ, ಶಿರಾಗೇಟ್‌ ಬಡಾವಣೆಗಳು ನಗರದ ಬೆಸ್ಕಾಂನ ಒಂದನೇ ಉಪ ವಿಭಾಗದ ವ್ಯಾಪ್ತಿಗೆ, ಸರಸ್ವತಿಪುರಂ, ಸೋಮೇಶ್ವರಪುರಂ, ಜಯನಗರ, ಎಂ.ಜಿ.ರಸ್ತೆ ಎರಡನೇ ಉಪ ವಿಭಾಗಕ್ಕೆ ಸೇರಿವೆ.

ಪ್ರತಿ ದಿನ ದುರಸ್ತಿ

‘ಆಯಾ ಉಪ ವಿಭಾಗದ ವ್ಯಾಪ್ತಿಯ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವರು. ಸಮಸ್ಯೆ ಇದ್ದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಒಂದು ವೇಳೆ ನಮ್ಮ ಸಿಬ್ಬಂದಿ ಗಮನಕ್ಕೆ ಬಾರದ ಸಮಸ್ಯೆಯನ್ನು ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಗಮನಕ್ಕೆ ತಂದರೆ ಕೂಡಲೇ ದುರಸ್ತಿ ಮಾಡಲಾಗುತ್ತದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಷರೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಮಕ್ಕಳನ್ನು ಬಿಡಲು ದಿನವು ಈ ದಾರಿಯಲ್ಲಿ ಸಾಗುತ್ತೇನೆ. ಹದಿನೈದು ದಿನಗಳಿಂದ ಎಲ್‌ಟಿಡಿ ಬಾಕ್ಸ್‌ ಬಾಗಿಲು ತೆರೆದಿದೆ. ಎಚ್ಚರದಿಂದ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆ’ ಎಂದು ಎಂ.ಸಿ.ಕಾಲೊನಿ ನಿವಾಸಿ ಗಣೇಶ್‌ ಸಮಸ್ಯೆ ವಿವರಿಸಿದರು.

‘ಶಿರಾ ಮುಖ್ಯ ರಸ್ತೆಯ ಅಲ್ಲಲ್ಲಿ ಮೀಟರ್‌ ಬಾಕ್ಸ್‌ ಮತ್ತು ವಿದ್ಯುತ್‌ ನಿಯಂತ್ರಣ ಬಾಕ್ಸ್‌ಗಳಿಗೆ ಬಾಗಿಲುಗಳೇ ಇಲ್ಲ. ಎರಡು ಮೂರು ತಿಂಗಳಿಂದ ನೋಡುತ್ತಿದ್ದೇನೆ. ಹೀಗೆಯೇ ಇವೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನಾದರೂ ಸರಿಪಡಿಸಲಿ’ ಎಂದು ಶಿರಾ ಗೇಟ್ ಬಡಾವಣೆ ನಿವಾಸಿ ಕುಮಾರ್‌ ತಿಳಿಸಿದರು.

‘ರಸ್ತೆಯ ಉದ್ದಕ್ಕೂ ಬೀದಿ ದೀಪಗಳೂ ಬೆಳೆಗುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸುವರು ಇದೇ ಬಡಾವಣೆಯ ರಾಮಕೃಷ್ಣಪ್ಪ.

ವಿಜಯನಗರದ ಉದ್ಯಾನ ಪೂರ್ಣ ಗಿಡ–ಬಳ್ಳಿಗಳಿಂದ ಕೂಡಿದೆ. ಕುಳಿತುಕೊಳ್ಳಲು ಸೂಕ್ತ ಆಸನಗಳು ಇಲ್ಲ. ಸುತ್ತಮುತ್ತಲೂ ರಾಶಿ ರಾಶಿ ಕಸ ಇದೆ. ಹೀಗಿದ್ದರೂ ಉದ್ಯಾನಕ್ಕೆ ಸಾರ್ವಜನಿಕರು ಬರುವರು. ಇಲ್ಲಿ ಎಲ್‌ಟಿಡಿ, ಮೀಟರ್ ಬಾಕ್ಸ್ ತೆರೆದಿರುವುದು ಕಂಡು ಭಯಪಡುವಂತಾಗಿದೆ’ ಎಂದು ವಿಜಯನಗರ ನಿವಾಸಿ ರಂಗಪ್ಪ ಮಾಹಿತಿ ನೀಡಿದರು.

‘ಪರಿವರ್ತಕಗಳ ಸುತ್ತ ಮರಗಳು ಬೆಳೆದಿವೆ. ನಾಗರಿಕರಿಗೆ ಅಪಾಯದ ಕಾಡುತ್ತದೆ. ಅಧಿಕಾರಿಗಳು ಗಮನಿಸಬೇಕು. ಉದ್ಯಾನದ ಸ್ವಚ್ಛತೆಗೆ ಮಹಾನಗರ ಪಾಲಿಕೆ ಗಮನಹರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಎತ್ತರದಲ್ಲಿ ಅಳವಡಿಸಲಿ: ಎಲ್‌ಟಿಡಿ ಹಾಗೂ ಮೀಟರ್‌ ಬಾಕ್ಸ್‌ಗಳು ಸೇರಿದಂತೆ ಇನ್ನಿತರ ವಿದ್ಯುತ್‌ ಉಪಕರಣಗಳು ಟ್ರಾನ್ಸ್‌ಫಾರ್ಮರ್‌ ಕೆಳಭಾಗ ಅಳವಡಿಸುವ ಬದಲು ಎತ್ತರದಲ್ಲಿ ಅಳವಡಿಸಲಿ. ಹೀಗೆ ಮಾಡುವುದರಿಂದ ಪಾದಚಾರಿಗಳಿಗೆ ತಗಲುವುದಿಲ್ಲ. ಅಪಾಯಕ್ಕೂ ಆಸ್ಪದ ಇರುವುದಿಲ್ಲ. ಕನಿಷ್ಠ 7ರಿಂದ 8 ಅಡಿ ಎತ್ತರದಲ್ಲಿ ಅಳವಡಿಸಬೇಕು ಎನ್ನುವುದು ಬಹುತೇಕ ನಾಗರಿಕರ ಅಭಿಪ್ರಾಯ.

ಕುಸಿಯುವ ಸ್ಥಿತಿಯಲ್ಲಿ ವಿದ್ಯುತ್‌ ಕಂಬಗಳು

ನಗರದ ಭದ್ರಮ್ಮ ಕಲ್ಯಾಣ ಮಂಟಪದ ಬಳಿ ಎರಡು ವಿದ್ಯುತ್ ಕಂಬಗಳು ವಾಲಿವೆ. ಈ ಮಾರ್ಗದಲ್ಲಿ ಹೋಗುವ ಪಾದಚಾರಿಗಳು ಈ ಭಯದಿಂದ ಸಾಗುವರು ಎನ್ನುವರು ಈ ರಸ್ತೆಯಲ್ಲಿ ಮೆಕ್ಯಾನಿಕ್ ಅಂಗಡಿ ಇಟ್ಟಿರುವ ಶ್ರೀರಾಜ್‌. ಮಳೆ ಬಂದರೆ ಕುಸಿದು ನಮ್ಮ ಅಂಗಡಿ ಮೇಲೆ ಬೀಳುತ್ತದೋ ಎಂಬ ಭಯ ಇದೆ. ಪಕ್ಕದ ಅಂಗಡಿ ಬಳಿ ಹೋಗಿ ನಿಲ್ಲುತ್ತೇನೆ ಎಂದು ತಿಳಿಸಿದರು.

ಮನೆ ಪಕ್ಕದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸುವುದಿಲ್ಲ.  ಪರ್ಯಾಯ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ.  ಹಿಂದೆ ಅಳವಡಿಸಿದ್ದರೆ ಬದಲಿಸಲು ಈಗ ಸಾಧ್ಯವಿಲ್ಲ
- ಶ್ರೀನಿವಾಸ, ಬೆಸ್ಕಾಂ ಎಂಜಿನಿಯರ್

–ವಿಷ್ಣುವರ್ಧನ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT