ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯವರ್ಧನೆಯಿಲ್ಲದೆ ಮರುಗಿದ ಹಲಸು

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ತಳಿ ಗುರುತಿಸಿದ ಸಿಎಚ್‌ಇಎಸ್‌; ಕನಿಷ್ಠ 10 ತಳಿಗಳಿಗೆ ಜಾಗತಿಕ ಮನ್ನಣೆ ದೊರಕಿಸುವ ಗುರಿ
Last Updated 18 ಜೂನ್ 2018, 6:12 IST
ಅಕ್ಷರ ಗಾತ್ರ

ತುಮಕೂರು: ದೇಶದಲ್ಲಿಯೇ ಉತ್ಕೃಷ್ಟ ಹಲಸಿನ ನಾಡುಗಳನ್ನು ಪಟ್ಟಿ ಮಾಡಿದರೆ ತುಮಕೂರು ಜಿಲ್ಲೆ ಪ್ರಮುಖ ಸ್ಥಾನ ಪಡೆಯುತ್ತದೆ. ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಸಿಎಚ್‌ಇಎಸ್‌) ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ತಳಿಯ ಹಲಸನ್ನು ಪಟ್ಟಿ ಮಾಡಿದೆ.

ಇದರಲ್ಲಿ 50ಕ್ಕೂ ಹೆಚ್ಚು ತಳಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಾಗುವ ಸಾಧ್ಯತೆ ಇದೆ. ಈ ತಳಿಗಳ ಪ್ರಾಯೋಗಿಕ ಚಟುವಟಿಕೆಗಳು ಈಗಾಗಲೇ ಆರಂಭವಾಗಿದೆ. ಈ ಹಿಂದೆ ಸಂಸ್ಥೆ ಗುರುತಿಸಿದ್ದ ‘ಚೇಳೂರು ಸಿದ್ಧು’ ಹಲಸಿನ ಸಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಲೂ ಉತ್ತಮ ಬೇಡಿಕೆ ಇದೆ.

ಹೀಗೆ ಜಿಲ್ಲೆಯಲ್ಲಿ ಹಲಸನ್ನು ಪ್ರಮುಖವಾಗಿ ಬೆಳೆದರೂ ಹಲಸಿನಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಆರ್ಥಿಕ ಅಭಿವೃದ್ಧಿಯ ಸಾಧ್ಯತೆಗಳಿದ್ದರೂ ಮಾಹಿತಿ ಕೊರತೆ ಮತ್ತು ಸರ್ಕಾರಗಳ ಸೂಕ್ತ ಪ್ರೋತ್ಸಾಹ ಇಲ್ಲದ ಕಾರಣಕ್ಕೆ ‌ಹಲಸು ರೈತರಿಗೆ ಘಮಲನ್ನು ನೀಡುತ್ತಿಲ್ಲ. ಹೇರಳವಾಗಿ ಉತ್ಪಾದನೆ ಆಗುತ್ತಿದ್ದರೂ ಮೌಲ್ಯವರ್ಧನೆ ಮಾತ್ರ ಇಲ್ಲ. ‘ಕೈಯಲ್ಲಿ ದುಡ್ಡಿದೆ. ಆದರೆ ಜೇಬಿಗೆ ಇಟ್ಟುಕೊಳ್ಳಲು ಆಗುತ್ತಿಲ್ಲ’ ಎನ್ನುವ ಸ್ಥಿತಿ ರೈತರದ್ದಾಗಿದೆ. ಮೌಲ್ಯವರ್ಧನೆ ಆದರೆ ಸಣ್ಣ ರೈತರೂ ಉತ್ತಮ ಆದಾಯ ಪಡೆಯಬಹುದು.

ಗುಬ್ಬಿ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಲಸು ಉತ್ಪಾದನೆ ಆಗುತ್ತಿದೆ. ತಾಲ್ಲೂಕಿನ ಚೇಳೂರು, ರಾಜ್ಯದಲ್ಲಿಯೇ ಹಲಸಿಗೆ ಪ್ರಸಿದ್ಧವಾದ ಮಾರುಕಟ್ಟೆ. ಮಹಾರಾಷ್ಟ್ರದ ಒಬೆಲ್ಲ ಕಂಪೆನಿ ಈ ವರ್ಷ ಇಲ್ಲಿಂದ ಮೂರು ಟನ್, ತಮಿಳುನಾಡಿನ ಕೃಷ್ಣಗಿರಿಯ ಸತ್ಯಮೂರ್ತಿ ಅವರು ನಾಲ್ಕು ಟನ್ ಖರೀದಿಸಿದ್ದಾರೆ. ಮಂಗಳೂರಿನ ಐಸ್‌ಕ್ರೀಂ ಕಂಪೆನಿಯೊಂದು ತೋವಿನ ಕೆರೆ ಹೋಬಳಿಯ ಗ್ರಾಮಗಳಿಂದ ಹಲಸು ಖರೀದಿಸಿದೆ. ಪುಣೆಯ ಮಾರುಕಟ್ಟೆಗೆ ನಿತ್ಯ ಸರಾಸರಿ ಎರಡು ಟನ್ ಕಾಯಿಗಳು ಸರಬರಾಜಾಗುತ್ತಿವೆ.

ಹಪ್ಪಳ, ಚಿಪ್ಸ್, ಜಾಮ್, ಜೂಸ್‌, ಐಸ್‌ಕ್ರೀಂ, ಮಂಜುಕೆನೆ, ಹಲ್ವ ಸೇರಿದಂತೆ ನಾನಾ ಬಗೆಯ ಉತ್ಪನ್ನಗಳನ್ನು ಹಲಸಿನಿಂದ ತಯಾರಿಸಬಹುದು. ಇಲ್ಲಿನ ಹಲಸಿನ ಹಣ್ಣು ಮತ್ತು ಕಾಯಿ ಪುಣೆ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಸರಬರಾಜಾಗುತ್ತಿದೆ. ಅಲ್ಲಿ ಒಣಗಿಸಿ ಮತ್ತು ಸಂಸ್ಕರಿಸಿ (ವಾಕ್ಯೂಮ್‌ ಪ್ರೆ) ಮತ್ತೆ ರಾಜ್ಯದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂತಹ ಪ್ರಯತ್ನಗಳು ಕನಿಷ್ಠ ಮಟ್ಟದಲ್ಲಿಯೂ ನಡೆಯುತ್ತಿಲ್ಲ. ತೋವಿನಕೆರೆಯ ಹಳ್ಳಿಸಿರಿ ಮಹಿಳಾ ಸ್ವಸಹಾಯ ಸಂಘ ಮಾತ್ರ ಸಣ್ಣ ಹೆಜ್ಜೆ ಇಟ್ಟಿದೆ. ಆದರೆ ಈ ಸಂಘಕ್ಕೆ ಆರ್ಥಿಕವಾಗಿ ಪ್ರೋತ್ಸಾಹ ದೊರೆಯುತ್ತಿಲ್ಲ. ತೋಟಗಾರಿಕಾ ಇಲಾಖೆ ಬೆರಳಣಿಕೆಯ ಹಲಸಿನ ಮೇಳಗಳನ್ನು ಮಾತ್ರ ಸಂಘಟಿಸಿದೆ. ಆದರೆ ಇದರಿಂದ ರೈತರಿಗೆ ಅನುಕೂಲಗಳೇನೂ ಆಗಿಲ್ಲ.

‘ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಣ್ಣಿನಲ್ಲಿ ಶೇ 1ರಷ್ಟು ಸಹ ಮೌಲ್ಯವರ್ಧನೆ ಆಗುತ್ತಿಲ್ಲ. ಕೇರಳದಲ್ಲಿ ಸುಮಾರು 28ಕ್ಕೂ ಹೆಚ್ಚು ಕಂಪೆನಿಗಳು ಹಲಸಿನ ಉತ್ಪನ್ನ ಮೌಲ್ಯವರ್ಧನೆ ಮಾಡುತ್ತಿವೆ. ನಿತ್ಯ ಬೆಳಿಗ್ಗೆ 750 ಗ್ರಾಂ ಪ್ಯಾಕೆಟ್‌ನಲ್ಲಿ ಹಲಸಿನ ತುಂಡುಗಳನ್ನು ಜ್ಯೂಸ್ ಅಂಗಡಿಗಳಿಗೆ ಅಲ್ಲಿ ಸರಬರಾಜು ಮಾಡಲಾಗುತ್ತಿದೆ. ಒಂದು ಅಂಗಡಿಗೆ ಸರಾಸರಿ 10ರಿಂದ 20 ಕೆ.ಜಿ ನೀಡಲಾಗುತ್ತದೆ. ಹಲಸಿನ ಮೂಲಕ ಆರ್ಥಿಕವಾಗಿ ಸಬಲರಾಗಲು ಅವಕಾಶ ಇದ್ದರೂ ಅಂತಹ ಬೆಳವಣಿಗೆಗಳು ಜಿಲ್ಲೆಯಲ್ಲಿ ಕಾಣುತ್ತಿಲ್ಲ’ ಎನ್ನುವರು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಹಿರಿಯ ವಿಜ್ಞಾನ ಡಾ.ಕರುಣಾಕರನ್.

‘ಕಳೆದ ಮೂರು ವರ್ಷಗಳಿಂದ ಇತ್ತೀಚೆಗೆ ಮಾತ್ರ ಜಿಲ್ಲೆಯಲ್ಲಿ ಹಲಸಿನ ತಳಿಯ ರಕ್ಷಣೆ ಮತ್ತು ಗುಣಮಟ್ಟದ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಹಲಸಿನ ಮಿಲ್ಕ್ ಶೇಕ್ ತಯಾರಿಕೆ ಆರಂಭಿಸಲಾಗಿದೆ. ಸಂಸ್ಕರಣ ಯಂತ್ರಕ್ಕೆ ₹ 10ರಿಂದ 12 ಲಕ್ಷ ವೆಚ್ಚವಾಗುತ್ತದೆ. ರಾಜ್ಯದಲ್ಲಿ ಐದು ಕಡೆಗಳಲ್ಲಿ ಮಾತ್ರ ಈ ಯಂತ್ರ ಇದೆ. ಹೆಚ್ಚು ಹಣ ಅಗತ್ಯವಿರುವ ಕಾರಣ ರೈತರು ಖರೀದಿಸುವುದು ಕಡಿಮೆ. ಸಂಘ ಸಂಸ್ಥೆಗಳು ಇಲ್ಲವೆ ನಾಲ್ಕೈದು ಮಂದಿ ರೈತರು ಒಗ್ಗೂಡಿ ಖರೀದಿಸುವರು’ ಎಂದು ವಿವರಿಸಿದರು.

‘ಕಾಯಿಗಳನ್ನು ರೈತರಿಂದ ತೀರ ಕಡಿಮೆ ಬೆಲೆಗೆ ಖರೀದಿಸುವರು. ಆ ಕಾಯಿ ಪುಣೆಯ ಮಾರುಕಟ್ಟೆಗೆ ಹೋಗುವಷ್ಟರಲ್ಲಿ ಒಂದು ಕೆ.ಜಿಗೆ ₹ 50 ಬೆಲೆ ಇರುತ್ತದೆ. ಹಲಸಿನ ಬೇರೆ ಬೇರೆ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ಆದರೆ ಈ ವಿಚಾರದಲ್ಲಿಯೂ ಜಿಲ್ಲೆಯ ಜನರು ತೀರಾ ಹಿಂದುಳಿದಿದ್ದಾರೆ’ ಎನ್ನುವರು ಕರುಣಾಕರನ್.

ಕೈಗಾರಿಕಾ ಸಚಿವರತ್ತ ನೋಟ

ಗುಬ್ಬಿಯಲ್ಲಿ ಹೆಚ್ಚು ಹಲಸು ಉತ್ಪಾದನೆಯಾಗುತ್ತದೆ. ಆ ಕ್ಷೇತ್ರದ ಎಸ್.ಆರ್.ಶ್ರೀನಿವಾಸ್ ಸಣ್ಣ ಕೈಗಾರಿಕಾ ಸಚಿವರಾಗಿದ್ದಾರೆ. ಗುಡಿ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಒತ್ತು ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಹಲಸಿನ ಮೌಲ್ಯವರ್ಧನೆಯ ಘಟಕಗಳನ್ನು ಸ್ಥಾಪಿಸಿ ಮತ್ತು ಜಾಗೃತಿಯ ಶಿಬಿರಗಳನ್ನು ನಡೆಸಿದರೆ ರೈತರ ಬದುಕಿನಲ್ಲಿ ಆಶಾದಾಯ ಬೆಳವಣಿಗೆಯನ್ನು ಕಾಣಬಹುದು.

‘ಹಲಸಿನ ಮೌಲ್ಯವರ್ಧನೆ ಮೂಲಕ ಯುವಸಮುದಾಯಕ್ಕೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸಬಹುದು. ಯಂತ್ರಗಳ ಖರೀದಿಗೆ ಸಹಾಯಧನ, ಹಲಸು ಉತ್ಪಾದಕರ ಸಂಘಗಳ ರಚನೆಗೆ ಸರ್ಕಾರ ಗಮನ ನೀಡಬೇಕು ಎನ್ನುವರು’ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆಯ ಶಿವಸ್ವಾಮಿ.

ಕೇರಳ ಮಾದರಿ ಅನುಸರಿಸಿ

ಕೇರಳ ರಾಜ್ಯ ಇತ್ತೀಚೆಗೆ ಹಲಸಿಗೆ ‘ರಾಜ್ಯ ಹಣ್ಣಿನ’ ಸ್ಥಾನಮಾನ ನೀಡಿತು. ಮೂಲಗಳ ಪ್ರಕಾರ ವಾರ್ಷಿಕ ₹ 15 ಸಾವಿರ ಕೋಟಿ ವಹಿವಾಟನ್ನು ಹಲಸಿನಿಂದ ಸೃಷ್ಟಿಸುವ ಗುರಿಯನ್ನು ಆ ರಾಜ್ಯ ಹೊಂದಿದೆ. ಅಲ್ಲಿನ ಕೃಷಿ ಸಚಿವರು ಹಲಸಿನ ಅಭಿವೃದ್ಧಿ ಮತ್ತು ಮೌಲ್ಯವರ್ಧನೆಯನ್ನು ಪ್ರಮುಖ ಗುರಿಯನ್ನಾಗಿಸಿಕೊಂಡಿದ್ದಾರೆ.

‘ಕೇರಳ ಹಾಗೂ ರಾಜ್ಯದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಹಲಸಿನ ಮೌಲ್ಯವರ್ಧನೆ ಉತ್ತಮವಾಗಿದೆ. ರಾಜ್ಯಕ್ಕೆ ಹೋಲಿಸಿದರೆ ಕೇರಳದಲ್ಲಿ ಹಲಸಿನ ಉತ್ಪಾದನೆ ಮತ್ತು ಗುಣಮಟ್ಟ ಕಡಿಮೆ. ಆದರೆ ಅವರು ಮೌಲ್ಯವರ್ಧನೆಯಲ್ಲಿ ಮುಂದಿದ್ದಾರೆ. ಜಿಲ್ಲೆಯ ಕೆಂಪು (ಚಂದ್ರ) ಹಲಸು ಉತ್ಕೃಷ್ಟವಾದ ರುಚಿ ಹೊಂದಿದೆ. ಇಂತಹ ಹಣ್ಣು ಜಿಲ್ಲೆಯ ಎಲ್ಲೆಡೆ ಹೇರಳವಾಗಿದೆ. ಆದರೆ ಕೇರಳದಲ್ಲಿ ಈ ಹಣ್ಣಿನ ಬೆಳವಣಿಗೆ ಇತ್ತೀಚಿನದ್ದು’ ಎನ್ನುವರು ಕರುಣಾಕರನ್.

ಮಹತ್ವ ತಂದುಕೊಟ್ಟ ಕರುಣಾಕರನ್

ಡಾ.ಕರುಣಾಕರನ್ ಅವರ ಪ್ರಯತ್ನದ ಮತ್ತು ಆಸಕ್ತಿಯ ಫಲವಾಗಿ ಜಿಲ್ಲೆಯ ಹಲಸು ರಾಷ್ಟ್ರಮಟ್ಟದಲ್ಲಿ ಗುರುತಾಗುತ್ತಿದೆ ಅಂದರೆ ಖಂಡಿತ ಅತಿಶಯವಲ್ಲ. ‘ಸಿದ್ಧು’ ಹಲಸನ್ನು ಗುರುತಿಸಿದ ತರುವಾಯ ಜಿಲ್ಲೆಯ ನಾನಾ ಕಡೆಗಳ ಹಲಸಿನ ಮರಗಳನ್ನು ನೋಡಲು ಕರುಣಾಕರನ್ ಖುದ್ದು ಹೆಜ್ಜೆ ಇಟ್ಟಿದ್ದಾರೆ. ತಮಗಿರುವ ವ್ಯಾಪ್ತಿಯಲ್ಲಿಯೇ ತಳಿ ಅಭಿವೃದ್ಧಿ, ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

‘ಕರುಣಾಕರ್ ಅವರು ಇಲ್ಲದಿದ್ದರೆ ನಮ್ಮ ಹಲಸನ್ನು ಕೇಳುವವರೇ ಇರುತ್ತಿರಲಿಲ್ಲ. ಅವರ ಪ್ರಯತ್ನದ ಫಲವಾಗಿ ಜಿಲ್ಲೆಯ ಹಲಸಿಗೆ ಬೆಲೆ ಬರುತ್ತಿದೆ’ ಎನ್ನುವರು ಸಿದ್ಧು ಹಲಸಿನ ಮಾಲೀಕ ಪರಮೇಶ್ವರ್.

ಕರುಣಾಕರನ್ ಅವರ ಬಗೆಗಿನ ಪರಮೇಶ್ವರ್‌ ಅವರ ಮಾತುಗಳನ್ನು ಬಹು ಮಂದಿ ರೈತರು ಅನುಮೋದಿಸುವರು. ಜಿಲ್ಲೆಯ ಕನಿಷ್ಠ 10 ತಳಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕು ಎನ್ನುವ ಆಶಯ ಮತ್ತು ಪ್ರಯತ್ನ ಅವರದ್ದು.

ನಾಳೆ ಮೌಲ್ಯವರ್ಧನೆ ಪ್ರಾತ್ಯಕ್ಷಿಕೆ

ಗುಬ್ಬಿ ತಾಲ್ಲೂಕು ಸಾಗರನಹಳ್ಳಿಯಲ್ಲಿ ಜೂ.19ರಂದು ಬೆಳಿಗ್ಗೆ 10.30ಕ್ಕೆ ಹಲಸು ಹಣ್ಣಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್, ಗುಬ್ಬಿಯ ಬಸವೇಶ್ವರ ಹಲಸಿನ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಶ್ವರ ಹಾಗೂ ವಿವಿಧ ರೈತರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT