ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಎಚ್‌.ವಿ.ನರಸಿಂಹಮೂರ್ತಿ ಇನ್ನಿಲ್ಲ

Last Updated 18 ಜೂನ್ 2018, 6:26 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿನ ಪ್ರಸಿದ್ದ ಕುಂದೇಶ್ವರ ದೇವಸ್ಥಾನದ ಹಿಂದಿನ ಆಡಳಿತ ಧರ್ಮದರ್ಶಿ, ಶೃಂಗೇರಿ ಶ್ರೀ ಶಾರದ ಮಠದ ಪ್ರಾಂತೀಯ ಧರ್ಮಾಧಿಕಾರಿ, ವಿಶ್ರಾಂತ ಉಪನ್ಯಾಸಕ, ಸಾಹಿತಿ ಹಾಗೂ ಹಿರಿಯ ವಿದ್ವಾಂಸ ಡಾ.ಎಚ್‌.ವಿ.ನರಸಿಂಹಮೂರ್ತಿ (72) ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಗೆಯವರಾಗಿದ್ದ ಡಾ.ಎಚ್‌.ವಿ.ನರಸಿಂಹ ಮೂರ್ತಿ ಅವರು ಶೃಂಗೇರಿಯಲ್ಲಿ ಶಿಕ್ಷಣಾಭ್ಯಾಸ ಮುಗಿಸಿ, ಸ್ನಾತಕೋತ್ತರ ಪದವಿ ಪಡೆದು ಮಣಿಪಾಲ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಉಪನ್ಯಾಸಕರಾಗಿ ಸೇರ್ಪಡೆಗೊಂಡಿದ್ದರು.

ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 620ಕ್ಕೂ ಹೆಚ್ಚು ಲೇಖನ, 71 ಪುಸ್ತಕ ಹಾಗೂ 18 ಪಠ್ಯ ಪುಸ್ತಕ ಸಂಪಾದಿಸಿದ್ದಾರೆ. ಧಾರ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದ ಅವರು ಅಕಾಶವಾಣಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರವಚನ ಹಾಗೂ ಸಂವಹನಗಳಲ್ಲಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದ ಅವರು, ದೇಶದ ವಿವಿಧ ಕಡೆಗಳಲ್ಲದೆ ವಿದೇಶಗಳಲ್ಲಿಯೂ ಪ್ರವಚನ ಹಾಗೂ ಉಪನ್ಯಾಸವನ್ನು ನೀಡಿದ್ದರು. ಉಪ ನಯನ ಸಂಸ್ಕಾರ ಕುರಿತು ಅವರು ಅಧ್ಯಯನ ನಡೆಸಿ ಮಂಡಿಸಿದ್ದ ಪ್ರಬಂಧಕ್ಕೆ ಡಾಕ್ಷರೇಟ್‌ ಪಡೆದುಕೊಂಡಿದ್ದರು.

ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಹರಿಕಾರರಾಗಿದ್ದ ಅವರು, ಭಕ್ತರ ನೆರವಿನಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡಿದ್ದರು. ಶೃಂಗೇರಿ ಶ್ರೀ ಶಾರದ ಪೀಠದ ಪೀಠಾಧಿಪತಿಗಳ ಅಚ್ಚು ಮೆಚ್ಚಿನ ಶಿಷ್ಯರಾಗಿದ್ದ ಅವರ ಧಾರ್ಮಿಕ ಸೇವೆಯನ್ನು ಪರಿಗಣಿಸಿ ಶ್ರೀ ಮಠ ಕಳೆದ ಹಲವು ವರ್ಷಗಳಿಂದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗೆ ಅನುಗುಣವಾಗಿ ಅವರನ್ನು ಪ್ರಾಂತೀಯ ಧರ್ಮಾಧಿಕಾರಿಗಳನ್ನಾಗಿ ನೇಮಕ ಮಾಡಿತ್ತು.

ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಂಗಳೂರಿನಿಂದ ತಂದು ನೇರಂಬಳ್ಳಿ ರಸ್ತೆಯಲ್ಲಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಕುಂದಾಪುರದಲ್ಲಿ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT