ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಬೈಕ್‌ ಸವಾರರಿಗೆ ಹೆಲ್ಮೆಟ್‌ ಪಾಠ

ಪದವೀಧರ ಮುದುಕಪ್ಪ ಸಮತರ ಅವರ ಜನಪರ ಕಾರ್ಯಕ್ಕೆ ಮೆಚ್ಚುಗೆ
Last Updated 18 ಜೂನ್ 2018, 7:40 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಮುದೇನೂರು ಗ್ರಾಮದ ಮುದುಕಪ್ಪ ಸಮತರ ಅವರು ಹೆಲ್ಮೆಟ್ ಬಳಕೆ ಬಗ್ಗೆ ಬೈಕ್ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬಿ.ಕಾಂ ಪದವೀಧರರಾರಿಗಿರುವ ಮುದುಕಪ್ಪ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾರೆ. ಅದರ ಜತೆಗೆ ಒಂದು ವಾರದಿಂದ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಮೂರು ಜನ ಸವಾರಿ ಮಾಡಬಾರದು. ಅಲ್ಲದೆ, ಅಪಘಾತದಿಂದ ಅಗುವ ಪರಿಣಾಮಗಳ ಕುರಿತು ಅವರು ಸವಾರರಿಗೆ ತಿಳಿ ಹೇಳುತ್ತಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಭ್ಯಾಸಕ್ಕೆ ಬೇಕಾಗುವ ಪುಸ್ತಕಗಳು, ನೀರಿನ ಬಾಟಲಿ ತೆಗೆದುಕೊಂಡು ಮನೆ ಬಿಡುವ ಮುದುಕಪ್ಪ ಹೆಲ್ಮೆಟ್‌ ಇಲ್ಲದೆ ಬರುವ, ಮೂವರು ಇರುವ ಬೈಕ್‌ಗಳನ್ನು ನಿಲ್ಲಿಸಿ ವಾಹನ ಸವಾರರ ಮೊಬೈಲ್‌ ಸಂಖ್ಯೆ ಸಹಿತ ಮಾಹಿತಿ ದಾಖಲಿಸಿಕೊಳ್ಳುತ್ತಾರೆ. ನಂತರ ಈ ಬಗ್ಗೆ ಅರಿವಿನ ಪಾಠ ಆರಂಭವಾಗುತ್ತದೆ. ಗಿಡದ ನೆರಳಿನಲ್ಲಿ ಕುಳಿತು ಓದುವುದು ವಾಹನಗಳು ಬಂದಾಗ ನಿಲ್ಲಿಸಿ ಸಲಹೆ ನೀಡುವುದು ಸದ್ಯದ ಅವರ ದಿನಚರಿ.

ಆಯತಪ್ಪಿ ಬೈಕ್‌ ಮುಗುಚಿದಾಗ, ಬೇರೆ ವಾಹನ ಡಿಕ್ಕಿ ಹೊಡೆದಾಗ ದೇಹದ ಉಳಿದ ಭಾಗಕ್ಕೆ ಪೆಟ್ಟಾದರೆ ಕನಿಷ್ಠ ಜೀವವಾದರೂ ಉಳಿಯುತ್ತದೆ. ಆದರೆ, ತಲೆಗೆ ಪೆಟ್ಟಾದರೆ ಜೀವ ಉಳಿಯುವ ಸಾಧ್ಯತೆ ಕಡಿಮೆ. ಹೀಗಾದಾಗ ತಮ್ಮನ್ನು ನಂಬಿರುವ ಕುಟುಂಬದ ಸದಸ್ಯರ ಪರಿಸ್ಥಿತಿ ಹೇಗಾಗುತ್ತದೆ ಎಂಬ ಬಗ್ಗೆ ಸವಾರರಿಗೆ ಹೇಳುತ್ತಾರೆ. ಅಲ್ಲದೆ ಬೈಕ್‌ ಅಪಘಾತಗಳಿಂದ ಆಗಿರುವ ಅನಾಹುತಗಗಳ ವಿಡಿಯೊಗಳನ್ನೂ ತೋರಿಸುತ್ತಾರೆ. ಪೋಲೀಸರ ಮಾತಿಗೆ ಕಿವಿಗೊಡದ ಎಷ್ಟೋ ಸವಾರರು ಮುದುಕಪ್ಪ ಅವರು ಪಟಪಟನೆ ಅರಳು ಹುರಿದಂತೆ ನೀಡುವ ಸಲಹೆಗಳಿಗೆ ‘ಹೌದಲ್ಲ’ ಎಂದೆ ತಲೆಯಾಡಿಸುತ್ತಾರೆ ಎಂದು ಹೇಳುತ್ತಾರೆ ಮುದೇನೂರು ಗ್ರಾಮದ ತಿರುಪತಿ.

ಈವರೆಗೆ ಒಟ್ಟು 560 ಬೈಕ್‌ ಸವಾರರಲ್ಲಿ ಅರಿವು ಮೂಡಿಸಿದ್ದಾರೆ. ಎಲ್ಲ ವಿವರಗಳನ್ನು ಬರೆದಿಟ್ಟುಕೊಳ್ಳುವ ಮುದುಕಪ್ಪ ಸವಾರರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ 'ಹೆಲ್ಮೆಟ್‌ ಖರೀದಿಸಿದರಾ ಎಂದೆ ವಿಚಾರಿಸುವುದನ್ನೂ ಮರೆಯುವುದಿಲ್ಲ.

ಅದೇ ರೀತಿ ಮೂವರು ಬೈಕ್‌ ಮೇಲೆ ಹೋಗುವುದರಿಂದ ಆಗುವ ಅಪಾಯ, ದಂಡ ಕಟ್ಟುವುದು, ವಾಹನ ವಿಮೆ ಮಾಡಿಸುವುದರ ಮಹತ್ವ ಈ ವಿಷಯಗಳ ಬಗ್ಗೆಯೂ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಮೊಬೈಲ್‌, ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡದ ಮುದುಕಪ್ಪ ಪ್ರಚಾರದ ಗೀಳು ಇಲ್ಲದೆ ಸಾಮಾಜಿಕ ಜಾಗೃತಿ ಮತ್ತು ತನ್ನ ಅಭ್ಯಾಸದತ್ತ ಹೆಚ್ಚು ಆಸಕ್ತಿ ವಹಿಸುವ ಮೂಲಕ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.

ಅಪಘಾತವೇ ಪ್ರೇರಣೆ

ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಮಾಡುವ ಸಂದರ್ಭದಲ್ಲಿ ಮೂರು ಬಾರಿ ಬಿದ್ದು ಗಾಯಗೊಂಡಿದ್ದೆ. ಅದೃಷ್ಟವಶಾತ್‌ ತಲೆಗೆ ಪೆಟ್ಟಾಗಿರಲಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡಬಾರದೇಕೆ ಎಂಬ ವಿಚಾರ ತಲೆಯಲ್ಲಿ ಹೊಳೆಯಿತು ಎನ್ನುತ್ತಾರೆ ಮುದುಕಪ್ಪ ಸಮತರ. ಅದೇ ರೀತಿ ಬಹಳಷ್ಟು ಹಣ ಕೊಟ್ಟು ಬೈಕ್‌ ಖರೀದಿಸುತ್ತಾರೆ. ಆದರೆ, ಜೀವ ಉಳಿಸುವ ನೂರಾರು ರೂಪಾಯಿಗಳಲ್ಲಿ ಸಿಗುವ ಹೆಲ್ಮೆಟ್‌ ಖರೀದಿಸದವರೇ ಹೆಚ್ಚು. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಸಂಬಂಧಿಸಿದ ಎಲ್ಲರಿಂದಲೂ ನಡೆಯಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT