ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋ ಪಾರ್ಕಿಂಗ್’ನಲ್ಲೂ ವಾಹನ ನಿಲುಗಡೆ

ನಗರ ಸಾರಿಗೆ ಬಸ್‌ ನಿಲ್ದಾಣ ಎದುರಿನ ಸ್ಥಿತಿ; ಚಾಲಕರಿಂದ ನಿಯಮ ಉಲ್ಲಂಘನೆ
Last Updated 18 ಜೂನ್ 2018, 9:13 IST
ಅಕ್ಷರ ಗಾತ್ರ

ಹಾಸನ: ‘ನೋ ಪಾರ್ಕಿಂಗ್’ (ವಾಹನ ನಿಲುಗಡೆ ನಿಷೇಧ) ಎಂಬ ಫಲಕ ಇದ್ದರೂ ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ತಪ್ಪಿದಲ್ಲ.

ನಗರ ಸಾರಿಗೆ ನೂತನ ಬಸ್ ನಿಲ್ದಾಣ ಉದ್ಘಾಟನೆಬಳಿಕ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ಎನ್.ಆರ್. ವೃತ್ತದಿಂದ ಹೇಮಾವತಿ ಪ್ರತಿಮೆವರೆಗೂ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿತ್ತು. ವಾಹನಗಳ ನಿಲುಗಡೆಗೆ ನಗರ ಸಾರಿಗೆ ಬಸ್ ನಿಲ್ದಾಣದ ನೆಲಮಾಳಿಗೆಯಲ್ಲಿ ವಿಶಾಲ ಸ್ಥಳ ಮೀಸಲಿದೆ. ಪಾರ್ಕಿಂಗ್‌ ಶುಲ್ಕ ತಪ್ಪಿಸಲು ವಾಹನ ಸವಾರರು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿದ್ದಾರೆ.

ಈ ರಸ್ತೆಯಲ್ಲಿ ಬ್ಯಾಂಕ್‌ಗಳು, ಹೋಟೆಲ್‌ಗಳು, ಅಂಚೆ ಕಚೇರಿ, ಕಟ್ಟಿನಕೆರೆ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿವೆ. ದಿನವಿಡೀ ವಾಹನ ದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ ಈ ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅನುವು ಮಾಡಿಕೊಡುವಂತೆ ನಗರಸಭೆ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ನಾಗರಿಕರು ಮನವಿ ಮಾಡಿದ್ದರು. ನಂತರ ಅವಕಾಶ ಕಲ್ಪಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಕಾರುಗಳನ್ನು ದ್ವಿಚಕ್ರ ವಾಹನಗಳ ಹಿಂದೆ ನಿಲ್ಲಿಸಲಾಗುತ್ತಿದೆ. ವಾಹನಗಳು ಅರ್ಧ ರಸ್ತೆಯನ್ನೇ ಅತಿಕ್ರಮಿಸಲಿವೆ. ಪೊಲೀಸರು ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೊಸ ನಿಲ್ದಾಣದಿಂದ ನಗರ ಸಾರಿಗೆ ನಿಲ್ದಾಣಕ್ಕೆ ಎನ್.ಆರ್.ವೃತ್ತ ಮೂಲಕ ನಿತ್ಯ ಬಸ್‌ಗಳು ಸಂಚರಿಸುತ್ತವೆ. ಸಾಲಗಾಮೆ, ಹಳೇಬೀಡು, ಇತರೆ ಗ್ರಾಮಗಳಿಗೆ ಇದೇ ಮಾರ್ಗದಲ್ಲಿ ಹೋಗಬೇಕು. ವಾಹನ ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಕಾರುಗಳನ್ನು ನಿಲುಗಡೆ ಮಾಡುವುದರಿಂದ ತೊಂದರೆ ಮತ್ತಷ್ಟು ಹೆಚ್ಚಾಗಿದೆ.

‘ನಗರದ ಹೇಮಾವತಿ ವೃತ್ತ, ಮಹಾವೀರ ವೃತ್ತ, ಎನ್.ಆರ್. ವೃತ್ತದಲ್ಲಿ ಆಟೊಗಳು ರಸ್ತೆಯಲ್ಲೇ ನಿಂತಿರುತ್ತವೆ. ಬೆಂಗಳೂರು, ಆಲೂರು, ಸಕಲೇಶಪುರ, ಬೇಲೂರು ಭಾಗದಿಂದ ಬಂದ ಬಸ್ ನಿಲ್ಲಿಸುತ್ತಿದ್ದಂತೆ ಪ್ರಯಾಣಿಕರನ್ನು ಕರೆದೊಯ್ಯಲು ಕನಿಷ್ಟ 5 ಆಟೊಗಳು ಬಸ್‌ ಹಿಂದೆ ನಿಂತಿರುತ್ತವೆ.

‘ಇನ್ನು ಬಿ.ಎಂ. ರಸ್ತೆಯ ದೇವಿಕೆರೆ ಸಮೀಪ ವೃತ್ತದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಆಟೊಗಳು ರಸ್ತೆಯಲ್ಲೇ ನಿಂತಿರುತ್ತವೆ. ಹಾಗಾಗಿ ಸಕಲೇಶಪುರ, ಆಲೂರು, ಬೇಲೂರು ಹಾಗೂ ಚಿಕ್ಕಮಗಳೂರಿಗೆ ಕಡೆ ತೆರಳುವ ವಾಹನಗಳಿಗೆ ಸಮಸ್ಯೆ ತಪ್ಪಿದಲ್ಲ’ ಎಂದು ನಿವಾಸಿ ಸಂದೇಶ್‌ ವಿವರಿಸಿದರು.

‘ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆಟೊ ಚಾಲಕರ ಸಭೆ ಕರೆದು ನಿಯಮ ಉಲ್ಲಂಘಿಸದಂತೆ ಸೂಚಿಸಬೇಕು. ಎನ್.ಆರ್.ವೃತ್ತದಿಂದ ಹೇಮಾವತಿ ಪ್ರತಿಮೆ ವರೆಗೂ ನಾಲ್ಕು ಚಕ್ರದ ವಾಹನಗಳು ನಿಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ’ ಎಂದು ಅವರು ಆಗ್ರಹಿಸಿದರು.

ಸಂಚಾರ ಇನ್‌ಸ್ಪೆಕ್ಟರ್ ಮೀನಾಕ್ಷಮ್ಮ, ‘ಬಸ್‌ ನಿಲ್ದಾಣ ಎದುರು ದ್ವಿಚಕ್ರ ವಾಹನ ಹೊರತು ಪಡಿಸಿ ನಿಲ್ಲಿಸುವ ಕಾರು, ಆಟೊ, ಟ್ಯಾಕ್ಸಿ ಇತರೆ ವಾಹನಗಳ ಮಾಲೀಕರಿಗೆ ದಂಡ ಹಾಕಲಾಗುತ್ತಿದೆ. ದಿನಕ್ಕೆ 15 ಕಾರುಗಳಿಗೆ ದಂಡ ಹಾಕಿದರೂ ನಿಯಮ ಉಲ್ಲಂಘನೆ ನಿಂತಿಲ್ಲ. ಟೈಗರ್‌ ನೆರವಿನಿಂದ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಊಟಕ್ಕೆ ಪೊಲೀಸ್‌ ಸಿಬ್ಬಂದಿ ಬರುತ್ತಿದ್ದಂತೆ ಕಾರುಗಳನ್ನು ನಿಲ್ಲಿಸಲು ಆರಂಭಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT