ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕೆ ‘ತ್ರಿಮೂರ್ತಿ’ಗಳೂ ಅರ್ಹರು

ಸಚಿವ ರಾಜಶೇಖರ ಪಾಟೀಲ ಸನ್ಮಾನ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
Last Updated 18 ಜೂನ್ 2018, 10:14 IST
ಅಕ್ಷರ ಗಾತ್ರ

ಬೀದರ್: ‘ನಾಲ್ಕು ಬಾರಿ ಆಯ್ಕೆಯಾಗಿರುವ ರಾಜಶೇಖರ ಪಾಟೀಲ ಅವರಿಗೆ ಈ ಬಾರಿ ಹೈಕಮಾಂಡ್ ಸಚಿವ ಸ್ಥಾನ ನೀಡಿದೆ. ಜಿಲ್ಲೆಯ ಶಾಸಕರಾದ ಈಶ್ವರ ಖಂಡ್ರೆ, ರಹೀಂಖಾನ್ ಹಾಗೂ ಬಿ. ನಾರಾಯಣರಾವ್ ಅವರಿಗೂ ಸಚಿವರಾಗುವ ಅರ್ಹತೆ ಇದೆ’ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಪಾಟೀಲ ಅವರಿಗೆ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಗಣೇಶ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಖಂಡ್ರೆ, ಖಾನ್ ಹಾಗೂ ನಾರಾಯಣರಾವ್ ಅವರ ಅರ್ಹತೆಗೆ ಒಂದೊಂದು ಕಾರಣಗಳು ಇವೆ. ಎಲ್ಲರೂ ಸಚಿವ ಸ್ಥಾನ ಬಯಸುವುದು ಸಹಜ. ಆದರೆ, ಸ್ಥಾನ ಒಂದೇ ಇರುವ ಕಾರಣ ಎಲ್ಲರನ್ನೂ ಸಮಾಧಾನಪಡಿಸಲು ಆಗದು’ ಎಂದು ತಿಳಿಸಿದರು.

‘ಹಿಂದೆ ಈಶ್ವರ ಖಂಡ್ರೆ ಅವರು ಎರಡು ವರ್ಷ ಸಚಿವರಾಗಿದ್ದರು. ತಮಗೆ ದೊರೆತ ಖಾತೆಯನ್ನು ಚೆನ್ನಾಗಿ ನಿಭಾಯಿಸಿದ್ದರು. ಸಂದರ್ಭಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅವಕಾಶ ದೊರೆಯುತ್ತದೆ. ಹೀಗಾಗಿ ಖಂಡ್ರೆ ಅವರು ನಿರಾಶರಾಗಬಾರದು’ ಎಂದು ಹೇಳಿದರು.

‘ನೂತನ ಸಚಿವರು ಈ ಭಾಗ ಹಾಗೂ ಇಲ್ಲಿಯ ಜನರ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ರಾಜಶೇಖರ ಪಾಟೀಲ ಅವರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ’ ಎಂದು ತಿಳಿಸಿದರು.

‘ಹಿಂದಿನ ಕಾಂಗ್ರೆಸ್ ಸರ್ಕಾರ ಬಹಳ ಉತ್ತಮವಾಗಿ ಕೆಲಸ ಮಾಡಿತ್ತು. ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿತ್ತು. ಆದರೂ, ಕಾಂಗ್ರೆಸ್‌ಗೆ ಏಕೆ ಬಹುಮತ ದೊರೆಯಲಿಲ್ಲ, ಜನ ಏಕೆ ಇಂಥ ಶಿಕ್ಷೆ ನೀಡಿದರು ಎನ್ನುವುದು ತಿಳಿಯುತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ನಾವು ಖುಷಿಗಾಗಿ ಸಮ್ಮಿಶ್ರ ಸರ್ಕಾರ ರಚಿಸಿಲ್ಲ. ಬಿಜೆಪಿ ಹಾಗೂ ಆರ್‍ಎಸ್‍ಎಸ್ ತತ್ವಗಳನ್ನು ದೂರ ಇಡಲು ತ್ಯಾಗ ಮಾಡಿ, ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದೇವೆ’ ಎಂದು ತಿಳಿಸಿದರು.

ರೈತರು, ಬಡವರ ಕಾಳಜಿ ಇಲ್ಲ: ‘ಕೇಂದ್ರದ ಬಿಜೆಪಿ ಸರ್ಕಾರಕ್ಕೆ ರೈತರು, ಬಡವರ ಬಗೆಗೆ ಕಾಳಜಿ ಇಲ್ಲ. ದೇಶದಲ್ಲಿ ಬ್ಯಾಂಕ್‌ಗಳ ಲೂಟಿ ನಡೆದಿದೆ. ಕೆಲವರು ಬ್ಯಾಂಕ್‌ಗಳಿಂದ ₹ 1.65 ಲಕ್ಷ ಕೋಟಿ ಸಾಲ ಪಡೆದು ದೇಶ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘ನೀರವ್ ಮೋದಿ, ವಿಜಯ ಮಲ್ಯ ಅಂಥವರು ಜನರ ದುಡ್ಡು ಕೊಳ್ಳೆ ಹೊಡೆದಿದ್ದಾರೆ. ಅವರ ಸಾಲ ಮನ್ನಾಕ್ಕೆ ಕುತಂತ್ರ ನಡೆಸಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾಕ್ಕೆ ಮುಂದಾಗುತ್ತಿಲ್ಲ’ ಎಂದು ಟೀಕಿಸಿದರು.

‘ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ನರೇಗಾ, ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆ, ಹೆಲ್ತ್ ಮಿಷನ್ ಮತ್ತಿತರ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿತ್ತು. ಬಿಜೆಪಿ ಆಡಳಿತದಲ್ಲಿ ದೇಶದ ವಾತಾವರಣ ಹದಗೆಡುತ್ತಿದೆ. ಮುಂದೆ ಕಷ್ಟದ ದಿನಗಳು ಎದುರಾಗಲಿವೆ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಸಂವಿಧಾನವನ್ನು ರಕ್ಷಿಸಿಕೊಂಡು ಹೋಗಬೇಕಿದೆ’ ಎಂದು ತಿಳಿಸಿದರು.

ನನಗೂ ಅವಕಾಶ ಬರಲಿದೆ: ಹಿಂದೆ ಈಶ್ವರ ಖಂಡ್ರೆ ಸಚಿವರಾಗಿದ್ದರು. ಈಗ ರಾಜಶೇಖರ ಪಾಟೀಲ ಸಚಿವರಾಗಿದ್ದಾರೆ. ಮುಂದೆ ರಹೀಂಖಾನ್, ಅವರ ನಂತರ ನನಗೂ ಸಚಿವ ಸ್ಥಾನದ ಅವಕಾಶ ಬರಬಹುದು. ಆಗ ನಮಗೂ ಸಹಕರಿಸಬೇಕು’ ಎಂದು ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಹೇಳಿದರು.

‘ನಾವು ಈಶ್ವರ ಖಂಡ್ರೆ ಅವರ ಜೊತೆಗೆ ಇದ್ದೇವೆ. ಸಚಿವ ರಾಜಶೇಖರ ಪಾಟೀಲ ಅವರಿಗೆ ಸಹಕಾರ ನೀಡಲಿದ್ದೇವೆ’ ಎಂದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್ ನೂತನ ಸದಸ್ಯ ಚಂದ್ರಶೇಖರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಶರಣಪ್ಪ ಮಟ್ಟೂರ, ಅರವಿಂದ ಅರಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮುಖಂಡರಾದ ಬಸವರಾಜ ಬುಳ್ಳಾ, ಚಂದ್ರಾಸಿಂಗ್, ಆನಂದ ದೇವಪ್ಪ, ದತ್ತಾತ್ರಿ ಎಚ್. ಮೂಲಗೆ, ಗುರಮ್ಮ ಸಿದ್ದಾರೆಡ್ಡಿ, ಪಂಡಿತರಾವ್ ಚಿದ್ರಿ ಮೊದಲಾದವರು ಇದ್ದರು.

ಅಭಿವೃದ್ಧಿಯೇ ನನ್ನ ಗುರಿ: ಪಾಟೀಲ

ಬೀದರ್‌: ‘ಹುಮನಾಬಾದ್‌ ಕ್ಷೇತ್ರದ ಜನ ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಹೈಕಮಾಂಡ್‌ ಕಳೆದ ಬಾರಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿತ್ತು. ಈಗ ಸಚಿವ ಸ್ಥಾನ ಕೊಟ್ಟಿದೆ. ಕಿರಿಯ ಸಹೋದರ ಎಂಎಲ್‌ಸಿ ಆಗುವ ಮೂಲಕ ತಂದೆಯವರ ಬಯಕೆಯೂ ಈಡೇರಿದೆ. ಈಗ ನನಗೇನೂ ಆಸೆ ಇಲ್ಲ. ಅಭಿವೃದ್ಧಿಯೇ ನನ್ನ ಗುರಿ...’

ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ನಗರದ ಗಣೇಶ ಮೈದಾನದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಗಣಿ ಮತ್ತು
ಭೂ ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದು ಹೀಗೆ.

‘ಹಿಂದೆ ಈಶ್ವರ ಖಂಡ್ರೆ ಎರಡು ವರ್ಷ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತು ಕೊಡಲಾಗುವುದು. ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಹಕಾರ ಸಚಿವ ಕಾಶೆಂಪುರ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು. ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ವ್ಯವಸ್ಥೆ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಬಸವರಾಜ ಜಾಬಶೆಟ್ಟಿ ಕಾಲ್ಗುಣ ಚೆನ್ನಾಗಿದೆ. ಅವರು ಜಿಲ್ಲಾ ಘಟಕದ ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರು ಆಯ್ಕೆಯಾಗಿದ್ದಾರೆ
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT