ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿನೀರಿನ ಭಾಗ್ಯ ಯಾವಾಗ?

ವಾರ್ಡ್‌ 4ರ 300 ಮನೆಗಳಿಗೆ ನಲ್ಲಿ ಸಂಪರ್ಕವಿದ್ದರೂ ಬಾರದ ನೀರು– ಜನರ ಆಕ್ರೋಶ
Last Updated 18 ಜೂನ್ 2018, 10:30 IST
ಅಕ್ಷರ ಗಾತ್ರ

ಚಾಮರಾಜನಗರ: ಪೈಪ್‌ಲೈನ್‌ ಎಳೆದು ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಮೀಟರ್‌ ಅನ್ನೂ ಅಳವಡಿಸಲಾಗಿದೆ. ಆದರೆ, ವರ್ಷದಿಂದ ನಲ್ಲಿಯಲ್ಲಿ ಒಂದೇ ಒಂದು ಹನಿ ನೀರು ಬಂದಿಲ್ಲ!  ಪಟ್ಟಣದ ನಗರಸಭೆ ವ್ಯಾಪ್ತಿಯ ಗಾಳಿಪುರದ ವಾರ್ಡ್‌ ನಂ 4ರಲ್ಲಿ ಟಿಪ್ಪು ಸಮುದಾಯ ಭವನದ ಹತ್ತಿರದಲ್ಲಿರುವ ಮನೆಗಳಲ್ಲಿನ ಸ್ಥಿತಿ ಇದು.

ನೀರು ಸರಬರಾಜಿಗೆ ಬೇಕಾದ ಮೂಲಸೌಕರ್ಯ ಇದ್ದರೂ, ವರ್ಷದಿಂದ ಈ ಪ್ರದೇಶಕ್ಕೆ ನಗರಸಭೆಯ ನಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲಿಗೆ ಸಮೀಪದ ಮತ್ತು ಸುತ್ತಮುತ್ತಲಿನ ಬೀದಿಗಳಿಗೆ ನೀರು ಸರಬರಾಜಾಗುತ್ತಿದ್ದರೂ, ಇಲ್ಲಿಯ ನಿವಾಸಿಗಳಿಗೆ ಸಿಹಿನೀರ ಭಾಗ್ಯ ಸಿಕ್ಕಿಲ್ಲ. ಕೊಳವೆಬಾವಿಯಿಂದ ಪೂರೈಕೆಯಾಗುವ ಗಡಸು ನೀರನ್ನೇ ಕುಡಿಯುವುದಕ್ಕೆ, ಅಡುಗೆ ಸೇರಿದಂತೆ ಎಲ್ಲದಕ್ಕೂ ಬಳಸಬೇಕಾದ ಅನಿವಾರ್ಯ ಇಲ್ಲಿನ ನಿವಾಸಿಗಳದ್ದು.

ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ನಗರಸಭೆ ಸ್ಥಳೀಯವಾಗಿ ಕೊರೆಸಿರುವ ಕೊಳವೆಬಾವಿ ನೀರನ್ನು ತೊಂಬೆಗೆ ಪೂರೈಕೆ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಒಂದು ದೊಡ್ಡ ಹಾಗೂ ಇನ್ನೆರಡು ಚಿಕ್ಕ ತೊಂಬೆಗಳಿವೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತು ನೀರು ಬಿಡಲಾಗುತ್ತಿದೆ. ಈ ಸಮಯದಲ್ಲಿ ನಿವಾಸಿಗಳು ಸರತಿ ಸಾಲಿನಲ್ಲಿ ನಿಂತು ಬಿಂದಿಗೆಯಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ.

ಆಕ್ರೋಶ: ಕುಡಿಯುವ ನೀರಿನ ಸಮಸ್ಯೆಯನ್ನು ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಮೇಲೆ ಇಲ್ಲಿನ ಜನರು ಅಸಮಾಧಾನ ಹೊರಹಾಕುತ್ತಾರೆ.

‘ಇಲ್ಲಿ ಎಲ್ಲರ ಮನೆಗೂ ನಲ್ಲಿ ಸಂಪರ್ಕ ಇದೆ. ಆದರೆ, ನೀರು ಬರುತ್ತಿಲ್ಲ. ಸಿಹಿನೀರು ಕುಡಿಯುವ ಭಾಗ್ಯ ನಮಗೆ ಇನ್ನೂ ಬಂದಿಲ್ಲ. ಅಧಿಕಾರಿಗಳು ಬರುತ್ತಾರೆ; ಪರಿಶೀಲನೆ ನಡೆಸಿ, ನೀರು ಬಿಡುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರಷ್ಟೇ. ಇನ್ನೂ ನೀರು ಬಿಟ್ಟಿಲ್ಲ’ ಎಂದು ಸ್ಥಳೀಯ ನಿವಾಸಿ ಶಬನಾ ಬೇಗಂ ಅಳಲು ತೋಡಿಕೊಂಡರು.

‘ನಮ್ಮ ಕೆಳಗಿನ ಬೀದಿಯವರಿಗೆ ಮತ್ತು ಪಕ್ಕದ ಹಳ್ಳಿಗೆ ನಲ್ಲಿ ನೀರು ಬರುತ್ತಿದೆ. ದುಡ್ಡುಕೊಟ್ಟು ಕುಡಿಯುವ ನೀರು ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಈಗ ತೊಂಬೆ ನಲ್ಲಿಯಲ್ಲಿ ಬಂದ ನೀರನ್ನು ನಿತ್ಯ ಬಳಸುತ್ತಿದ್ದೇವೆ’ ಎಂದು ಮತ್ತೊಬ್ಬ ಸ್ಥಳೀಯ ನಿವಾಸಿ ಅಮ್ಜದ್‌ ಹೇಳಿದರು.

ಸಿದ್ಧ ಪಡಿಸಿದ ಆಹಾರದ ಬಣ್ಣ ಬದಲು: ಈಗ ಲಭ್ಯವಿರುವ ನೀರಿನಲ್ಲೇ ಅಡುಗೆ ಮಾಡುತ್ತಿದ್ದೇವೆ. ಸವಳು ನೀರಾಗಿರುವುದರಿಂದ ಅನ್ನದ ಬಣ್ಣವೇ ಬೇರೆಯಾಗುತ್ತದೆ. ಯಾರು ಕೂಡ ಮನವಿಗೆ ಸ್ಪಂದಿಸುತ್ತಿಲ್ಲ. ನೀರು ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಲ್ಲಿಯಲ್ಲಿ ನೀರು ಬಂದಿಲ್ಲ. ಮನೆ ಮನೆಗೆ ನಲ್ಲಿ ಸಂಪರ್ಕ ಮಾಡಿ, ಮೀಟರ್‌ ಕೂಡ ಅಳವಡಿಸಲಾಗಿದೆ. ನಲ್ಲಿ ಮಾತ್ರ ಇದ್ದರೆ ಏನು ಪ್ರಯೋಜನ? ತೊಂಬೆ ಟ್ಯಾಂಕ್‌ ಇಲ್ಲದಿದ್ದರೆ, ನೀರಿಗಾಗಿ ನಾವು ಪಡಿಪಾಟಲು ಪಡಬೇಕಾಗುತ್ತಿತ್ತು’ ಎಂದು ಮತ್ತೊಬ್ಬ ಮಹಿಳೆ ಬೇಸರ ವ್ಯಕ್ತಪಡಿಸಿದರು.

‘ವಾಲ್ವ್‌ ಅಳವಡಿಕೆ ಬಾಕಿ’

‘ಇಲ್ಲಿನ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪೈಪ್‌ಲೈನ್‌ ಹಾಕಲಾಗಿದೆ. ಒಂದು ವಾಲ್ವ್‌ ಅಳವಡಿಸುವುದಕ್ಕೆ ಬಾಕಿ ಇದೆ. ಇದರಿಂದಾಗಿ ನೀರು ಪೂರೈಕೆ ವಿಳಂಬವಾಗುತ್ತಿದೆ’ ಎಂದು ವಾರ್ಡ್‌ ನಂ. 4 ಅನ್ನು ಪ್ರತಿನಿಧಿಸುತ್ತಿರುವ ನಗರಸಭೆ ಸದಸ್ಯ ಸಮೀವುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಅಲ್ಲಿನ ನಿವಾಸಿಗಳು ಕೊಳವೆಬಾವಿ ನೀರನ್ನು ಬಳಸುತ್ತಿದ್ದಾರೆ. ಅದು ಗಡಸು ನೀರಾಗಿರುವುದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ನಗರಸಭೆ ಅಧಿಕಾರಿಗಳ ಸಹಕಾರ ಸಿಗುತ್ತಿಲ್ಲ’ ಎಂದು ಅವರು ಹೇಳಿದರು.

ಪೈಪ್‌ಲೈನ್‌ ಕಾಮಗಾರಿ ಮಾಡಿದವರು ಒಂದೂವರೆ ತಿಂಗಳಲ್ಲಿ ವಾಲ್ವ್‌ ಅಳವಡಿಸಲು ಒಪ್ಪಿಕೊಂಡಿದ್ದಾರೆ. ಕರಿವರದರಾಜನ ಬೆಟ್ಟದಲ್ಲಿರುವ ಟ್ಯಾಂಕ್‌ನಿಂದ ಇಲ್ಲಿಗೆ ನೀರು ಪೂರೈಕೆಯಾಗಬಹುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT