ಅಣಿ ಅರದಲ ಸಿರಿ ಸಿಂಗಾರ

ಬೆಲೆ: ₹ 1000


ಲೇಖಕ : ಎಚ್. ಬಿ. ಎಲ್. ರಾವ್
ಪ್ರಕಾಶಕರು : ಸಾಹಿತ್ಯ ಬಳಗ, ವಾಶಿ, ಮುಂಬಯಿ.
ಪ್ರಕಟವಾದ ವರ್ಷ : .
ಪುಟ : .
ರೂ : ₹ 1000
ಅಣಿ ಅರದಲ ಸಿರಿ ಸಿಂಗಾರ
ಪ್ರಧಾನ ಸಂಪಾದಕ: ಎಚ್. ಬಿ. ಎಲ್. ರಾವ್
ಸಂಪಾದಕ: ಕೆ. ಎಲ್. ಕುಂಡಂತಾಯ
ಪ್ರ: ಸಾಹಿತ್ಯ ಬಳಗ, ವಾಶಿ, ಮುಂಬಯಿ. 
 
**
ಕರಾವಳಿ ಕರ್ನಾಟಕದಲ್ಲಿ, ಅದರಲ್ಲೂ ಮುಖ್ಯವಾಗಿ ತುಳುನಾಡಿನಲ್ಲಿ ಜನರು ಗುಡಿಗಳಲ್ಲಿ ಅಥವಾ ಮನೆಗಳಲ್ಲಿ ದೈವಗಳನ್ನು (ಸಾಮಾನ್ಯವಾಗಿ ಪಂಜುರ್ಳಿ, ರಕ್ತೇಶ್ವರಿ, ಜುಮಾದಿ, ಪಿಲ್ಚಂಡಿ, ಕೊಡಮಂತಾಯ, ಜಾರಂದಾಯ, ಮಂತ್ರದೇವತೆ, ಅಬ್ಬಗ ದಾರಗ, ಬ್ರಹ್ಮ ಬೈದರ್ಕಳು, ಬ್ರಹ್ಮ ಮುಗ್ಗೆರ್ಕಳು ಇತ್ಯಾದಿ 1435 ದೈವಗಳಲ್ಲಿ ಒಂದನ್ನು) ಸ್ಥಾಪಿಸಿ ಆರಾಧಿಸುತ್ತಾ ಬಂದಿದ್ದಾರೆ. ವೈದಿಕ ಪೂಜೆಯ ಇಲ್ಲಿನ ದೇವಸ್ಥಾನಗಳಲ್ಲಿಯೂ ದೈವಾರಾಧನೆ ಇದ್ದೇ ಇರುತ್ತದೆ. ತುಳುನಾಡಿನ ವೈದಿಕ ಬ್ರಾಹ್ಮಣರೂ ದೈವಾರಾಧಕರಾಗಿರುವುದು ಇನ್ನೊಂದು ವೈಶಿಷ್ಟ್ಯ. 
 
ದೈವಾರಾಧನೆಯ ಹಿನ್ನೆಲೆ ಮುನ್ನೆಲೆಗಳ ಕುರಿತಾಗಿಯೇ ಇಲ್ಲಿನ ಬಹುತೇಕ ಜಾನಪದ ಅಧ್ಯಯನ ಚಿಂತನೆಗಳು ನಡೆಯುತ್ತಿರುತ್ತವೆ. ದೈವನರ್ತಕರ ಉಗ್ರಭವ್ಯ ವೇಷಗಳನ್ನು ಕಂಡು ‘ಇದು ಸೈತಾನನ ಆರಾಧನೆ’ ಎಂದು ತಪ್ಪರ್ಥ ಮಾಡಿಕೊಂಡದ್ದರಿಂದ ಪಾಶ್ಚಾತ್ಯ ಮಿಶನರಿಗಳು ಇದನ್ನು ‘ಡೆವಿಲ್ ವರ್ಶಿಪ್’ ಎಂದು ಕರೆದು ದಾಖಲೀಕರಣ ಮಾಡಲು ಪ್ರಾರಂಭಿಸಿದ ಕಾಲದಲ್ಲಿ ದೈವಾರಾಧನೆಯ ಜಾನಪದ ಅಧ್ಯಯನಗಳು ಪ್ರಾರಂಭವಾದವು. ಸ್ಥಳೀಯ ವಿದ್ವಾಂಸರು ದಶಕಗಳ ಕಾಲ ದಾಖಲೀಕರಣ, ವರ್ಗೀಕರಣ, ಚಿಂತನ ಮಂಥನ ನಡೆಸಿದರೂ ಕೆಲವು ಕಡೆ ಪ್ರಾಥಮಿಕ ಹಂತದ ದಾಖಲೀಕರಣವೂ ಬಾಕಿಯಿರುವ ಈ ಕಾಲದಲ್ಲಿ ಕಾಲದ ಹೊಡೆತಕ್ಕೆ ಸಿಕ್ಕಿ ಮರೆಯಾಗುತ್ತಿರುವ ಆರಾಧನೆಯ ಒಂದಂಗವನ್ನು ದಾಖಲಿಸಿ ಕಾಪಿಡುವ ಒಂದು ಶ್ಲಾಘನೀಯ ಮತ್ತು ಅಗತ್ಯದ ಕಮ್ಮಟವೊಂದು ಉಡುಪಿಯಲ್ಲಿ ನಡೆದಿದೆ. ಮತ್ತು ಆ ನಿಮಿತ್ತವಾಗಿ ಸಿದ್ಧಗೊಂಡ ಅಮೂಲ್ಯ ಗ್ರಂಥವೊಂದು (ಆರ್ಟ್‌ಪೇಪರಿನಲ್ಲಿ ಮುದ್ರಣಗೊಂಡ ನೂರಾರು ಅಮೂಲ್ಯ ವರ್ಣಚಿತ್ರಗಳನ್ನೊಳಗೊಂಡ 400 ಪುಟಗಳ ಸಂಗ್ರಹಯೋಗ್ಯ ಗಂಥವಿದು) ಕೈಗೆಟಕುವ ಬೆಲೆಯಲ್ಲಿ ಅಧ್ಯಯನಕಾರರಿಗೆ ಮತ್ತು ಆಸಕ್ತರಿಗೆ ಲಭ್ಯವಾಗಿದೆ. ಅದು ಮುಂಬಯಿಯ ಸಾಹಿತ್ಯಕಾರ ಎಚ್.ಬಿ.ಎಲ್. ರಾಯರ ಪ್ರಧಾನ ಸಂಪಾದಕತ್ವದಲ್ಲಿ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರು ಸಿದ್ಧಪಡಿಸಿರುವ ‘ಅಣಿ ಅರದಲ ಸಿರಿ ಸಿಂಗಾರ’ ಎಂಬ ಗ್ರಂಥ. 
 
ದೈವಾರಾಧನೆಯನ್ನು ಪ್ರದರ್ಶನ ಕಲೆಯಾಗಿ ಅಥವಾ ಮನರಂಜನೆಗಾಗಿ ಬಳಸುವುದಕ್ಕೆ ತೀವ್ರ ವಿರೋಧವಿರುವ ಇಂದಿನ ಜಾಗೃತ ಕಾಲಘಟ್ಟದಲ್ಲಿ ಈ ದಾಖಲೀಕರಣ ಪ್ರಕ್ರಿಯೆಯನ್ನು ಹಮ್ಮಿಕೊಳ್ಳುವುದು ಸುಲಭವಾಗಿರಲಿಲ್ಲ. ಮುಂಬಯಿಯ ಭಗೀರಥ ಸಾಹಸಿ ಎಚ್.ಬಿ.ಎಲ್. ರಾವ್ ಅವರು ಉಡುಪಿಯ ‘ಆರ್.ಆರ್.ಸಿ.’ಯ ಸಹಕಾರದಿಂದ ಮತ್ತು ಕೆಲವು ಸ್ಥಳೀಯ ವಿದ್ವಾಂಸರ ಸಹಾಯದಿಂದ ಇದನ್ನು ಸಾಧಿಸಿದರು. ಈ ಕಮ್ಮಟದ ಕಷ್ಟ ಮತ್ತು ಮಹತ್ವ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ‘ದೈವಾರಾಧನೆಯ ಬಹುಮುಖಗಳು’ ಬರಹದಲ್ಲಿ ದಾಖಲಾಗಿರುವುದು ಹೀಗೆ: ‘‘ಕನ್ನಡ ಸಾಹಿತ್ಯ ಪರಿಷತ್ತು, ಬೊಂಬಾಯಿ ಘಟಕ ಮತ್ತು ಆರ್.ಆರ್.ಸಿ.ಯವರು ‘ಸಿರಿ ಸಿಂಗಾರ ಅಣಿ ಅರದಾಳ’ ಹೆಸರಿನಲ್ಲಿ ದೈವಕ್ಕೆ ಕಟ್ಟುವುದರಲ್ಲಿ ಪಂಬದ ಮತ್ತು ಪಾಣಾರ ಈ ಎರಡು ಪಂಗಡದವರನ್ನು ಬರಮಾಡಿಸಿ ಅವರಿಂದ ವೇಷಭೂಷಣ ಸಹಿತ ಮುಖವರ್ಣಿಕೆಯನ್ನು ತಿರಿಯಲ್ಲಿ (ತೆಂಗಿನಮರದ ಎಳೆಗರಿಗಳಲ್ಲಿ) ಅಣಿಗಳ ವೈವಿಧ್ಯ, ವೈಶಿಷ್ಟ್ಯ, ತಿರಿಯ ಮತ್ತಿತರ ಕೆಲಸಗಳನ್ನು ಮಾತ್ರ ದಾಖಲಿಸಿಕೊಳ್ಳುವ ಕೆಲಸ ನಡೆಸಿದರು. ಕೆಲಸದ ಭಾರ, ಹಣದ ಮೊತ್ತ, ಅವರನ್ನು ಕರೆತರುವ ಪ್ರಯಾಸ, ಕಾರ್ಯಕರ್ತರ ಮಿತಿ ಇವೆಲ್ಲವುಗಳಿಂದಾಗಿ ಈ ಎರಡು ಪಂಗಡಗಳ ಪ್ರಧಾನವಾದ ಎರಡು ಪ್ರಕಾರಗಳನ್ನು ಮಾತ್ರ ದಾಖಲಿಸಿಕೊಳ್ಳುವ ಸಾಹಸ ಮಾಡಿದರು. ಇಂತಹ ಶ್ಲಾಘ್ಯ ಕೆಲಸಕ್ಕೂ ಕೆಲವರಿಂದ ತಡೆ ಬಂತು. ಅರದಾಳ ಹಾಕಿಸಿಕೊಳ್ಳಲು ಬಂದ ಪಾಣಾರ ಪಂಬದರೂ ಹಿಂಜರಿದರು. ಅರದಾಳ ಹಾಕಿಕೊಳ್ಳುವುದು (ದೈವಾರಾಧನೆ ಹೊರತು ಬೇರೆ ಸಂದರ್ಭದಲ್ಲಿ) ದೈವಕ್ಕೆ ದ್ರೋಹ ಬಗೆದಂತೆ, ಕಟ್ಟುವವರಿಗೆ ಅಪಮಾನ ಮಾಡಿದಂತೆ ಎಂದು ಬೆದರಿಕೆ ಬಂದಾಗ ಬಂದಿದ್ದ ಪಂಬದ ಪಾಣಾರರು ಹೆದರಿದರು. ಆಗ ಕೆಲವು ಡಾಕ್ಟರರು, ಬ್ಯಾಂಕು ಉದ್ಯೋಗಿಗಳು, ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಮುಖವನ್ನು ಮುಂದೊಡ್ಡಿ ನಿಮ್ಮ ಮುಖಕ್ಕೆ ಅರದಾಳ ಹಾಕುವುದು ಅಪಮಾನವಾದರೆ ನಮ್ಮ ಮುಖಕ್ಕೆ ಅರದಾಳ ಹಾಕಿ ಎಂದರು. ಮುಖ ಬದಲಾದರೂ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ದಾಖಲಾತಿ ಕೆಲಸ ಪರಿಪೂರ್ಣಗೊಂಡಿತು’’.    
 
ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ, ಡಾ. ಯು.ಪಿ. ಉಪಾಧ್ಯಾಯ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪ್ರೊ. ಹೆರಂಜೆ ಕೃಷ್ಣ ಭಟ್, ಡಾ. ಅಶೋಕ ಆಳ್ವ, ಡಾ. ವೈ.ಎನ್. ಶೆಟ್ಟಿ ಮುಂತಾದವರು ಮಾತುಗಳು–ಬರಹಗಳು ಈ ಗ್ರಂಥದಲ್ಲಿವೆ.
 
ಕಮ್ಮಟದ ಕಲಾತ್ಮಕ ವರ್ಣಚಿತ್ರಗಳ ಜತೆಗೆ ಪೂರ್ಣವಾಗಿ ಅಲಂಕೃತ ದೈವಗಳ ನೂರಾರು ವರ್ಣಚಿತ್ರಗಳು ಈ ಗ್ರಂಥದಲ್ಲಿ ಸೇರಿವೆ. ಅವುಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಣೆಯಿದೆ. ಚಿತ್ರಗಳನ್ನು ಕೂಡಾ ಬಣ್ಣಗಾರಿಕೆ ಹಾಗೂ ವೇಷಭೂಷಣಗಳನ್ನು ತೊಟ್ಟು ಸಿದ್ಧವಾಗುವ ಹಂತಕ್ಕನುಸಾರವಾಗಿ, ಅಣಿ, ಅರದಲ, ಪದ್ದೆಯಿ, ಸಿರಿ ಸಿಂಗಾರ, ಕಟಿ ಬಯಿರೂಪ – ಎಂಬ ವಿಭಾಗಗಳಲ್ಲಿ ವಿಂಗಡಿಸಿ ನೀಡಿದ್ದಾರೆ. ‘ಅಣಿ’ ಅನ್ನುವುದು ದೈವ ವೇಷಧಾರಿಗೆ ವೈಭವವನ್ನು ಕೊಡುವ ರಚನೆ. ಅದರ ಸಿದ್ಧತೆಗೆ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ‘ಅರದಲ’ ಎನ್ನುವುದು ದೈವನರ್ತಕರು ಮುಖಕ್ಕೆ ಹಚ್ಚಿಕೊಳ್ಳುವ ಮುಖ್ಯವಾದ ಹಳದಿ ಬಣ್ಣ; ಮೊದಲು ಪ್ರಾಕೃತಿಕ ಬಣ್ಣವನ್ನು ಬಳಸುತ್ತಿದ್ದು ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಬಣ್ಣಗಳನ್ನೇ ಬಳಸಿಕೊಳ್ಳುತ್ತಾರೆ. ‘ಪದ್ದೆಯಿ’ ಅಂದರೆ ಆಭರಣ. ‘ಸಿರಿ ಸಿಂಗಾರ’ ಅಥವಾ ತೆಂಗಿನ ಸಿರಿಗಳಿಂದ ಮಾಡಿಕೊಳ್ಳುವ ಶೃಂಗಾರ (ಅಲಂಕಾರ) ಮುಂದಿನ ಭಾಗ. ಕೊನೆಯದಾಗಿ ‘ಕಟಿ ಬಯಿರೂಪ’ (ಕಟ್ಟಿರುವ ಬಹಿರೂಪ) ಹೇಗಿರುತ್ತದೆ ಎನ್ನುವುದನ್ನು ವೈವಿಧ್ಯಮಯ ಉದಾಹರಣೆಗಳೊಂದಿಗೆ ತೋರಿಸಲಾಗಿದೆ. ಈ ಭಾಗದಲ್ಲಿ ಸಹಜ ಸನ್ನಿವೇಶಗಳಿಂದ ಆರಿಸಿದ ಚಿತ್ರಗಳನ್ನು ಬಳಸಿರುವ ಕಾರಣ ಓದುಗರಿಗೆ ದೈವಾರಾಧನೆಯ ಬಣ್ಣಗಾರಿಕೆ ಮತ್ತು ವೇಷಗಾರಿಕೆಯ ಕಲಾವಂತಿಕೆಯ ವೈಭವದ ಪೂರ್ಣ ಸ್ವರೂಪದ ಅರಿವಾಗುತ್ತದೆ.
 
ಕಮ್ಮಟದ ಸಮೀಕ್ಷೆ, ಕಲಾವಿದರೊಂದಿಗೆ ಸಂದರ್ಶನ ಇತ್ಯಾದಿ ದಾಖಲೀಕರಣದ ಜತೆಗೆ 25 ಸಂಪಾದಿತ ಲೇಖನಗಳು (ಒಂದು ಇಂಗ್ಲಿಷಿನಲ್ಲಿದೆ) ದೈವಾರಾಧನೆಯ ವಿವಿಧ ಆಯಾಮಗಳನ್ನು ಪರಿಚಯಿಸಿ ಚರ್ಚಿಸಿರುವ ಕಾರಣ, ಈ ಕ್ಷೇತ್ರದ ಪ್ರಾಥಮಿಕ ಜ್ಞಾನ ಇಲ್ಲದವರೂ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುವ ಹಾಗೆ ಗ್ರಂಥವನ್ನು ಸಂಪಾದಕರಾದ ಕೆ.ಎಲ್. ಕುಂಡಂತಾಯರು ಸಂಯೋಜಿಸಿದ್ದಾರೆ. ಪರಿಚಯಾತ್ಮಕವೂ, ವಿಶ್ಲೇಷಣಾತ್ಮಕವೂ ಆಗಿರುವ ‘ನಡುವಣ ಲೋಕದ ನಡೆಯಲ್ಲಿ’ ಎಂಬ ಅವರ ಪ್ರಸ್ತಾವನೆಯೂ ಬಹಳ ಮುಖ್ಯವಾಗಿದೆ. ಈ ಪುಸ್ತಕದಲ್ಲಿ  ಬನ್ನಂಜೆ ಗೋವಿಂದಾಚಾರ್ಯ, ಡಾ. ಅಮೃತ ಸೋಮೇಶ್ವರ, ಡಾ. ಬಿ. ಜನಾರ್ದನ ಭಟ್, ಡಾ. ಲಕ್ಷ್ಮೀ ಪ್ರಸಾದ್, ವೆಂಕಟರಾಜ ಪುಣಿಂಚಿತ್ತಾಯ, ಬಾಬು ಶಿವ ಪೂಜಾರಿ, ಸುಶೀಲಾ ಉಪಾಧ್ಯಾಯ, ಕೇಂಜ ಶ್ರೀಧರ ತಂತ್ರಿ, ಕುಮಾರ ಗುರು ತಂತ್ರಿ, ಕಮಲಾದೇವಿಪ್ರಸಾದ ಆಸ್ರಣ್ಣ, ಗುಂಡಿಬೈಲು ಸುಬ್ರಹ್ಮಣ್ಯ ತಂತ್ರಿ ಮತ್ತು ಮಟಪಾಡಿ ಕುಮಾರಸ್ವಾಮಿ ಇವರ ಬರಹಗಳಿವೆ. 
 
ಜಾನಪದ ಅಧ್ಯಯನಕಾರರಿಗೆ ಮತ್ತು ಜಿಜ್ಞಾಸುಗಳಿಗೆ ಕಮ್ಮಟದ ಚಿತ್ರಗಳು ಮತ್ತು ಸಂಪಾದಕರು ದಾಖಲಿಸಿ ನೀಡಿರುವ ಪಾರಿಭಾಷಿಕ ಪದಗಳು ಬಹಳ ಉಪಯುಕ್ತವಾಗಿವೆ. ಸಂಪಾದಕರಾದ ಕುಂಡಂತಾಯರು ದೈವನರ್ತಕರನ್ನು ಸಂದರ್ಶಿಸಿದಾಗ ಅವರ ವಿಚಾರಗಳನ್ನಲ್ಲದೆ, ಅವರು ಬಳಸಿದ ಪಾರಿಭಾಷಿಕ ಪದಗಳನ್ನು ಒಂದು ಸಂಕ್ಷಿಪ್ತ ಪದಕೋಶವಾಗಿ ದಾಖಲಿಸಿದ್ದಾರೆ. ಇವುಗಳಲ್ಲಿ ಹಲವು ಶಬ್ದಗಳು ಇದುವರೆಗೆ ಜಾನಪದ ಅಧ್ಯಯನಕಾರರಿಗೆ ಲಭಿಸದ ಶಬ್ದಗಳಾಗಿವೆ. 
 
ಈ ದಾಖಲೀಕರಣ ಮತ್ತು ಅದರ ಫಲಸ್ವರೂಪವಾದ ಈ ಗ್ರಂಥ – ಇವುಗಳ ಮಹತ್ವ ಕಾಲ ಸರಿದಂತೆ ಹೆಚ್ಚಿನದಾಗಿ ಕಾಣುವುದೇ ಹೊರತು ಕಡಿಮೆಯಾಗಲಾರದು.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.