ಮೂರು ಸಂಜಿ ಮುಂದ ಧಾರವಾಡ (ಲಲಿತ ಪ್ರಬಂಧಗಳು)

ಮೂರು ಸಂಜಿ ಮುಂದ ಧಾರವಾಡ (ಲಲಿತ ಪ್ರಬಂಧಗಳು)


ಲೇಖಕ : ಮಲ್ಲಿಕಾರ್ಜುನ ಹಿರೇಮಠ
ಪ್ರಕಾಶಕರು : ಅಂಕಿತ ಪುಸ್ತಕ, ನಂ. 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್‌, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂ– 04
ಪ್ರಕಟವಾದ ವರ್ಷ : .
ಪುಟ : 112
ರೂ : ₹ 95
ಕಥೆಗಾರರಾಗಿ, ಕಾದಂಬರಿಕಾರರಾಗಿ ಉತ್ತರ ಕರ್ನಾಟಕದ ಜನಜೀವನವನ್ನು ಪರಿಶೋಧಿಸುವ ಮಲ್ಲಿಕಾರ್ಜುನ ಹಿರೇಮಠ ಅವರ ಮೊದಲ ಲಲಿತ ಪ್ರಬಂಧ ಸಂಕಲನ ‘ಮೂರು ಸಂಜೆ ಮುಂದ ಧಾರವಾಡ’. ಈ ಪ್ರಬಂಧಗಳನ್ನು ತಮ್ಮ ಉಳಿದ ಸಾಹಿತ್ಯಕೃಷಿಯಿಂದ ಪ್ರತ್ಯೇಕಿಸಿ ನೋಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳು ಅಭಿವ್ಯಕ್ತಿಯ ಮಾಧ್ಯಮವಾದಾಗ ಅವುಗಳಲ್ಲಿ ಸಾವಯವ ಸಂಬಂಧವಿರುವುದು ಸಹಜ. ಕಾರಣ ಅವರ ಕಥೆ–ಕಾದಂಬರಿಗಳ ಒಂದು (ಉಪ)ಲಬ್ಧಿಯಾಗಿ ಈ ಪ್ರಬಂಧಗಳನ್ನು ನೋಡಬಹುದು. 
 
ಸಾಹಿತ್ಯ ಪ್ರಕಾರವಾಗಿ ಲಲಿತ ಪ್ರಬಂಧಕ್ಕೆ ಅನನ್ಯತೆಯಿದ್ದು, ಇದು ವಿಶೇಷ ಪ್ರತಿಭೆಯನ್ನು ಬೇಡುವಂಥದು. ಸಾಮಾನ್ಯವಾಗಿ, ಲೇಖಕ ಕಂಡ ಒಂದು ಮಾಮೂಲಿ ಘಟನೆಯ/ ಅನುಭವದ ನಿರೂಪಣೆಯೇ ಲಲಿತ ಪ್ರಬಂಧದ ವಸ್ತು. ಈ ಖಾಸಗಿ ಸಂಗತಿಯನ್ನು ಹೊರ ಜಗತ್ತಿನೊಂದಿಗೆ ಜೋಡಿಸಿದಾಗ ಅದಕ್ಕೊಂದು ವಿಶಿಷ್ಟ ಅರ್ಥಸಾಧ್ಯತೆ ತೆರೆದುಕೊಳ್ಳುತ್ತದೆ.

ಇದು ತನಗಷ್ಟೇ ಮಹತ್ವದ್ದಲ್ಲ, ಇದರಿಂದ ಸಮಾಜ ಕೂಡ ಕಲಿಯಬೇಕಾದದ್ದಿದೆ ಎಂಬ ಲೇಖಕರ ಅರಿವಿನಲ್ಲಿ ಪ್ರಬಂಧ ರೂಪುಗೊಳ್ಳುತ್ತದೆ. ವೈಯಕ್ತಿಕ ಅನುಭವವೊಂದು ಸಾರ್ವತ್ರಿಕಗೊಳ್ಳುವ ರೀತಿ ಇದು. ಆದ್ದರಿಂದ ‘ನನ್ನ ಅನುಭವ ಹೀಗೆ, ನೀವು ಸಹ ಇದನ್ನು ಪರ್ಯಾಲೋಚಿಸಿ ನೋಡಿ’ ಎಂಬಂಥ ಮಿತ್ರಸಂಹಿತೆಯ ಶೈಲಿ ಪ್ರಬಂಧಕ್ಕೆ ಅನಿವಾರ್ಯ. ಪ್ರಬಂಧದ ಪಯಣ ವ್ಯಷ್ಟಿಯಿಂದ ಸಮಷ್ಟಿಯೆಡೆಗೆ. ಯಾವುದೇ ವಿಚಾರವನ್ನು ಹೇರುವ ಹಟವಾಗಲೀ, ಅದನ್ನು ಸಾಧಿಸಿ ತೋರಿಸುವ ಧಾವಂತವಾಗಲೀ ಅಲ್ಲಿರದು. ಹಿರೇಮಠರ ಎಲ್ಲ ಪ್ರಬಂಧಗಳಲ್ಲಿ ಈ ವಿವೇಚನೆ ಢಾಳಾಗಿ ಗೋಚರಿಸುತ್ತದೆ.
 
ಪ್ರಸ್ತುತ ಸಂಕಲನದ ಪ್ರಬಂಧಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯ ಗುಂಪಿನಲ್ಲಿ – ‘ತಡವಾಯಿತೇ?(!)’, ‘ಹೋಗಲಿಬಿಡ್ರಿ’, ‘ಹಿಂದಿನ ಸಾಲಿನವರು’, ‘ಮೊಬೈಲಾಯಣ’ದಂಥ ಪ್ರಬಂಧಗಳಿವೆ. ಇಲ್ಲಿ ಒಂದು ಸ್ವೀಕೃತ/ ರೂಢಿಗತ ಸಂಗತಿಗೆ ಅವರು ತಮ್ಮದೇ ಪರ್ಯಾಯವೊಂದನ್ನು ಮಂಡಿಸುತ್ತಾರೆ.

ಅವರು ಪ್ರತಿಪಾದಿಸುವ ‘ಆದರ್ಶ’ದಲ್ಲಿ ಕಾನೂನು, ಕಾರ್ಯಸಾಧುತ್ವ, ಶಿಸ್ತು–ಶಿಷ್ಟಾಚಾರಗಳನ್ನು ಮೀರಿದ ಅವರದೇ ಆದ ಒಂದು ತರ್ಕವಿದೆ. ಈ ಪ್ರಬಂಧಗಳು ಹೆಚ್ಚು ವೈಚಾರಿಕವಾಗಿವೆ, ಆತ್ಮಾವಲೋಕನಕ್ಕೂ ಪ್ರೇರೇಪಿಸುವಂತಿವೆ. ಎರಡನೆಯ ಗುಂಪಿನ – ‘ಮೂರು ಸಂಜಿ ಮುಂದ ಧಾರವಾಡ’, ‘ಮೊಮ್ಮಕ್ಕಳ ಸಂಗಡ’, ‘ಸರ್ಪಹುಣ್ಣು’, ‘ಪ್ರೀತಿಯಂಥ ವಸ್ತು ಭವದಲ್ಲಿ ಕಾಣೆ’ಯಂಥ ಪ್ರಬಂಧಗಳು ಭಾವಪ್ರಧಾನವಾಗಿವೆ. 
 
‘ತಡವಾಯಿತೇ?(!)’ ಪ್ರಬಂಧವನ್ನು ನೋಡಿ: ಇದು ಸಮಯ ಪ್ರಜ್ಞೆಯನ್ನು ನಿರಾಕರಿಸದೆ ಅತಿಯಾದ ಕಾಲನಿಷ್ಠೆಯ ಸೋಗನ್ನು ಅನಾವರಣಗೊಳಿಸುತ್ತದೆ. ಆಫೀಸಿನ ಕ್ಯಾಂಟೀನಿನಲ್ಲಿ ಸಮಯ ಕಳೆದು, ಸರಿಯಾಗಿ ಐದು ಗಂಟೆಗೆ ಕಚೇರಿ ಬಿಡುವ ಜನರಿಗಿಂತ, ಎಲ್ಲೋ ಅಪರೂಪಕ್ಕೆ ತಡಮಾಡಿ ಬಂದು ಸರಿಯಾಗಿ ಕೆಲಸ ಮಾಡುವವ ಸಾವಿರ ಪಾಲು ಶ್ರೇಷ್ಠ.

ಅತಿ ಸಮಯ ನಿಷ್ಠೆಯ ಜನರ ಬದುಕು ಯಾಂತ್ರಿಕ, ಅವರು ಬದುಕಿನ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ‘ಯಂತ್ರಿಕ ಶಿಸ್ತಿಗೆ, ಕಾಲಬಧ್ಧತೆಗೆ ಒಂದೇ ಗುರಿ. ಆದರೆ ತಡಕ್ಕೆ ವೈವಿಧ್ಯತೆಯ ರಂಗುರಂಗಿನ ಚಿತ್ತಾರಗಳಿವೆ’ ಎಂದೆಲ್ಲ ಹೇಳುವ ಲೇಖಕರು ರಂಗುರಂಗಿನ ಮಾತಿನಿಂದಲೇ ನಮ್ಮ ಕಾಲನಿಷ್ಠೆಯನ್ನು ನಾವೇ ಪುನರ್ಪರಿಶೀಲಿಸಿಕೊಳ್ಳಲು ಒತ್ತಾಯಿಸುತ್ತಾರೆ.
 
‘ಹಿಂದಿನ ಸಾಲಿನವರು’ ಪ್ರಬಂಧ ಕೂಡ ಇಂಥದೇ ಎರಕದಲ್ಲಿ ಟಂಕಿಸಿದ್ದು. ಶಾಲೆ–ಕಾಲೇಜುಗಳಲ್ಲಿ ಹಿಂದೆ ಕೂರುವವರನ್ನು ದಡ್ಡ ಶಿಖಾಮಣಿ ಅಂತ ಪಟ್ಟಗಟ್ಟುವುದು ವಾಡಿಕೆ. ಆದರೆ ಲೇಖಕರು ಹಿಂದೆ ಕೂರುವುದನ್ನೇ ಒಂದು ಗುಣವಾಗಿ ಬಿಂಬಿಸುತ್ತಾರೆ. ಸಭೆ–ಸಮಾರಂಭಗಳಲ್ಲಂತೂ ಹಿಂದೆ ಕುಳಿತವರಿಗಿರುವ ಸ್ವಾತಂತ್ರ್ಯ ಮುಂದೆ ಕುಳಿತವರಿಗಿಲ್ಲ. ಕೊನೆಯಲ್ಲಿ ಪ್ರಬಂಧ ಗಹನವಾಗುತ್ತದೆ.

ಹಿಂದಿನ ಬೆಂಚಿಗೆ ಒಂದು ತಾತ್ವಿಕ ಆಯಾಮವನ್ನು ಕೊಡಲೂ ಪ್ರಬಂಧಕಾರರು ಪ್ರಯತ್ನಿಸುತ್ತಾರೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿಯ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ’ ಎಂಬ ಮಾತು ನೆನೆದಾಗಲಂತೂ ಇದು ಕೇವಲ ಹಿಂದೆ–ಮುಂದೆ ಕುಳಿತುಕೊಳ್ಳುವ ಪ್ರಶ್ನೆಯಾಗುಳಿಯದೆ ಸಾಮಾಜಿಕ/ವರ್ಗೀಯ ಸಮಾನತೆಯ ಪ್ರಶ್ನೆಯಾಗಿ ವೈಚಾರಿಕ ಆಯಾಮ ಪಡೆಯುತ್ತದೆ.
 
ಮೊದಲೇ ಹೇಳಿದಂತೆ, ಇಲ್ಲೆಲ್ಲ ಒಂದು ತರ್ಕವಿದೆ. ಆದರೆ ಅದು ತೀರ ವೈಯಕ್ತಿಕ, ಸೈದ್ಧಾಂತಿಕವಲ್ಲ. ಇದನ್ನು ನಾವು ಒಪ್ಪಬಹುದು, ಬಿಡಬಹುದು. ಯಾಂತ್ರಿಕನಾಗದೆ ಸಮಯ ನಿಷ್ಠೆ ಪಾಲಿಸುವುದು ಅಸಾಧ್ಯವೇ? ಮುಂದಿನ ಸಾಲಿಗೆ ಸಹ ಲಾಭಗಳುಂಟಲ್ಲ? ಇತ್ಯಾದಿ ಪ್ರಶ್ನೆಗಳನ್ನು ಲೇಖಕರು ಉತ್ತರಿಸಬೇಕಿಲ್ಲ. ಇದೇ ಲಲಿತ ಪ್ರಬಂಧ ನೀಡುವ ಸ್ವಾಯತ್ತತೆ.
 
ಎರಡನೆಯ ಗುಂಪಿನಲ್ಲಿಯ ಪ್ರಬಂಧಗಳಲ್ಲಿ ಮಾನವೀಯ ಸಂಬಂಧದ ಶೋಧವಿದ್ದು, ಅವು ಭಾವಸ್ಪರ್ಶಿಯಾಗಿವೆ. ಉದಾಹರಣೆಗೆ, ಈ ಸಂಗ್ರಹದ ಎರಡು ಉತ್ತಮ ಪ್ರಬಂಧಗಳಾದ ‘ಮೊಮ್ಮಕ್ಕಳ ಸಂಗಡ’ ಮತ್ತೂ ‘ಸರ್ಪಹುಣ್ಣು’ಗಳನ್ನು ನೋಡಬಹುದು.
 
ಈ ಪ್ರಬಂಧಗಳಲ್ಲಿ ಲೇಖಕರ ಭಾವನೆ ಬಯಲ ತೊರೆಯಂತೆ ನಿಧಾನ ಹರಿದು ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ ಒಂದು ಅನುಭೂತಿಯನ್ನು ಉಂಟುಮಾಡುತ್ತದೆ. ಮೊಮ್ಮಕ್ಕಳ ಬಗ್ಗೆ ಅಜ–ಅಜ್ಜಿಯರ ಪ್ರೀತಿ–ಅಕ್ಕರೆಗಿಂತ ಹೆಚ್ಚಾಗಿ ಅವರ ಬಗೆಗಿನ ಕೃತಜ್ಞತಾಭಾವವೇ ‘ಮೊಮ್ಮಕ್ಕಳ ಸಂಗಡ’ ಪ್ರಬಂಧದುದ್ದಕ್ಕೂ ಕಾಣುವುದೊಂದು ವಿಶೇಷ.
 
ಮಕ್ಕಳು ತಮ್ಮ ಮುಗ್ಧತೆಯ ಮಂತ್ರದಂಡದಿಂದ ಮನೆಯನ್ನು ಪ್ರಾಸ್ಪೆರೊನ ದ್ವೀಪವಾಗಿಸುವುದು, ತಾಳ್ಮೆಯನ್ನು ಪರೀಕ್ಷಿಸುತ್ತಲೇ ಸಹನೆ–ಪ್ರೀತಿ–ಮಂದಹಾಸ–ಕುತೂಹಲದ ಪಾಠವನ್ನು ಕಲಿಸುವುದು, ವೃದ್ಧಾಪ್ಯವನ್ನು ಶಾಪವಾಗದಂತೆ ತಡೆಯುವುದು ಇತ್ಯಾದಿಗಳನ್ನು ಅತ್ಯಂತ ನಿರುದ್ವಿಗ್ನವಾಗಿ ಲೇಖಕರು ಇಲ್ಲಿ ಹೇಳಿದ್ದಾರೆ. ಪ್ರಬಂಧದ ಕೊನೆಯಲ್ಲಿ ಒಂದು ರೀತಿಯ ಪಾಪಪ್ರಜ್ಞೆಯ ನೋವು ಇದ್ದಂತಿದೆ.

ಒಂದು ವಿಚ್ಛಿದ್ರಕಾರಿ ಪ್ರಪಂಚವನ್ನು ಮೊಮ್ಮಕ್ಕಳಿಗೆ ಬಿಟ್ಟು ಹೋಗುತ್ತಿರುವ ಆತಂಕ, ಬದುಕಿನ ಸಂಜೆಯಲ್ಲಿ ಮಮತೆಯ ಮುಗ್ಧ ಸಸಿಗಳನ್ನು ತಮ್ಮ ಆವರಣದಲ್ಲಿ ಬೆಳೆಸುವ ಕಾತರ ಮತ್ತು ಮಕ್ಕಳ ಬಾಳಿನಲ್ಲಿ ಕರುಣೆಯ ಮಳೆ ಸುರಿಯಲೆಂಬ ಹಾರೈಕೆಗಳೊಂದಿಗೆ ಪ್ರಬಂಧ ಮುಗಿಯುತ್ತದೆ. ಕೌಟುಂಬಿಕ ನಂಟು ಮತ್ತು ಆದರ್ಶಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಇಂಥ ಹೃದಯದಳಲು ನಮ್ಮಲ್ಲಿ ಉಂಟುಮಾಡುವ ತಲ್ಲಣಗಳು ಪ್ರಬಂಧದ ಯಶಸ್ಸಿಗೆ ಸಾಕ್ಷಿಯಾಗಿವೆ.
 
‘ಸರ್ಪಹುಣ್ಣು’ನಲ್ಲಿ ಈ ಕಾಯಿಲೆಯ, ಶಾರೀರಿಕ ಮಾತ್ರವಲ್ಲ – ಮಾನಸಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನೂ ಲೇಖಕರು ಗುರುತಿಸುತ್ತಾರೆ. ಇದು ಪ್ರತ್ಯೇಕತೆಗೆ, ಅಸ್ಪೃಶ್ಯತೆಗೆ, ಸರಳತೆಗೆ, ಮುಗ್ಧ ವಿನೀತಭಾವಕ್ಕೂ, ಬದುಕಿನ ಕಟು ವಾಸ್ತವದ ದರ್ಶನಕ್ಕೂ ಕಾರಣವಾಗುತ್ತದೆ ಎನ್ನುತ್ತಾರೆ. ಒಂದು ಸಾಮಾನ್ಯ ವಸ್ತುವಿನ ಎಲ್ಲ ಮಗ್ಗಲುಗಳನ್ನು ವಿವಿಧ ಕೋನಗಳಿಂದ ವೀಕ್ಷಿಸಿ ಅದನ್ನು ಸ್ವಯಂಪೂರ್ಣ ಶಿಲ್ಪವಾಗಿಸುವ ಹಿರೇಮಠರ ಕುಸುರು ಕೆಲಸ ಇಲ್ಲಿ ಕಾಣುತ್ತದೆ.
 
‘ಮೂರು ಸಂಜಿ ಮುಂದ ಧಾರವಾಡ’, ಲೇಖಕರು ತಮ್ಮ ಬದುಕಿನ ಮೂರು ಸಂಜೆಯಲ್ಲಿ ಕಾಣುತ್ತಿರುವ ಧಾರವಾಡ, ಮತ್ತೂ ಬಾಲ್ಯದಲ್ಲಿ ಕಂಡಿದ್ದ ಧಾರವಾಡಗಳ ಮಧ್ಯೆ ಜೀಕುತ್ತ ಸಾಗುತ್ತದೆ. ‘ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ’ ಪ್ರಬಂಧದಲ್ಲಿ ಪ್ರೀತಿ ಕುರಿತ ಮೀಮಾಂಸೆಯಿದೆ.

ಈ ಎರಡೂ ಪ್ರಬಂಧಗಳು ಓರಣವಾಗಿವೆ. ಆದರೆ, ಲೇಖಕರ ಪ್ರತಿಭೆಯ ಬೀಸು ಇಲ್ಲಿ ಅಷ್ಟಾಗಿ ಕಾಣದು. ಇಡೀ ಪ್ರಯತ್ನ ಒಳಾಂಗಣದ ಯುಕ್ತಿಯ ಕ್ರೀಡೆಯಂತೆ ಕಾಣುತ್ತದೆ. ಕ್ಲೀಷೆಯಾದ ಮಾತುಗಳಿಗೆ ಕಾಳಿದಾಸ, ಶೇಕ್‌ಸ್ಪಿಯರ್‌, ಬೇಂದ್ರೆ ಮುಂತಾದವರ ಗಿಲೀಟು ಕೂಡ ಹೊಸ ಹೊಳಪು ನೀಡಲಾರವೆಂಬುದನ್ನು ‘ಪ್ರೀತಿಯಂಥ ವಸ್ತು...’ ತೋರಿಸುತ್ತದೆ. ಮುಖ್ಯವಾಹಿನಿಯ ಲೇಖಕರ ಅನುಪಸ್ಥಿತಿಯಿಂದಾಗಿ ಸೊರಗಿರುವ ಲಲಿತ ಪ್ರಬಂಧ ಪ್ರಕಾರಕ್ಕೆ ಈ ಕೃತಿ ಒಂದು ಆಶಾದಾಯಕ ಸೇರ್ಪಡೆ ಎನ್ನಬಹುದು.
 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.