ನೆತ್ತರಲಿ ನೆಂದ ಚಂದ್ರ(ಅರಬ್ ಮಹಿಳಾ ಕಾವ್ಯಲೋಕ)

ನೆತ್ತರಲಿ ನೆಂದ ಚಂದ್ರ(ಅರಬ್ ಮಹಿಳಾ ಕಾವ್ಯಲೋಕ)


ಲೇಖಕ : ಎಂ.ಆರ್‌. ಕಮಲಾ
ಪ್ರಕಾಶಕರು : ಕಥನ ಪ್ರಕಾಶನ, ನಂ.15, 7ನೇ ಬಿ ಅಡ್ಡರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-72
ಪ್ರಕಟವಾದ ವರ್ಷ : 2016
ಪುಟ : .
ರೂ : ₹ 175
ಯಾವುದೇ ಕಾಲದ ಯಾವುದೇ ಭಾಷೆಯ ಅಪ್ಪಟ ಕಾವ್ಯವನ್ನು ಓದಿದಾಗಲೂ ಪುನರ್‌ ದರ್ಶನವಾಗುವ ಸತ್ಯವೆಂದರೆ ಕಾವ್ಯದೊಂದಿಗೆ ನಾವು ಹೆಣೆದುಕೊಂಡಿರುವ ಜೀವಾತ್ಮ ಸಂಬಂಧ. ಅದು ಹೇಗೆ ಕಾವ್ಯ ಮನುಷ್ಯಾಭಿವ್ಯಕ್ತಿಯ ಅಂತಿಮ ಸ್ಥಿತಿಯನ್ನು ತಲುಪಿಬಿಟ್ಟಿದೆ ಎನ್ನುವ ಬೆರಗನ್ನು ಹುಟ್ಟಿಸುವಲ್ಲಿ ಕಾವ್ಯ ಸೋತಿದ್ದೇ ಇಲ್ಲ.
 
ಅದೆಂಥ ಇಕ್ಕಟ್ಟು ಬಿಕ್ಕಟ್ಟುಗಳೇ ಇರಲಿ, ಉಸಿರುಗಟ್ಟಿಸುವ ಸಂದರ್ಭಗಳೇ ಇರಲಿ, ಕಾವ್ಯ ಮನುಷ್ಯರಿಗೆ ಉಸಿರಾಗಿ, ಜೀವದ್ರವ್ಯವಾಗಿ ಒದಗಿ ಬರುವುದನ್ನು ನೋಡುತ್ತಿದ್ದರೆ, ನಾವು ಕಾವ್ಯಕ್ಕೆ ಅದೆಷ್ಟು ಋಣಿಗಳಾಗಿರಬೇಕಲ್ಲ ಅನ್ನಿಸುತ್ತದೆ.
 
Literature is a  great madness, but its a madness that our insane world needs to revive its santity ಎನ್ನುವ ಮಾತು ಕಾವ್ಯವನ್ನು ಕುರಿತ ಅತ್ಯುತ್ತಮ ವ್ಯಾಖ್ಯಾನಗಳಲ್ಲೊಂದು.
 
ಎಂ.ಆರ್. ಕಮಲ ಅನುವಾದಿಸಿರುವ ‘ನೆತ್ತರಲಿ ನೆಂದ ಚಂದ್ರ’ ಅರಬ್ ಮಹಿಳಾ ಕಾವ್ಯಲೋಕ ಕೃತಿಯನ್ನು ಓದುವಾಗ ಕಾವ್ಯ ಮತ್ತು ಮನುಷ್ಯರ ನಡುವಿನ ಸಂಬಂಧದಷ್ಟೇ ಕಾವ್ಯ ಮತ್ತು ಹೆಣ್ಣಿನ ಸಂಬಂಧ ಕೂಡ ಮತ್ತೊಮ್ಮೆ ನಮ್ಮನ್ನು ಕಾಡತೊಡಗುತ್ತದೆ. ಕಾವ್ಯ ಹುಟ್ಟುವುದು ದುರ್ದಮ್ಯತೆಯಲ್ಲಿ ಎನ್ನುವುದಾದರೆ ಆ ದುರ್ದಮ್ಯತೆಯು ಹೆಣ್ಣಿನ ಮಟ್ಟಿಗೆ ಇನ್ನೂ ಗಾಢವಾದುದೆ? ಭಿನ್ನವಾದುದೆ? ಕಾವ್ಯವೆನ್ನುವುದು ಜೀವನ್ಮರಣದ ತೀವ್ರತೆಯದು ಎನ್ನುವುದು ಹೆಣ್ಣಿನ ಮಟ್ಟಿಗೆ ಅಕ್ಷರಶಃ ನಿಜ ಅಲ್ಲವೇ ಎನ್ನುವ ಮಾತನ್ನು ಲೋಕ ಯಾಕಾಗಿ ಅನುಮಾನದಿಂದ ನೋಡುತ್ತದೆ?

ಕಾವ್ಯವನ್ನು ಅಸ್ಮಿತೆಯ ಹೋರಾಟ ಎಂದು ನೋಡುವುದು ಸಹಜ. ದಮನಿತರ ಪಾಲಿಗಂತೂ ಇದು ಹೌದೇ ಹೌದು. ಆದರೆ, ಹೆಣ್ಣಿಗೆ ಇದು ಅಸ್ತಿತ್ವದ ಪ್ರಶ್ನೆಯೂ ಹೌದು ಎನ್ನುವ ಹಿನ್ನೆಲೆಯಲ್ಲಿ ಅವಳ ಕಾವ್ಯದ ಓದು ಮತ್ತು ಚರ್ಚೆಯೇ ಈಗಿರುವುದಕ್ಕಿಂತ ಬೇರೆಯಾಗುವುದು ಅನಿವಾರ್ಯ ಅಲ್ಲವೆ? ಸೆಮಿನಾರ್ ಇರಲಿ, ಲೇಖನವಿರಲಿ, ಪುಸ್ತಕ ವಿಮರ್ಶೆಯಿರಲಿ – ಈ ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಕಾದ ಅಗತ್ಯವಿದೆ ಎಂದೇ ತೋರುತ್ತದೆ.
ಎಂ.ಆರ್. ಕಮಲ ತಮ್ಮ ಗಟ್ಟಿಯಾದ ಕಾವ್ಯದಿಂದಲೇ ಕನ್ನಡ ಕಾವ್ಯದಲ್ಲಿ ಸ್ಥಾನ ಪಡೆದಿರುವವರು. ಕಾವ್ಯದ ಅನುವಾದವನ್ನೂ ಅವರು ತಮ್ಮ ಕಾವ್ಯ ಪ್ರಯಾಣದ ಅಭಿನ್ನ ಭಾಗವಾಗಿಸಿಕೊಂಡಿದ್ದಾರೆ.

ಈ ಹಿಂದೆಯೂ ಆಫ್ರಿಕನ್ ಮಹಿಳಾ ಕಾವ್ಯವನ್ನು ಕನ್ನಡಕ್ಕೆ ತಂದವರು ಅವರು. ಈಗ ಸುದೀರ್ಘವಾದ ಅಧ್ಯಯನ ಮತ್ತು ಕಾವ್ಯದ ಅನುರಕ್ತಿಯ ಫಲವಾಗಿ ಈ ಕೃತಿ ಬಂದಿದೆ. ಫ್ರೆಂಚ್ ಭಾಷೆಯ ಕಲಿಕೆಯ ಹಿನ್ನೆಲೆಯಿಂದಲೇ ಇದನ್ನು ತರಬೇಕೆನ್ನುವ ಕಾರಣಕ್ಕಾಗಿ ಇದು ತೆಗೆದುಕೊಂಡ ಹೆಚ್ಚಿನ ಸಮಯದ ಬಗೆಗೂ ಕಮಲ ತಮ್ಮ ಮಾತಿನಲ್ಲಿ ಪ್ರಸ್ತಾಪಿಸುತ್ತಾರೆ. 
 
ಅರಬ್ ಮಹಿಳಾ ಕಾವ್ಯವನ್ನು ಕುರಿತ ಉಪಯುಕ್ತ ಪ್ರಸ್ತಾವನೆಯಲ್ಲಿ ಕಮಲ, ‘ಅರಬ್ ಹೆಣ್ಣು ತನ್ನನ್ನು ಸಂಪೂರ್ಣವಾಗಿ ತೆರೆದುಕೊಂಡದ್ದು ಕಾವ್ಯದಲ್ಲೇ ಇರಬೇಕು’ ಎನ್ನುತ್ತಾರೆ. ಇದು ಎಲ್ಲ ಮಹಿಳಾ ಕಾವ್ಯದ ಮಟ್ಟಿಗೂ ನಿಜ ಎನ್ನುವುದನ್ನು ನಾವು ವಿಶ್ವಾತ್ಮಕ ಲಕ್ಷಣ ಎಂದು ನೆಲೆಗೊಳಿಸಬೇಕಾಗಿದೆ ಎನ್ನುವುದೇ ಇವತ್ತಿನ ಬಹು ಮುಖ್ಯ ಅಗತ್ಯ. ಆರಂಭದಲ್ಲಿ ನಾನು ಕಟ್ಟಲು ಪ್ರಯತ್ನಿಸಿದ ತಾತ್ವಿಕತೆ ಇದೇ.

ಅರಬ್ ಮಹಿಳಾ ಕಾವ್ಯದ ಆಯಾಮವು ಮಿಕ್ಕವರಿಗಿಂತ ಭಿನ್ನವಾದ, ವಿಸ್ತಾರವಾದ ಆಯಾಮವೊಂದನ್ನೂ ಪಡೆದಿದೆ.  ಊಹಿಸಲಸಾಧ್ಯವಾದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ತಲ್ಲಣಗಳ ನಡುವೆ ಈ ಕಾವ್ಯ ಹುಟ್ಟಿದೆ. ಪ್ಯಾಲಸ್ಟೈನ್, ಜೋರ್ಡಾನ್, ಸಿರಿಯಾ, ಇರಾನ್, ಇರಾಕ್... ಈ ಒಂದೊಂದು ಪ್ರದೇಶವೂ ಅಗ್ನಿಕುಂಡಗಳು. ಈ ಹೊರಲೋಕದ ಜೊತೆ ತಮ್ಮೊಳಗಿನ ಅಗ್ನಿಕುಂಡಗಳೂ ಸೇರಿ ಈ ಮಹಿಳೆಯರು, ‘ನೆತ್ತರಲಿ ನೆಂದ ಚಂದ್ರ’ನನ್ನಲ್ಲದೇ ಮತ್ತೇನನ್ನು ಕಂಡಾರು, ಕಾಣಿಸಿಯಾರು? 
 
ಆದರೆ, ನೆತ್ತರಲ್ಲಿ ನೆಂದದ್ದೇ ಆದರೂ ಹೆಣ್ಣಿನ ಹುಡುಕಾಟ ಕೊನೆಗೂ ಚಂದ್ರನೇ ಎನ್ನುವುದನ್ನು ಈ ಕಾವ್ಯ ಸೂಚಿಸುತ್ತಿರಬಹುದೆ? ಹೌದು, ಅನ್ನಿಸುತ್ತದೆ ಇಲ್ಲಿನ ಕವಿತೆಗಳನ್ನು ಓದಿದಾಗ. ಏನು ಏನೆಲ್ಲಾ ಆದರೂ ಹೆಣ್ಣಿನ ಜೀವಪ್ರೀತಿಯೊಂದು ಬತ್ತುವುದಿಲ್ಲವಲ್ಲ ಎನ್ನುವ ಆದಿಮ ಸತ್ಯವನ್ನು ಇಲ್ಲಿನ ಕವಿತೆಗಳು ಮತ್ತೊಮ್ಮೆ ಸಾಬೀತು ಪಡಿಸುತ್ತವೆ.
 
ತುರಯ್ಯ ಮಲ್ಃಆಸ್ ಅವರ ಕವಿತೆಯ ಈ ಸಾಲುಗಳನ್ನು ನೋಡಿ: 
ನಾನೊಬ್ಬಳು ಅನಾಥೆ
ನಡೆದರೆ, 
ಕಲ್ಲು ಎಡವುತ್ತೇನೆ
...
ಮಾತನಾಡಿದರೆ,
ಅಕ್ಷರಗಳು ಉಸಿರು ಕಟ್ಟಿಸುತ್ತವೆ
...
ಓ ದೇವರೇ,
ಎಂದು, ನೀನೆಂದು
ಮರಳಿ ಬರುವೆ 
 
ಉಸಿರು ಕಟ್ಟಿಸಿದರೂ ಇವಳು ಅಕ್ಷರಗಳನ್ನು, ಅವುಗಳ ಮೂಲಕ ಕಾವ್ಯ ರಚಿಸುವುದನ್ನು ಎಂದೂ ಬಿಡಲಾರಳು. ಹಾಗೆಯೇ ಎಂದಾದರೊಂದು ದಿನ ದೇವರು ಬಂದಾನು ಎನ್ನುವ ಭರವಸೆಯನ್ನೂ. ಇಲ್ಲಿ ಭರವಸೆ ಎನ್ನುವುದು ಏನು ಬೇಕಾದರೂ ಆಗ ಬಹುದಷ್ಟೇ. ಕೊನೆಗೆ ಅದು ಕಾವ್ಯವೇ ಎಂದರೂ ನಡೆದೀತು.
 
‘ಅಚಲತೆಯ ಎಚ್ಚರಿಕೆಯಲ್ಲಿ’ ಎನ್ನುವ ಕವಿತೆಯಲ್ಲಿ–
ನಾವೇನಾಗಬೇಕೆಂದು ಬಯಸುತ್ತೇವೋ
ಅದನ್ನು ಬಿಟ್ಟು
ಮತ್ತೇನನ್ನೋ ನೋಡುತ್ತೇವೆ... ಬಹುಶಃ
....
ನಾನದನ್ನು ವಿರೋಧಿಸುತ್ತೇನೆ 
ಅದರಲ್ಲಿ ಜೀವಂತ ಸಮಾಧಿಯಾಗುವುದರ ಬಗ್ಗೆ.
ಅದೆಂದು ತಲೆ ಕೆಡಿಸಿಕೊಂಡಿಲ್ಲ
ಅದು ನನ್ನನ್ನು ವಿರೋಧಿಸುತ್ತದೆ
ನಾನದನ್ನು ರದ್ದುಗೊಳಿಸುತ್ತೇನೆ
ಲೂಟಿ ಹೊಡೆಯುತ್ತೇನೆ
ನನ್ನೊಳಗೆ ಕೊಲಲು ಅಸಾಧ್ಯವಾದಾಗ
ನನ್ನ ನೆತ್ತರಿನಲ್ಲಿ ಗೆಲುವಿನ ಆ ಪುಟ್ಟ ಹುಡುಗಿಯ
ಕಾಣುತ್ತೇನೆ
 
ಇದು ಹೆಣ್ಣು ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಿರುವುದೇ ತಾನೇ. ಸ್ವಪ್ರಜ್ಞೆಯ ಸ್ಪಷ್ಟತೆಯನ್ನು, ಅದರ ಹೋರಾಟದ ಅಮೂರ್ತತೆ ಮತ್ತು ಮೂರ್ತತೆಯನ್ನು ಇದು ಒಟ್ಟಿಗೇ ಕಾಣಿಸುತ್ತಿದೆ. ವಿರೋಧವನ್ನು ವಿರೋಧ ಎಂದು ಗುರುತಿಸಲೂ, ಒಪ್ಪಿಕೊಳ್ಳಲೂ ಸಿದ್ಧವೇ ಇರದ ವ್ಯವಸ್ಥೆಯ ಭಂಡತನವನ್ನೂ ಈ ಕವಿತೆ ಧ್ವನಿಸುತ್ತಿದೆ. 
 
ಈ ಸಂಕಲನದುದ್ದಕ್ಕೂ ಈ ಪ್ರಕ್ರಿಯೆಯ ಹಲವು ಪದರಗಳನ್ನು, ಮಜಲುಗಳನ್ನು ಕುರಿತ ಅನೇಕ ಕವಿತೆಗಳಿವೆ. ಪ್ರೀತಿಯೂ ಇಲ್ಲಿನ ಪ್ರಧಾನ ನೆಲೆಗಳಲ್ಲಿ ಒಂದು. ನಥಾಲಿ ಹಂದಲ್ ಅವರ ಅಪೂರ್ವ ಕವಿತೆಯೊಂದಿದೆ ಇದರಲ್ಲಿ.
 
ಪ್ರೀತಿಸುವುದಕ್ಕೆ ಭಯವಿಲ್ಲ... ಪ್ರೀತಿಸಿದ್ದನ್ನು ಮರೆವ ಭಯ!
ಹಾಗೆಂದೇ ನನ್ನ ಮೈಯನ್ನು ಸಂಜೆಗಳಿಗೆ,
ಶರದೃತುವಿನ ತಂಗಾಳಿಗೆ ಒಡ್ಡಿಕೊಂಡಿದ್ದೇನೆ
ಭಾವೋದ್ರೇಕದ ಕವಿತೆಗಳನ್ನು ನದಿಯಲ್ಲಿ ಹರಿಯಬಿಟ್ಟಿದ್ದೇನೆ
ದಾರಿಹೋಕರಿಗೆ ಮುಂದೊಮ್ಮೆ ನದಿ ಓದಿ ಹೇಳಬಹುದು!
ಗಂಧವನ್ನು ಹಳೆಯ ಪ್ರೇಮಿಗಳಿಗೆ ಮೆತ್ತಿಬಿಟ್ಟಿದ್ದೇನೆ
 
ಯುದ್ಧ ಮತ್ತು ಹಿಂಸೆ ಇಲ್ಲಿನ ಕವಿಗಳನ್ನು ಸದಾ ಕಾಡುವ ಮತ್ತೊಂದು ಸಂಗತಿ. ಯುದ್ಧದ ನಿರರ್ಥಕತೆ ಮತ್ತು ಹಿಂಸೆಯ ದುರಂತಗಳನ್ನು ಇಲ್ಲಿನ ಕವಿತೆಗಳು ಮತ್ತೆ ಮತ್ತೆ ಹೇಳುತ್ತವೆ. 
 
ಇಲ್ಲಿನ ಕವಿತೆಗಳು ಕೆಲವೊಮ್ಮೆ ಸ್ವಗತಗಳ ಹಾಗೆ, ಮತ್ತೆ ಕೆಲವೊಮ್ಮೆ ಸಾರ್ವಜನಿಕ ಮನವಿಯ ಹಾಗೆ, ಮಗದೊಮ್ಮೆ ಕ್ರಾಂತಿಯ ಗೀತೆಗಳ ಹಾಗೆ ಅವತರಿಸುತ್ತಾ ಹೋಗುತ್ತವೆ. ಕಾವ್ಯದ ಅನಂತ ಪಾತ್ರಗಳ ಮೆರವಣಿಗೆಯ ಹಾಗೂ ಇದು ಕಾಣಿಸುತ್ತದೆ. ನೋಯುವ ಹಲ್ಲಿಗೆ ನಾಲಿಗೆ ಹೊರಳುವ ಹಾಗೆ ಕಾವ್ಯಕ್ಕೆ ಹೊರಳುವುದರ ಸಹಜತೆಯನ್ನು ಅನಿವಾರ್ಯತೆಯನ್ನು ಇಲ್ಲಿನ ಕವಿತೆಗಳು ಮನದಟ್ಟು ಮಾಡಿಸುತ್ತವೆ. 
 
ಅರಬ್ ಕಾವ್ಯದ ಅನನ್ಯತೆಯ ಜೊತೆಗೇ ಮಹಿಳಾಕಾವ್ಯದ ಏಕಭಿತ್ತಿಯನ್ನೂ ಈ ಕವಿತೆಗಳು ಸಾಬೀತುಪಡಿಸುತ್ತವೆ. ವಿಪರ್ಯಾಸದ ಹಾಗೆ ಕಂಡರೂ ಇದು ನಿಜ. ಈ ಕವಿತೆಗಳನ್ನು ತನ್ಮಯತೆಯಲ್ಲಿ ಎಂ.ಆರ್‍. ಕಮಲ ಅನುವಾದಿಸಿದ್ದಾರೆ. ಅವರ ಕಾವ್ಯ ಪ್ರೀತಿ ಮತ್ತು ಶಕ್ತಿಗಳೆರಡೂ ಮತ್ತೊಮ್ಮೆ ಘನವಾಗಿ ಸ್ಥಾಪಿತವಾಗಿವೆ ಈ ಕೃತಿಯಲ್ಲಿ.
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ