ವೈವಸ್ವತ

ವೈವಸ್ವತ


ಲೇಖಕ : ರೇಖಾ ಕಾಖಂಡಕಿ
ಪ್ರಕಾಶಕರು : ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು–560004
ಪ್ರಕಟವಾದ ವರ್ಷ : .
ಪುಟ : 432
ರೂ : ₹ 350
ಕನ್ನಡದಲ್ಲಿ ಕಾದಂಬರಿಗಳ ಪುನರಾಗಮನದ ಕಾಲ ಇದು. ಕಾದಂಬರಿಗಳ ಪುನರಾಗಮನವು ಸಾಹಿತ್ಯದಷ್ಟೇ ಇತರ ಸಂಗತಿಗಳನ್ನೂ ಸಂಕೇತಿಸುತ್ತದೆ. ಕಾದಂಬರಿಗಳ ಕಾಲವೇ ಮುಗಿದುಹೋಯಿತೇನೋ ಎಂದು ಭಾಸವಾಗುವ ಆತಂಕವೂ ಕಾಡಿದ್ದುಂಟು.

ಕಾದಂಬರಿಯ ರಚನೆಗೆ ಮೂಲವಾಗುವ ಕಾಲದ ವಿಸ್ತಾರದ ಕಲ್ಪನೆ, ಹಲವು ತಲೆಮಾರುಗಳು, ಅವುಗಳ ವೈರುಧ್ಯ ಮತ್ತು ಸಾಮ್ಯತೆಗಳು, ಬದುಕಿನ ಗ್ರಹಿಕೆಯಲ್ಲಾಗುವ ಪಲ್ಲಟಗಳು, ಈ ಎಲ್ಲವುಗಳ ಜೊತೆಗೇ ಗುಪ್ತಗಾಮಿನಿಯಂತೆ ಹರಿಯುವ ಬದುಕಿನ ಜೀವ ಚೈತನ್ಯದ ಅದಮ್ಯತೆ...
 
ಕುಟುಂಬದ ಘಟಕವನ್ನು ನೆಪವಾಗಿಸಿಕೊಂಡೇ ಸಮುದಾಯ ಕುಟುಂಬದ ಏರಿಳಿತಗಳನ್ನು ಕಟ್ಟಿಕೊಡುವ ಶಕ್ತಿ ಮತ್ತು ಸಾಧ್ಯತೆ ಕಾದಂಬರಿಗಿರುವಂತೆ ಮಿಕ್ಕಾವ ಪ್ರಕಾರಗಳಿಗೂ ಇಲ್ಲ.
 
ನಿಡುಗಾಲದಿಂದ ಕಥನದ ಜೊತೆಯಲ್ಲಿ ತಮ್ಮನ್ನು ಬೆಸೆದುಕೊಂಡಿರುವ ರೇಖಾ ಕಾಖಂಡಕಿಯವರ ಹೊಸ ಕಾದಂಬರಿ ‘ವೈವಸ್ವತ’, ಕಾದಂಬರಿಯ ಹಾಸು–ಬೀಸನ್ನು ಸಮರ್ಥವಾಗಿ ಬಳಸಿಕೊಂಡಿರುವ ಕೃತಿ. ಮಹಿಳೆಯರು ಸಂಕೀರ್ಣವಾದ, ಜನಸಮುದಾಯದ ಒಳಹೊರಗುಗಳನ್ನು ಏಕಕಾಲದಲ್ಲಿ ಚಿತ್ರಿಸಲಾರರು ಎನ್ನುವ ಆರೋಪ ಹಳೆಯದು.
 
ಸವಿತಾ ನಾಗಭೂಷಣರು ‘ಸ್ತ್ರೀಲೋಕ’ ಕಾದಂಬರಿಯಲ್ಲಿ ನಡೆಸಿದ ಅಪೂರ್ವ ಪ್ರಯೋಗ ಕನ್ನಡದಲ್ಲಿ ಚರ್ಚೆಯೇ ಆಗಲಿಲ್ಲ ಎನ್ನುವುದೊಂದು ದುರಂತ. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿ ಕನ್ನಡ ಮಾತ್ರವಲ್ಲ, ಭಾರತೀಯ ಕಾದಂಬರಿಗಳಲ್ಲೇ ಮುಖ್ಯವಾದುದು.
 
ರೇಖಾ ಕಾಖಂಡಕಿಯವರ ‘ವೈವಸ್ವತ’ವೂ ಬಹು ಮಹತ್ವಾಕಾಂಕ್ಷೆಯ ಕಾದಂಬರಿ. ಚರಿತ್ರೆ, ಕಾಲದ ಅನಂತತೆ, ಬದುಕಿನ ನಿಗೂಢ ನಡೆಗಳು, ನೋಡನೋಡುತ್ತಲೇ ಬದಲಾಗುವ ಬದುಕಿನ ಸ್ವರೂಪ, ಬಗೆದಷ್ಟೂ ಮುಗಿಯದ ಸಂಬಂಧಗಳ ಪಾತಾಳ ಲೋಕ, ಬದುಕಿನಲ್ಲಿ ಸಣ್ಣದು ಯಾವುದು, ದೊಡ್ಡದು ಯಾವುದು, ಕ್ಷುಲ್ಲಕವೆಂದು ತಿಳಿದದ್ದೇ ಬೇತಾಳವಾಗಿ ಬೆಳೆದು ಕಂಗೆಡಿಸುವ ಪರಿ...
 
ಈ ಎಲ್ಲವನ್ನೂ ಹಿಂತಿರುಗಿ ನೋಡಿದಾಗ ಇಡೀ ಬದುಕೇ ಅಸಂಗತವಾಗಿ ಕಾಣಿಸುತ್ತಾ ಮನುಷ್ಯರನ್ನು ಅಣಕಿಸುವ ವ್ಯಂಗ್ಯ .. ಈ ಎಲ್ಲದರ ಜೊತೆಗೂ ಕೈಹಿಡಿದು ನಡೆಸುವ ಜೀವನದ ಅಂತಃಶಕ್ತಿ – ಈ ಎಲ್ಲವನ್ನೂ ರೇಖಾ ಅವರ ಈ ಕಾದಂಬರಿ ಅಲುಗದ ಏಕಾಗ್ರತೆಯಲ್ಲಿ ಚಿತ್ರಿಸುತ್ತದೆ. ಎಂದಿನಿಂದಲೂ ಇದರ ಬಗ್ಗೆ ಧ್ಯಾನಿಸಿದ ಪರಿಣಾಮವೋ ಎನ್ನುವ ಸರಾಗತೆ ಈ ಕಾದಂಬರಿಯ ಮೂಲಗುಣ.
 
‘ನೆಲ’, ‘ಹೆಜ್ಜೆ’ ಮತ್ತು ‘ಕೊನೆಯಿಲ್ಲದ ಹಾದಿ’ ಎನ್ನುವ ಮೂರು ಭಾಗಗಳಲ್ಲಿ ಕಾದಂಬರಿ ಕುಟುಂಬವೊಂದರ ನಿರಂತರ ಪರಿಭ್ರಮಣವನ್ನು ಚಿತ್ರಿಸುತ್ತದೆ. ಕುಟುಂಬವೊಂದರ ಪರಿಭ್ರಮಣವು ಚರಿತ್ರೆಯ ಗತಿಯೊಂದಿಗೆ ತಾನೂ ಗಿರಿಗಿಟ್ಟಲೆಯಂತೆ ತಿರುಗುತ್ತಲೇ ಹೋಗಬೇಕಾದ ಅನಿವಾರ್ಯತೆಯನ್ನು ಈ ಕೃತಿ ಇದು ಮನುಷ್ಯನ ಬದುಕಿನ ಶಾಪವೆಂದೋ ವರವೆಂದೋ ಹೇಳಲು ಬಯಸುವುದಿಲ್ಲ. ಈ ಕಾದಂಬರಿಯ ಶಕ್ತಿ ಇರುವುದೇ ಇದರಲ್ಲಿ.
 
ಪೂರ್ವ ನಿಶ್ಚಿತವಾದ ನಿಲುವಿನಿಂದ ಇದು ಚರಿತ್ರೆಯ ಗತಿಯನ್ನು ಎದುರಾಗುವುದಿಲ್ಲ. ಕುಟುಂಬವೊಂದರ ಮಟ್ಟಿಗೆ ನಿರಂತರವಾದ ವಲಸೆ ಎನ್ನುವುದು ದುರಂತವೇ. ಆದರೂ ಇದನ್ನು ವಿಧಿಯ ಅಥವಾ ಬದುಕಿನ ಸಹಜ ಚಲನೆ ಎನ್ನುವ ನೆಲೆಯಿಂದ ನೋಡಲು ಬೇಕಾದ ಚರಿತ್ರೆಯನ್ನು ಕುರಿತ ಪ್ರಬುದ್ಧ ನಿಲುವು ಇವರಲ್ಲಿ ಸ್ಪಷ್ಟವಾಗಿರುವುದರಿಂದ ಕಾದಂಬರಿಗೆ ಬೆಳೆಯುತ್ತಲೇ ಹೋಗುವ ವಿಸ್ತಾರತೆಯೊಂದನ್ನು ಪಡೆಯಲು ಸಾಧ್ಯವಾಗಿದೆ.
 
ಚರಿತ್ರೆ ಮತ್ತು ಬದುಕಿನ ಅನಿವಾರ್ಯತೆಯನ್ನು ಕುರಿತ ಈ ಗ್ರಹಿಕೆಯಿಂದಾಗಿ ಯಾವ, ಎಂಥ ಬಿಕ್ಕಟ್ಟುಗಳನ್ನು ಎದುರಿಸಿಯೂ ಮನುಷ್ಯ ಉಳಿಸಿಕೊಳ್ಳುವ ಬದುಕಿನ ಬಗೆಗಿನ ನಂಬಿಕೆ ಮತ್ತು ಅನುರಕ್ತಿಯ ಆದಿಮ ಶಕ್ತಿಯನ್ನು ಗುರುತಿಸುವಲ್ಲಿ ಮತ್ತು ಸ್ಥಾಪಿಸುವಲ್ಲಿ ಈ ಕಾದಂಬರಿ ಯಶಸ್ವಿಯಾಗುತ್ತದೆ. 
 
ಈ ಮೂರೂ ಘಟ್ಟಗಳಲ್ಲಿ ಒಂದಿಲ್ಲೊಂದು ಬಗೆಯ ರಾಜಕೀಯ ಬೆಳವಣಿಗೆಯು ಕುಟುಂಬಗಳ ಆಗುಹೋಗುಗಳನ್ನು ನಿರ್ಧರಿಸುತ್ತಾ ಹೋಗುವುದನ್ನು ಕಾದಂಬರಿ ದಾಖಲಿಸುತ್ತದೆ. ಓರಂಗಲ್ ಪತನದೊಂದಿಗೆ, ಆ ಗಳಿಗೆಯಲ್ಲಿ ಉಟ್ಟ ಬಟ್ಟೆಯ ಮೇಲೆ, ಜೀವಭಯದಿಂದ ನಡುಗುತ್ತಾ ತಮ್ಮ ವಲಸೆಯನ್ನು ಆರಂಭಿಸುವ ಕುಟುಂಬದ ವಿವರದೊಂದಿಗೆ ಕಾದಂಬರಿ ಆರಂಭವಾಗುತ್ತದೆ.
 
ಆಢ್ಯತೆಯಿಂದ ಬದುಕುತ್ತಿದ್ದ ಕುಟುಂಬವೊಂದು ಆಸ್ತಿ, ಮನೆ ಎಲ್ಲವನ್ನೂ ಬಿಟ್ಟು ಅಸಹಾಯಕವಾಗಿ ಊರನ್ನು ಬಿಡುವ ಈ ಸಂದರ್ಭವು ರಾಜಕೀಯ ಘರ್ಷಣೆಯು ನಾಶ ಮಾಡಿರಬಹುದಾದ ಅಸಂಖ್ಯಾತ ಕುಟುಂಬಗಳ ‘ನೆಲೆ’ಯನ್ನು ಸೂಚಿಸುತ್ತಲೇ, ಒಂದಿಲ್ಲೊಂದು ನೆಲೆಯನ್ನು ಹುಡುಕಿ ಕಟ್ಟಿಕೊಳ್ಳುವ ಮನುಷ್ಯನ ಮೂಲಭೂತ ಅಗತ್ಯವನ್ನೂ ಅದಕ್ಕಾಗಿ ನಿರಂತರವಾಗಿ ಪ್ರಯತ್ನ ನಡೆಸುವುದನ್ನೂ ಅಷ್ಟೇ ಸಾಂಕೇತಿಕವಾಗಿ ಚಿತ್ರಿಸುತ್ತದೆ.

ಹಳ್ಳಿಯ ಪ್ರತಿಷ್ಠಿತ ಕುಟುಂಬವೊಂದು ವಲಸೆ ಹೊರಟಾಗ ಅದಕ್ಕೆ ಸಿಗುವ ಮೊದಲ ನೆಲೆ ಒಂದು ಮರದ್ದು. ದಿನ ಕಳೆಯುವುದರ ಒಳಗೆ ನೆಲೆಯು ದೊಡ್ಡ ವಾಡೆಯಿಂದ ಮರಕ್ಕೆ ಸ್ಥಳಾಂತರವಾಗುವ ವಿಲಕ್ಷಣತೆಯನ್ನು ರೇಖಾ ಅವರು ನಾಟಕೀಯವಾಗಿ ಚಿತ್ರಿಸುತ್ತಾರೆ. ಆದರೆ, ಅದು ಕರುಣಾ ಸಾಗರವಾಗದ ಹಾಗೆ ವಹಿಸುವ ಎಚ್ಚರವೇ ಈ ಕಾದಂಬರಿಗೆ ಗಾಂಭೀರ್ಯ ಮತ್ತು ಆಳವನ್ನು ಒದಗಿಸಿ ಕೊಡುತ್ತದೆ.
 
ಏಕೆಂದರೆ ಕಾದಂಬರಿಯುದ್ದಕ್ಕೂ ಲೇಖಕಿಗೆ ಇರುವ ಗಮನ ಚರಿತ್ರೆ, ಮನುಷ್ಯರ ನಡುವಿನ ಸಂಬಂಧದಷ್ಟೇ ಬದುಕಿನ ಅನಂತ ಸಾಧ್ಯತೆಗಳು ಮತ್ತು ದುರ್ಧಮ್ಯವಾದ ಮನುಷ್ಯನ ಜೀವನ ಪ್ರೀತಿಯೆಡೆಗೆ. ಚರಿತ್ರೆಯ ಏನೆಲ್ಲ ಕತ್ತು ಹಿಸುಕುವ ಸಂಗತಿಗಳು ಮತ್ತು ಘಟನೆಗಳ ಆಚೆಗೂ ಮನುಷ್ಯನನ್ನು ಈ ಬದುಕಿಗೆ ಆತು ನಿಲ್ಲಿಸುವ ಶಕ್ತಿ ಯಾವುದು ಎನ್ನುವ ಬೆರಗು ಈ ಕಾದಂಬರಿಯುದ್ದಕ್ಕೂ ಹಬ್ಬಿದೆ. ಮರದ ಕೆಳಗೋ ಬೆಚ್ಚನೆಯ ಮನೆಯೊಳಗೋ... ಮನುಷ್ಯರನ್ನು ‘ನಾಳಿನ ಬಾಗಿಲು ನಂದನ’ ಎನ್ನುವ ನಂಬಿಕೆಯಲ್ಲಿ ಸತತವಾಗಿ ಇರಿಸುವುದು ಮನುಷ್ಯರ ಶಕ್ತಿಯೋ? ಬದುಕಿನ ಶಕ್ತಿಯೋ?
 
ಹೀಗೆ ಆರಂಭವಾಗುವ ಕೊನೆಯಿಲ್ಲದ ಹಾದಿಯ ಪ್ರಯಾಣದ ಹತ್ತಾರು ತಲೆಮಾರುಗಳ ಕಥನ ಇಲ್ಲಿದೆ. ಗುರಣ್ಣ, ಸತ್ಯಪ್ಪ, ವೆಂಕಟರಾಯನಂಥ ಪ್ರಧಾನ ಪುರುಷ ಪಾತ್ರಗಳಿದ್ದರೂ ಕಾದಂಬರಿಯನ್ನು ಕಟ್ಟಿರುವುದೇ ಸ್ತ್ರೀ ಪಾತ್ರಗಳು. ಇತಿಹಾಸದುದ್ದಕ್ಕೂ ಹೆಣ್ಣಿನ ಧಾರಣಶಕ್ತಿ ಅದೆಷ್ಟು ಬಾರಿ ಸ್ಥಾಪಿತವಾಗಿದ್ದೂ ಕಡೆಗಣಿಸಲಾದ ಈ ಧಾರಣ ಶಕ್ತಿಯನ್ನು ರೇಖಾ ಅವರ ಕಾದಂಬರಿ ಅವಳ ಹುಟ್ಟುಗುಣ ಎನ್ನುವ ನಂಬಿಕೆಯಲ್ಲಿ ಪ್ರದರ್ಶಿಸುತ್ತದೆ.
 
ತುಳಸತ್ಯಾ, ಗೋದಾ, ತುಂಗಾ ಮತ್ತು ಗಂಗಾ ತಮ್ಮ ತಮ್ಮ ಕುಟುಂಬಗಳನ್ನು, ಅವುಗಳು ಎದುರಿಸುತ್ತಲೇ ಹೋಗುವ ಆಘಾತಗಳನ್ನು ನಿಭಾಯಿಸುವುದರಲ್ಲಿ ಮಾತ್ರ ಗಟ್ಟಿಗರು ಎಂದು ನೋಡಲಾಗುವುದಿಲ್ಲ. ಚಾರಿತ್ರಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಮ್ಮ ಕುಟುಂಬದ ಹೊರಗುಗಳನ್ನೂ ಅಷ್ಟೇ ಶಕ್ತವಾಗಿ ಈಸುತ್ತಾರೆ.

ಕುಟುಂಬದ ಗಂಡಸರು ತತ್ತರಿಸಿ ಹೋದಾಗಲೆಲ್ಲ ಅವರ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಮತ್ತೆ ಅವರನ್ನು ಹೋರಾಟಕ್ಕೆ ಸಜ್ಜು ಮಾಡುವುದು ಈ ಹೆಣ್ಣುಮಕ್ಕಳೇ. ಮನೆಯ ಕಂಬಕ್ಕೆ ಒರಗಿಕೂತ ಹೆಣ್ಣುಮಕ್ಕಳ ಚಿತ್ರವೊಂದು ಈ ಕಾದಂಬರಿಯಲ್ಲಿ ಮತ್ತೆ ಮತ್ತೆ ಬರುತ್ತದೆ. ನಿಜವೆಂದರೆ, ಈ ಹೆಣ್ಣುಮಕ್ಕಳೇ ಕಂಬಗಳು. ಅಸಾಧಾರಣ ಸನ್ನಿವೇಶದಲ್ಲಿ ಗಂಗಕ್ಕ ಕುಟುಂಬದ ಕುಲಕರ್ಣಿಕೆಯನ್ನೂ ನಿಭಾಯಿಸುವ ಸ್ಥೈರ್ಯವನ್ನು ತೋರಿಸುತ್ತಾಳೆ, ಮನೆಯ ಸದಸ್ಯರ ವಿರೋಧದ ನಡುವೆಯೂ. 
 
ಕಾದಂಬರಿ ಮೂರು ಭಾಗಗಳಲ್ಲಿಯೂ ಮುಖಾಮುಖಿಯಾಗುವ ಇನ್ನೊಂದು ಸಂಗತಿ, ನೈತಿಕತೆಯದು. ಪ್ರಭುತ್ವದ ನೈತಿಕತೆ ಮತ್ತು ವೈಯಕ್ತಿಕ ನೈತಿಕತೆ ಎರಡೂ ಬೇರೆಯಲ್ಲ ಮತ್ತು ಈ ಎರಡರಲ್ಲಿ ಯಾವುದೊಂದು ಕೆಟ್ಟರೂ ಎರಡೂ ನಾಶವಾಗುವ ವಾಸ್ತವವನ್ನು ಈ ಕಾದಂಬರಿ ಓದುಗರಿಗೆ ಕಾಣಿಸುವುದರಲ್ಲಿ ಯಶಸ್ವಿಯಾಗುತ್ತದೆ. ಈ ಕಾದಂಬರಿ ನಮಗೆ ಮುಖ್ಯವಾಗುವುದು ಈ ಕಾರಣಕ್ಕೆ.

ಪರಕೀಯರ ಆಕ್ರಮಣಕ್ಕೆ ಸಿಲುಕಿದ ಸಮುದಾಯದ ಕಷ್ಟ–ನೋವುಗಳನ್ನು ಹೇಳುತ್ತಿರುವಾಗಲೂ ಈ ಕಾದಂಬರಿ ಅದರಷ್ಟೇ ಅದನ್ನು ಎದುರಿಸಬೇಕಾದ ನಮ್ಮ ನೈತಿಕ ನೆಲೆ ಯಾವುದು ಎನ್ನುವುದನ್ನೂ ತನ್ನೆದುರಿಗೆ ನಿಲಿಸಿಕೊಳ್ಳಲು ಹಿಂಜರಿಯುವುದಿಲ್ಲ. ಕೊನೆಗೂ ಯಾವ ಸನ್ನಿವೇಶವನ್ನು ಎದುರಿಸಲೂ ಸಾಧ್ಯವಾಗುವುದು, ಒಂದು ಮಾನವೀಯ ಅಂತಃಕರಣಕ್ಕೆ, ಮತ್ತೊಂದು ನೈತಿಕತೆಗೆ ಎನ್ನುವ ಅರಿವಿನಲ್ಲಿ ಈ ಕಾದಂಬರಿ ಮುಗಿಯುತ್ತದೆ.
 
ಚಾರಿತ್ರಿಕ ಸನ್ನಿವೇಶದ ಕೂಸುಗಳಾದ ಹುಲು ಮಾನವರು ತಮ್ಮ ಘನತೆಯನ್ನು ಉಳಿಸಿಕೊಳ್ಳುವುದಾದರೆ ಈ ಎರಡರ ಬಲದಿಂದ ಮಾತ್ರ ಎನ್ನುವ ಅರಿವಿನ ಹಿನ್ನೆಲೆಯ ಈ ಕಾದಂಬರಿಯ ಮಹತ್ವ ಇನ್ನೂ ಹೆಚ್ಚಾಗುವುದು ಚಾರಿತ್ರಿಕ ವಿಕೃತಿಯ ಕಾದಂಬರಿಗಳ ವಿಜೃಂಭಣೆಯನ್ನು ಕಮ್ಮಿ ಮಾಡಬಹುದು ಎನ್ನುವ ಕಾರಣಕ್ಕೂ. ನಮ್ಮ ಕಾಲದ ಮಹತ್ವದ ಕಾದಂಬರಿಗಳಲ್ಲಿ ಒಂದು ‘ವೈವಸ್ವತ’.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.