ವಿಲಂಬಿತ

ವಿಲಂಬಿತ


ಲೇಖಕ : ಗಿರಡ್ಡಿ ಗೋವಿಂದರಾಜ
ಪ್ರಕಾಶಕರು : ಸಪ್ನ ಬುಕ್‌ ಹೌಸ್‌, ಮೂರನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು – 560 009
ಪ್ರಕಟವಾದ ವರ್ಷ : .
ಪುಟ : 231
ರೂ : ₹ 150
ಒಂಬತ್ತು ವರ್ಷಗಳ ತರುವಾಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾಕೃತಿ ‘ವಿಲಂಬಿತ’ ಪ್ರಕಟವಾಗುತ್ತಿದೆ. ತಮ್ಮ ವಿಮರ್ಶಾ ಕೃತಿಯ ಪ್ರಕಟಣೆ ತಡವಾಗಲು ಅವರು ಕಾರಣಗಳನ್ನು ಲೇಖಕರ ಮಾತಿನಲ್ಲಿ ಹೇಳಿಕೊಂಡಿದ್ದಾರೆ.

ಈ ಹೊತ್ತಿನಲ್ಲಿ ಅವರು ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಅನುವಾದಗಳ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು ಒಂದಾದರೆ ಇನ್ನೊಂದು – ‘ಇದಕ್ಕೆ ಮುಖ್ಯ ಕಾರಣವೆಂದರೆ, ವಿಮರ್ಶೆಯ ಬಗೆಗೆ ಹುಟ್ಟಿದ ಬೇಜಾರು.

ಅದು ನಮ್ಮ ವೈಯಕ್ತಿಕ ಜೀವನಾನುಭವದ ಅನೇಕ ಅಂಶಗಳನ್ನು ಹೊರಗೇ ಇಟ್ಟುಬಿಡುತ್ತದೆ ಎಂಬ ಆತಂಕ. ಅದರ ಜೊತೆಗೆ, ನಮ್ಮ ಕನ್ನಡ ವಿಮರ್ಶೆ ಮೊದಲಿನ ಚುರುಕು, ಒಳನೋಟ, ಉತ್ಸಾಹಗಳನ್ನು ಕಳೆದುಕೊಂಡು ಕಳೆಗುಂದತೊಡಗಿದೆ ಎಂಬ ಅಸಮಾಧಾನ’. ಗಿರಡ್ಡಿಯವರ ಈ ಮಾತುಗಳಲ್ಲಿ ಸಮಕಾಲೀನ ಕನ್ನಡ ವಿಮರ್ಶೆಯ ವಿಮರ್ಶೆ ಇದೆ. ಈಗಿನ ವಿಮರ್ಶೆ ತನ್ನ ಜೀವಂತಿಕೆಯನ್ನು ಕಳೆದುಕೊಂಡು ಜಡವಾಗಿ, ಅದಕ್ಕೂ ಮುಖ್ಯವಾಗಿ ಸ್ಥಾವರವಾಗಿ ಯಾವುದೋ ಕಾಲವಾಗಿದೆ.
 
ಈ ಪುಸ್ತಕದಲ್ಲಿರುವ ಬಹುಪಾಲು ಲೇಖನಗಳು ಸಾಹಿತ್ಯ–ಸಾಹಿತಿ ಕೇಂದ್ರಿತ ಬರಹಗಳಾಗಿವೆ. ಇವನ್ನು ಎಂದಿನ ವಿಮರ್ಶೆಯ ಅಕಡೆಮಿಕ್‌ ಜಾಡಿಗೆ ಸಿಲುಕಿದ ಬರಹಗಳ ಗುಂಪಿಗೆ ಸೇರಿಸುವಂತಿಲ್ಲ. ಇವಕ್ಕೆ ಲಲಿತ ಪ್ರಬಂಧದ ಲವಲವಿಕೆ, ಬೇಕಾದಲ್ಲಿ ಹೊರಳುವ ಮುಕ್ತಗುಣವಿದೆ. 
 
ಕನ್ನಡದ ಮಹತ್ವದ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರ ಬರವಣಿಗೆಯ ಕುರಿತಾದ ನಾಲ್ಕು ಲೇಖನಗಳು ಅವರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿ ಆ ನಾಲ್ಕೂ ಸಂಪುಟಗಳಿಗೆ ಬರೆದ ಪ್ರತ್ಯೇಕ ಪ್ರವೇಶಿಕೆಗಳಾಗಿವೆ.
 
ದೇವದತ್ತ ಪಟ್ಟನಾಯಕರ ‘ಜಯ’ದ ಅನುವಾದದ ಅನುಭವದ ಕುರಿತಂತೆ ಬರೆದಿರುವ ಲೇಖನವೂ ಸೇರಿದಂತೆ ಗಿರಡ್ಡಿಯವರ ಇಲ್ಲಿನ ಬರಹಗಳ ಮುಖ್ಯ ಲಕ್ಷಣವೆಂದರೆ ಅದರ ಲಹರಿ. ಮೂಲ ಮುದ್ದೆಯನ್ನು ಬಿಟ್ಟುಕೊಡದೆ ಸಾಹಿತ್ಯ, ಸಾಹಿತಿಯ ಮತ್ತು ಒಟ್ಟಾರೆ ಸಂಸ್ಕೃತಿಯ ದರ್ಶನ ಮಾಡಿಸುವುದೇ ಆಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ‘ಮಧುರಚೆನ್ನರ ‘ರಮ್ಯ ಜೀವನ’: ಮರೆಯಾದ ಸಂಸ್ಕೃತಿಯೊಂದರ ನೆನಪು’ ಎಂಬ ಲೇಖನ.

ಈ ಲೇಖನವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಅದರ ವಿಶಿಷ್ಟತೆಯನ್ನು ಹೇಳುತ್ತಲೇ ಕಣ್ಮರೆಯಾದ ಲಾವಣಿಗಳು ಹಾಗೂ ಖಾಜಾಭಾಯಿ ಮತ್ತು ಬಡೇಶಾ ಎಂಬ ಲಾವಣಿ ಹಾಡುಗಾರರ ಬಗ್ಗೆ ಹೇಳುತ್ತಹೋಗುತ್ತದೆ. ಮಧುರಚೆನ್ನರ ಲೇಖನದ ವಿವರಗಳನ್ನು ಉಲ್ಲೇಖಿಸಿ ಈ ವ್ಯಕ್ತಿಚಿತ್ರ ಏಕೆ ಮಹತ್ವದ್ದು ಎಂದು ವಿವರಿಸುತ್ತ ಹೋಗಿದ್ದಾರೆ. ಮತ್ತು ಈ ಬರಹಕ್ಕೆ ಇರುವ ಹಲವು ಆಯಾಮಗಳನ್ನು ತೆರೆಯುತ್ತ ಹೋಗುತ್ತಾರೆ.
 
ಸಮೃದ್ಧ ಜಾನಪದ ಸಂಸ್ಕೃತಿ ಇದ್ದ ಹಲಸಂಗಿ ಊರಿನ ಕುರಿತಾಗಿ, ಅಲ್ಲಿನ ಜಾನಪದ ಸಿರಿವಂತಿಕೆಯ ಜನ ಮರೆಯಾದ ದುರಂತವನ್ನು ಅದು ಈಗಿನ ಕಾಲದವರಿಗೆ ಕಾಣಿಸುತ್ತದೆ. ಇದಲ್ಲದೇ ಈ ಲೇಖನ ಏಕಕಾಲಕ್ಕೆ ಕಥೆಯೂ, ವ್ಯಕ್ತಿಚಿತ್ರವೂ ಆಗುವುದನ್ನು ಮನಕ್ಕೆ ನಾಟುವಂತೆ ಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿಯೇ ಓದಿಕೊಳ್ಳಬಹುದಾದ ಇನ್ನೊಂದು ಲೇಖನ ‘ಇನ್ನೊಮ್ಮೆ ಹಲಸಂಗಿಗೆ’.

ಇದು ಲೇಖಕರು 50 ವರ್ಷಗಳ ಬಳಿಕ ಕವಿ ಮಧುರಚೆನ್ನರ ಹಲಸಂಗಿಗೆ ಕೊಟ್ಟ ಭೇಟಿಯಾಗಿದೆ. ಪ್ರವಾಸ ಕಥನದಂತಿರುವ ಈ ಲೇಖನ ಅಲ್ಲಿನ ಗೆಳೆಯರ ಗುಂಪು, ಮಧುರಚೆನ್ನರ ಕುಟುಂಬ, ಅಲ್ಲಿನ ಪರಿಸರ, ಅಲ್ಲಿ ಆದ ಬದಲಾವಣೆಗಳನ್ನು ದಾಖಲು ಮಾಡುತ್ತ ಹೋಗುತ್ತದೆ. ಈ ಲೇಖನಕ್ಕೆ ಹಿಂದಿನ ಮತ್ತು ಇಂದಿನ ಹಲವು ಅಂಶಗಳು ಕೂಡಿಕೊಳ್ಳುತ್ತವೆ.
 
ಇದು ಮಾತ್ರವಲ್ಲ, ಗಿರಡ್ಡಿಯವರ ಹಲವು ಬರವಣಿಗೆಗಳು ಇದೇ ಮಾದರಿಯವು. ಅವು ಸಹಜವಾಗಿಯೇ ಲಲಿತ ಪ್ರಬಂಧದ ದಾಟಿಗೆ ಒಲಿಯುತ್ತವೆ. ನಿಷ್ಠುರ ಮತ್ತು ಕೃತಿನಿಷ್ಠ ಕೃತಿ ವಿಮರ್ಶೆ ಅಲ್ಲಿ ಸಲ್ಲದು. ಇಲ್ಲಿನ ಕೆಲ ಲೇಖನಗಳ ವಸ್ತುಗಳನ್ನೇ ಒಮ್ಮೆ ನೋಡಿದರೆ ಅವು ತೀರ ವಿಶಿಷ್ಟವಾಗಿಯೂ, ಉದ್ದೇಶಪೂರ್ಕವಾಗಿ ಭಿನ್ನ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆದವುಗಳು ಎಂಬುದು ಗೋಚರಿಸುತ್ತದೆ.

‘ಕಣ್ಣೀರ ಹೊಳೆಯಲ್ಲಿ ಈಸಿ ಬಂದ ಹಾಡು’ ಲೇಖಕರ ಮನಕಲಕಿದ ಒಂದು ಸೋಬಾನೆ ಪದದ ಕುರಿತಾಗಿದ್ದರೆ, ಇದರ ವಿರುದ್ಧ ದಿಕ್ಕಿನಲ್ಲಿರುವುದು ಪತ್ತೇದಾರಿ ಸಾಹಿತ್ಯದ ಕುರಿತಾದ ಲೇಖನ ‘ನನ್ನ ಪ್ರೀತಿಯ ಪತ್ತೇದಾರಿ’. ಈ ಕೊನೆಯ ಲೇಖನವು ಕನ್ನಡದ ಸಾಹಿತ್ಯ ವಿಮರ್ಶಕರೊಬ್ಬರು ಬರೆಯಬಹುದು ಎಂಬುದನ್ನು ಊಹಿಸಲೂ ಅಸಾಧ್ಯ ಎಂಬಂತಿದೆ.
 
ಇಲ್ಲಿ ಸ್ಪಷ್ಟವಾಗಿರುವುದು ಏನೆಂದರೆ, ವಿಮರ್ಶೆಯ ಉಸಿರುಗಟ್ಟಿಸುವ ಭಾಷೆಯ ಭಾರವಿಲ್ಲದ, ಓದುಗರಿಗೆ ಸಮೀಪವಾಗಲು ಯತ್ನಿಸಿರುವ ಇಲ್ಲಿನ ವಿಚಾರಗಳ ಸರಣಿಯಾಗಿದೆ. ‘ಆಚರಣೆಗಳು’ ತರಹದ ಪ್ರಬಂಧಗಳನ್ನು ನೋಡಿದರೆ ಈ ಪುಸ್ತಕವನ್ನು ವಿಮರ್ಶಾ ಬರಹಗಳ ಸಂಕಲನವೆನ್ನಬಹುದೆ ಎಂಬ ಸಂದೇಹವೂ ಮೂಡುತ್ತದೆ. 
 
ಅಂತಿಮವಾಗಿ ಪ್ರಕಾರಗಳ ಭಿನ್ನತೆ, ಅವುಗಳ ಪರಿಶುದ್ಧತೆ ಮತ್ತು ಅವುಗಳ ನಡುವಣ ಗೆರೆ ಸಾಕಷ್ಟು ತೆಳ್ಳಗಾಗುತ್ತಿರುವುದನ್ನು ಈ ಸಂಕಲನ ಸೂಚಿಸುವಂತಿದೆ. ವಿಮರ್ಶೆಯಲ್ಲಿ ಕಳೆದುಕೊಂಡದ್ದನ್ನು ಲಲಿತ ಪ್ರಬಂಧಗಳ ಮೂಲಕ ಪಡೆಯುವ ಲೇಖಕನೊಬ್ಬನ ಪ್ರಯತ್ನವಾಗಿಯೂ ಗಿರಡ್ಡಿಯವರ ಈ ಬರಹಗಳನ್ನು ನೋಡಲು ಸಾಧ್ಯವಿದೆ. ಸದ್ಯಕ್ಕೆ ಇದೇ ಅವರ ಈ ಹೊಸಬಗೆಯ ಬರಹಗಳನ್ನು ವಿವರಿಸುವ ಮಾತಾಗಬಹುದು. 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.