ವಾರ್ಸಾದಲ್ಲೊಬ್ಬ ಭಗವಂತ

ವಾರ್ಸಾದಲ್ಲೊಬ್ಬ ಭಗವಂತ


ಲೇಖಕ : ಎಸ್. ಕಾರ್ಲೋಸ್; ಕನ್ನಡಕ್ಕೆ: ಜಯಲಲಿತಾ
ಪ್ರಕಾಶಕರು : ಅಭಿನವ, 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು – 560040.
ಪ್ರಕಟವಾದ ವರ್ಷ : .
ಪುಟ : 420
ರೂ : ₹ 400
ತಮಿಳು ಸಮುದಾಯ ತನ್ನ ನಾಯಕರನ್ನು ಸೃಷ್ಟಿಸಿಕೊಳ್ಳುವ ಬಗೆಯೇ ವಿಚಿತ್ರ. ‘ದ್ರಾವಿಡ ಕಳಗಂ’ನ ಸೃಷ್ಟಿಯು ಕೊನೆಗೆ ಬಣ್ಣದ ಲೋಕದ ಭ್ರಮಾಸೃಷ್ಟಿಯ ನಾಯಕರುಗಳ ಆವಿಷ್ಕಾರಕ್ಕೆ ಕಾರಣವಾಗಿದ್ದು – ತಮಿಳುತನದ ಕನಸು, ಕನಸಾಗಿಯೇ ಉಳಿಯುವಲ್ಲಿ ಯಶಸ್ವಿಯಾಗಿದ್ದನ್ನು ನಾವು ಬಲ್ಲೆವು.

ಅಷ್ಟೈಶ್ವರ್ಯದ ಅಮ್ಮ, ಚಿನ್ನಮ್ಮರ ಸೃಷ್ಟಿ; ಸಿಕ್ಸ್ ಪ್ಯಾಕ್ ‘ನಾಯಕ’ರುಗಳ ಸೃಷ್ಟಿ, ಬಿಳಿ ಶುಭ್ರ ಪಂಚೆಯ ವಸನಧಾರಿ, ಆಳುವ ರಾಜಕಾರಣಿಗಳು ಬಾಗಿ ನಮಿಸುವ ಚಿತ್ರ, ಕಪ್ಪು ಬಣ್ಣದ ಬಲಿಷ್ಠ ಮೈಯ ಜೊತೆಗೆ ಒಂದಿಷ್ಟೂ ಹೊಂದಿಕೆಯಾಗುವುದಿಲ್ಲವಲ್ಲ ಎನ್ನುವ ಭಾವ ಬಲಿಯುವಂತೆ ಮಾಡುವ ಕ್ಷಣಗಳಲ್ಲಿಯೇ ನನಗೆ ಆತಂಕವಾಗಿದ್ದು ತಮಿಳು ಸಂಸ್ಕೃತಿ ತನ್ನ ದೇಸೀತನವನ್ನು ರೂಪಿಸಿಕೊಳ್ಳುತ್ತಿರುವ ಬಗೆ ಯಾವುದು ಎಂಬ ನೆಲೆಯಲ್ಲಿಯೇ.
 
ಕಾರ್ಲೋಸ್ ಅವರ ‘ವಾರ್ಸಾದಲ್ಲೊಬ್ಬ ಭಗವಂತ’ ಕಾದಂಬರಿಯನ್ನು ಓದುತ್ತಿದ್ದಂತೆ ನನಗೆ ತಮಿಳು ಸಂಸ್ಕೃತಿಯ ಕುರಿತ ಮೇಲೆ ವಿವರಿಸಿದ ಚಿತ್ರಗಳು, ಆಲೋಚನೆಗಳು ಹಾದುಹೋದವು. ಮೇಲುನೋಟಕ್ಕೆ ಅಲ್ಲವೆನಿಸಿದರೂ ಆಳದಲ್ಲಿ ಕಾರ್ಲೋಸರ ಈ ಕಾದಂಬರಿ ಆ ಪ್ರಶ್ನೆಯನ್ನು ಎದುರಿಸಿದೆ ಅನ್ನಿಸಿತು. ಆಧುನಿಕ ಯುಗದ ಸಮುದಾಯಗಳ ತಬ್ಬಲಿತನವನ್ನು, ಶಕ್ತಿಹೀನತೆಯನ್ನು ತಮಿಳು ಭಾಷೆಯಲ್ಲಿ ರೂಪಕವಾಗಿ ಹಿಡಿದ ವಿಶಿಷ್ಟ ‘ಕಥನ ಚಿತ್ರ’ ಈ ಕಾದಂಬರಿ.
 
ವಲಸೆ ಮತ್ತು ಅಸ್ತಿತ್ವವೇ ಇಲ್ಲದಿರುವ ಬದುಕಿನ ತಲ್ಲಣಗಳು, ಸಾವಿನಂತೆ ಅಥವಾ ಭಗವಂತನಂತೆ ಎಷ್ಟು ತಣ್ಣಗಿರಬಹುದು ಎನ್ನುವುದು ‘ವಾರ್ಸಾದಲ್ಲೊಬ್ಬ ಭಗವಂತ’ ಕೃತಿಯನ್ನು ಓದಿದರೆ ಅನುಭವಕ್ಕೆ ತಟ್ಟುತ್ತದೆ.
 
ತಮಿಳು ಸಂಸ್ಕೃತಿ ತನ್ನ ದೇಸೀ ವೈಭವದ ಬಗ್ಗೆ ಬಹಳ ಹೆಮ್ಮೆಪಡುವ ಭಾವಾವೇಶವು ಎಂಥ ಮೇಲು ನೋಟದ ‘ಜಲ್ಲಿಕಟ್ಟು’ ಎನ್ನುವುದನ್ನು ಈ ಕೃತಿಯು ಅತ್ಯಂತ ಆತಂಕದಿಂದ ಹಾಗೂ ವಿಷಾದದಿಂದ ಹಿಡಿಯುತ್ತದೆ.
 
ಏಕೆಂದರೆ ಯಾವುದನ್ನು ಶಕ್ತಿಶಾಲಿ ತಮಿಳುತನಕ್ಕೆ ಹೋಲಿಸಲಾಗುತ್ತದೋ ಅಂಥ ‘ಜಲ್ಲಿಕಟ್ಟು’ ಆಚರಣೆಯು ಕೇವಲ ಆಚರಣೆಯಲ್ಲೇ ಉಳಿದುಹೋದ ವಿಷಾದ ಇತಿಹಾಸವನ್ನು ತನ್ನ ಆಂತರ್ಯದಲ್ಲಿ ಬಿಂಬಿಸುತ್ತದೆ. ನೆಲ ಉಳುವ ಗೂಳಿಯನ್ನು ಬಗ್ಗಿಸುವುದು, ತನ್ನನ್ನು ತಾನೇ ಬಗ್ಗಿಸಿಕೊಂಡಂತೆ ಎಂದು ತಿಳಿಯದ ವಿಷಾದ ಪರಿಸ್ಥಿತಿ.
 
ಆಧುನಿಕ ವಸಾಹತು ಭಾರತವೆಂಬ ಈ ಪ್ರದೇಶದಲ್ಲಿ ತನ್ನದು ಎನ್ನುವುದನ್ನು ತೊರೆದು ವಲಸೆಗೆ ನೂಕಲಾದ ಸಮುದಾಯಗಳಲ್ಲಿ ತಮಿಳು ಸಮುದಾಯ ಮುಂಚೂಣಿಯಲ್ಲಿ ಇದೆ. 1931ರಲ್ಲಿ ಸಿಲೋನ್, ಮಲಯಾ, ಬರ್ಮಾಗಳಿಗೆ ವಸಾಹತುಗಳ ಕೂಲಿ ಕಾರಣವಾಗಿ, ಒತ್ತಾಯದಿಂದ, ಅಮಾನವೀಯವಾಗಿ ವಲಸೆ ಹೋಗಿ, ಅಲೆಮಾರಿಗಳಾಗಬೇಕಾಗಿ ಬಂದ ಕಥೆ – ತಮಿಳು ಸಮುದಾಯದ ದುರಂತ ಕಥೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾದಿಂದ ಓಡಿಸಲಾದವರಲ್ಲಿ ತಮಿಳರು ಬಹುಸಂಖ್ಯೆಯಲ್ಲಿದ್ದವರು. ಇತ್ತೀಚೆಗೆ ‘ಸಿರಿಮಾವೊ ಶಾಸ್ರಿ’ ಒಪ್ಪಂದದಲ್ಲಿ ಆರು ಲಕ್ಷ ತಮಿಳರು ತಮ್ಮ ಮನೆ–ಮಠ ಬಿಟ್ಟು ತಮಿಳುನಾಡಿಗೆ ವಲಸೆ ಬಂದದ್ದೂ ಒಂದು ದುರಂತದ ಕಥನ. ಹೀಗಾಗಿ ತಮಿಳು ದೇಸೀಯತೆಯ ಪ್ರಶ್ನೆಯನ್ನು ಪರೀಕ್ಷಿಸಿ ನೋಡಬೇಕಾದ ಒಳನೋಟಗಳ ಅಗತ್ಯ ಇದೆ.
 
ಕಾರ್ಲೋಸ್ ಅವರ ಕಾದಂಬರಿಯ ‘ಕಥನ’ ಈ ದುರಂತದ ಅಸ್ಮಿತೆಯನ್ನು ರೂಪಕಾತ್ಮಕವಾಗಿ ಹಿಡಿಯಲು ಯತ್ನಿಸಿದ ಮೊಟ್ಟ ಮೊದಲ ಕೃತಿ. ಇದು ಗರ್ವಭಂಗರ ಕಥನವಲ್ಲ. ತನ್ನೊಳಗನ್ನು ತಾನೇ ಬುಡಮಟ್ಟ ನೋಡಿಕೊಳ್ಳುವಂತೆ ಮಾಡುವ ಕಥನ. ಈ ಕಥನದ ಭಾಷೆಯು ವಾಸ್ತವತಾಮಾರ್ಗವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟ ಭಾಷೆ.

ಅವರ ಮೊದಲ ಕಾದಂಬರಿ ‘ಇವರು ಕಥೆಯಾದವರು’ ತಮಿಳಿನಲ್ಲಿ ಮೊಟ್ಟ ಮೊದಲ ಬಾರಿಗೆ ವಾಸ್ತವತಾಮಾರ್ಗವನ್ನು ಬಿಟ್ಟುಕೊಟ್ಟು ಬರೆದ ಮಾದರಿಯದು ಎಂದು ಗುರುತಿಸಲಾಗಿದೆ. ‘ವಾರ್ಸಾದಲ್ಲೊಬ್ಬ ಭಗವಂತ’ ಅತಿವಾಸ್ತವತೆಯ ಅನೇಕ ಆಯಾಮಗಳನ್ನು ಕಾದಂಬರಿಯ ಭಾಷೆಯಾಗಿ ಬಳಸಿಕೊಂಡಿದೆ. ಕಲ್ಪನೆ, ಅತಾರ್ಕಿಕತೆ, ಇವುಗಳೆಲ್ಲವನ್ನೂ ಕಾಲ–ದೇಶದ ಆಚೆಗೆ ಉಯ್ಯಾಲೆಯಾಡಿಸಿ, ಅನುಭವಕ್ಕೆ ತಟ್ಟುವಂತೆ ಮಾಡುವ ಒಂದು ಪಕ್ವ ಶೈಲಿಯು ಸಿದ್ಧಿಸುತ್ತಿರುವ ಹಂತವನ್ನು ಈ ಕಥನಚಿತ್ರದಲ್ಲಿ ನಾನು ಕಂಡಿದ್ದೇನೆ.
 
ಈ ಕಾದಂಬರಿಯನ್ನು ಬೇಕೆಂದೇ ನಾನು ‘ಕಥನಚಿತ್ರ’ ಅಥವಾ ‘ಚಿತ್ರಕಥನ’ವೆಂದು ಕರೆಯಲು ಇಷ್ಟಪಡುತ್ತೇನೆ. ಏಕೆಂದರೆ ಅತಿವಾಸ್ತವತೆಯಿಂದಾಗಿ ಈ ಕಾದಂಬರಿಯು ಕಟ್ಟಿಕೊಡುವ ಘಟನೆಗಳು ಹಾಗೂ ವಿವರಗಳು ಪ್ರತಿಮಾತ್ಮಕ ನೆಲೆಯಲ್ಲಿ ಒಂದು ವಿಭಿನ್ನ ಪ್ರತಿ ಸೃಷ್ಟಿಯನ್ನು ಮಾಡಿಬಿಡುತ್ತದೆ.
 
ಆಧುನಿಕತೆಯ ವಸಾಹತು ಪ್ರಭುತ್ವದ ಕ್ರೂರವಾದ ಬದುಕಿನ ಸ್ವಾರ್ಥ ಆಕಾಂಕ್ಷೆಗಳು ಜಗತ್ತಿನ ಎಲ್ಲೆಡೆ, ಸಾಮಾನ್ಯ ಸಮುದಾಯಗಳ ಮೇಲೆ ಮಾಡಿದ ಗಾಯದ ಗುರುತುಗಳು, ಕಾಲವನ್ನೂ ದಾಟಿ ಮಾಡಿದ ಪರಿಣಾಮಗಳನ್ನು ಈ ಕಥನವು ಹಿಡಿಯುತ್ತದೆ. ಅತ್ಯಂತ ಖಾಸಗಿ ಬದುಕಿನ ಪ್ರೇಮ, ಲೈಂಗಿಕತೆ, ಸೃಜನಶೀಲತೆ, ಸಂಬಂಧಗಳು – ಇವುಗಳಿಂದ ಹಿಡಿದು, ಸಾಮಾಜಿಕವಾದ ಬದುಕೂ ಜರ್ಝರಿತಗೊಳ್ಳುವುದನ್ನು ಕಾರ್ಲೋಸ್ ಹಿಡಿಯುತ್ತಾರೆ.
 
ಬರ್ಮಾದಲ್ಲಿ ಎರಡನೇ ವಿಶ್ವಯುದ್ಧದಲ್ಲಿ ನಡೆದ ಘಟನೆಯೊಂದರಿಂದ ಕಥೆ ಆರಂಭವಾಗುತ್ತದೆ. ಕಾದಂಬರಿಯ ಮುಖ್ಯ ಪಾತ್ರ ಚಂದ್ರನ್ ಇದರ ನಿರೂಪಕ. ಇವನು ನಿರೂಪಕನೂ ಹೌದು, ಚರಿತ್ರೆಯ ಘಟನಾವಳಿಗಳ ಭಾಗವೂ ಹೌದು. 
 
ದಕ್ಷಿಣ ಭಾರತದ ವ್ಯಕ್ತಿ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಬರ್ಮಾದಿಂದ ಓಡಿಬರುವಾಗ ಅನೇಕ ವಸ್ತುಗಳನ್ನು ತರುತ್ತಾನೆ. ‘ನಾಯಿಮರಿ’ ಎಂದು ತಿಳಿದು ಮೂರು ವರ್ಷದ ಅನಾಥ ಬರ್ಮಿಯ ಹೆಣ್ಣುಮಗುವನ್ನು ತಂದು ಮಗಳಂತೆ ಸಾಕಿ, ತನ್ನ ಸಂಬಂಧಿಕನೊಬ್ಬನಿಗೆ ಮದುವೆ ಮಾಡಿಸುತ್ತಾನೆ.
 
ಅವರಿಬ್ಬರ ಮದುವೆಯ ಫಲ – ಚಂದ್ರನ್. ತನ್ನ ಅಮ್ಮನ ಹಾಗೆ ಬೆಂಕಿಯು ಹತ್ತಿ ಉರಿದು ನಾಶವಾಗುವುದನ್ನು ಅದು ನಡೆಯುವ ಮೊದಲೇ ತನ್ನ ಒಳಗೆ ಕಾಣುವಂಥವನು. ಕಂಪ್ಯೂಟರ್ ಪರಿಣತನಾದ ಚಂದ್ರನ್ ಪೋಲೆಂಡಿನ ವಾರ್ಸಾಕ್ಕೆ ಬಂದ.
 
ಅಲ್ಲಿ ಭೆಟ್ಟಿಯಾಗುವ ಮಲಿನೋವಸ್ಕಾ, ಸಂಧಿಸುವ ಇನ್ನೊಂದು ಹೆಣ್ಣು ಲಿಡಿಯಾ, ಅವಳ ಅಣ್ಣ ಲಿಯೋನ್, ಅವಳ ಕಿರುವಯಸ್ಸಿನ ಪ್ರೇಮಿ, ಚಂದ್ರನ್‌ನನ್ನು ವಿಮಾನ ನಿಲ್ದಾಣದಲ್ಲಿ ಆಹ್ವಾನಿಸಲು ಬರುವ ‘ಶಿವನೇಸಂ’ ಇವರೆಲ್ಲರ ಒಳಗೂ ಅಡಗಿರುವ ಕಥನಗಳು ಚಂದ್ರನ್ನನದೇ ಗತಿಬಿಂಬಗಳಾಗಿಬಿಡುವುದು, ತಾರ್ಕಿಕವಾಗಿ ಸಹಜ. ವರ್ತಮಾನದಲ್ಲಿ ಬಿಚ್ಚಿಕೊಳ್ಳುವ ಎಲ್ಲರ ಭೂತ ಹಾಗೂ ಭವಿಷ್ಯವಿರದ ವರ್ತಮಾನ, ಇವುಗಳು ಒಂದರೊಳಗೆ ಒಂದು ಕಲಸಿಕೊಳ್ಳುವ ಕಾದಂಬರಿಯ ಕಥನ ತಂತ್ರ ಮಾರ್ಮಿಕವಾಗಿ ರೂಪುಗೊಂಡಿದೆ.
 
ನಾಜಿಗಳ ಹೊಡೆತಕ್ಕೆ ಸಿಲುಕಿ ಪೋಲೆಂಡ್, ವಸಾಹತು ಶಕ್ತಿಗಳ ಹೊಡೆತಕ್ಕೆ ಸಿಲುಕಿ ಭಾರತ ಇವೆರಡರಲ್ಲೂ ಸಮುದಾಯಗಳು ಅನುಭವಿಸಿದ ತತ್ತರಗಳು ಒಂದೇ ಆಗಿವೆ. ಜನಾಂಗದ ಶ್ರೇಷ್ಠತೆಯ ಹೆಸರಿನಲ್ಲಿ ನಡೆದ ನಾಜಿಗಳ ಬರ್ಬರತೆಯನ್ನು ಅನುಭವಿಸಿದ ಪೋಲೆಂಡ್, ವಿಭಿನ್ನ ಜನಾಂಗಗಳ ಸಂಕರದಿಂದ ಹುಟ್ಟಿದ ಚಂದ್ರನ್‌ನನ್ನು ಆತ್ಮೀಯವಾಗಿ ಅರಿತಿರುವುದು ಆಕಸ್ಮಿಕವಲ್ಲದಂತೆ ಕಾದಂಬರಿಯ ನಿರೂಪಣೆ ಇದೆ. ಆದರೆ ಈ ಎರಡೂ ಬದುಕುಗಳ ಗೋಳು ಒಂದೇ ಆಗಿದೆ.
 
ಕಾಮವು ಜೀವನದ ಇಚ್ಛೆಯನ್ನು, ಸೃಷ್ಟಿ ಹಾಗೂ ಸೃಜನಶೀಲತೆಯನ್ನು ಉಂಟು ಮಾಡಿ ಫಲಕೊಡುವಂತಿರಬೇಕು, ಆದರೆ ಈ ಸಂಬಂಧವು ಎಲ್ಲೆಲ್ಲೂ ಸಾವನ್ನೇ ತರುವುದು ಕಾದಂಬರಿಯಲ್ಲಿ ‘ಸಮುದಾಯಗಳ ಜೀವನನಾಶ’ದ ರೂಪಕದಂತೆ ಮತ್ತೆ ಮತ್ತೆ ಕಾಣುತ್ತದೆ.

ಲಿಡಿಯಾ ಅವಳ ಪ್ರಿಯಕರನ ಸಂಗ ಮಾಡಿದ ಸನ್ನಿವೇಶವನ್ನು ಹೀಗೆ ನಿರೂಪಿಸುತ್ತಾಳೆ: ‘‘ನನ್ನೆರಡು ಕುಚಾಗ್ರಗಳಿಗೆ ಮುತ್ತನ್ನಿಟ್ಟು ತೆಗೆದಾಗ... ‘ನಾನು’ ಎಂಬ ನನ್ನದು ನನ್ನನ್ನು ಬಿಟ್ಟು ಹೋಗುತ್ತಿದೆ ಎಂಬುದನ್ನು ಅರಿತೆ... ಅವನ ತಲೆಯನ್ನು ನನ್ನೆರಡು ಕೈಗಳಿಂದಲೂ ಹಿಡಿದು ಜೋರಾಗಿ ದೂರಕ್ಕೆ ತಳ್ಳಿದೆ.

ಆಗ ಏನೋ ಒಂದು ಮತ್ತೆ ಬಂದು ಯೋಚಿಸುತ್ತಾ.... ನನ್ನ ಎಳೆಯ ಕುಚಗಳನ್ನು ಮರೆ ಮಾಚಿ ಅತ್ತೆ... ಅದೇ ಸಮಯಕ್ಕೆ ಆಶ್ಚರ್ಯಕರವಾದ ಘಟನೆಯೊಂದು ಸಂಭವಿಸಿದಂತೆ ನನಗೆ ಭಾಸವಾಯಿತು. ಅವನು ನನ್ನ ಸ್ಕರ್ಟ್‌ನ ಒಳ ತೊಡೆಯಲ್ಲಿ ಕೈ ಇಟ್ಟ ಜಾಗದಲ್ಲಿ ಒಂದು ನೆರಳು ಬಿದ್ದಂತೆ ಅನ್ನಿಸಿತು’’. ಗಂಡು–ಹೆಣ್ಣುಗಳ ಲೈಂಗಿಕತೆಯು ವೈಫಲ್ಯದಲ್ಲಿ ಮಾತ್ರವಲ್ಲದೆ ಸಾವಿನಲ್ಲಿ ಕೊನೆಗೊಳ್ಳುವುದು ಎಲ್ಲ ಪಾತ್ರಗಳ ಸಂಬಂಧದ ಕತೆಯೇ ಆಗಿದೆ.
 
ಭೂತದ ಪರಿಣಾಮವೇ ವರ್ತಮಾನ ಎಂದು ನಂಬುವ ‘ವಾರ್ಸಾದಲ್ಲೊಬ್ಬ ಭಗವಂತ’ ಕಥನವು ‘ಆಧುನಿಕತೆ’ ಎಂಬ ಭೂತದ ಬಗ್ಗೆ ತಿದ್ದಲಾರದ ಭಾಷ್ಯ ಬರೆದ ಹಾಗಿದೆ. ಕಾದಂಬರಿಯಲ್ಲಿ ವಾರ್ಸಾ ನಗರ ಕುರಿತ ವರ್ಣನೆ ಬರುತ್ತದೆ. ಲಿಡಿಯಾಳು ನಿರೂಪಕನಾದ ಚಂದ್ರನ್‌ಗೆ ವಾರ್ಸಾದ ಒಂದು ಜಾಗದಲ್ಲಿ ಭೆಟ್ಟಿಯಾಗಲು ಹೇಳುತ್ತಾಳೆ. ಅವಳನ್ನು ಭೆಟ್ಟಿಯಾಗಲು ಹೊರಟವನಿಗೆ ಲಿಡಿಯಾಳ ಬಗ್ಗೆ ಹೀಗೆ ಅನ್ನಿಸುತ್ತದೆ.
 
‘‘ಬಿಳಿ ಮತ್ತು ಬ್ರೌನ್ ಬಣ್ಣದ ಲೆದರ್ ಬ್ಯಾಗ್‌ನೊಡನೆ ಕಾಯುತ್ತಿರುವ ಲಿಡಿಯಾ ಒಂದು ವಾಸ್ತವವಾದ ಹೆಣ್ಣಾಗಿರುವುದಕ್ಕಿಂತ ವಾಸ್ತವವಾದ ಹೆಣ್ಣೊಬ್ಬಳು ಮರೆಯಾದರೆ, ಆ ವಾಸ್ತವದ ಪ್ರತಿಬಿಂಬ ತನ್ನ ಜೀವಿತವನ್ನು ಮುಂದುವರೆಸಿದರೆ ಹೇಗೆ ಇರುವುದೋ ಆ ರೂಪದಲ್ಲಿ ಇರುತ್ತಾರೆ ಎಂದು ಯೋಚಿಸಿದೆ’’. 
 
ಭ್ರಮೆ ಮತ್ತು ವಾಸ್ತವಗಳ ಲೋಕಗಳ ಭಿನ್ನತಯೇ ಮರೆಯಾಗಿಬಿಟ್ಟ ವಾತಾವರಣ ಕಾದಂಬರಿಯಲ್ಲಿ ಆವರಿಸಿರುವ ಇನ್ನೊಂದು ರೂಪಕ. ಇಲ್ಲಿ ಭೂತವು ಆವರಿಸಿ ಮಾತನಾಡುತ್ತಿದೆಯೋ, ವರ್ತಮಾನವು ಭೂತದಂತೆ ಇದೆಯೋ...!
 
ಸಾವಿನ ಬಣ್ಣಗಳಾದ ನೀಲಿ, ಕರಿ, ಬೂದು, ಬಿಳಿ – ಕಾದಂಬರಿಯ ಕಥನ ಚಿತ್ರದಲ್ಲಿ ಮತ್ತೆ ಮತ್ತೆ ಹಿನ್ನೆಲೆಯಲ್ಲಿ ಬಂದೇ ಬರುತ್ತವೆ. ಕಾಲು ಬೆರಳಿಲ್ಲದ ಅಮಲಾ ಇದ್ದಾಳೆ; ಕೈಯ ಕೆಲವು ಬೆರಳುಗಳನ್ನು ಕಳೆದುಕೊಂಡ ಶಿವನೇಸಂ – ಉಳಿದ ಬೆರಳಿನ ನಡುವೆ ನೀಲಿ ಶಾಯಿಯ ಪೆನ್ನು ಹಿಡಿದು ಅದನ್ನು ಚಂದ್ರನ್‌ನ ಮೈಯೊಳಗೆ ಹೋಗುವಂತೆ ಮಾಡುವಂಥವನು. ವಾರ್ಸಾದಲ್ಲಿ ಕಾಲವನ್ನು ಮೀರಿದ ವ್ಯಕ್ತಿತ್ವದಿಂದಾಗಿ ಭಗವಂತನಂತೆ ಇದ್ದಾನೆ.
 
ಸತ್ತಿದ್ದಾನೋ ಇದ್ದಾನೋ ಎನ್ನುವ ಸ್ಥಿತಿಯೇ ಓದುಗನಿಗೆ ಗೊಂದಲವಾಗುವ ಹಾಗೆ ಈತನ ಕಾಣ್ಕೆ. ಈತ ಭೂತವೋ ಭಗವಂತನೋ? ಅಥವಾ ಎರಡೂ ಒಂದೆಯೋ? ಕರ್ನಾಟಕದ ದಕ್ಷಿಣಕನ್ನಡದಲ್ಲಿ ಎಲ್ಲ ಭೂತಗಳು ದೈವವೇ ಆದಹಾಗೆ!. ಮನುಷ್ಯರ ಕಳ್ಳಸಾಗಾಣಿಕೆಯಲ್ಲಿ ಆಕಸ್ಮಿಕವಾಗಿ ಬದುಕಿ ಉಳಿದನೋ... ಅಥವಾ ಸತ್ತು ಬದುಕಿದನೋ ಇವನು ಎಂಬಂತೆ ಗುಮ್ಮಾಂಗುತ್ತು ಹೆಸರಿನಿಂದ ಸಿವಸೇನನಾಗಿ ಮರುಹುಟ್ಟು ಪಡೆದವನು ಇವನು. ಭೂತವೇ ಭಗವಂತನಾದಾಗ ಸಾವಿನ ಭವಿಷ್ಯವನ್ನೇ ನುಡಿಯುವವನು ಇವನು.
 
ಕಾರ್ಲೋಸರ ಕಾದಂಬರಿ ದಿಗ್ಭ್ರಮೆ ಹುಟ್ಟಿಸುವಷ್ಟು ಅಸ್ತಿತ್ವದ ಆತಂಕಗಳನ್ನು ಓದುಗನ ಮುಂದೆ ಇಡುತ್ತದೆ. ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ; ದಾರಿ ಸಾಗುವುದೆಂತೋ ನೋಡಬೇಕು’ ಎನ್ನುವ ಪ್ರತಿಮೆಯ ಅರ್ಥವನ್ನು ಮೀರಿಸುವ ಸ್ಥಗಿತತೆಯ ಧ್ವನಿ ಈ ಕಥನದಲ್ಲಿದೆ.
 
ಯುರೋಪಿನ ಆಧುನಿಕ ಯಂತ್ರನಾಗರಿಕತೆಯ ಸಂದರ್ಭದಲ್ಲಿ ಸೃಷ್ಟಿಯಾದ ತೀವ್ರ ಅಸ್ತಿತ್ವ ಬಿಕ್ಕಟ್ಟಿನ ಕಥನಗಳನ್ನು ಒಮ್ಮೆ ನೆನಪಿಸಿ, ನಡುಗಿಸುವಷ್ಟು ನಿರಾಶಾದಾಯಕವಾದ ವರ್ತಮಾನದ ಚಿತ್ರ ಈ ಕಥನದ್ದು. ಅನೇಕರು ಈ ಕಥನ ಚಿತ್ರವನ್ನು ಪೋಸ್ಟ್ ಮಾಡರ್ನ್ ಎಂದು ಕರೆದಿದ್ದಾರಂತೆ. ಅಂಥ ಇಕ್ಕಟ್ಟಿನ ವಿಮರ್ಶೆಯ ಜಾರ್ಗನ್ನುಗಳನ್ನು ಬಿಟ್ಟು ಇದನ್ನು ಒಂದು ಸಂಸ್ಕೃತಿ ಕಥನದ ತಾತ್ವಿಕರೂಪಕವಾಗಿ ಓದಿದರೆ ಎಲ್ಲ ಆಧುನಿಕತೆಯ ಹುರುಳು ಕಣ್ಣಿಗೆ ಕಂಡೀತು.
 
ಈ ಕಾದಂಬರಿಯನ್ನು ಅಕ್ಷರಕ್ಷರ ಸೂಕ್ಷ್ಮವಾಗಿ ಓದಿ, ಸೃಜನಾತ್ಮಕವಾಗಿ ಹಿಡಿದಿದ್ದಾರೆ ಜಯಲಲಿತಾ. ಕಾರ್ಲೋಸರ ಕಾದಂಬರಿಯ ಓದು ಅಂದರೆ ವಾಕ್ಯ ವಾಕ್ಯಗಳ ಓದು. ಏಕೆಂದರೆ ಅದು ಕಥೆಯನ್ನು ಹೇಳುವ ಚಟಕ್ಕೆ ಬಿದ್ದದ್ದಲ್ಲ? ಕಥನದೊಳಗಿನ ಅರ್ಥ ಗೊತ್ತಾಗಬೇಕಾದರೆ ಕಾದಂಬರಿಯ ಭಾಷೆಯನ್ನು ಅರ್ಥಕ್ಕೆ ಒಗ್ಗಿಸಿಕೊಳ್ಳಬೇಕು.

ಅಂಥ ಸೃಜನಶೀಲ ಪ್ರಯತ್ನವು ಭಾಷಾಂತರದ ಕ್ರಿಯೆಯಲ್ಲಿ ಈಗ ಅಪರೂಪವಾಗುತ್ತಿರುವ ಹಾಗೂ ಎಲ್ಲವೂ ಯಾಂತ್ರಿಕವಾದ ಭಾಷೆಯಲ್ಲೇ ಅನುವಾದಿತಗೊಳ್ಳುತ್ತಿರುವಾಗ ಜಯಲಲಿತಾ ಅವರು ಇದನ್ನು ಕನ್ನಡ ನುಡಿಗಟ್ಟಿನ ಜಾಯಮಾನಕ್ಕೆ ಒಗ್ಗಿಸಿದ್ದಾರೆ. ತಮಿಳು ಸೀಮೆಯಿಂದ ಕನ್ನಡ ಸೀಮೆಗೆ ದಾಟಿಸಿದ ನಿಸ್ಸೀಮೆ ಈಕೆ. 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.