ದ ಟೇಲ್ ಆಫ್ ಗೆಂಜಿ

ಎಲ್ಲ ಕಾದಂಬರಿಗಳ ತಾಯಿ ‘ದ ಟೇಲ್ ಆಫ್ ಗೆಂಜಿ’


ಲೇಖಕ :
ಪ್ರಕಾಶಕರು : .
ಪ್ರಕಟವಾದ ವರ್ಷ : .
ಪುಟ : .
ರೂ :
ಕನ್ನಡದ ಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾ ಬಾಯಿ’(1899) ಎಂಬುದು ಪ್ರತೀತವಾಗಿದ್ದರೂ ‘ಆಧುನಿಕ ಕನ್ನಡ ಕಾದಂಬರಿಗಳು’ ಎಂದರೆ, ಅನಂತರದ ನೂರು ವರ್ಷಗಳಲ್ಲಿ ಬಂದಿರುವ ಗಳಗನಾಥ, ತಿರುಮಲಾಂಬ, ಕೆ.ವಿ. ಅಯ್ಯರ್, ಕೆ.ವಿ. ಪುಟ್ಟಪ್ಪ, ಶಿವರಾಮ ಕಾರಂತ, ಮ.ನ. ಮೂರ್ತಿ ಮತ್ತು ‘ಅನಕೃ’ ಮುಂತಾದವರ ಕೃತಿಗಳು ಎಂದು ತಿಳಿಯಬೇಕಾಗುತ್ತದೆ.

‘ಕಾದಂಬರಿ’ ಎನ್ನುವ ಶಬ್ದದ ಬಳಕೆಯಿರುವುದು ಕನ್ನಡದಲ್ಲಿ ಮಾತ್ರ; ಭಾರತದ ಉಳಿದ ಭಾಷೆಗಳಲ್ಲಿ ಬೇರೆ ಬೇರೆ ಶಬ್ದಗಳ ಬಳಕೆ ಇದೆ. ಹಿಂದಿಯಲ್ಲಿ ‘ಉಪನ್ಯಾಸ್’, (ಉಪನ್ಯಾಸಕಾರ ಎಂದರೆ ಕಾದಂಬರಿಕಾರ). ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ‘ನೋವೆಲ್’ ಎಂದೇ ಹೇಳಲಾಗುತ್ತದೆ.
 
7ನೇ ಶತಮಾನದಲ್ಲಿ ಸಂಸ್ಕೃತದಲ್ಲಿ (ಹರ್ಷಚರಿತದ ರಚಯಿತನೂ ಆದ) ಬಾಣಭಟ್ಟನಿಂದ ರಚಿತವಾದ ಗದ್ಯಬರಹವಾದ ‘ಕಾದಂಬರಿ’ ಎನ್ನುವ ಹೆಸರಿನಿಂದಲೇ ಕನ್ನಡಕ್ಕೆ ಕಾದಂಬರಿ ಎನ್ನುವ ಹೆಸರು ಸಿಕ್ಕಿತು.
 
ಬಾಣಭಟ್ಟನ ಕಾದಂಬರಿಯ ಕನ್ನಡಾನುವಾದ ಕನ್ನಡ ಸಾಹಿತ್ಯದ ಮೇಲೆ ಬೀರಿದ ಪ್ರಭಾವ ಕೂಡ ಗಮನಾರ್ಹ. ಆದರೆ ಆಧುನಿಕ ಕನ್ನಡ ಕಾದಂಬರಿಯ ತಾಯಿ ಇಂಗ್ಲಿಷ್ ಕಾದಂಬರಿ ಪ್ರಕಾರವೇ ಹೊರತು ಬಾಣಭಟ್ಟನ ಕಾದಂಬರಿ ಅಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.  
 
‘ನಾವೆಲ್’(ಕಾದಂಬರಿ) ಎನ್ನುವ ಸಾಹಿತ್ಯ ಪ್ರಕಾರ ಹುಟ್ಟಿದ್ದೇ ಇಂಗ್ಲಿಷಿನಲ್ಲಿ ಎನ್ನುವುದು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಪ್ರಚಲಿತವಿರುವ ನಂಬಿಕೆ. 1578ರಲ್ಲಿ ಪ್ರಕಟವಾದ ಜಾನ್ ಲಿಲಿಯ ‘ಯೂಫುಇಸ್’ ಇಂಗ್ಲಿಷ್ ಭಾಷೆಯ ಮೊಟ್ಟ ಮೊದಲ ಕಾದಂಬರಿ ಎಂದು ಪರಿಗಣಿಸಲಾಗುವುದಾದರೂ ಮೊದಲ ನಿಜವಾದ ಆಧುನಿಕ ಇಂಗ್ಲಿಷ್ ಕಾದಂಬರಿಯೆಂದರೆ, 1741ರಲ್ಲಿ ಹೊರಬಂದ ಹೆನ್ರಿ ರಿಚರ್ಡ್ಸ್‌ನ ‘ಪಮೀಲಾ’ ಎನ್ನುವ ಬೃಹತ್ ಕಾದಂಬರಿ.
 
ಆದರೆ ಇಂದಿಗೆ ಒಂದು ಸಾವಿರ ವರ್ಷಗಳ ಹಿಂದೆಯೇ ಜಪಾನಿನಲ್ಲಿ ರಾಜಪರಿವಾರದವಳಾದ ಮುರಸಾಕಿ ಶಾಕಿಬು (ಹುಟ್ಟು: ಕ್ರಿ.ಶ. 976; ಮರಣ: 1031) ಎಂಬಾಕೆ ಬರೆದ ‘ಗೆಂಜಿಯ ಕಥೆ’ (The Tale of Genji) ಎಲ್ಲ ಕಾದಂಬರಿಗಳ ತಾಯಿಯಾಗಿದೆ. ಒಂದು ಸಾವಿರ ವರ್ಷಗಳ ಹಿಂದಿನ ಈ ಕಾದಂಬರಿ ಈಗಲೂ ಓದುಗರನ್ನು ಆಕರ್ಷಿಸುವ ಮಾಯಕ ಗುಣವನ್ನು ಪಡೆದಿದೆ.
 
‘ಗೆಂಜಿಯ ಕಥೆ’ ಕಾಲದ ಮಿತಿಯನ್ನು ಮೀರಿ ಇಲ್ಲಿಯವರೆಗೂ ಜನಮಾನಸದಲ್ಲಿ ಉಳಿದಿರುವುದು ಅದರ ಅನನ್ಯತೆಯನ್ನು ಸಾರುತ್ತದೆ ಎನ್ನಬಹುದು. ಜಗತ್ತಿನ ವಿವಿಧ ಭಾಗದಲ್ಲಿ ‘ಗೆಂಜಿಯ ಕಥೆ’ಯ ಬಗ್ಗೆ ಚರ್ಚೆಗಳು, ಸೆಮಿನಾರುಗಳು ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳು ಜರಗುತ್ತಿವೆ. ‘ಗೆಂಜಿಯ ಕಥೆ’ಯ ಮೇಲೆ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. 
 
‘ಕಾದಂಬರಿ ಎಂದರೆ ಏನು?’ ಎನ್ನುವ ಪ್ರಶ್ನೆಗೆ, ‘ಮತ್ತೇನು? ಪ್ರೀತಿ–ಮದುವೆ’ ಎನ್ನುವುದು ಐದಕ್ಷರದ ಜಗದ್ವಿಖ್ಯಾತವಾದ ಪ್ರತಿಕ್ರಿಯೆ. ನಿಜ. ಕಾದಂಬರಿ ಎಂದರೆ ನಿಜದ ಬದುಕಿನ ವೃತ್ತಾಂತ. ನಿಜದ ಬದುಕಿನಲ್ಲಿ ಕಾಮ–ಪ್ರೇಮ, ಪ್ರೀತಿ–ಮದುವೆ ಇತ್ಯಾದಿ ಅನಿವಾರ್ಯ. ಅದರ ಕೊರತೆ ಇದ್ದ ಕಾದಂಬರಿ ಓದುಗರಿಗೆ ಇಷ್ಟವಾಗದಿರುವುದರಲ್ಲಿ ಆಶ್ಚರ್ಯವಿಲ್ಲ.

‘ಪ್ರೀತಿ–ಮದುವೆ’ ಇಲ್ಲದ ಕಾದಂಬರಿ ಪ್ರಭಾಷಣ ಎನಿಸಿಕೊಂಡದ್ದು ಕೂಡ ಇದೆ. ಹಾಗಾದರೆ ಒಂದು ಸಾವಿರ  ವರ್ಷಗಳ ಹಿಂದಿನ ಕಾದಂಬರಿಯೊಂದರ ಹೂರಣ ಏನಾಗಿರಬಹುದು ಎನ್ನುವ ಕುತೂಹಲ ಸಹಜ. ಆದರೆ ಬೇರೇನು? ‘ಗೆಂಜಿಯ ಕಥೆ’ಯ ಹೂರಣ ಕೂಡ ಅದೇ.
 
ಒಬ್ಬ ಚಕ್ರವರ್ತಿಯ ಮಗನ ಪ್ರೇಮದ ಹುಡುಕಾಟ ಮತ್ತು ಆ ಹುಡುಕಾಟದಲ್ಲಿ ಅವನಿಗೆ ಎದುರಾಗುವ ಮತ್ತು ಎದುರಾಗಿ ನೇಪಥ್ಯಕ್ಕೆ ಸರಿಯುವ ಹಲವು ಯುವತಿಯರ ವಿವರ–ವೃತ್ತಾಂತ.   
 
ಹಲವು ರೊಮ್ಯಾಂಟಿಕ್ ಹಾಡುಗಳಿಂದ ಕೂಡಿದ ‘ಗೆಂಜಿಯ ಕಥೆ’ ಚಿಕ್ಕ ಕಾದಂಬರಿಯೇನಲ್ಲ. ಅದು 735 ಪುಟಗಳ, ಸುಮಾರು ಎಪ್ಪತ್ತೈದು ವರ್ಷಗಳ ಕಾಲಾವಧಿಯ, 350 ಪಾತ್ರಗಳಿರುವ ಒಂದು ಸುದೀರ್ಘ ಕಥೆ. 
 
‘ಗೆಂಜಿಯ ಕಥೆ’ ಜಗತ್ತಿನ ಮೊಟ್ಟ ಮೊದಲಿನ ಅಥವಾ ಅತ್ಯಂತ ಹಳೆಯ ಕಾದಂಬರಿ ಎನ್ನುವುದು ಎಷ್ಟು ಮುಖ್ಯವೋ ಅದನ್ನು ಬರೆದಿರುವುದು ಮಹಿಳೆ ಎನ್ನುವುದು ಇನ್ನೂ ಮುಖ್ಯವಾಗುತ್ತದೆ.

ಜಗತ್ತಿನ 30ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರಬೇಕಾದರೆ ಖಂಡಿತವಾಗಿಯೂ ಸಾಮಾನ್ಯ ಜನಮನವನ್ನು ಮಾತ್ರವಲ್ಲ, ಸಾಹಿತ್ಯಾಸಕ್ತರನ್ನು ಆಕರ್ಷಿಸುವಂಥದು ಅದರಲ್ಲಿ ಏನೋ ಇರಬೇಕಲ್ಲ? ಪ್ರೀತಿ–ಪ್ರೇಮ, ಕಾಮ–ಪ್ರಣಯ ಇತ್ಯಾದಿಯಂತೂ ಖಂಡಿತ ಇರಲೇಬೇಕು! ‘ಗೆಂಜಿಯ ಕಥೆ’ ಜಪಾನೀ ಸಾಹಿತ್ಯದಲ್ಲಿ ಅಸದೃಶವಾದ ಸಾಧನೆ ಎಂದು ಸಾಹಿತ್ಯ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಇದನ್ನು ಪೂರ್ತಿಯಾಗಿ ಓದಿ ಮುಗಿಸುವುದು ಕೂಡ ಒಂದು ಸಾಧನೆಯೇ  ಎಂಬ ಮಾತು ಕೂಡ ಇದೆ! 
 
ಕಥಾಸಾರಾಂಶ
ಗೆಂಜಿ ಚಕ್ರವರ್ತಿಯ ಮಗ. ಅವನ ಪ್ರೀತಿಯ ಪ್ರೇಯಸಿ (ಇಡುಹೆಣ್ಣು) ಕಿರಿತ್ಸುಬೊ. ಓರ್ವ ಕೊರಿಯನ್ ಭವಿಷ್ಯವಾದಿ ‘ಗೆಂಜಿಯ ಭವಿಷ್ಯ ಬಹಳ ಉಜ್ವಲವಾಗಿದೆ’ ಎಂದು ಹೇಳುತ್ತಾನೆ. ಆದರೆ ಅರಮನೆಯ ಇತರ ಹೆಣ್ಣುಗಳ ಈರ್ಷ್ಯೆಗೆ ಗುರಿಯಾದ ಗೆಂಜಿಯ ತಾಯಿ ಅಸೌಖ್ಯಕ್ಕೀಡಾಗಿ ಸಾಯುತ್ತಾಳೆ.

ಚಕ್ರವರ್ತಿ ತನ್ನ ವಿವಾಹಪೂರ್ವ ಪ್ರೇಯಸಿಯನ್ನು ಹೋಲುವ ಫ್ಯೂಜಿತ್ಸುಬೊ ಎನ್ನುವವಳನ್ನು ಉಪಪತ್ನಿಯನ್ನಾಗಿ ಇಟ್ಟುಕೊಳ್ಳುತ್ತಾನೆ. ಚಿಕ್ಕ ಹುಡುಗ ಗೆಂಜಿಗೆ ರಾಜಪರಿವಾರದಲ್ಲಿ ಓಲೈಸುವವರಿಲ್ಲದಾಗಿ ಅವನ ತಂದೆ (ಚಕ್ರವರ್ತಿ) ಅವನನ್ನು ರಾಜಮನೆತನದ ಹೊರಗಿನ ವಂಶಸ್ಥರ ವಶಕ್ಕೆ ನೀಡುತ್ತಾನೆ.

ಚಕ್ರವರ್ತಿ ತನ್ನ ಮತ್ತು ತನ್ನ ಪ್ರೇಯಸಿ ಕೊಕಿಡೆನಳ ಮಗನನ್ನು ಯುವರಾಜನನ್ನಾಗಿ ಮಾಡುತ್ತಾನೆ. ಗೆಂಜಿ ಬಹಳ ಸುಂದರ ಮತ್ತು ಚುರುಕು ಬುದ್ಧಿಯ ತರುಣನಾಗಿ ಬೆಳೆಯುತ್ತಾನೆ. ಎಲ್ಲರೂ ಅವನನ್ನು ಬಹಳ ಮೆಚ್ಚಿಕೊಂಡರೂ ಕೊಕಿಡೆನ್ ಮತ್ತು ಅವನ ಕುಟುಂಬ ಅವನನ್ನು ದ್ವೇಷಿಸುತ್ತದೆ.
 
ಕಥೆಯ ಮೊದಲ ಭಾಗದಲ್ಲಿ ಗೆಂಜಿ ಮತ್ತು ಅವನ ಹಲವು ಪ್ರೇಯಸಿಯರ ಜೊತೆಗಿನ ಸ್ನೇಹ ಸಂಬಂಧ, ಅವೋಯಿ ಎನ್ನುವ ಹುಡುಗಿಯ ಜೊತೆ ಅರೇಂಜ್‍ಡ್ ಮದುವೆ, ಒಂದು ಗಂಡು ಮಗುವಿನ ಜನನ, ಮತ್ತು ಮುರಸಾಕಿ ಎಂಬ ಚೆಲುವೆಯ ಜೊತೆ ಪ್ರೇಮ ಮೊಳೆಯುವ ವಿವರವಿದೆ. 
 
ತನ್ಮಧ್ಯೆ ಹಳೆಯ ಚಕ್ರವರ್ತಿ ಮೃತನಾಗಿ ಕೊಕಿಡೆನಳ ಮಗ ಪಟ್ಟಕ್ಕೆ ಬರುತ್ತಾನೆ. ಗೆಂಜಿಯ ಪ್ರೇಮ–ಪ್ರಣಯ ಅರಮನೆಯಲ್ಲಿ ಸ್ಕ್ಯಾಂಡಲ್ ಉಂಟುಮಾಡುತ್ತದೆ. ಅವನು ರಾಜಧಾನಿಯನ್ನು ತೊರೆಯಬೇಕಾಗುತ್ತದೆ. 
 
ಕಥೆಯ ಕೊನೆಯ ಭಾಗದಲ್ಲಿ ಗೆಂಜಿ ರಾಜಧಾನಿಗೆ ಮರಳುತ್ತಾನೆ. ಮುರಸಾಕಿ ಮತ್ತು ಇತರ ಹಲವು ಹೆಣ್ಣುಗಳ ಜೊತೆ ರೊಕುಜೊ ಅರಮನೆಯಲ್ಲಿ ನೆಲೆನಿಲ್ಲುತ್ತಾನೆ. ಕಥೆಯ ಈ ಸುದೀರ್ಘವಾದ ಭಾಗದಲ್ಲಿ ಗೆಂಜಿ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಅಭ್ಯುದಯವನ್ನು ಸಾಧಿಸುವ ವಿವರವಿದೆ.
 
ಇತರರ ಬಲವಂತಕ್ಕೊಳಗಾಗಿ ಇಳಿವಯಸ್ಸಿನಲ್ಲಿ ಗೆಂಜಿ ಮತ್ತೆ ಮದುವೆಯಾಗುತ್ತಾನೆ, ಅವನ ಪತ್ನಿ ಒಂದು ಮಗುವಿನ ತಾಯಿಯಾದ ನಂತರ ಬೌದ್ಧ ಸನ್ಯಾಸಿನಿಯಾಗುತ್ತಾಳೆ. 
 
ಗೆಂಜಿಯ ಕಥೆಯ ಗದ್ಯ, ಸಂವಾದ ಮತ್ತು ಕಾವ್ಯಕ್ಕೆ ಮಾದರಿಯಾಗಿ ಕೆಲವು ಸಾಲುಗಳನ್ನು ನೋಡಿ: 
‘‘ಪ್ರಶಾಂತ ತ್ರಿಸಂಧ್ಯೆ. ಮೋಹಕವಾದ ಬಾನಾಗಿ ಕರಗುತ್ತಿರುವಾಗ ಹೂದೋಟದಲ್ಲಿ ಮಿಡತೆಯೊಂದು ತಡೆತಡೆದು ಹಾಡುತ್ತಿತ್ತು. ಅಲ್ಲಿ ಇಲ್ಲಿ ಶರತ್ಕಾಲದ ವರ್ಣಗಳು ಮಿಂಚುತ್ತಿದ್ದವು.
 
ಶರತ್ಕಾಲದ ವರ್ಣಚಿತ್ರದಂತೆ ಕಾಣುವ ಈ ದೃಶ್ಯವನ್ನು ವೀಕ್ಷಿಸುತ್ತಾ ಆ ಸುಂದರ ಪರಿಸರದಲ್ಲಿ ಯೂಕೊನಳ ಮನದಲ್ಲಿ ಮುಸ್ಸಂಜೆಯ ಸುಂದರಿಯರ ನೆನಪು ಮೂಡಿ ಅವಳ ಮುಖವನ್ನು ನಾಚಿಕೆ ಮುತ್ತಿಕೊಂಡಿತು. 
 
ಒಂದು ಪಾರಿವಾಳದ ಕೊರಳದನಿ ಬಿದಿರ ಮೆಳೆಗಳೆಡೆಯಿಂದ ತೇಲಿ ಬಂದು ಗೆಂಜಿಯ ಮನಸ್ಸನ್ನು ಮೃದುವಾಗಿ ತಟ್ಟಿತು. ಹಿಂದಿನ ಸಂಜೆ ಹಳೆಯ ಮಹಲಿನಲ್ಲಿ ಯೂಕೋನಳ ಒಡತಿಯನ್ನು ಯಾರೋ ಕಾಣಲು ಬಂದಾಗ ಯೂಕೋನಳ ಮುಖದಲ್ಲಿ ಕಾಣಿಸಿದ ಆತಂಕದ ಛಾಯೆಯ ನೆನಪು ಬಂದು, ‘ಏನಾಗಿತ್ತು ಅವಳ ಪ್ರಾಯ? ಅವಳ ದುರ್ಬಲ ದೇಹವನ್ನು ಕಾಣುವಾಗ ಅವಳು ಹೆಚ್ಚು ಕಾಲ ಬದುಕುವವಳಲ್ಲ ಎಂದು ನನಗನಿಸುತ್ತಿತ್ತು’. 
 
‘ನನ್ನ ಒಡತಿಗೆ ಹೆಚ್ಚು ಕಡಿಮೆ ಹತ್ತೊಂಬತ್ತು ವರ್ಷವಾಗಿರಬಹುದು. ಆಕೆಯ ಮರಣದ ಬಳಿಕ ಆಕೆಯ ದಾದಿ ತೀರಿಹೋದಾಗ ನಾನು ಅನಾಥಳಾದೆ. ಆಕೆಯ ತಂದೆ ಎಂಥ ಕರುಣಾಮಯಿ! ಅವನು ತನ್ನ ಮಗಳ ಜೊತೆ ತನ್ನ ಮಗಳಂತೆ ನನ್ನನ್ನು ಸಾಕಿ ಬೆಳೆಸಿದ. ಇನ್ನು ನಾನು ಹೇಗೆ ಜೀವಿಸಲಿ? ನಾನು ಆಕೆಗೆ ಅಷ್ಟು ಆತ್ಮೀಯಳಾಗಿರಬಾರದಾಗಿತ್ತು ಅನಿಸುತ್ತದೆ. ನಾನು ಅಷ್ಟು ದೀರ್ಘ ಕಾಲ ಅಷ್ಟು ಕೃಶ ದೇಹದ ನನ್ನ ಯಜಮಾನಿತಿಯನ್ನು ಅವಲಂಬಿಸಿಕೊಂಡಿರಬಾರದಾಗಿತ್ತು’.
 
‘ಒಂದು ಹೆಣ್ಣನ್ನು ಆಕರ್ಷಕಳಾಗಿಸುವುದು ಅವಳ ಕೃಶತೆಯೇ. ತನ್ನ ಸಾಮರ್ಥ್ಯದ ಬಗ್ಗೆ ಬಹಳ ವಿಶ್ವಾಸವಿರುವ ಹೆಣ್ಣು ನನಗೆ ಇಷ್ಟವಾಗುವುದಿಲ್ಲ. ನನಗಿಷ್ಟ ಮೃದು ವ್ಯಕ್ತಿತ್ವವೇ. ಸುಮಾರಾಗಿ ನಾನು ಕೂಡ ಮೃದು ವ್ಯಕ್ತಿಯೇ ಆಗಿರುವುದರಿಂದಾಗಿರಬಹುದು. ನನಗೆ ಇಷ್ಟವಾಗುವ ಹೆಣ್ಣು ಅಂದರೆ, ಗಂಡನನ್ನು ಅನುಸರಿಸಿಕೊಂಡು ಇರಬಲ್ಲವಳು ಎಂದು ಅರ್ಥ’.
 
‘ನನ್ನ ಒಡತಿ ನಿಮಗೆ ಎಷ್ಟೊಂದು ಅನುರೂಪಳಾದ ಜೊತೆಗಾತಿಯಾಗಿರಬಹುದಾಗಿತ್ತು ಎಂದು ನೆನಪಿಸಿಕೊಂಡಾಗ ನನಗೆ ಬಹಳ ಬಹಳ ದುಃಖವಾಗುತ್ತದೆ ನನ್ನ ಒಡೆಯ’.
 
ಆಕಾಶದಲ್ಲಿ ಮೋಡ ದಟ್ಟವಾಯಿತು. ತಂಗಾಳಿ ಇನ್ನಷ್ಟು ತಂಪಾಯಿತು. ಗೆಂಜಿ ವಿಷಾದದಿಂದ ಗುನುಗುನಿಸಿದ, 
 
ಮೇಘ ನನಗೆಂದೂ ಕಾಣಿಸುವುದವಳ 
ಚಿತೆಯಿಂದೇಳುವ ಹೊಗೆಯಂತೆ 
ವಿಶ್ರಮಿಸುವುದು ನನ್ನ ದೃಷ್ಟಿ ಸಂಜೆಯ ಬಾನಿನಲ್ಲಿ (ಪುಟ 76)
 
ಕಾದಂಬರಿಯ ತುಂಬಾ ಹೆಚ್ಚು ಕಡಿಮೆ ಪ್ರತಿ ಪುಟದಲ್ಲಿಯೂ ಕಾಣಿಸುವ ಪುಟ್ಟ ಕವಿತೆಗಳು ಬಹಳ ಮನೋಜ್ಞವಾಗಿವೆ. 
*
ಯಾಕಿನಿತು ಕಾಲ ನಿನ್ನೊಡನೆ ನಾನೇಕೆ ನಿನ್ನ ಬಗ್ಗೆ ಏನೂ ಕೇಳಲಿಲ್ಲ
ಎಂದು ನೀನು ಕೇಳದಾದೆ? 
ಬಹುಶಃ ನನ್ನ ಮನದ ಆತಂಕಗಳನ್ನು ನೀನು ಅರ್ಥ 
ಮಾಡಿಕೊಂಡಿರಬಹುದು (ಪುಟ 77) 
*
ಕಳೆದ ಸಂಬಂಧಗಳ ಕುರಿತು ಗಾಳಿಯಾಡುವ ಪಿಸುಮಾತು 
ಬಡ ಹುಲ್ಲಿನ ಎಲೆಗಳನ್ನು ವಿಷಾದದಿಂದ ಸುತ್ತುವುದು 
ಮಂಜುಗಡ್ಡೆಯಲಿ ಬಂದಿಯಾಗಿರಿಸಿ (ಪುಟ 77)
Comments (Click here to Expand)
ರಾತ್ರಿ ಕಪ್ಪು, ಕೊಡ ಕಪ್ಪು
ರಾತ್ರಿ ಕಪ್ಪು, ಕೊಡ ಕಪ್ಪು
ಚಂದ್ರಕಾಂತ ಪೋಕಳೆ
ವಾಸನಾ
ವಾಸನಾ
ಬನ್‌ಪೂಲ್‌ ಅನುವಾದ: ಪಾ.ವೆಂ. ಆಚಾರ್ಯ
ಪ್ರಾಕೃತ ಜಗದ್ವಲಯ
ಪ್ರಾಕೃತ ಜಗದ್ವಲಯ
ಷ. ಶೆಟ್ಟರ್
ಅಸ್ಪೃಶ್ಯ ಗುಲಾಬಿ
ಅಸ್ಪೃಶ್ಯ ಗುಲಾಬಿ
ಮಂಜುನಾಥ ವಿ.ಎಂ
ಪ್ರಪಾತ
ಪ್ರಪಾತ
ಬಿ.ಆರ್‌.ಜಯರಾಮರಾಜೇ ಅರಸ್‌
ಕನ್ನಡ ಭಾಷೆಗಳು
ಕನ್ನಡ ಭಾಷೆಗಳು
ಅಂತರಾಳ
ಅಂತರಾಳ
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಬೆಳವಡಿಯ ವೀರರಾಣಿ ಮತ್ತಿತರ ಕತೆಗಳು
ಹಂಸಯಾನ
ಹಂಸಯಾನ
ಬೇರು
ಬೇರು
ಫಕೀರ
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ಲಲಿತಾ ಕೆ. ಹೊಸಪ್ಯಾಟಿ
ಮಲೆನಾಡಿನ ಶಿಕಾರಿಯ ನೆನಪುಗಳು
ಮಲೆನಾಡಿನ ಶಿಕಾರಿಯ ನೆನಪುಗಳು
ಕಡಿದಾಳು ಕೆ.ಎಸ್. ರಾಮಪ್ಪಗೌಡ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಡಾ. ಜಿ. ಭಾಸ್ಕರ ಮಯ್ಯ
ಮೈಲಾರಲಿಂಗ ಪರಂಪರೆ
ಮೈಲಾರಲಿಂಗ ಪರಂಪರೆ
ಎಫ್‌.ಟಿ.ಹಳ್ಳಿಕೇರಿ
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ