ಚಂದಿರ ಬೇಕೆಂದವನು

ಚಂದಿರನ ಬಯಸಿ ಕಾರ್ಗತ್ತಲಿಗೆ ಬಲಿಯಾದವನ ಕಥೆ


ಲೇಖಕ : ಮಿಮಿ ಬೇರ್ಡ್‌, ಕನ್ನಡಕ್ಕೆ: ಪ್ರಜ್ಞಾಶಾಸ್ತ್ರಿ
ಪ್ರಕಾಶಕರು : ಛಂದ ಪುಸ್ತಕ, ಬೆಂಗಳೂರು
ಪ್ರಕಟವಾದ ವರ್ಷ : 2017
ಪುಟ : 268
ರೂ : 180
‘ಮಾನಸಿಕವಾಗಿ ಅಸ್ವಸ್ಥರಾದವರನ್ನು ಅಪರಾಧಿಗಳು ಎಂಬಂತೆ ಬಹುಮಟ್ಟಿಗೆ ನಡೆಸಿಕೊಳ್ಳಲಾಗುತ್ತದೆ. ಕೈದಿಯೊಬ್ಬನಿಗೂ ಮನೋರೋಗಿಗೂ ಬಹಳ ವ್ಯತ್ಯಾಸವೇನಿಲ್ಲ. ಇಬ್ಬರ ಪಾಡೂ ಒಂದೇ.
 
ಶಿಕ್ಷೆಯ ಅವಧಿ ಮುಗಿದ ಮೇಲೆ ಸಮಾಜಕ್ಕೆ ಮರಳಿದ ಕೈದಿ ಹೇಗೆ ತನ್ನ ಮೇಲಿನ ಕಳಂಕವನ್ನು ಹೊತ್ತುಕಂಡೇ ತಿರುಗುತ್ತಾನೋ ಹಾಗೆಯೇ ಮನೋರೋಗಿಯೂ ಹಣೆಪಟ್ಟಿ ಅಂಟಿಸಿಕೊಂಡೇ ತಿರುಗಬೇಕು’.
 
ಡಾ. ಪೆರಿ ಬೇರ್ಡ್‌ ತಾವು ಬರೆಯಬೇಕು ಎಂದುಕೊಂಡಿದ್ದ ಪುಸ್ತಕದ ಹಸ್ತಪ್ರತಿಯಲ್ಲಿನ ಈ ಮಾತುಗಳನ್ನೇ ‘ಚಂದಿರ ಬೇಕೆಂದವನು’ ಕೃತಿ ಬೇರೆ ಬೇರೆ ಬಗೆಗಳಲ್ಲಿ ಕಾಣಿಸುತ್ತ, ಮನದಟ್ಟು ಮಾಡುತ್ತ ಹೋಗುತ್ತದೆ. 
 
ಇದೊಂದು ಆತ್ಮಕಥೆಯೇ? ಅನುಭವ ಕಥನವೇ? ವೈದ್ಯಕೀಯ ಚಿಕಿತ್ಸೆಗಳ ವರದಿಯೇ? ಹೀಗೆ ಯಾವೊಂದು ಪ್ರಕಾರಕ್ಕೂ ನಿಖರವಾಗಿ ಸೇರಿಸಲು ಸಾಧ್ಯವಾಗದ ಕೃತಿ ಇದು. 
 
ಜನಪ್ರಿಯತೆಯ ಉತ್ತುಂಗದಲ್ಲಿ, ತಾವು ನಡೆಸುತ್ತಿರುವ ಮಹತ್ವದ ಸಂಶೋಧನೆಯ ಯಶಸ್ಸಿನ ಅಂಚಿನಲ್ಲಿರುವಾಗಲೇ ಉನ್ಮಾದಗ್ರಸ್ತ ಖಿನ್ನತೆಯ ಕಾಯಿಲೆಗೆ ಬಲಿಯಾಗಿ, ಎಲ್ಲವನ್ನೂ ಕಳೆದುಕೊಂಡು ಕೊನೆಗೆ ದಾರುಣ ಅಂತ್ಯವನ್ನು ಕಂಡ ಟೆಕ್ಸಾಸಿನ ಜನಪ್ರಿಯ ಚರ್ಮರೋಗ ವೈದ್ಯರಾದ ಡಾ. ಪೇರಿ ಬೇರ್ಡ್‌ ಎಂಬ ಪ್ರತಿಭಾವಂತನ ಜೀವನಗಾಥೆಯಿದು.

ತನಗಾದ ಮಾನಸಿಕ ಕಾಯಿಲೆಗೆ ಪರಿಹಾರನ್ನು ಹುಡುಕಲು ಅವರು ನಡೆಸುವ ಸಂಶೋಧನೆಯೂ ಕಾಯಿಲೆಯ ಕಾರಣಕ್ಕೆ ಅಪೂರ್ಣವಾಗುತ್ತದೆ ಮತ್ತು ಸಮಾಜದಿಂದ ನಿರ್ಲಕ್ಷ್ಯಕ್ಕೂ ಒಳಗಾಗುತ್ತದೆ.
 
ಮಾನಸಿಕ ಉನ್ಮಾದದ ಕಾರಣಕ್ಕೆ ಆಸ್ಪತ್ರೆಗೆ ಸೇರಿ, ಆಗಿನ ಕಾಲದಲ್ಲಿ ಅತ್ಯಂತ ಆಧುನಿಕ ಮತ್ತು ವೈಜ್ಞಾನಿಕ ಎಂದು ಪರಿಗಣಿಸಲಾದ ಅಮಾನವೀಯ ಚಿಕಿತ್ಸಾ ವಿಧಾನಗಳಿಗೆ ಬಲಿಯಾಗುವ ಪೆರಿ, ತಮ್ಮ ಅನುಭವವನ್ನು ಕೃತಿರೂಪದಲ್ಲಿ ಪ್ರಕಟಿಸುವ ಉದ್ದೇಶದಿಂದ ಬರೆದಿಡುತ್ತಾರೆ. ಆದರೆ ಕಾಯಿಲೆಯ ಕಾರಣದಿಂದ ಆ ಪುಸ್ತಕ ಪ್ರಕಟವಾಗುವ ಮೊದಲೇ ಅವರು ಅಸುನೀಗುತ್ತಾರೆ. 
 
ಆರು ವರ್ಷದವಳಿದ್ದಾಗಲೇ ಅಪ್ಪನಿಂದ ದೂರವಾದ ಮಿಮಿ ಬೇರ್ಡ್‌ ಕೈಗೆ ಐವತ್ತು ವರ್ಷಗಳ ತರುವಾಯ ಆ ಹಸ್ತಪ್ರತಿ ದೊರಕುತ್ತವೆ. ಅದುವರೆಗೆ ತನ್ನ ಬದುಕಿನಲ್ಲಿ ನಿಗೂಢ ನಿರೀಕ್ಷೆಯೇ ಆಗಿ ಉಳಿದಿದ್ದ ಅಪ್ಪನ ಬದುಕು ಆ ಹಸ್ತಪ್ರತಿಯ ಮೂಲಕ ತೆರೆದುಕೊಳ್ಳುತ್ತದೆ. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಎದುರಿಸಿದ ಅನುಭವಗಳ ಕುರಿತು ಡಾ. ಪೆರಿ ಅದರಲ್ಲಿ ಬರೆದಿರುತ್ತಾರೆ.
 
ಆ ದಾಖಲೆಯೊಟ್ಟಿಗೆ ತಂದೆಯ ಬದುಕಿನ ನಿಗೂಢತೆಯನ್ನು ಭೇದಿಸುತ್ತಾ ಹೋಗುವಾಗ ತಾವು ಎದುರಿಸಿದ ತವಕ ತಲ್ಲಣಗಳನ್ನು ಸೇರಿಸಿ ಮಿಮಿ ಬೇರ್ಡ್‌ ‘ಚಂದಿರ ಬೇಕೆಂದವನು’ (‘ಹಿ ವಾಂಟೆಡ್‌ ದ ಮೂನ್‌’) ಎಂಬ ಪುಸ್ತಕವನ್ನು ರೂಪಿಸಿದ್ದಾರೆ.
 
ಈ ಪುಸ್ತಕವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೇ ಭಾಗ ‘ಕಾರ್ಗತ್ತಲ ಸೆರೆಮನೆಯೊಳಗಿಂದ ಹೊರಟ ಮಾರ್ದನಿಗಳು’. ಇದು ಮೂರು ಕೋನಗಳಿಂದ ನಿರೂಪಿತವಾಗಿದೆ.

ಪೆರಿ ಅವರು ಬರೆದಿಟ್ಟಿದ್ದ ಹಸ್ತಪ್ರತಿಯ ವಿವರಗಳು ಮುಖ್ಯಧಾರೆಯಲ್ಲಿಯೂ, ಅದಕ್ಕೆ ಪೂರಕವಾಗಿ ಆಸ್ಪತ್ರೆಯ ದಾಖಲೆಯಲ್ಲಿನ ಟಿಪ್ಪಣಿಗಳೂ ಇವೆ. ಇವೆರಡಕ್ಕೂ ಪೂರಕವಾಗಿ ಕೆಲವು ಕಡೆಗಳಲ್ಲಿ ಮಿಮಿ ಬೇರ್ಡ್‌ ಕೂಡ ಮಾತನಾಡಿದ್ದಾರೆ. 
 
ಡಾ. ಪೆರಿ ಜನಪ್ರಿಯ ವೈದ್ಯರಷ್ಟೇ ಅಲ್ಲ, ಒಳ್ಳೆಯ ಲೇಖಕರೂ ಆಗಿದ್ದರು ಎನ್ನುವುದಕ್ಕೆ ಇಲ್ಲಿನ ಹಲವು ಭಾಗಗಳು ನಿದರ್ಶನ ಒದಗಿಸುತ್ತವೆ. ಕಾಯಿಲೆಯ ಕಾರಣದಿಂದ ಸಮಾಜದಲ್ಲಿ ಪ್ರತಿಷ್ಠಿತನಾಗಿದ್ದ ವ್ಯಕ್ತಿಯೊಬ್ಬ ನಿರ್ಗತಿಕನಾಗುವ ದುರಂತಕ್ಕೆ ಮುಖಾಮುಖಿಯಾದ ಸಂದರ್ಭವನ್ನು ಅವರು ವಿವರಿಸುವ ರೀತಿ ನೋಡಿ:
 
‘ಬೇಸರ, ಏಕಾಂಗಿತನ ಮತ್ತು ನಿರರ್ಥಕತೆಯನ್ನು ಒಡಲೊಳಗೆ ಹೊತ್ತುಕೊಂಡಿದ್ದ ಈ ವಾತಾವರಣದಲ್ಲಿ ನನ್ನದಾಗಿದ್ದ ಪುಟ್ಟ ಜಗತ್ತೊಂದು ಅಸುನೀಗಿತ್ತು. ಪತ್ನಿಯಿಂದ ವಿಚ್ಛೇದಿತನಾಗಿದ್ದೆ. ಸಂಸಾರ ಛಿದ್ರಗೊಂಡಿದ್ದರ ಬಿಸಿ ಈಗ ತಟ್ಟತೊಡಗಿತ್ತು. ವೆಸ್ಟ್‌ ಬರೋಗೆ ಬಂದಾಗಿನಿಂದ ಒಂದು ಬಾರಿಯೂ ಮಕ್ಕಳನ್ನು ನೋಡಿರಲಿಲ್ಲ. ನನ್ನ ವೃತ್ತಿಯನ್ನು ಕಸಿದುಕೊಂಡರು, ಆಕಾಶದಲ್ಲಿ ಬರೀ ಕಾರ್ಮೋಡಗಳೇ ಕಾಣುತ್ತಿವೆ. ಬೆಳ್ಳಿರೇಖೆಗಳ ಸುಳಿವೇ ಇಲ್ಲ’.
 
ಸಂಶೋಧಕರು, ವೈದ್ಯರಷ್ಟೇ ಓದುವ ವೈದ್ಯಕೀಯ ಪುಸ್ತಕವಷ್ಟೇ ಆಗಬಾರದು ಎಂಬ ಎಚ್ಚರ ಸ್ವತಃ ಪೆರಿ ಅವರಿಗೂ ಇತ್ತು. ‘ಖಂಡಿತ ಇದು ಎಲ್ಲರೂ ಓದಬಹುದಾದಂಥ ಪುಸ್ತಕವಾಗುತ್ತದೆ’ ಎಂಬ ವಿಶ್ವಾಸ ಅವರಿಗಿತ್ತು.

ಯಾಕೆಂದರೆ ಈ ಬರಹ ಅವರ ಬದುಕಿನ ಅತ್ಯಂತ ಯಾತನಾಮಯ ಮತ್ತು ದಾರುಣ ಬದುಕಿನ ನೋವು, ಹತಾಶೆ, ಅದರಿಂದ ಹೊರಬರಲು ನಡೆಸಿದ ಅಸಾಧಾರಣ ಪ್ರಯತ್ನ–ಎಲ್ಲದರ ಅಭಿವ್ಯಕ್ತಿಯೂ ಆಗಿತ್ತು. ಆದ್ದರಿಂದ ಬದುಕಿನ ಗಾಢ ಅನುಭವಗಳ ಜತೆಗೆ ಪೆರಿ ಅವರ ಸೃಜನಶೀಲ ಪ್ರತಿಭೆಯೂ ಸೇರಿಕೊಂಡು ಈ ಬರವಣಿಗೆಗೆ ‘ಫಿಕ್ಷನ್’ತನವೂ ದಕ್ಕಿದೆ. 
 
ಚೆಲ್ಲಾಪಿಲ್ಲಿಯಾಗಿದ್ದ ಪೆರಿ ಅವರ ಬರಹವನ್ನು 20 ವರ್ಷಗಳ ಕಾಲ ಅಭ್ಯಸಿಸಿ, ಸುಸಂಗತಗೊಳಿಸಿದ ಮಿಮಿ ಬೇರ್ಡ್‌ ಅವರಿಗೂ ಈ ಪುಸ್ತಕದ ಗುಣಮಟ್ಟದ ಬಹುಪಾಲು ಶ್ರೇಯ ಸಲ್ಲಬೇಕು. 
 
ತಮ್ಮ ತಂದೆಯ ಕುರಿತಾದ ಹಂಬಲ, ತೀವ್ರ ನಿರೀಕ್ಷೆ, ಕಟ್ಟುಕಥೆಗಳಿಂದ ಮನಸಲ್ಲಿ ಏಳುತ್ತಿದ್ದ ತಲ್ಲಣಗಳು, ಅವರ ಕುರಿತಾಗಿ ಸಿಕ್ಕ ಸುಳಿವುಗಳನ್ನು ಅರಸಿಹೋದಾಗ ಎದುರಾದ ಸಂಗತಿಗಳನ್ನು ಮಿಮಿ ಬೇರ್ಡ್‌ ಪುಸ್ತಕದ ‘ಇಂದಿನವರೆಗಿನ ಮಾರ್ದನಿಗಳು’ ಎಂಬ ಎರಡನೇ ಭಾಗದಲ್ಲಿ ವಿವರಿಸಿದ್ದಾರೆ. ಇದು ಪೆರಿ ಅವರ ಬದುಕನ್ನೇ ಮತ್ತೊಂದು ಬಗೆಯಲ್ಲಿ ನೋಡಿ ಅರ್ಥೈಸಿಕೊಳ್ಳಲು ಪ್ರೇರೇಪಿಸುವಂತಿದೆ. 
 
ಈ ಪುಸ್ತಕನ್ನು ಓದಿ ಮುಚ್ಚಿಟ್ಟ ಮರುಕ್ಷಣದಿಂದಲೇ ನಮ್ಮ ಮನಸ್ಸಿನೊಳಗೆ ಕಥನ ಮರುಕಳಿಸಲು ಶುರುವಾಗುತ್ತದೆ. ಪೆರಿ, ಅವರ ಮಗಳು ಮಿಮಿ ಬೇರ್ಡ್‌, ಹೆಂಡತಿ ಗ್ರೆಟ್ಟಾ ಎಲ್ಲರೂ ತಮ್ಮ ತಮ್ಮದೇ ಆವೃತ್ತಿಯಲ್ಲಿ ಅದೇ ಕಥನವನ್ನು ಒರೆಯಲು ಶುರುಮಾಡುತ್ತಾರೆ.
 
ಈ ಬಹುಮುಖಿ ನಿರೂಪಣೆಯ ಕಾರಣದಿಂದಲೇ ಈ ಕೃತಿಗೆ ಆ ಕ್ಷಣಕ್ಕೆ ಬೆಚ್ಚಿಬೀಳಿಸುವ ರೋಚಕತೆಯನ್ನು ಮೀರಿ ನಮ್ಮನ್ನು ಆಳವಾಗಿ ಕಲಕುವ, ಹಲವು ಜಿಜ್ಞಾಸೆಗಳನ್ನು ಹುಟ್ಟುಹಾಕುವ ಶಕ್ತಿ ದಕ್ಕಿದೆ.
 
ನಮ್ಮಲ್ಲಿ ಆಳವಾಗಿ ಬೇರೂರಿರುವ, ‘ವೈಜ್ಞಾನಿಕತೆ’ ಎಂಬ ಹಣೆಪಟ್ಟಿ ಇಟ್ಟುಕೊಂಡು ಬಂದಿದ್ದೆಲ್ಲ ನಂಬಲರ್ಹ ಸತ್ಯ ಮತ್ತು ಸಾಂಪ್ರದಾಯಿಕವಾಗಿ ಕಾಣುವುದೆಲ್ಲ ಮೌಢ್ಯ ಎಂಬ ಇಂಗ್ಲಿಷ್‌ ಪ್ರಣೀತ ಧೋರಣೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವಂತೆಯೂ ಈ ಪುಸ್ತಕ ಪ್ರೇರೇಪಿಸುತ್ತದೆ. 
 
ಕೀನ್ಯಾದಲ್ಲಿರುವ ಪ್ರಜ್ಞಾ ಶಾಸ್ತ್ರಿ ಈ ಅಪರೂಪದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಪರಕೀಯ’ ಭಾವ ಹುಟ್ಟಿಸದೇ ಸರಾಗವಾಗಿ ಓದಿಕೊಂಡು ಹೋಗುವಷ್ಟು ಸಮರ್ಥವಾಗಿ ಕನ್ನಡೀಕರಿಸಿದ್ದಾರೆ ಪ್ರಜ್ಞಾ. ಆದರೆ ಮತ್ತೆ ಮತ್ತೆ ಎದುರಾಗುವ ಕಾಗುಣಿತ ದೋಷಗಳು ಮಾತ್ರ ಕಿರಿಕಿರಿ ಹುಟ್ಟಿಸುತ್ತವೆ. 
 
‘ಚಂದಿರ ಬೇಕೆಂದವನು’ ಕನ್ನಡದ ಮಟ್ಟಿಗಂತೂ ನಮಗೆ ಗೊತ್ತಿಲ್ಲದ ಜಗತ್ತೊಂದನ್ನು ಕಾಣಿಸುವ ಕಿಟಕಿಯೂ, ನಮ್ಮ ನಡುವೆಯೇ ಇರುವ ಅನೇಕ ಮನೋರೋಗಿಗಳನ್ನು ನಾವು ನೋಡುವ ರೀತಿಯನ್ನು ಪಲ್ಲಟಿಸಬಲ್ಲ ಕನ್ನಡಿಯೂ ಆಗಬಲ್ಲ ಪುಸ್ತಕ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.