ಕುದಿ ಎಸರು

ಕುದಿ ಎಸರು


ಲೇಖಕ : ಡಾ. ವಿಜಯಾ
ಪ್ರಕಾಶಕರು : ನಾಕುತಂತಿ ಪ್ರಕಾಶನ, ಬೆಂಗಳೂರು
ಪ್ರಕಟವಾದ ವರ್ಷ : .
ಪುಟ : 378
ರೂ : ₹ 300
ಇಂದು ಡಾ. ವಿಜಯಾ ಅವರನ್ನು ಎಲ್ಲರೂ ಗುರುತಿಸುವುದು ‘ವಿಜಯಮ್ಮ’ ಎಂದೇ.  ಬಹುಮುಖೀ ಪ್ರತಿಭೆಯ ಹಾಗೂ ಅಸಾಧಾರಣ ಸಾಧನೆಯ ವಿಜಯಮ್ಮ ಸಾಹಿತಿ, ಪತ್ರಕರ್ತೆ, ರಂಗ–ಚಲನಚಿತ್ರ ತಜ್ಞೆ, ಹಾಗೂ ಸಾಮಾಜಿಕ ಹೋರಾಟಗಾರ್ತಿ.
 
ಅವರ ಪ್ರಕಟಿತ ಕೃತಿಗಳು 23, ಸಂಪಾದಿಸಿದ ಕೃತಿಗಳು 22; ಅವರು ಕಟ್ಟಿದ/ಕಾರ್ಯನಿರ್ವಹಿಸಿದ ಸಂಘ–ಸಂಸ್ಥೆಗಳು ಹಾಗೂ ಅವರಿಗೆ ಸಂದ ಪ್ರಶಸ್ತಿಗಳು ಅನೇಕ. ಆದರೆ ಡಾ. ವಿಜಯಾ ಆಗುವ ಮುನ್ನ ಅವರು ಬಾಳಿದ ಸುಮಾರು ಮೂರು ದಶಕಗಳ ಬದುಕು ಬಹುತೇಕ ಓದುಗರಿಗೆ ಅಪರಿಚಿತ; ಅಂತಹ ಅನಾಮಿಕ ಬದುಕಿನ ಪ್ರಾಮಾಣಿಕ ಅನಾವರಣ ಅವರ ಆತ್ಮಕಥನ ‘ಕುದಿ ಎಸರು’.
 
ಮನೆಯಲ್ಲಿ ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬವೊಂದರಲ್ಲಿ, ದಾವಣಗೆರೆಯಲ್ಲಿ (1942) ಜನ್ಮ ತಳೆದ ವಿಜಯಾ ಪ್ರಾರಂಭದಿಂದಲೇ ಬಡತನದ ಬೇಗೆಯನ್ನು ಅನುಭವಿಸಿzವರು. ಬದುಕಿನುದ್ದಕ್ಕೂ ಇನ್ನೊಬ್ಬರ ಮನೆಯಲ್ಲಿ ಚಾಕರಿ ಮಾಡುತ್ತಾ ಬಹುಬೇಗ ಸಾವನ್ನಪ್ಪಿದ ತಾಯಿ; ಎಲ್ಲಾ ವ್ಯಸನಗಳಿಗೂ ತುತ್ತಾಗಿ ನೆಂಟರಿಷ್ಟರ ತಿರಸ್ಕಾರಕ್ಕೆ ಪಾತ್ರವಾಗಿ, ತುಂಬಾ ಪ್ರೀತಿಸುವ ತಮ್ಮ ಮಗಳಿಗೂ ಸಹಾಯ ಮಾಡಲಾಗದ ತಂದೆ – ಇಂತಹ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಪೋಷಕರ ಪ್ರೀತಿಯನ್ನೇ ಕಾಣದೆ ತಾತ–ದೊಡ್ಡಮ್ಮ–ಚಿಕ್ಕಪ್ಪ ಮುಂತಾದವರ ಮನೆಯಲ್ಲಿಯೇ ದುಡಿಯುತ್ತಾ ಬೆಳೆಯಬೇಕಾಯಿತು. ಪರಿಣಾಮತಃ, ಕುಂಟುತ್ತಾ ಸಾಗಿದ ಅವಳ ಶಿಕ್ಷಣ ಹತ್ತನೇ ತರಗತಿಗೆ ಸೀಮಿತವಾಗುತ್ತದೆ.

ಚಿಕ್ಕ ವಯಸ್ಸಿನಲ್ಲಿಯೇ ಆದ ಮದುವೆಯಿಂದ ಅವಳಿಗೆ ಸಿಕ್ಕಿದ ಗಂಡನಾದರೋ ಹಿಂಸಾರತಿಯಲ್ಲದೆ ಬೇರೇನೂ ಗೊತ್ತಿಲ್ಲದ, ನಡುಬೀದಿಯಲ್ಲಿಯೇ ತನ್ನ ಹೆಂಡತಿಯನ್ನು ಕಾಲಿನಿಂದ ಒದೆಯುವ ಸಂವೇದನೆಯೇ ಇಲ್ಲದ ವ್ಯಕ್ತಿ. ಕೊನೆಗೆ ಇಂತಹ ಬದುಕು ಸಾಕೆಂದು ಪಾದರಸ, ಸೀಮೆಎಣ್ಣೆ, ಹಲ್ಲಿ ಸತ್ತ ನೀರು ಕುಡಿದರೂ ಸಾವು ಅವಳ ಬಳಿ ಸುಳಿಯುವುದಿಲ್ಲ.

ಪ್ರತಿಭಟನೆ ಎಂದರೇನು ಎಂದೇ ಗೊತ್ತಿಲ್ಲದೆ ಎಲ್ಲವನ್ನೂ ಮೂಕವಾಗಿ ಅನುಭವಿಸುತ್ತಾ, ನರಳುತ್ತಾ, ಇಬ್ಬರು ಮಕ್ಕಳ ತಾಯಿಯಾಗಿ ದಿನಗಳನ್ನು ದೂಡುತ್ತಿರುತ್ತಾಳೆ (ಕಂಬಳಿಹುಳು ತಾನೇ ಕಟ್ಟಿಕೊಂಡ ಕೋಶದಲ್ಲಿ ಮೃತಾವಸ್ಥೆಯಲ್ಲಿ ಇರುವಂತೆ). ಒಮ್ಮೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಗಂಡನು ಹೆಂಡತಿ–ಮಕ್ಕಳನ್ನು ಬಿಟ್ಟು ಹೊರನಡೆಯುತ್ತಾನೆ.

ಆಗ, ಮೊದಲ ಬಾರಿಗೆ ತಾನು ಸ್ವತಂತ್ರವಾಗಿಯೇ ಬದುಕಿ ತೋರಿಸಬೇಕೆಂಬ ಅದಮ್ಯ ಛಲ ವಿಜಯಾಳಲ್ಲಿ ಹುಟ್ಟುತ್ತದೆ (ಯಾವುದೋ ಒಂದು ವಿಶಿಷ್ಟ ಗಳಿಗೆಯಲ್ಲಿ ತಾನು ಕಟ್ಟಿಕೊಂಡ ಕೋಶವನ್ನೇ ಒಡೆದುಕೊಂಡು ಹೊರಬರುವ ಚಿಟ್ಟೆಯಂತೆ). ಕೂಡಲೇ ಬೇರೆ ಬಾಡಿಗೆ ಮನೆಗೆ ಹೋಗಿ, ಅಹೋರಾತ್ರಿ ದುಡಿಯುತ್ತಾ, ಮಕ್ಕಳನ್ನು ಬೆಳೆಸುತ್ತಾ, ಅಗಾಧ ಶ್ರಮದಿಂದ ಹೊಸ ಬದುಕೊಂದನ್ನು ಕಟ್ಟಿಕೊಳ್ಳುತ್ತಾರೆ ವಿಜಯಮ್ಮ.
 
ಅರ್ಧಕ್ಕೇ ನಿಂತಿದ್ದ ಶಿಕ್ಷಣವನ್ನು ಮುಂದುವರೆಸಿ, ಬಿ.ಎ./ ಎಂ.ಎ. ಪದವಿಗಳನ್ನು ಗಳಿಸಿ, ಶ್ರೀರಂಗರ ನಾಟಕಗಳನ್ನು ಕುರಿತು ಸಂಶೋಧನೆಯನ್ನು ಕೈಗೊಂಡು ಡಾಕ್ಟರೇಟ್ ಪದವಿಯನ್ನೂ ಗಳಿಸುತ್ತಾರೆ. ಹಾಗೆಯೇ, ಪತ್ರಿಕಾರಂಗ–ನಾಟಕರಂಗಗಳನ್ನು ಪ್ರವೇಶಿಸಿ, ಅಲ್ಲಿ ತನ್ನ ಛಾಪು ಮೂಡಿಸುತ್ತಾ, ಸಾಹಿತಿಯಾಗುತ್ತಾರೆ. 
 
ಈ ‘ಆತ್ಮಕಥನ’ ಎಂಬುದು ಯಾವ ವ್ಯಾಖ್ಯಾನಕ್ಕೂ ಸಿಗದ ಸಂಕರ ಬರವಣಿಗೆ, ಇತ್ತಲೆಯ ಪಕ್ಷಿ. ಒಂದು ಕಡೆ ಇದು ನಿರ್ದಿಷ್ಟ ವ್ಯಕ್ತಿಯ ಬದುಕಿನಲ್ಲಿ ಸಂದ ಘಟನೆಗಳ ಹಾಗೂ ಅನುಭವಗಳ ದಾಖಲೆ; ಮತ್ತೊಂದು ಕಡೆ ಇದು ಪ್ರಕಟವಾಗಿ ಓದುಗರನ್ನು ನಿರೀಕ್ಷಿಸುವ ಸಾಹಿತ್ಯಕ ರಚನೆ.

ದಾಖಲೆ ವೈಯಕ್ತಿಕವಾದುದರಿಂದ ಅದರಲ್ಲಿ ಆಯ್ಕೆ–ನಿರೂಪಣಾ ಶೈಲಿ–ಭಾಷಾಸ್ತರ ಇತ್ಯಾದಿಗಳ ಹಂಗಿಲ್ಲ; ಆದರೆ ಅದೇ ಸಾಹಿತ್ಯಕ ರಚನೆಯಾದ ಕೂಡಲೇ ಆಯ್ಕೆ ಇತ್ಯಾದಿ ನಿಕಷಗಳು ಎದುರಿಗೆ ಧುಪ್ಪೆಂದು ನಿಲ್ಲುತ್ತವೆ. ಈ ಬಗೆಯ ವೈಯಕ್ತಿಕ ಹಾಗೂ ಸಾಮಾಜಿಕ ಎಂಬ ಎರಡು ವಿರುದ್ಧ ಮುಖಗಳಿರುವ ಈ ಬರವಣಿಗೆ ಒಂದಲ್ಲಾ ಒಂದು ನೆಲೆಯಲ್ಲಿ (ಲೇಖಕನ ಅಥವಾ ಓದುಗನ ನೆಲೆಯಲ್ಲಿ) ಅತೃಪ್ತಿಯನ್ನು ಹಾಸಿ ಹೊದ್ದುಕೊಂಡೇ ಸೃಷ್ಟಿಯಾಗುತ್ತದೆ.
 
ದಾಖಲೆಯ ಏಕಮಾತ್ರ ನಿಕಷವೆಂದರೆ ಪ್ರಾಮಾಣಿಕತೆ. ಎಂದರೆ ಯಾವ ಸ್ವವೈಭವೀಕರಣದ ಪ್ರಯತ್ನವೂ ಇಲ್ಲದ, ತಮ್ಮ ಅನುಭವಗಳಿಗೆ ಇನ್ನಾರನ್ನೋ ದೂಷಿಸುವ ಅಥವಾ ಅದಕ್ಕೊಂದು ನೈತಿಕ ಸಮರ್ಥನೆಯನ್ನು ಕೊಡುವ ಪ್ರಯತ್ನವಿಲ್ಲದ, ಘಟನೆಯೊಂದನ್ನು ಅದು ಘಟಿಸಿದಂತೆಯೇ ದಾಖಲಿಸುವ ನಿಲುವು. ಈ ನೆಲೆಯಲ್ಲಿ ನೋಡಿದಾಗ, ‘ಕುದಿ ಎಸರು’ ಕೃತಿಯಲ್ಲಿ ಕಾಣುವಂತಹ ವಸ್ತುನಿಷ್ಠ ನಿರೂಪಣೆಯೇ ಅದರ ಉಸಿರು.

‘ಇಲ್ಲಿ ಆತ್ಮಸಾಕ್ಷಿ ಪ್ರಾಮಾಣಿಕವಾಗಿ ತೆರೆದುಕೊಂಡಿದೆ’ ಎಂದು ಮುನ್ನುಡಿಯಲ್ಲಿ ವಿಜಯಮ್ಮ ಹೇಳಿರುವುದು ಅಕ್ಷರಶಃ ಈ ಕಥನದಲ್ಲಿ ನಿಜವಾಗಿದೆ. ತಮ್ಮ ಬದುಕಿನಲ್ಲಿ ತಮ್ಮ ಮೇಲಾದ ದೈಹಿಕ–ಮಾನಸಿಕ ಹಿಂಸೆ, ತಿರಸ್ಕಾರ, ಅಪಮಾನ, ಇತ್ಯಾದಿಗಳನ್ನು ನೇರವಾಗಿ ಯಾವ ಬಣ್ಣದ ಲೇಪವೂ ಇಲ್ಲದಂತೆ ದಾಖಲಿಸುತ್ತಾರೆ.

 ಓದುವಾಗ, ಎಷ್ಟೋ ಬಾರಿ, ತಮ್ಮ ದೇಹದ ಮೇಲೆ ವಿನಾಕಾರಣ ಇಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಒಮ್ಮೆಯಾದರೂ ಇವರು ಏಕೆ ಪ್ರತಿಭಟಿಸಲಿಲ್ಲ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಏಳುತ್ತದೆ. ಆದರೆ ಲೇಖಕಿ ತಮ್ಮ ನಿಷ್ಕ್ರಿಯತೆಗೆ ಯಾವ ಅಮೂರ್ತ ವೈಚಾರಿಕತೆಯ ಮೂಲಕವೂ ಕೃತಕ ಛವಿಯನ್ನು (ಹೊಳಪನ್ನು) ಕೊಡಲು ಯತ್ನಿಸುವುದಿಲ್ಲ; ‘ಇದು – ಹೀಗೆ – ನಡೆಯಿತು’, ಇಷ್ಟೇ. ಇಂತಹ ನಿರೂಪಣೆಯೇ ಅವರ ಕಥನಕ್ಕೆ ಸಂಪೂರ್ಣ ವಿಶ್ವಸನೀಯತೆಯನ್ನು ಕೊಟ್ಟು ಆ ಮೂಲಕ ಓದುಗರ ಆತ್ಮವನ್ನು ಬಡಿದೆಬ್ಬಿಸುತ್ತದೆ.
 
ಹಾಗೆಯೇ, ಇವರ ಬದುಕನ್ನು ಪ್ರವೇಶಿಸಿದ ಯಾವ ವ್ಯಕ್ತಿಯ ಪಾತ್ರವನ್ನೂ ಹಿಗ್ಗಿಸುವ ಅಥವಾ ಕುಗ್ಗಿಸುವ ಪ್ರಯತ್ನ ಇಲ್ಲಿಲ್ಲ. ಈ ಕಥನದಲ್ಲಿ ಲೇಖಕಿಯನ್ನು ಹೊರತುಪಡಿಸಿದರೆ, ಮತ್ತೆ ಮತ್ತೆ ನಮ್ಮನ್ನು ಕಾಡುವ ಪಾತ್ರ ಅವರ ತಂದೆಯದು. ಬೇರೆಯವರು ತೀರ್ಮಾನಿಸುವಂತೆ ಅವರು ಬೇಜವಾಬ್ದಾರಿಯ ಮನುಷ್ಯ; ನಾನಾ ವ್ಯಸನಗಳಿಗೆ ತುತ್ತಾದ ಮನುಷ್ಯ; ಕೊನೆಗೆ ಆ ಕಾರಣದಿಂದಲೇ ಅನೇಕ ರೋಗಗಳಿಗೆ ತುತ್ತಾಗಿ, ನರಳಿ ಸತ್ತ ಮನುಷ್ಯ.
 
ಆದರೂ ಮಗಳನ್ನು ತೀವ್ರವಾಗಿ ಪ್ರೀತಿಸಿದ ಮನುಷ್ಯ; ತನಗೆ ಸಾಧ್ಯವಿದ್ದಾಗ ಆದಷ್ಟು ಅವಳ ನೆರವಿಗೆ ಬಂದ ಮನುಷ್ಯ; ಕೊನೆಯಲ್ಲಿ, ಇನ್ನು ತಾಳಲಾರದೆ ಮಗಳು ಗಂಡನಿಂದ ದೂರವಿರುತ್ತೇನೆಂದು ನಿಶ್ಚಯಿಸಿದಾಗ ಆ ನಿಶ್ಚಯವನ್ನು ಅನುಮೋದಿಸಿ, ಅವಳಿಗೆ ನೈತಿಕ ಬಲವನ್ನು ತುಂಬಿದ ಮನುಷ್ಯ. ಇಂತಹ ಸಂಕೀರ್ಣ ವ್ಯಕ್ತಿತ್ವವನ್ನು ನಾವು ಕಥೆ–ಕಾದಂಬರಿಗಳಲ್ಲಿಯೂ ಕ್ವಚಿತ್ತಾಗಿಯೇ ಕಾಣಬಹುದು.
 
ಆತ್ಮಕಥನವನ್ನು ಒಂದು ಸಾಹಿತ್ಯಕ ರಚನೆಯಂತೆ ಪರಿಗಣಿಸಿದಾಗ ಎದುರಾಗುವ ಕಗ್ಗಂಟುಗಳೆಂದರೆ ‘ಆಯ್ಕೆ’ ಹಾಗೂ ‘ಪ್ರಮಾಣ’.  ಒಂದು ಬದುಕಿನ ಎಲ್ಲಾ ಘಟನೆಗಳನ್ನೂ ಅನುಭವಗಳನ್ನೂ ದಾಖಲಿಸಲು ಸಾಧ್ಯವೇ ಇಲ್ಲ; ಆದುದರಿಂದ ಯಾವುದನ್ನು ಹೇಳಬೇಕು? ಯಾವುದನ್ನು ಬಿಡಬಹುದು? ಎಂಬುದು ಎಲ್ಲಾ ಆತ್ಮಕಥನಕಾರರನ್ನೂ ಕಾಡುವ ಪ್ರಶ್ನೆಗಳು.

ಕಾರಣ, ಲೇಖಕನಿಗೆ–ಲೇಖಕಿಗೆ ಮುಖ್ಯವೆನಿಸುವ ಘಟನೆಗಳು–ವಿವರಗಳು–ಅನುಭವಗಳು ಓದುಗನಿಗೆ ಮುಖ್ಯವಲ್ಲ ಎನಿಸಬಹುದು; ಅಥವಾ ಯಾವುದು ಲೇಖಕನಿಗೆ–ಲೇಖಕಿಗೆ ಸಾಮಾನ್ಯವೆನಿಸುತ್ತದೋ ಅದು ಓದುಗನಿಗೆ ಮಹತ್ವದ್ದೆಂದು ಕಾಣಬಹುದು. ಹಾಗೆಯೇ, ‘ಪ್ರಮಾಣ’ ಎಂಬ ನಿಕಷದ ನೆಲೆಯಲ್ಲಿ ಆಯ್ಕೆ ಮಾಡಿದ ಘಟನೆಗಳಲ್ಲಿ–ಅನುಭವಗಳಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬುದೂ ಓದುಗರ ನೆಲೆಯಲ್ಲಿ ಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.
 
ಈ ಆತ್ಮಕಥನಕ್ಕೇ ಬಂದರೆ, ಕೆಲ ಓದುಗರಿಗೆ ಇದರಲ್ಲಿರುವ ‘ರಕ್ತರಾತ್ರಿ’ಗಳ ನಿರೂಪಣೆ ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದು ಅನಿಸಬಹುದು; ಮತ್ತೆ ಕೆಲವರಿಗೆ ಇದರಲ್ಲಿ ಬರುವ ಹಬ್ಬ–ಹರಿದಿನಗಳ, ವಿಶಿಷ್ಟ ಅಡುಗೆಗಳ, ಅಥವಾ ನೆಂಟರಿಷ್ಟರ ವಿವರಗಳು ಸಂಕ್ಷಿಪ್ತವಾಗಿರಬಹುದಿತ್ತು ಎಂದೂ ತೋರಬಹುದು. ಲೇಖಕ–ಲೇಖಕಿಯರ ಹಾಗೂ ಓದುಗರ ಸಂವೇದನೆ ಎಂದೂ ಸಮಾನವಾಗಿರುವುದಿಲ್ಲ; ಆದುದರಿಂದ ಈ ಅಂಶಗಳ ಬಗ್ಗೆ ಇದಮಿತ್ಥಂ ಎಂದು ತೀರ್ಮಾನಿಸಲು ಸಾಧ್ಯವೇ ಇಲ್ಲ. 
 
ಆದರೆ, ಇಂತಹ ಆತ್ಮಕಥನಗಳ ಪ್ರಸ್ತುತತೆಯೇನು? ಎಂಬುದು ಮುಖ್ಯವಾದ ಪ್ರಶ್ನೆ. ಇತ್ತೀಚೆಗೆ ರಾಷ್ಟ್ರಾದ್ಯಂತ ‘ಮಹಿಳಾಪರ ಕಾನೂನುಗಳು ಏಕಪಕ್ಷೀಯವಾಗಿದ್ದು ಅವುಗಳಿಂದಾಗಿ ಸ್ತ್ರೀಯರು ಉಚ್ಛೃಂಖಲ ನಡತೆಯವರಾಗಿ, ಭಾರತೀಯ ಸಂಸ್ಕೃತಿಯ ಬೆನ್ನೆಲುಬಾದ ಕುಟುಂಬ ವ್ಯವಸ್ಥೆಯನ್ನೇ ನಾಶಮಾಡುತ್ತಿದ್ದಾರೆ’ ಎಂಬ ಕೂಗೆದ್ದಿದೆ.
 
ಇಂತಹ ಸಂದಿಗ್ಧ ಸಂದರ್ಭದಲ್ಲಿ, ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯ ಬಗ್ಗೆ ತಾಸುಗಟ್ಟಲೆ ಮಾತನಾಡುವ ಮಹಾಜ್ಞಾನಿಗಳು, ಪುಟಗಟ್ಟಲೆ ಬರೆಯುವ ಮಹಾನ್ ಸಾಹಿತಿಗಳು, ಒಮ್ಮೆ ವಿಜಯಮ್ಮ, ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ಪ್ರೇಮಾ ಕಾರಂತ, ಮುಂತಾದವರ ಆತ್ಮಕಥನಗಳನ್ನು ಓದುವಂತಾದರೆ, ಆಗ ಅವರಿಗೆ ಇಂದಿಗೂ ‘ಭಾರತೀಯ ನಾರಿ’ ಧಾರ್ಮಿಕ–ಕೌಟುಂಬಿಕ–ರಾಜಕೀಯ ನೆಲೆಗಳಲ್ಲಿ ‘ಅನ್ಯ’ಳಾಗಿಯೇ ಉಳಿದಿದ್ದಾಳೆ, ಈಗಲೂ ಅವಳ ಮೇಲೆ ದೈಹಿಕ–ಮಾನಸಿಕ ಹಿಂಸೆ ನಡೆಯುತ್ತಲೇ ಇದೆ ಎಂಬುದು ಮನದಟ್ಟಾಗಬಹುದು. 
 
ತಮ್ಮ ಆತ್ಮಕಥನದ ಒಂದು ಸಂದರ್ಭದಲ್ಲಿ ವಿಜಯಮ್ಮ ಹೀಗೆ ಉದ್ಗರಿಸುತ್ತಾರೆ: ‘ಈ ಬಗೆಯ ಬರವಣಿಗೆ ಎಂದರೆ ಮತ್ತೊಮ್ಮೆ ಆ ಬದುಕನ್ನು ಆಹ್ವಾನಿಸಿ, ಮನಸ್ಸಿನಲ್ಲೇ ಆ ದಿನದ ಘಟನೆಯನ್ನು ತದ್ವತ್ ರೀಪ್ಲೇ ಮಾಡಿಕೊಳ್ಳುವುದು... ಅದರ ತೀವ್ರತೆ, ನೋವು ಅಸಹನೀಯವಾಗಿದೆ. ಅದಕ್ಕೆ  ಈ ಬರಹವೇ ಬೇಡ ಅನ್ನಿಸುತ್ತದೆ’ (ಪು. 306–307).

ಆದರೆ, ಆತ್ಮಕಥನ ಒಂದು ನೆಲೆಯಲ್ಲಿ ಹಳೆಯ ನೋವನ್ನು ಮರುಕಳಿಸಿದರೆ, ಮತ್ತೊಂದು ನೆಲೆಯಲ್ಲಿ ಅದು ಆ ನೋವು–ಸಂಕಟಗಳಿಂದ ಬಿಡುಗಡೆಯೂ ಅಹುದು. ಆದುದರಿಂದ ಈ ಕಥನದ ಎರಡನೆಯ ಭಾಗವಾದ ‘ಜೀವಗಾಳು’ ಆದಷ್ಟು ಬೇಗ ಹೊರಬರಲಿ ಎಂದು ನಾನು ಆಶಿಸುತ್ತೇನೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.