ಕನ್ನಡ ಕಾವ್ಯ ಮೀಮಾಂಸೆ

ಮನೆಯವರನ್ನು ಒಳಗೆ ಕರೆಯುವ ಕೃತಿ


ಲೇಖಕ : ಡಾ. ಎಸ್. ನಟರಾಜ ಬೂದಾಳು
ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ
ಪ್ರಕಟವಾದ ವರ್ಷ : ..
ಪುಟ : 186
ರೂ : 120
ಸಂಸ್ಕೃತದಲ್ಲಿ ರಸಸಿದ್ಧಾಂತವೇ ಅಲ್ಲದೆ ಅನೇಕಾನೇಕ ಕಾವ್ಯಸಂಗತಿಯ ಪ್ರಸ್ಥಾನಗಳನ್ನು ಕಾಲಾನುಕಾಲದಿಂದ ಅಲಂಕಾರಿಕರು ಮತ್ತೆ ಮತ್ತೆ ಚರ್ಚಿಸಿದ್ದನ್ನು ಅತ್ತ ಸರಿಸಿಯೂ ಕನ್ನಡ ಪರಂಪರೆ ತನ್ನದೇ ಒಂದು ಮಾರ್ಗವನ್ನು ಸೃಷ್ಟಿಸಿಕೊಂಡು ಬಂದಿರುವುದು ಪಂಪನಿಂದಲೇ ಗೋಚರವಾಗುತ್ತದೆ ಎಂಬುದನ್ನು ನಟರಾಜ ಬೂದಾಳು ಅವರು ಇತ್ತೀಚೆಗೆ ಪ್ರಕಟಿಸಿದ ‘ಕನ್ನಡ ಕಾವ್ಯಮೀಮಾಂಸೆ’ ಕೃತಿಯಲ್ಲಿ ಗುರುತಿಸುತ್ತಾರೆ. ಸಂಸ್ಕೃತ ಮೀಮಾಂಸೆಗಿಂತಲೂ ಕನ್ನಡದಲ್ಲಿ ಪ್ರತ್ಯೇಕ ಚಿಂತನಾ ಪ್ರಸ್ಥಾನವೊಂದು ಇದೆ ಎನ್ನುವುದಕ್ಕೆ ಬೂದಾಳರಿಗೆ ಇಂಬಾಗಿ ದೊರಕುವುದು ‘ಬುದ್ಧ ಮಾರ್ಗ’ ಮತ್ತು ಅದನ್ನು ಹೋಲುವ ವಚನ ಸಂಗತಿಗಳು.
 
‘ಯಾವುದೂ ಅಧಿಕೃತವಲ್ಲ, ಅದರ ಚಹರೆಗಳು ಬದಲಾಗಬೇಕಾದುದು ಅನಿವಾರ್ಯ ಮತ್ತು ಅಗತ್ಯ’ ಎಂಬುದಕ್ಕೆ ಪಂಪನ ಎರಡು ಕೃತಿಗಳೇ ಸಾಕ್ಷಿ. ಪ್ರಾಚೀನ ಕಾವ್ಯ ಮಾದರಿಯೆನಿಸಿದ್ದ ವ್ಯಾಸ ಮಹಾಭಾರತವನ್ನು ಪಂಪ ತನ್ನ ಪರಿಸರದ ರಾಜಕಾರಣ ಕಥನವನ್ನಾಗಿಸಿ, ಅದೇ ಸಾಮ್ರಾಜ್ಯಶಾಹಿ ಮನಸ್ಥಿತಿಯನ್ನು ‘ಆದಿಪುರಾಣ’ದಲ್ಲಿ ಧಾರ್ಮಿಕ ಹಿನ್ನೆಲೆಯಲ್ಲೂ ನೋಡಿ ‘ಹೇಯಂ ಸಾಮ್ರಾಜ್ಯಂ’ ಎಂದು ಪರಿವ್ರಾಜಕತ್ವವೇ ಸ್ವೀಕಾರಾರ್ಹ ಎನ್ನುತ್ತಾನೆ. ಈ ಪರಿವ್ರಾಜಕತ್ವವೇ ಮುಂದೆ ಕಾಣುವ ವಚನಕಾರರ ತತ್ವಾನುಸಂಧಾನ. ಪಂಪನ ಪ್ರಕಾರ ಕಾವ್ಯಕಥನ ಸೃಷ್ಟಿ ಎನಿಸುವಂಥದ್ದು, ‘ಅದು ನಿಚ್ಚಂ ಪೊಸತು’, ಅರ್ಣವದಂತೆ ಅತಿ ಗಂಭೀರವಾದುದು. ಸಮುದ್ರದಲ್ಲಿ ಏಳುವ ಅಲೆ ಒಂದೇ ಬಗೆಯದೆಂದು ನೋಡುವವರ ಮಂದಗಣ್ಣಿಗೆ ಅನಿಸಿದರೂ ಅದು ಹಾಗೇ ಇರುವುದಿಲ್ಲವೆಂಬ ಪಂಪನ ಸೂಕ್ಷ್ಮ ಹೇಳಿಕೆ ಮುಂದಿನ ಕನ್ನಡ ಕಾವ್ಯಪಂಥಕ್ಕೆ ಮುನ್ನುಡಿಯನ್ನು ಬರೆದಂತೆ ತೋರುತ್ತದೆ.
 
ನಟರಾಜ ಬೂದಾಳು ಅವರು ಕನ್ನಡ ಸಾಹಿತ್ಯ ಪರಂಪರೆಯ ಬೇರೆ ಬೇರೆ ಪ್ರತಿಕ್ರಿಯಾ ಮಾರ್ಗವು, ಸಂಸ್ಕೃತ ಪಠ್ಯಗಳು ಹಾಕಿಕೊಟ್ಟ ರಸ, ರೀತಿ, ಧ್ವನಿ, ಅಲಂಕಾರವೇ ಅಲ್ಲದೆ ಅಷ್ಟಾದಶ ವರ್ಣನೆಗಳ ಹಿನ್ನೆಲೆಯಲ್ಲೇ ಸೃಷ್ಟಿಯಾಗಲಿಲ್ಲವೆಂಬ ಸಂಗತಿಯನ್ನು ತಮ್ಮ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲೂ ಚರ್ಚಿಸಿರುತ್ತಾರೆ. ಹಾಗೆ ನೋಡಿದರೆ ಪಂಪನ ಕಥನ ಮಾದರಿಯನ್ನೇ ಸಂಪೂರ್ಣ ತಳ್ಳಿಹಾಕಿದ ಹರಿಹರ 9–10ನೇ ಶತಮಾನದ ರಾಜಸಿಂಹಾಸನಗಳನ್ನು ಬರಿದು ಮಾಡಿಸಿ ಅಲ್ಲಿ ಮಾದಾರ ಚನ್ನಯ್ಯನನ್ನು ತಂದು ಕೂರಿಸಿಬಿಡುತ್ತಾನೆ.

ಕೂರಿಸುವುದೇ ಅಲ್ಲ – ‘ಗುರುಲಿಂಗನೊಡನುಂಡ ಚನ್ನನಂ ತೋರಿರೇ’ ಎಂದು ‘ಚನ್ನನ ಪಾದರಜವನ್ನು ಕಣ್ಗಳೊಳಗೊತ್ತಿ, ಸರ್ವಜ್ಞ ನಿನ್ನ ಕೆರ್ಪಿಂಗೆನ್ನ ಶಿರ ಸರಿಯೆ...’ ಎಂತಲೂ ಕರಿಕಾಲ ಚೋಳರಾಜನ ಬಾಯಿಂದ ಆಡಿಸುವ ಮಾತುಗಳು ಆವರೆಗೆ ಪ್ರಕಟಗೊಂಡ ಕನ್ನಡದ ನೂರಾರು ಶಾಸನಗಳ ಪೌರುಷ–ಪರಾಕ್ರಮ, ಇಲ್ಲವೇ ಅಷ್ಟಾದಶ ವರ್ಣನೆಗಳ ಎದುರುದಿಕ್ಕಿನಲ್ಲಿ ಬರೆದ ಶ್ರೀಸಾಮಾನ್ಯನ ಗುಪ್ತಶಕ್ತಿಯ, ಆತ್ಮಪ್ರತ್ಯಯದ ಶಾಸನ ಬರಹವಾಗಿರುತ್ತದೆ. 
 
ರಾಘವಾಂಕ ಸಹ ತನ್ನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಸಿಂಹಾಸನ ಶಕ್ತಿಯನ್ನು ಪಲ್ಲಟಗೈದು, ಅಲ್ಲಿದ್ದವನನ್ನು ಸ್ಮಶಾನಕ್ಕೆ ಕರೆತಂದು ನಿಲ್ಲಿಸಿ, ಅಪವಿತ್ರಸ್ಥಳವೂ ಮೋಕ್ಷದ ನೆಲೆ, ದೈವಸಾಕ್ಷಾತ್ಕಾರದ ಮಂಗಳದ ಅಂಗಳವಾಗಬಹುದು ಎನ್ನುತ್ತಾನೆ. ಸಂಪೂರ್ಣ ಭಿನ್ನಮಾರ್ಗವನ್ನು ತುಳಿದ ಈ ಚಿಂತನೆಗೆ ಮೂಲ ಪ್ರೇರಣೆ ವಚನಕಾರರ ತತ್ವಾನುಸಂಧಾನವೇ ಕಾರಣ ಎನ್ನಬೇಕು.

ಈ ವಚನಮಾರ್ಗದಲ್ಲಿ ಹುಟ್ಟಿಕೊಂಡ ಬೇರೊಂದು ಶೂನ್ಯ ಸಿಂಹಾಸನ, ಅಲ್ಲಮನದು! ಅದು ಅರಮನೆಗಳ ಸ್ಥಾವರ ಸಿಂಹಾಸನವಲ್ಲ. ಅಲ್ಲಮ ಇರುವ ಕಡೆಯೇ ಅದು ಸ್ಥಾಪಿತವಾಗುವ ಸ್ಪಟಿಕದ ಶಲಾಕೆಯ, ಕೋಟಿ ರವಿ–ಶಶಿಗಳ ಬೆಳಕಿನ ಸಂಚಲನ ಅಥವಾ ಯಾರೂ ಪ್ರವೇಶಿಸದೇ ಹೋದ ಅನಿಮಿಷಯ್ಯನ ನೆಲಗವಿಯ ಸಾತಿಶಯದ ನಿರುಪಾಧಿಕ, ನಿರ್ಮಲ ಜ್ಯೋತಿಯ ಆಸನ. ಅಲ್ಲಮನ ಮಾತುಗಳನ್ನು ಅಧಿಕೃತವಾಗಿ ಕೃತಿಯ ಉದ್ದಕ್ಕೂ ಬೂದಾಳು ಅವರು ಪ್ರಸ್ತಾಪಿಸುತ್ತ ಅದನ್ನು ಬುದ್ಧನ ತತ್ವಗಳಿಗೆ ತಗುಳ್ಚುತ್ತ, ಕನ್ನಡ ಮೀಮಾಂಸೆಯ ಸಹಜ ಮಾರ್ಗವನ್ನು ಅನ್ವೇಷಿಸಲು ಪ್ರಯತ್ನಿಸಿರುತ್ತಾರೆ. ಇದು ಸಾಹಿತ್ಯ ಚರಿತ್ರೆಕಾರರು, ವಿದ್ವಾಂಸರು ಕನ್ನಡ ಕಾವ್ಯಪರಂಪರೆಯ ಸೃಷ್ಟಿಯನ್ನು ಇನ್ನೊಂದು ದಿಕ್ಕಿನಲ್ಲಿ ಗ್ರಹಿಸಬೇಕೆಂಬ ತೀವ್ರ ತುಡಿತದ ಸೂಚನೆ.
 
ಯಾವುದಕ್ಕೂ ನಿರ್ದಿಷ್ಟ ಗಡಿರೇಖೆಗಳಿರಲು ಸಾಧ್ಯವಿಲ್ಲ. ನಾವು ಐತಿಹಾಸಿಕ ಅವಘಡಗಳನ್ನು ಸಾಹಿತ್ಯ ಜಗತ್ತಿಗೂ ಅನ್ವಯಿಸುತ್ತ ಯಾವ ರಾಜನೂ ತನ್ನ ರಾಜ್ಯದ ಗಡಿಯನ್ನು ಎಷ್ಟೆಷ್ಟು ವಿಸ್ತರಿಸಿದ ಎಂಬ ಕಥನಗಳನ್ನು ವೀರಯುಗಕ್ಕೆ ಲಗತ್ತಿಸಿ, ಹಾಗಿಲ್ಲದವನ್ನು ಭಕ್ತಿ ಭಾವಗಳ ಕಾಲಕ್ಕೆ ತಂದಿರಿಸಿರುತ್ತೇವೆ.

ಅದೇ ಭಕ್ತಿಯುಗದ ಕುಮಾರವ್ಯಾಸ, ವ್ಯಾಸಮಹರ್ಷಿಗಳ ಮತ್ತು ಪಂಪನ ಭಾರತ ಕಥನವನ್ನು  ಕನ್ನಡಿಸುತ್ತ, ಕೌರವ–ಪಾಂಡವರ ರಾಜಕಾರಣವನ್ನು ನಿಯಂತ್ರಿಸುವ ಕೃಷ್ಣನನ್ನು ಹಸಿಯುವ ಕೃಷ್ಣನನ್ನಾಗಿ ತಂದು ವಿದುರನ, ದ್ರೌಪದಿಯ ಗುಡಿಸಲ ಮುಂದೆ ನಿಲ್ಲಿಸುತ್ತಾನೆ. ಅಂದರೆ ಯಾವ ಮೂಲರೂಪವೂ ನಿರ್ದಿಷ್ಟವಲ್ಲ, ಅದು ಅಲ್ಲಿಗೆ ಮುಗಿಯುವಂಥದ್ದಲ್ಲ, ಅವರ ಕಥನ ಪ್ರಾರಂಭ ಅಲ್ಲಿಂದಲೇ ಇನ್ನಿತರ ರೂಪಗಳನ್ನು ಪಡೆಯುತ್ತಾ ಸಾಗುತ್ತದೆ. ಕುವೆಂಪು ಹೇಳುವ ಕೃತಿಯ ಮರುಹುಟ್ಟು ಇದೇ. ಕಾಲಕಾಲಕ್ಕೆ ಮರುಹುಟ್ಟು ಪಡೆಯುವ ಕಾವ್ಯರೂಪಗಳಿಗೆ ಅದದೇ ಮೀಮಾಂಸೆಯ ಸೂತ್ರಗಳು ಅನ್ವಯಿಸುವುದು ಹೇಗೆಂಬುದು ಬೂದಾಳರ ಮುಖ್ಯ ಪ್ರಶ್ನೆ. ಇನ್ನು ಜನಪದ ಜಗತ್ತಿನಲ್ಲಾದರೋ ಸಾಂದರ್ಭಿಕ ಪಠ್ಯರೂಪಗಳು ಅಸಂಖ್ಯಾತ!
 
ವಿರಾಟ್ ಸ್ವರೂಪವನ್ನೂ ತೋರುವ, ಗುಡಿಸಿಲ ಮುಂದೆ ಹಸಿಯುತ್ತಲೂ ನಿಲ್ಲುವ ಕೃಷ್ಣನನ್ನು ಸೃಷ್ಟಿಸುವ ಕುಮಾರವ್ಯಾಸ, ಇದೇ ರೂಪಕಕ್ಕೆ ಆನುಷಂಗಿಕವಾಗಿ ‘ಉರಿವುರಿವುತಿದೆ ದೇಶ ಬಡವರ ಬಿನ್ನಪವನಿನ್ನಾರು ಕೇಳ್ವರು’ ಎಂಬ ಮಾತನ್ನೂ ಆಡುತ್ತಾನೆ. ‘ಕಾಲಚಕ್ರದ ಬೇಗೆಯಲಿ ಜುಣುಗಿ ಜಾರುವರಖಿಳ ಮಾನವರು’ ಎನ್ನುತ್ತಾನೆ. ಆದರೆ ಅದೇ ಕಾಲವು ಕೃತಕ ಇತಿಹಾಸ ಸೃಷ್ಟಿಸುವವರಿಗೆ ಸುವರ್ಣ ಯುಗವಾಗಿದ್ದಿತು. ಯಾವುದು ಸತ್ಯ? ಬುದ್ಧ ಹೇಳುವಂತೆ ರೋಗರುಜಿನ, ಹಸಿವು, ಬಡತನ, ಸಾವು ಈ ಸಂಬಂಧದ ದುಃಖವೇ ನಿರಂತರ.
 
ರಾಜ್ಯ ಸಾಮ್ರಾಜ್ಯಗಳ ನೇತಾರರ ‘ತನ್ಹಾ’ ಸಾಮಾಜಿಕ ಚರಿತ್ರೆಯಾಗಲು ಹೇಗೆ ಸಾಧ್ಯ? ಆನೆ, ಕುದುರೆ, ಭಂಡಾರ ಎಲ್ಲಾ ಲೊಳಲೊಟ್ಟೆ ಎಂದು ಯಾವೊತ್ತೂ ಜನ ಜೀವನದ ಮೂರಾಬಟ್ಟೆಯ ಬದುಕನ್ನೇ ಪುರಂದರ ದಾಸರು ಹಾಡಿರಬಹುದೆ? ಅಂದರೆ ಅಡಗಿಹೋದ ಸಾಮಾಜಿಕ ಇತಿಹಾಸದ ಮೇಲೆ ಅರಮನೆಯ ಚರಿತ್ರೆಯ ಟೊಳ್ಳು ಸತ್ಯ ಸವಾರಿ ಮಾಡಿರುವ ಕಥನಗಳನ್ನೇ ಅಲ್ಲಮನು ‘ತೊಡೆಯಬೇಕಾದ ಲಿಪಿ’, ‘ಭಾಷೆಯೆಂಬುದು ಪ್ರಾಣಘಾತಕ’ ಎಂದಿರಬಹುದೇ? ಈ ಕ್ರಮದಲ್ಲಿ ಸ್ಥಾಪಿತ, ಸಾಂಸ್ಥಿಕ ಕುರುಹುಗಳ ನೆಲೆಗಳನ್ನು ವಿಸರ್ಜಿಸುವುದೇ ದುಸ್ತರ ಎಂದ ಅಲ್ಲಮ ‘ಊಱದ ಚೇಳಿನ, ಏಱದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು’ ಎನ್ನುತ್ತಾನೆ.

ಯಾವಾಗಲೂ ಕಲಿತದ್ದನ್ನು ಬಿಡುವ, ತುಂಬಿದ್ದನ್ನು ಖಾಲಿ ಮಾಡುವುದನ್ನು ಬಯಸುವ ಅಲ್ಲಮನ ಮುಖ್ಯ ಪ್ರಶ್ನೆ, ಚೇಳು ಕಚ್ಚುವುದು ಅರಿವಿಗೆ ಬರದೇ ಹೋದರೆ, ಔಷಧಿ ಮಾಡುವ ಬಗೆ ಯಾವುದು ಎಂಬುದಾಗಿರುತ್ತದೆ. ಕಲ್ಪಿತ ಸಮಸ್ಯೆಗೆ ಕಲ್ಪಿತ ಪರಿಹಾರದ ಬೆಡಗಿನ ಮಾತನಾಡುತ್ತಿದ್ದಾನೆ ಅಲ್ಲಮ.
 
ಇನ್ನು ನಿರಂತರವಾಗಿ ಬೆಂಕಿ, ನೀರಿನ ಪಾಲಾದ ಹೆಣ್ಣುಮಕ್ಕಳ ಮತ್ತು ಅವರ ಅಪರಿಹಾರ್ಯ ಸಮಸ್ಯೆಗಳಿಗೆ ಉತ್ತರ ನೀಡದ ಲೋಕವನ್ನು ಕುರಿತಾಗಿ ‘ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬನ ಒಡವೆ ಎಂದರಿಯಬೇಕು, ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು’ ಎಂಬ ವಚನಕಾರ್ತಿ ಗೊಗ್ಗವ್ವೆಯ ಬಗೆಹರಿಯದ ಪ್ರಶ್ನೆಯೊಂದನ್ನು ಬೂದಾಳರು ಪ್ರಸ್ತಾಪಿಸಿರುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕಥನ ಮೀಮಾಂಸೆಯನ್ನು ಕುರಿತಾಗಿ ನಟರಾಜ ಬೂದಾಳರು ಹೇಳುವುದೆಂದರೆ, ‘ಇದರ ಪ್ರಯಾಣವು ರಚನೆಯಿಂದ ನಿರಚನೆಯ ಕಡೆಗೆ, ಸಂರಚನೆಗಳಿಂದ ಬಯಲಿನ ಕಡೆಗೆ’ ಸಾಗಿರುವುದನ್ನು ವಿದ್ವಾಂಸರು ಮುಖ್ಯವಾಗಿ ಗಮನಿಸಬೇಕೆನ್ನುತ್ತಾರೆ.

‘ಇದಕ್ಕೆ ಬೇಕಾದ ಸಿದ್ಧತೆಯ ತತ್ವವೆಂದರೆ – ‘ನಿನ್ನೆಲ್ಲ ಯೋಚನೆಗಳ ಕೆಳಗಿಟ್ಟು ನೀನಿರುವಂತೆ ಬಾ, ಸಿದ್ಧನಾಗಿಲ್ಲದಿರಲು ಸಿದ್ಧನಾಗು, ಅಭದ್ರತೆಯಲ್ಲಿ ಭದ್ರವಾಗಿರು, ಚಿತ್ತವನು ಬರಿದಾಗಿಸಿಕೊಂಡು ಲೋಕವನು ನೋಡುವ...’ ಎಂಬ ಬುದ್ಧ ಮತ್ತು ಅಲ್ಲಮರ ಚಿಂತನೆಯ ಅನುಸಂಧಾನದಲ್ಲಿ ಹೊಸ ಬಗೆಯ ಕುತೂಹಲಕರ ‘ಕನ್ನಡ ಮೀಮಾಂಸೆ’ಯನ್ನು ನಟರಾಜ ಬೂದಾಳರು ವಿದ್ವಾಂಸರ ಅವಗಾಹನೆಗೆ ತಂದಿರುತ್ತಾರೆ.
 
ಕನ್ನಡದ ಕಾವ್ಯ ಮೀಮಾಂಸೆ ಸಂದರ್ಭದಲ್ಲಿ ಸಾಮಾನ್ಯವಾಗಿ ಇದಿರಾಗುವ ಪ್ರಶ್ನೆಯೆಂದರೆ, ಈಗ ಅನ್ವಯಗೊಂಡಿರುವ ಸಂಸ್ಕೃತ ಕಾವ್ಯ ಮೀಮಾಂಸೆಯು ಮುಂದಿಡುವ ರಸ, ಧ್ವನಿ, ಔಚಿತ್ಯ, ಆನಂದಗಳನ್ನು ದಾಟಿ ಕನ್ನಡವು ತನ್ನದೇ ಬದುಕಿನಲ್ಲಿ ಕಂಡುಕೊಂಡ ಮೀಮಾಂಸೆಯ ಪರಿಕಲ್ಪನೆಗಳೇನು? ಇದಕ್ಕೆ ಕನ್ನಡವು ತನ್ನ ನಿಡುಗಾಲದ ಬದುಕಿನಲ್ಲಿ ಮುಂದಿಟ್ಟ ನಿಸರ್ಗದ ವಿವೇಕ ಮತ್ತು ಕನ್ನಡದ ದರ್ಶನ ಪ್ರಜ್ಞೆಯು ರೂಪಿಸಿಕೊಟ್ಟ ಮೀಮಾಂಸೆಯು ಬೂದಾಳರು ಮುಂದಿಡುತ್ತಿರುವ ಕನ್ನಡ ಕಾವ್ಯ ಮೀಮಾಂಸೆಯನ್ನು ರೂಪಿಸುವಲ್ಲಿ ನಿರ್ಣಾಯಕವಾದುದು.

ಹಾಗಾದರೆ ಕನ್ನಡ ಕಾವ್ಯ ಮೀಮಾಂಸೆಯ ಪ್ರಾಥಮಿಕ ಪರಿಕಲ್ಪನೆಗಳೇನು? ಇದಕ್ಕೆ ಕನ್ನಡವು ನೀಡಿದ ಉತ್ತರವೆಂದರೆ ಪ್ರಕ್ರಿಯಾ ಮೀಮಾಂಸೆ, ಭಿನ್ನಾಭಿನ್ನ ನಿರಾಕರಣೆ, ಪ್ರಮಾಣ ನಿರಾಕರಣೆ, ದುಃಖದ ಅನುಸಂಧಾನ, ಕಾಲದೇಶ ನಿರಾಕರಣೆ ಮುಂತಾದುವು. ಇವುಗಳ ವಿಸ್ತಾರವಾದ ವಿವರಣೆ ಮತ್ತು ಅನ್ವಯಗಳೊಂದಿಗೆ ಮೀಮಾಂಸೆಯ ಪ್ರಸ್ಥಾನವೊಂದನ್ನು ಮುಂದಿಟ್ಟಿದ್ದಾರೆ. 
 
ಈವರೆಗೆ ಅನ್ವಯ ಸಾಧ್ಯವಿಲ್ಲದ ಕನ್ನಡದ ವಿಸ್ತಾರವಾದ ಅಭಿವ್ಯಕ್ತಿಯು ತನ್ನನ್ನು ವ್ಯಾಖ್ಯಾನಿಸುತ್ತಿರುವ ತನ್ನದಲ್ಲದ ಮೀಮಾಂಸೆಯೆದುರು ಅನೇಕ ರೀತಿಯ ಇಕ್ಕಟ್ಟುಗಳನ್ನು ನಿಭಾಯಿಸುತ್ತಲೇ ಬಂದಿದೆ. ಉದಾಹರಣೆಗೆ, ಆನಂದವೇ ಕಾವ್ಯದ ಪರಮ ಪ್ರಯೋಜನವೆಂದು, ಅದರ ಮೂಲಕ ತಲುಪುವ ಪರಬ್ರಹ್ಮವೇ ಕಾವ್ಯದ ಗಂತವ್ಯವೆಂದು ವಚನಸಾಹಿತ್ಯವನ್ನಾಗಲೀ, ತತ್ವಪದ ಸಾಹಿತ್ಯವನ್ನಾಗಲೀ, ಕನ್ನಡದ ನೆಲದ ಕಾವ್ಯಗಳಾದ ಮಂಟೇಸ್ವಾಮಿ, ಮಲೆ ಮಾದೇಶ್ವರ ಕಾವ್ಯಗಳನ್ನಾಗಲೀ ಓದುವುದು ಸಾಧ್ಯವೇ ಇಲ್ಲ. ಯಾವ ವಚನಕಾರನೂ ಆನಂದಕ್ಕೆಂದು ಯಾವ ವಚನವನ್ನೂ ಕಟ್ಟಿರಲು ಸಾಧ್ಯ ಇಲ್ಲ.
 
ಈ ನೆಲದ ಅಸ್ಮಿತೆಯ ಪ್ರಮುಖ ಲಕ್ಷಣಗಳಾದ ದ್ವೈತಾದ್ವೈತ ನಿರಾಕರಣೆ, ದುಃಖದ ಅನುಸಂಧಾನ, ಪ್ರಮಾಣ ನಿರಾಕರಣೆ, ಪ್ರಕ್ರಿಯಾ ಮೀಮಾಂಸೆಯ ತಾತ್ವಿಕತೆಯೊಂದಿಗೇ ಬಾಳುತ್ತ ಬಂದಿರುವ ಕನ್ನಡದ ಬದುಕನ್ನು ವ್ಯಾಖ್ಯಾನಿಸಿಕೊಳ್ಳಲು ‘ಕನ್ನಡದ ದರ್ಶನ’ ಪ್ರಜ್ಞೆಗಳಾದ, ಬೌದ್ಧ, ಜೈನ, ಸಿದ್ಧ, ವಚನ, ತತ್ವಪದ ಮುಂತಾದ ದೇಸೀ ಚಿಂತನಾ ಪರಂಪರೆಗಳು ಒದಗಿಸಿಕೊಟ್ಟಿರುವ ಮೀಮಾಂಸೆಯೊಂದರ ವ್ಯವಸ್ಥಿತ ಕೃತಿಯನ್ನಾಗಿ ಕನ್ನಡವು ತನ್ನನ್ನು ವ್ಯಾಖ್ಯಾನಿಸಿಕೊಳ್ಳಲು, ಬೆಲೆಗಟ್ಟಲು ಮತ್ತು ಅರ್ಥೈಸಿಕೊಳ್ಳಲು ಅತ್ಯಂತ ಅಗತ್ಯವಾಗಿದ್ದ ಕನ್ನಡ ಕಾವ್ಯ ಮೀಮಾಂಸೆಯೊಂದನ್ನು ಬೂದಾಳರು ಒದಗಿಸಿಕೊಟ್ಟಿದ್ದಾರೆ. 
 
ವೈಶ್ವಿಕತೆಯೆನ್ನುವುದು ಸ್ಥಳೀಯತೆಯ ಹೊರತಾಗಿ ಹೇಗೆ ಇರಲಾರದೋ ಮೀಮಾಂಸೆಯನ್ನುವುದು ಕೂಡ ಸ್ಥಳೀಯವಾಗಿರುವುದೇ ಸತ್ಯವೆನ್ನುವುದನ್ನು ಈ ಕೃತಿ ಅನಾವರಣ ಮಾಡಿದೆ. ಕನ್ನಡ ಸಾಹಿತ್ಯ, ದರ್ಶನ ಮತ್ತು ಮೀಮಾಂಸೆಗೆ, ಮನೆಯವರನ್ನು ಒಳಗೆ ಕರೆಯುವಂತೆ ಈ ಕೃತಿ ನಮ್ಮನ್ನೆಲ್ಲ ಒಳಗೊಳ್ಳುತ್ತದೆ.
 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.