ಕಾಡಂಕಲ್ಲ್ ಮನೆ

ಸಮುದಾಯದ ಬಿಕ್ಕಟ್ಟುಗಳಿಗೆ ಒಳಗಿನವರ ಸೃಜನಶೀಲ ಪ್ರತಿಕ್ರಿಯೆ


ಲೇಖಕ : ಮುಹಮ್ಮದ್ ಕುಳಾಯಿ
ಪ್ರಕಾಶಕರು : ಇರುವೆ ಪ್ರಕಾಶನ, ಮಾರ್ವೆಲ್ ಅಪಾರ್ಟ್‌ಮೆಂಟ್, ನಂ.301, ಶಿವನಗರ, ಪಾಂಡೇಶ್ವರ, ಮಂಗಳೂರು– 575001
ಪ್ರಕಟವಾದ ವರ್ಷ : .
ಪುಟ : 232
ರೂ : 200
ವಿಮರ್ಶೆಯ ಅನುಕೂಲಕ್ಕಾಗಿ ರೂಪಿಸಿಕೊಳ್ಳುವ ಪಾರಿಭಾಷಿಕಗಳು ಮತ್ತು ಪರಿಕಲ್ಪನೆಗಳು ಕೆಲವು ಸಂದರ್ಭಗಳಲ್ಲಿ ಸಿದ್ದಮಾದರಿಗಳನ್ನು ಪ್ರತಿಪಾದಿಸುವ ಪದಪುಂಜಗಳಾಗಿಯೂ ಬದಲಾಗಿಬಿಡುತ್ತವೆ. ಇದಕ್ಕೆ ಉತ್ತರ ಉದಾಹರಣೆ ‘ಮುಸ್ಲಿಂ ಸಂವೇದನೆ’.
 
ಕನ್ನಡ ಜಗತ್ತಿನ ಭಾಗವಾಗಿರುವ ಮುಸ್ಲಿಮರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿರುವ ಕಥನಗಳನ್ನೆಲ್ಲಾ ಈ ತಥಾಕಥಿತ ‘ಸಂವೇದನೆ’ಯ ಅಡಿಯಲ್ಲಿ ತರಲಾಯಿತು. ಹೀಗೆ ಗುರುತಿಸುವ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಒಂದು ಸೈದ್ಧಾಂತಿಕ ಚೌಕಟ್ಟಿನೊಳಗೆ ವಿಶ್ಲೇಷಿಸುವ ಕೃತಿಗಳಷ್ಟೇ ಮಹತ್ವ ಪಡೆದುಬಿಟ್ಟುವು.
 
ಇದೇನೂ ಉದ್ದೇಶಪೂರ್ವಕವಾಗಿ ನಡೆಸಿದ ಸಂಚಾಗಿರಲಿಲ್ಲ. ಒಂದು ಕಾಲಘಟ್ಟದ ವಿಮರ್ಶೆಯ ಒಲವುಗಳೇ ಈ ಬಗೆಯ ಸಿದ್ಧ ಮಾದರಿಯೊಂದನ್ನು ರೂಪಿಸಿಬಿಟ್ಟವು. ಪರಿಣಾಮವಾಗಿ ಭಿನ್ನವಾದ ಹಾದಿಯಲ್ಲಿ ತಮ್ಮ ಅಭಿವ್ಯಕ್ತಿಯ ಮಾರ್ಗಗಳನ್ನು ರೂಪಿಸಿಕೊಂಡ ಕೆಲವು ಲೇಖಕರ ಕೃತಿಗಳಿಗೆ ಅಗತ್ಯವಿರುವಷ್ಟು ಮಹತ್ವ ದೊರೆಯಲಿಲ್ಲ. ಈ ಪಟ್ಟಿಗೆ ಸೇರುವ ಲೇಖಕರಲ್ಲಿ ಮುಹಮ್ಮದ್ ಕುಳಾಯಿ ಕೂಡಾ ಒಬ್ಬರು.
 
ಸ್ಥಾಪಿತ ಸಾಮಾಜಿಕ ಚೌಕಟ್ಟುಗಳನ್ನು ಪ್ರಶ್ನಿಸುವ ಬಗೆಯಲ್ಲಿ ಬರೆದವರಿಗಿಂತ ಹೆಚ್ಚು ಕ್ಲಿಷ್ಟಕರವಾದ ಹಾದಿ ಕುಳಾಯಿ ಅವರದ್ದಾಗಿತ್ತು. ತಮ್ಮ ಸಣ್ಣಕಥೆಗಳಲ್ಲಿ ಅವರು ಒಳಗಿನವನಾಗಿ ಸಮುದಾಯದ ಬಿಕ್ಕಟ್ಟುಗಳಿಗೆ ಸೃಜನಶೀಲ ಪ್ರತಿಕ್ರಿಯೆ ನೀಡಿದರು.
 
ಈ ಬಗೆಯ ಒಳಗಿನ ವಿಮರ್ಶಕರಿಗೆ ಎದುರಾಗುವ ದೊಡ್ಡ ಸಮಸ್ಯೆಯೊಂದಿದೆ. ಅವರು ಒಳಗಿನವರಿಗೆ ಅಪಥ್ಯವಾದಂತೆಯೇ ಹೊರಗಿನವರಿಗೂ ಬೇಡವಾಗುವುದು. ಮೂರು ಕನ್ನಡ ಕಥಾಸಂಕಲನಗಳು, ಒಂದು ಬ್ಯಾರಿ ಭಾಷೆಯ ಕಥಾಸಂಕಲನವನ್ನು ಹೊರತಂದಿರುವ ಮುಹಮ್ಮದ್ ಕುಳಾಯಿ ಅವರ ಒಳವಿಮರ್ಶಕನ ಧೋರಣೆಯೇ ಅಭಿವ್ಯಕ್ತಿಯ ಸಾಧ್ಯತೆಯನ್ನೂ ಮಿತಿಯನ್ನೂ ನಿರ್ಧರಿಸಿವೆ.
 
ಇತ್ತೀಚೆಗೆ ಹೊರಬಂದಿರುವ ಅವರ ಕಾದಂಬರಿ ‘ಕಾಡಂಕಲ್ಲ್ ಮನೆ’ ಕುಳಾಯಿ ಎಂಬ ಕಥೆಗಾರ ಅಭಿವ್ಯಕ್ತಿಯ ಹಾದಿಯಲ್ಲಿ ಪಡೆದುಕೊಂಡಿರುವ ಹೊಸ ತಿರುವನ್ನು ಸೂಚಿಸುತ್ತಿದೆ. ಇದು ಕೇವಲ ಪ್ರಕಾರದ ಬದಲಾವಣೆ ಮಾತ್ರ ಅಲ್ಲ. ಸಣ್ಣ ಕಥೆಗಳಲ್ಲಿ ಕುಳಾಯಿ ತಮ್ಮ ಸುತ್ತ ಹಾಕಿಕೊಂಡಿದ್ದ ಬೇಲಿಯೊಂದನ್ನು ಇಲ್ಲಿ ಸುಲಭವಾಗಿ ದಾಟಿಬಿಟ್ಟಿದ್ದಾರೆ.
 
ಅವರ ಕಥೆಗಳಲ್ಲಿ ಕಾಣಿಸುತ್ತಿದ್ದ ಅಳುಕು ಮಾಯವಾಗಿರುವುದು ಅವರ ಕಥನ ಕ್ರಮದಲ್ಲಿ ಬಂದಿರುವ ತಿರುವಿಗೆ ದೊಡ್ಡ ಸಾಕ್ಷಿ. ‘ಕಾಡಂಕಲ್ಲ್ ಮನೆ’ ವರ್ತಮಾನದ ತಲೆಮಾರು ತನ್ನ ಹಿಂದಿನವರ ಕಥೆಗಳನ್ನು ಕೇಳುವ ಶೈಲಿಯಲ್ಲಿ ನಿರೂಪಿತವಾಗಿರುವ ಕಾದಂಬರಿ. ಇಲ್ಲಿ ಕಥೆ ಹೇಳುವ ಅಜ್ಜಿ ಮತ್ತು ಕೇಳುವ ಮೊಮ್ಮಗಳೂ ಅವರ ಕಥನದ ಪ್ರಮುಖ ಪಾತ್ರಗಳೇ.
 
ಬ್ಯಾರಿ ಮುಸ್ಲಿಮರ ಬದುಕಿನೊಳಗೆ ಕಳೆದ ಐದು ದಶಕಗಳಲ್ಲಿ ಸಂಭವಿಸಿರುವ ಸ್ಥಿತ್ಯಂತರಗಳ ಒಂದು ಮುಖ ಇಲ್ಲಿ ಅನಾವರಣಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ವೈದೇಹಿ ಇದನ್ನು ಮತ್ತೊಂದು ಬಗೆಯಲ್ಲಿ ಗುರುತಿಸುತ್ತಾರೆ ‘ಕಾಡಂಕಲ್ಲ್ ಮನೆ ಹೇಳುವುದು ಎಲ್ಲವರೂ ಒಳ್ಳೆಯವರೇ ಆಗಿಯೂ ನೋವುಂಡ ಕಥೆಗಳನ್ನು. ಅಂಥ ದುಷ್ಟರಾಗಲೀ ಕೆಟ್ಟವರಾಗಿಯೂ ಅಲ್ಲದೆಯೂ ಅನಿವಾರ್ಯತೆ ಕೂಡ ಇಲ್ಲದೆಯೂ ತಮ್ಮ ತಮ್ಮ ಸಂದರ್ಭಕ್ಕೆ ತಕ್ಕಂತೆ ಆದರೆ ಅನುದ್ದೇಶವಾಗಿ ಮಾರಣಾಂತಿಕವಾಗಿ ನೋಯಿಸುವ ನೋಯುವ ಕತೆಗಳನ್ನು.’
 
ಈ ನೋಯುವ ಮತ್ತು ನೋಯಿಸುವ ಕ್ರಿಯೆಯಲ್ಲಿ ಕಾಲಚಕ್ರದ ಚಲನೆಯೂ ಇದೆ. ಕೆಲವು ನೋವುಗಳು ಸ್ವೀಕರಿಸಲೇಬೇಕಾದ ಬದಲಾವಣೆಯ ಭಾಗವಾಗಿ ಬಂದಿದ್ದರೆ ಇನ್ನು ಕೆಲವು ನೋವುಗಳು ಬದಲಾವಣೆಗೆ ಬರಬಹುದಾದ ಪ್ರತಿಕ್ರಿಯೆಯನ್ನು ತಪ್ಪಾಗಿ ಊಹಿಸಿ ಇಡುವ ಹೆಜ್ಜೆಗಳ ಪರಿಣಾಮವಾಗಿ ಬಂದಿವೆ. ವೈದೇಹಿ ಅವರು ಗುರುತಿಸಿರುವಂತೆ ಇಡೀ ಕಾದಂಬರಿ ಸುಪ್ತವಾಗಿ ಪ್ರತಿಪಾದಿಸುವ ಅಂಶವೊಂದಿದೆ.
 
ಎಲ್ಲಾ ನೋವುಗಳೂ ಕೊನೆಗೂ ಹೆಣ್ಣನ್ನೇ ಬಾಧಿಸುವುದು. ಅಬ್ಬು ಬ್ಯಾರಿಯ ಒಳ್ಳೆಯತನ ಮತ್ತು ಹೃದಯ ವೈಶಾಲ್ಯವೂ ನೋವಾಗಿ ಪರಿಣಮಿಸುವುದು ಅವನ ಸ್ವಾಭಿಮಾನಿ ಮಗಳಿಗೇ.
 
ಕಾದಂಬರಿಯ ಬಂಧವನ್ನು ಗಟ್ಟಿಗೊಳಿಸುವ ವಿವರಗಳನ್ನು ಪೋಣಿಸುವುದರಲ್ಲಿ ಕುಳಾಯಿ ಯಶಸ್ವಿಯಾಗಿದ್ದಾರೆ. ‘ತೌಬಾ’ದ ಮಲಯಾಳಂ ಸಾಲುಗಳನ್ನು ಪೂರ್ಣವಾಗಿ ಅನುವಾದದಲ್ಲಿ ಕಟ್ಟಿಕೊಡುವ ಕ್ರಿಯೆಯಲ್ಲಿಯೂ ಅವರು ‘ಕ್ಷಮೆ ಕೇಳುವುದರ’ ವ್ಯಂಗ್ಯವನ್ನು ಮುಂದಿಡುತ್ತಾರೆ. ತಮ್ಮ ಸಣ್ಣ ಕಥೆಗಳಂತೆಯೇ ಮೊದಲ ಕಾದಂಬರಿಯಲ್ಲಿಯೂ ನೇರವಾಗಿ ಕಥೆ ಹೇಳುವ, ಕಥನದ ಮೂಲಕವೇ ಎಲ್ಲವನ್ನೂ ಹೇಳುವ ತಂತ್ರವನ್ನೇ ಕುಳಾಯಿ ಮುಂದುವರಿಸಿದ್ದಾರೆ.
 
ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಕಾರಣದಿಂದಲೋ ಏನೋ ಅನಗತ್ಯವಾಗಿರುವ ಸಿನಿಮೀಯತೆಯೊಂದು ಅಲ್ಲಲ್ಲಿ ಎದುರಾಗುತ್ತದೆ. ಈ ಮಿತಿಯನ್ನು ಹೊರತುಪಡಿಸಿದರೆ ಇದು ದಕ್ಷಿಣ ಕನ್ನಡದ ಮುಸ್ಲಿಮರ ಬದುಕನ್ನು ಭಿನ್ನ ಬಗೆಯಲ್ಲಿ ಕಟ್ಟಿಕೊಂಡು ಗಮನಸೆಳೆಯುವ ಕಾದಂಬರಿ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.