ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ

ಪುಸ್ತಕವೆಂಬ ಸಲಕರಣೆಗಳ ಪೆಟ್ಟಿಗೆ


ಲೇಖಕ : ಎನ್.ಎಸ್. ಗುಂಡೂರ
ಪ್ರಕಾಶಕರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿವಿ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು–56
ಪ್ರಕಟವಾದ ವರ್ಷ : ....
ಪುಟ : 104
ರೂ : 80
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮುಖ್ಯ ವೈಚಾರಿಕ ಪರಿಕಲ್ಪನೆಗಳು ಮತ್ತು ವಿಶ್ವದ ಪ್ರಮುಖ ಚಿಂತಕರ ಆಲೋಚನೆಗಳನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ, ತತ್ತ್ವಶಾಸ್ತ್ರ, ಭೂ ವಿಜ್ಞಾನ, ಸಾಹಿತ್ಯ, ಭಾಷೆ ಮುಂತಾದ ವಿವಿಧ ವಿಷಯಗಳ ಕಿರುಹೊತ್ತಗೆಗಳನ್ನು ಪರಿಣಿತರಿಂದ ಸಂಪಾದಿಸಿ ಪ್ರಕಟಿಸಿದೆ. ಈ ಮಾಲೆಯಲ್ಲಿ ಪ್ರಕಟವಾದ ಪುಸ್ತಕ ಎನ್.ಎಸ್. ಗುಂಡೂರರ ‘ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ’.
 
ಪುಸ್ತಕವು ಓದಿ ಮುಚ್ಚಿಡುವ ಹೊತ್ತಗೆಯಾಗದೆ ಅದು ಮೆಕ್ಯಾನಿಕ್ ಒಬ್ಬನು ಬಳಸುವ ಸಲಕರಣೆಗಳ ಪೆಟ್ಟಿಗೆಯಂತಿರಬೇಕೆಂಬುದು  ಫ್ರಾನ್ಸಿನ ತಾತ್ವಿಕ ಫುಕೋನ ನಿಲುವು. ಇದು ಜ್ಞಾನ ಮೀಮಾಂಸೆಯ ಸಿದ್ಧ ಮಾದರಿಗಳನ್ನು ಕೊರಳಪಟ್ಟಿ ಹಿಡಿದು ಪ್ರಶ್ನಿಸುವ ಮಾತು. ಬದುಕಿನ ಬೇಕು–ಬೇಡಗಳನ್ನು ಲೋಕಪರವಾಗಿ ವ್ಯಾಖ್ಯಾನಿಸುವುದು ಮತ್ತು ಅನ್ವಯಿಸಿಕೊಳ್ಳುವುದು ಇವತ್ತಿಗೂ ಜ್ಞಾನ ಮೀಮಾಂಸೆಯ ಅನಿವಾರ್ಯ ಜವಾಬ್ದಾರಿ.
 
ಅಷ್ಟೇ ಅಲ್ಲದೆ ‘ಜ್ಞಾನವೆಂದರೆ ಏನು?’ ಎನ್ನುವ ಪ್ರಶ್ನೆಗೆ ಪಡೆಯಬೇಕಾದ ಉತ್ತರವೂ ಆಗಿದೆ. ಜೊತೆಗೆ ಜ್ಞಾನದ ಇತರೆ ಉದ್ಯೋಗಗಳಿಂದ ಅದನ್ನು ಬೇರ್ಪಡಿಸುವ ಮಾತು. ಏಕೆಂದರೆ ಜ್ಞಾನವು ಅಧಿಕಾರವನ್ನು ರೂಢಿಸಿಕೊಡುವ ಉದ್ಯೋಗವನ್ನೂ ಮಾಡುತ್ತದೆ. ಜ್ಞಾನ ಮತ್ತು ಅಧಿಕಾರ ಒಂದೇ ನಾಣ್ಯದ ಎರಡು ಮುಖಗಳಾಗಿರುವುದರಿಂದ, ಅಧಿಕಾರವನ್ನು ಗುರಿ ಇಟ್ಟುಕೊಂಡು ಕಾರ್ಯಾಚರಣೆ ನಡೆಸುವ ಎಲ್ಲ ಸಂಸ್ಥೆಗಳೂ ಜ್ಞಾನವನ್ನು ತಮ್ಮ ಪರವಾಗಿರುವಂತೆ ವ್ಯಾಖ್ಯಾನಿಸಿಕೊಳ್ಳುವ ಉದ್ಯೋಗವನ್ನು ಮಾಡಿಯೇ ಮಾಡುತ್ತವೆ. 
 
ಸಿದ್ಧ ಮಾದರಿಯ ಓದುಗಳನ್ನು, ವ್ಯಾಖ್ಯಾನಗಳನ್ನು ಪಲ್ಲಟಿಸದೆ ಹೋದರೆ ಎರಡು ರೀತಿಯ ಅಪಾಯಗಳಿಗೆ ಗುರಿಯಾಗುವುದರ ಬಗೆಗೆ ಫುಕೋ ತನ್ನ ಅಧ್ಯಯನಗಳ ಮೂಲಕ ವಿಶ್ವದ ಗಮನ ಸೆಳೆದ ಚಿಂತಕ. ಮೊದಲನೆಯದಾಗಿ, ಜ್ಞಾನದ ವಿಸ್ತರಣೆಯು ಸ್ಥಗಿತಗೊಳ್ಳುತ್ತದೆ ಮತ್ತು ಅಧಿಕಾರ ಕೇಂದ್ರಗಳು ತಮ್ಮ ಪರವಾಗಿ ಅದನ್ನು ದುರುಪಯೋಗ ಮಾಡಿಕೊಳ್ಳುತ್ತವೆ.
 
ಎರಡನೆಯದಾಗಿ, ಸ್ಥಗಿತಗೊಂಡ ಜ್ಞಾನ ತನ್ನ ಅಸ್ತಿತ್ವಕ್ಕೇ ಸಂಚಕಾರ ತಂದುಕೊಳ್ಳುವುದರ ಜೊತೆಗೆ ತನ್ನನ್ನೇ ಕೊಂದುಕೊಳ್ಳುತ್ತದೆ. ಹಾಗಾಗಿ ಫುಕೋನ ಅಧ್ಯಯನಗಳನ್ನು ಇದಿರಾಗುವ ಮಾದರಿಯೂ ಅನಿವಾರ್ಯವಾಗಿ ಬೇರೆಯೇ ಆಗಿರಬೇಕಾಗುತ್ತದೆ. ಅವನು ಏನೇನನ್ನು ಅಧ್ಯಯನ ಮಾಡಿದ ಎನ್ನುವುದಕ್ಕಿಂಥ, ಹೇಗೆ  ಅಧ್ಯಯನ ಮಾಡಿದ ಎನ್ನುವುದೇ ಮುಖ್ಯ.
 
ಪುಸ್ತಕವೊಂದನ್ನು ಓದಿ ಅದನ್ನು ತನ್ನದಾಗಿಸಿಕೊಂಡೆ ಎನ್ನುವುದು ಒಂದಾದರೆ, ಈ ಹೊತ್ತಿನದಲ್ಲದ ಓದಿನ ಮೂಲಕ ಓದಿದ್ದರಿಂದ ಅದನ್ನು ತನ್ನದನ್ನಾಗಿಸುವ ಅವಕಾಶ ಕಳೆದುಕೊಂಡೆ ಎನ್ನುವುದು ಇನ್ನೊಂದು. ಇದೇನು ಸಂಕೀರ್ಣ ಸಂಗತಿಯಲ್ಲ. ಪಠ್ಯವೆನ್ನುವುದೊಂದು ಇದೆ ಎಂದ ಮಾತ್ರಕ್ಕೆ ಅದನ್ನು ಓದುವ ಒಂದೇ ಮಾದರಿಯ ಓದು ಇರುತ್ತದೆ ಎಂದಲ್ಲ. ಉದಾಹರಣೆಗೆ, ವಚನಗಳನ್ನು ಈವರೆಗಿನ ವೀರಶೈವದ ಆವರಣದ ಓದನ್ನು ಪಕ್ಕಕ್ಕಿಟ್ಟು ಬೇರೊಂದು ಓದಿನ ಮೂಲಕ ಓದಿದರೆ ದೊರೆಯುವ ಪಠ್ಯದ ಸ್ವರೂಪ ಬೇರೆಯೇ ಇರಲು ಸಾಧ್ಯ. 
 
ಯುರೋಪಿನ ತತ್ವಶಾಸ್ತ್ರದ ವಿವಿಧ ಕವಲುಗಳನ್ನು ಆಳವಾಗಿ ಅಧ್ಯಯನ ಮಾಡಿದ ಫುಕೋನ ಗಮನ ಸಹಜವಾಗಿ ಆವರೆಗೆ ಕಡೆಗಣಿಸಿದ್ದ ಮುಖ್ಯ ಪ್ರಶ್ನೆಗಳನ್ನು ಗುರುತಿಸುವತ್ತ ಹೋಯಿತು. ಪಾಶ್ಚಾತ್ಯ ತತ್ವಶಾಸ್ತ್ರವು ಸತ್ಯ ಎಂದರೇನು? ಎಂದು ಹುಡುಕುತ್ತಿದ್ದರೆ, ಫುಕೋ ಸತ್ಯವನ್ನು ಕುರಿತು ಬುದ್ಧಗುರುವಿನ ದಾರಿಯಲ್ಲಿ ಯೋಚಿಸಿದ.
 
ಶಾಶ್ವತ ಸತ್ಯವೆನ್ನುವುದು ಯಾವುದೂ ಇರಲಾರದು ಮತ್ತು ಸತ್ಯವೆನ್ನುವುದು ಆಯಾ ಕಾಲಕ್ಕೆ ಕಟ್ಟಲಾದ ಸಂಗತಿಯಾಗಿರುತ್ತದೆ ಎಂಬುದನ್ನು ಕಂಡುಕೊಂಡ. ಅದು ಈಗಾಗಲೇ ಇರುವುದನ್ನು ಹುಡುಕುವ ಸಂಗತಿಯಲ್ಲ; ಬದಲಿಗೆ ಕಾಲಕಾಲಕ್ಕೆ ಕಟ್ಟಬೇಕಾದ ಸಂಗತಿ. ಇದು ಪ್ರಮುಖವಾಗಿ ಭಾರತೀಯ ಶ್ರಮಣಧಾರೆಗಳು ಮುಂದಿಟ್ಟ ಪ್ರಕ್ರಿಯಾ ಮೀಮಾಂಸೆಯ ಆಂಶಿಕ ರೂಪವೆಂದರೂ ಸಲ್ಲುತ್ತದೆ. ಹಾಗಾಗಿ ಫುಕೋನ ಗಮನವಿದ್ದದ್ದು ಪಠ್ಯದ ಕಡೆಗಲ್ಲ, ಬದಲಿಗೆ ಅದನ್ನು ಅನುಸಂಧಾನ ಮಾಡುವ ಪರಿಸ್ಥಿತಿಯ ಕಡೆಗೆ. ಇದರಿಂದಾಗಿ ಜ್ಞಾನಮೀಮಾಂಸೆಯಲ್ಲಿ ಅನೇಕ ಪಲ್ಲಟಗಳು ಉಂಟಾಗುತ್ತವೆ.
 
ಮೊದಲನೆಯದಾಗಿ ಮತ್ತೊಬ್ಬ ಚಿಂತಕ ಸಾತ್ರ್ ಮುಂದಿಟ್ಟ ‘ವಿಶ್ವಾತ್ಮಕ ಬುದ್ಧಿಜೀವಿ’ ಎನ್ನುವ ಕಲ್ಪನೆಯನ್ನು ಫುಕೋ ಸಶಕ್ತವಾಗಿ ತಿರಸ್ಕರಿಸಿದ. ಅದೊಂದು ಢೋಂಗಿ ಕಲ್ಪನೆ ಎಂದು ಹೀಗಳೆದ. ಏಕೆಂದರೆ ನಿಸರ್ಗ ವಿವೇಕವೆನ್ನುವುದು ಸ್ಥಳೀಯ ಮತ್ತು ಕಾಲಬದ್ಧವಾದುದು ಎನ್ನುವುದು ಫುಕೋನ ನಿಲುವು. ಇದು ವಿಶ್ವಾತ್ಮಕ, ರಾಷ್ಟ್ರೀಯ  ಮುಂತಾದ ಬೃಹತ್ ಸಂರಚನೆಗಳ ಪೊಳ್ಳುತನವನ್ನು ಹೊರಹಾಕಿತು. 
 
ಫುಕೋನ ಚಿಂತನೆಗಳ ಪ್ರಸ್ತುತತೆಯನ್ನು ನಾನಾ ರೀತಿಯಲ್ಲಿ ಅನ್ವಯಿಸಿ ನೋಡಬಹುದಾಗಿದೆ. ಅವನು ರೋಗ, ಹುಚ್ಚು, ಲೈಂಗಿಕತೆ, ಜ್ಞಾನ ಮುಂತಾದ ಸಂಗತಿಗಳನ್ನು ತನ್ನ ಅಧ್ಯಯನಕ್ಕೆ ಆಯ್ಕೆಮಾಡಿಕೊಂಡಿದ್ದಾನೆ. ನಮ್ಮ ನಡುವೆ ಅಧಿಕಾರವನ್ನು ರೂಢಿಸಿಕೊಂಡಿರುವ ಅನೇಕ ಸಂಸ್ಥೆಗಳಿವೆ.
 
ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ನಾನಾ ಧರ್ಮಗಳ ಆವರಣಗಳು, ಮಾಧ್ಯಮಕೇಂದ್ರಗಳು, ಮುಂತಾದುವುಗಳನ್ನು ಅವು ದೀರ್ಘಕಾಲದಿಂದ ರೂಢಿಸಿಕೊಂಡಿರುವ ಅಧಿಕಾರ–ನಂಬಿಕೆಗಳಿಂದ ಬೇರ್ಪಡಿಸಿ, ಬೆತ್ತಲುಗೊಳಿಸಿ ನೋಡಿದರೆ ಅವುಗಳ ನಿಜಬಣ್ಣ ಕಂಡು ಗಾಬರಿಯಾಗುವಂತಾಗುತ್ತದೆ.
 
ಉದಾಹರಣೆಗೆ ಇಂದು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಶೇಕಡಾ ತೊಂಬತ್ತೈದು ಕಾಯಿಲೆಗಳ ಚಿಕಿತ್ಸೆಯನ್ನು ಹೊರರೋಗಿಗಳಾಗಿ ಮಾಡಬಹುದು ಎನ್ನುವ ಬಿ.ಎಂ. ಹೆಗಡೆಯವರ ಮಾತು ಅದೆಷ್ಟೇ ಕ್ಷೀಣದನಿಯದಾದರೂ ಅದರ ಹಿಂದಿನ ಸತ್ಯವನ್ನು ಕಡೆಗಣಿಸಲಾಗದು. ಹಾಗಾದರೆ ನಗರಗಳಲ್ಲಿ ಎಡವಿ ಬಿದ್ದರೆ ಸಿಗುವ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳನ್ನು ಆಸ್ಪತ್ರೆಗಳೆಂದು ಕರೆಯಬೇಕೆ? ಹಾಗಾದರೆ ಏನೆಂದು ಗುರುತಿಸಬೇಕು? ಇದು ಕಡೆಗಣಿಸಬೇಕಾದ ಸಾಮಾನ್ಯ ಪ್ರಶ್ನೆಯಲ್ಲ. 
 
ಮಿಶೆಲ್ ಫುಕೋ ‘ಮ್ಯಾಡ್‌ನೆಸ್ ಅಂಡ್ ಸಿವಿಲೈಝೇಷನ್’, ‘ದಿ ಆರ್ಡರ್ ಆಫ್ ಥಿಂಗ್ಸ್’, ‘ದಿ ಆರ್ಕಿಯಾಲಜಿ ಆಫ್ ಥಿಂಗ್ಸ್’, ‘ದ ಬರ್ಥ್ ಆಫ್ ದ ಕ್ಲಿನಿಕ್’, ‘ದ ಹಿಸ್ಟರಿ ಆಫ್ ಸೆಕ್ಷುಯಾಲಿಟಿ’ ಮುಂತಾದ ಒಂಬತ್ತು ಗ್ರಂಥಗಳನ್ನು ರಚಿಸಿದ. ಅವನು ಮುಖ್ಯವಾಗಿ ಸಂಕಥನವು ಸೃಷ್ಟಿಸುವ ಬಿಕ್ಕಟ್ಟನ್ನು ಮತ್ತು ಅದರ ವಿರಾಟ್ ಸ್ವರೂಪವನ್ನು ತನ್ನ ಕೃತಿಗಳ ಮೂಲಕ ವಿವರಿಸಲು ಪ್ರಯತ್ನಿಸಿದ್ದಾನೆ.
 
ನಾವು ಇದಿರಾಗುವ ಯಾವುದೇ ಸಂಗತಿಯನ್ನು ಏನೆಂದು ವ್ಯಾಖ್ಯಾನಿಸಿ ನಿರ್ಧರಿಸುತ್ತೇವೆಯೋ ಆ ವ್ಯಾಖಾನವು ನಮ್ಮ ಬದುಕಿನ ನಡೆಗಳನ್ನು ನಿಯಂತ್ರಿಸಲಾರಂಭಿಸುತ್ತದೆ. ನಾವೇ ಕೊಟ್ಟ ಭಾಷಿಕವಾದ ವ್ಯಾಖ್ಯಾನ ನಮ್ಮನ್ನೇ ನಿಯಂತ್ರಿಸುವುದೊಂದು ಸೋಜಿಗ. ಇದನ್ನೇ ಅಲ್ಲಮ ‘ಭಾಷೆಯೆಂಬುದು ಪ್ರಾಣಘಾತುಕ’ ಎಂದದ್ದು. ಇದನ್ನು ವಿವರಿಸಲು ಫುಕೋ ನಿತ್ಯದ ಕೆಲವು ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ.
 
ಸರಿಯಾದ ಲೈಂಗಿಕತೆ ಎಂದರೆ ಯಾವುದು? ಆರೋಗ್ಯವೆಂದರೆ ಏನು ಮತ್ತು ನಮ್ಮ ಸುತ್ತಲಿನ ವಸ್ತುಗಳು ಹೇಗಿದ್ದರೆ ಸರಿ? ಮುಂತಾದ ನಿತ್ಯ ಸಂಗತಿಗಳನ್ನು ನಾವು ಹೇಗೆ ನಿರ್ಣಯಿಸಿಕೊಂಡಿದ್ದೇವೆ, ಈ ನಿರ್ಣಯಗಳು ನಿಜವಾಗಿ ಎಲ್ಲಿಂದ ಬಂದಿವೆ ಎಂಬ ಪ್ರಶ್ನೆಗಳನ್ನು ವಿಶ್ಲೇಷಿಸಿದರೆ ಗಾಬರಿಯಾಗುತ್ತದೆ.
 
ಉದಾಹರಣೆಗೆ ಸಲಿಂಗ ಕಾಮ, ಮಂಗಳಮುಖಿಯರ ಕೌಟುಂಬಿಕತೆ ಸಮಾಜಬಾಹಿರ ಎಂದು ನಿರ್ಣಯಿಸುವುದಾದರೆ, ನಿರ್ಣಯಿಸುತ್ತಿರುವವರು ಯಾರು? ಎನ್ನುವ ಪ್ರಶ್ನೆಯನ್ನು ಕೇಳಲೇಬೇಕಲ್ಲವೆ. ಇಂದು ನಾವು ಯಾವುದನ್ನು ಹುಚ್ಚು ಎಂದು ನಿರ್ಣಯಿಸುತ್ತೇವೆಯೋ ಅದು ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದ ಮಟ್ಟಿಗೆ ಯೋಚಿಸುವುದಾದರೆ, ಹಾಗೆ ನಿರ್ಣಯಿತವಾಗುತ್ತಿರಲಿಲ್ಲ. ಇಂದು ಮನುಷ್ಯನ ಯಾವ ತಾರ್ಕಿಕ ನಡೆಯನ್ನು ‘ಸ್ವಸ್ಥ’ ಎಂದು ಕರೆಯುತ್ತೇವೆಯೋ ಅದಕ್ಕೆ ಮೀರಿದ ನಡೆ ಹುಚ್ಚು ಎಂದು ಪರಿಗಣಿತವಾಗಬೇಕಿಲ್ಲ ಎನ್ನುವುದೂ ಅಷ್ಟೇ ಸತ್ಯ ಎನ್ನುವುದನ್ನು ಫುಕೋ ತನ್ನ ‘ಮ್ಯಾಡ್‌ನೆಸ್ ಅಂಡ್ ಸಿವಿಲೈಝೇಷನ್’ ಕೃತಿಯಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದಾನೆ. 
 
‘... ಸೌಂದರ್ಯ, ಆರೋಗ್ಯ, ಉತ್ತಮ ಸಾಹಿತ್ಯ, ದೇಶಭಕ್ತಿ, ರಾಷ್ಟ್ರೀಯತೆ, ಅಭಿವೃದ್ಧಿ, ಸಮಾನತೆ ಮುಂತಾದ ಗ್ರಹಿಕೆಗಳು ಗಿಡಮರಗಳಂತೆ ಸ್ವಾಭಾವಿಕ ಸಂಗತಿಗಳಲ್ಲ. ಅವು ವಿವಿಧ ಸಂಸ್ಥೆಗಳಿಂದ ರೂಪುಗೊಂಡ ಸಂಕಥನಗಳು ಅಷ್ಟೆ. ಆದ್ದರಿಂದ ಯಾವ ಸಂಗತಿಯೂ ಸಾರ್ವಕಾಲಿಕ ಮತ್ತು ವಸ್ತುನಿಷ್ಠವಾದ ಸತ್ಯವೇನಲ್ಲ; ಅವು ಆ ಕಾಲದಲ್ಲಿ ಹುದುಗಿರುವ ಗ್ರಹಿಕೆಗಳು.
 
ಅಧ್ಯಯನಕಾರನಾದವನು ಈ ಗ್ರಹಿಕೆಗಳ ಸಂದರ್ಭ ಮತ್ತು ಅವುಗಳು ಕಾಲ ಕಾಲಕ್ಕೆ ಪಡೆದ ರೂಪಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕು’ ಎನ್ನುವ ಸಾಲುಗಳು ಎಡ್ವರ್ಡ್ ಸೈದ್ ರೂಪಿಸಿದ ‘ಓರಿಯಂಟಲಿಸಮ್’ ಕೃತಿಗೆ ಪ್ರೇರಕವಾದುವು ಎಂಬುದನ್ನು  ಗುರುತಿಸುತ್ತವೆ. ಈ ಸಂಗತಿ ಮತ್ತೊಂದು ಪ್ರಮುಖ ವಿದ್ಯಮಾನದೆಡೆಗೆ ಕೈಮಾಡುತ್ತದೆ.
 
ಅದೇನೆಂದರೆ  ಭಾರತವನ್ನು ಒಳಗೊಂಡಂತೆ ಸಾಂಸ್ಕೃತಿಕ ವಸಾಹತುಶಾಹಿಯ ಮೂರನೆಯ ಪಾದದ ತುಳಿತಕ್ಕೆ ಸಿಕ್ಕ ವಿಶ್ವದ ಅನೇಕ ಸಮೂಹಗಳು ಕೆಲವು ಭಾಷಿಕ ಪರಿಕಲ್ಪನೆಗಳ ‘ಗ್ರೇಟ್ ಕನ್‌ಫೈನ್‌ಮೆಂಟ್‌’ಗೆ (ಮಹಾಬಂಧನಕ್ಕೆ) ಒಳಗಾದವು. ಇವು ಅನೇಕ ಶತಮಾನಗಳ ಸಂಕಟಕ್ಕೆ ಕಾರಣವಾಗಿವೆ. ಉದಾಹರಣೆಗೆ ಭಾರತದ ಸಂದರ್ಭದಲ್ಲಿ ಬ್ರಹ್ಮವಾದ, ಜಾತಿವಾದ, ಆತ್ಮವಾದದಂತಹ ಪರಿಕಲ್ಪನೆಗಳು ಉಂಟುಮಾಡಿದ, ಮತ್ತು  ಮಾಡುತ್ತಿರುವ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುವ ಬೃಹತ್ ಸವಾಲನ್ನು ಮುಂದಿಡುತ್ತವೆ. 
 
ಭಾರತದಂತಹ ಹಲವು ಸ್ತರದ ವಸಾಹತುಗಳು ತಮ್ಮನ್ನು ಮಹಾಬಂಧನದಿಂದ ನಿವಾರಿಸಿಕೊಳ್ಳಲು ಒದಗಿಸಿಕೊಳ್ಳಬೇಕಾದ ಹತಾರುಗಳನ್ನು ಗುರುತಿಸಿಕೊಟ್ಟವನು ಮಿಶೆಲ್ ಫುಕೋ. ನಮ್ಮ ಪಾಲಿಗೆ ಓರಿಯಂಟಲ್ ಮತ್ತು ಸಂಸ್ಕೃತ ವಿಶ್ವಗಳೆರಡೂ ಬಂಧನಕಾರಿಗಳೇ. ಇವು ತಮ್ಮ ತಮ್ಮ ನಡುವೆ ವೈರಿಗಳಂತೆ ಕಚ್ಚಾಡುವ ನಾಟಕವಾಡಿದರೂ ಅಂತಿಮ ಉದ್ದೇಶ ತಾವು ಗುರಿಯಿಟ್ಟ ಸಮೂಹಗಳನ್ನು ಬಂಧನಕ್ಕೊಳಪಡಿಸುವುದೇ ಆಗಿರುತ್ತದೆ. ಜ್ಞಾನ, ಭಾಷಿಕ ಪರಿಕಲ್ಪನೆಗಳು, ಅಧಿಕಾರ ಕೇಂದ್ರಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳೆಲ್ಲ ಪರಸ್ಪರ ಪೂರಕವಾಗಿ ವಸಾಹತುಗಳ ವಿರುದ್ಧವೇ ಒಟ್ಟಾಗುತ್ತವೆ.
 
ಇವುಗಳನ್ನು ಒಟ್ಟು ಮಾಡಿ ಪ್ರಯೋಗಿಸಿದಾಗ ಅವುಗಳ ಹಿಡಿತದಿಂದ ಪಾರಾಗುವುದು ಸುಲಭದ ಸಂಗತಿಯಲ್ಲ. ಸ್ಥಳೀಯ ವಿವೇಕವನ್ನು ಎಚ್ಚರದಿಂದ ಬಳಸುವ ಮತ್ತು ವೈಶ್ವಿಕವೆನ್ನುವ ಸಂರಚನೆಗಳನ್ನು ಅನುಮಾನಿಸುವ ಇಂತಹ ಅಧ್ಯಯನಗಳು ಜ್ಞಾನ ಮೀಮಾಂಸೆಗೆ ಹೊಸ ವಿಸ್ತರಣೆಗಳನ್ನು ಒದಗಿಸಿವೆ. ಕುವೆಂಪು ಭಾಷಾ ಪ್ರಾಧಿಕಾರವು ಓ.ಎಲ್. ನಾಗಭೂಷಣಸ್ವಾಮಿಯವರ ಪ್ರಧಾನ ಸಂಪಾದಕತ್ವದಲ್ಲಿ ತಂದಿರುವ ಅನೇಕ ಪುಸ್ತಕಗಳು ಈವರೆಗಿನ ಓದು ಮತ್ತು ಯೋಚನಾಕ್ರಮವನ್ನು ಪಲ್ಲಟಿಸುವುದರ ಮೂಲಕ ಜ್ಞಾನದ ವಿಸ್ತರಣೆಗೆ ಮಹತ್ತರ ಕೊಡುಗೆ ಕೊಡಬಲ್ಲ ಕೃತಿಗಳಾಗಿವೆ. ಅವುಗಳಲ್ಲಿ ಇದೂ ಒಂದಾಗಿದೆ.
 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.