ಸ್ವರ್ಗದ ಹಾದಿಯಲ್ಲಿ

ಸ್ವ ಅವಲೋಕನದ ಆರ್ದ್ರ ನೋಟ


ಲೇಖಕ : ಇರ್ಷಾದ್ ಉಪ್ಪಿನಂಗಡಿ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, ‘ಬೆಳಕು’, ನಂ.47, ನಂಜಪ್ಪ ಲೈಔಟ್, ಬೈಪಾಸ್ ರಸ್ತೆ, ಶಿವಮೊಗ್ಗ
ಪ್ರಕಟವಾದ ವರ್ಷ : ...
ಪುಟ : 76
ರೂ : 70
ನಿಂತ ಹೆಜ್ಜೆಯನ್ನರಿಯುವ ಪ್ರಯತ್ನದ ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳ ಸಂಕಲನ ‘ಸ್ವರ್ಗದ ಹಾದಿಯಲ್ಲಿ’. ಸಾಹಿತ್ಯದ ಗ್ರಹಿಕೆಯಲ್ಲಿ ಈ ಶೀರ್ಷಿಕೆ ವ್ಯಂಗ್ಯವನ್ನೇ ಧ್ವನಿಸುತ್ತದೆ.
 
ಆದರೆ ಈ ಸಂಕಲನದ ಬರಹಗಳನ್ನು ಓದಿದ ಮೇಲೆ ವ್ಯಂಗ್ಯದ ಸ್ಪರ್ಶವೇ ಇಲ್ಲದ ದಟ್ಟ ವಿಷಾದವೊಂದು ನಮ್ಮನ್ನು ಆವರಿಸುತ್ತದೆ. ಜೊತೆಗೇ ಒಂದಿಷ್ಟು ಸಮಾಧಾನವೂ ಆತ್ಮನಿರೀಕ್ಷಣೆಯ ಒತ್ತಾಯವೂ ನಮ್ಮಲ್ಲಿ ಹುಟ್ಟುತ್ತದೆ.
 
ವಿಜ್ಞಾನಿ ಐನ್‌ಸ್ಟೈನ್, ತನ್ನ ಕೊನೆಗಾಲದಲ್ಲಿ ನೀಡಿದ ಸಂದರ್ಶನದಲ್ಲಿ (ವಿಜ್ಞಾನಿಯಾದವನ ಸಾಮಾಜಿಕ ಉತ್ತರದಾಯಿತ್ವದ ಬಗ್ಗೆ ಮಾತನಾಡುತ್ತಾ), ‘ಕೊನೆಗೂ ಈ ನಾಗರಿಕ ಸಮಾಜದಲ್ಲಿ ಮನುಷ್ಯತ್ವವನ್ನು ಉಳಿಸಿಕೊಂಡ ಮನುಷ್ಯರಾಗಿ ಉಳಿದುಕೊಳ್ಳುವುದೇ ಬಹಳ ದೊಡ್ಡ ಸವಾಲು ಅನ್ನಿಸುತ್ತೆ’ ಎನ್ನುವ ಅರ್ಥದ ಮಾತುಗಳನ್ನಾಡುತ್ತಾರೆ. ‘ರಕ್ತಮಾಂಸವುಳ್ಳ ಇಂಥ ಮನುಷ್ಯ ಬದುಕಿದ್ದನೆ ಎಂದು ಮುಂದಿನ ಪೀಳಿಗೆಗಳು ಅಚ್ಚರಿಪಡುತ್ತವೆ’ ಎಂದು ಗಾಂಧಿಯ ಬಗ್ಗೆ ಅವರು ಮಾತನಾಡಿದ್ದು ಈ ಸಂದರ್ಭದಲ್ಲೇ.
 
ಸಮಕಾಲೀನ ಸಂದರ್ಭಗಳನ್ನು ನೋಡುತ್ತಿದ್ದರೆ, ಮಾನವೀಯ ಮನುಷ್ಯರಾಗಿ ಉಳಿಯಲೇಬಾರದು ಎಂದು ಪಣತೊಟ್ಟಿದ್ದೇವೆಯೋ ಎನ್ನಿಸುತ್ತದೆ. ‘ಧರ್ಮ ಈ ದೇಶಗಳಿಗೆ ಅಫೀಮು’ ಎಂದು ಅದ್ಯಾವ ಗಳಿಗೆಯಲ್ಲಿ ಆ ಮಾರಾಯ ಮಾರ್ಕ್ಸ್ ಹೇಳಿದನೋ ಅದು ಅಕ್ಷರಶಃ ನಿಜವಾಗಿ ಬಿಟ್ಟಿದೆ.
 
ಮನುಷ್ಯನ ವಿಕಾರಗಳೆಲ್ಲ ನಮ್ಮೆದುರಿಗೆ ಬೆತ್ತಲಾಗುತ್ತಿರುವ ಈ ದುರಂತದ ಹೊತ್ತಿನಲ್ಲಿ, ನಮ್ಮನ್ನು ನಾವು ಸ್ವಪರೀಕ್ಷೆಗೆ ಒಡ್ಡಿಕೊಳ್ಳುವುದು ತೀರಾ ಕಷ್ಟದ ಆದರೆ ಬಹಳ ಮಹತ್ವದ ಮತ್ತು ನಿರ್ಣಾಯಕವಾದ ಸಂಗತಿ.
 
ಅಲ್ಪಸಂಖ್ಯಾತರನ್ನು ಅಭದ್ರತೆಯ ಆತಂಕದ ಒಲೆಯ ಮುಂದೆ ನಿಲ್ಲಿಸುವುದಕ್ಕೆ ನೂರು ದಾರಿಗಳಿವೆ. ಆದರೆ ನಾವೇ ಉರಿಯುವ ಬೆಂಕಿಯ ಮುಂದೆ ನಿಲ್ಲುವ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು? ಮೊದಲಿಗೆ, ನಾವೇ ಆ ಬೆಂಕಿಯನ್ನು ಹಚ್ಚಿಕೊಂಡಿದ್ದೇವೆ ಎನ್ನುವ ಅರಿವೂ ಅಷ್ಟೇ ಅಗತ್ಯ. ಆಗ ಮಾತ್ರ ಒಳಗಿನ ಉರಿ ಯಾವುದು, ಎದುರಿಗಿರುವವರು ಹಚ್ಚಿರುವ ಉರಿ ಯಾವುದು ಎನ್ನುವುದು ತಿಳಿಯುತ್ತದೆ.
 
ಅದು ತಿಳಿಯದೇ ಈ ಒಳ–ಹೊರಗಿನ ಬೆಂಕಿಗಳಿಂದ ಪಾರಾಗುವ ದಾರಿಯೂ ತಿಳಿಯದು ಎನ್ನುವ ಎಚ್ಚರವೊಂದು ಇರ್ಷಾದ್ ಅವರ ಬರವಣಿಗೆಗಳಿಗ ಮಹತ್ತ್ವವನ್ನು ತಂದುಕೊಡುತ್ತದೆ.
 
ಈ ಸಂಕಲನದ ಕೊನೆಯ ಲೇಖನ ‘ಇಸ್ಲಾಂಗೆ ಬೇಕಾದ ಅಂಬೇಡ್ಕರ್’ ಬಗ್ಗೆ ಚರ್ಚಿಸುತ್ತದೆ. ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲದೆ ಇಡೀ ಭಾರತಕ್ಕೇ ಬೇಕಾದ ನಾಯಕ ವ್ಯಕ್ತಿತ್ವವಾಗಿ ಉಳಿದಿರುವುದರ ಬಹುದೊಡ್ಡ ಕಾರಣ, ಸ್ವ ವಿಮರ್ಶೆ ಮತ್ತು ಪರಿವರ್ತನಶೀಲತೆಗೆ ಕೊಟ್ಟ ಒತ್ತು.
 
‘ನಾನು ಬದಲಾಗದೆ ಲೋಕ ಬದಲಾಗದು’ ಎನ್ನುವುದರ ಜೊತೆಗೇ ಸ್ವವಿಮರ್ಶೆಯಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎನ್ನುವುದರಲ್ಲಿ ಅವರಿಗಿದ್ದ ನಂಬಿಕೆ. ಈ ಎಲ್ಲದರಿಂದಾಗುವ ಆತ್ಯಂತಿಕ ಪರಿಣಾಮವೆಂದರೆ, ವ್ಯಕ್ತಿತ್ವವೊಂದಕ್ಕೆ ದಕ್ಕುವ ನೈತಿಕ ಶಕ್ತಿ. ಯಾವುದೇ ಸಮುದಾಯವೂ ತನ್ನ ಅಮಾನವೀಯ ನೆಲೆಗಳನ್ನು ಸಮರ್ಥಿಸುತ್ತಾ ಹೋದಷ್ಟೂ ಅದು ತನ್ನ ನೈತಿಕ ಬಲವನ್ನು ಕಳೆದುಕೊಳ್ಳುತ್ತಾ ಎದುರಿಗಿರುವವರ ಶಕ್ತಿಯನ್ನು ಬಲಪಡಿಸುತ್ತಾ ಹೋಗುತ್ತದೆ ಎನ್ನುವ ಅಪ್ರಿಯ ಸತ್ಯವನ್ನು ಇರ್ಷಾದ್‌ರ ಈ ಕೃತಿ ಚರ್ಚಿಸುತ್ತದೆ.
 
ಆದರೆ ಈ ಕೃತಿಯ ಪ್ರಸ್ತುತತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅದು, ಎದುರಿಗಿರುವ ಬಹುಸಂಖ್ಯಾತರನ್ನೂ ಇದಕ್ಕೆ ಒತ್ತಾಯಿಸುವ ಶಕ್ತಿಯನ್ನೂ ಪಡೆದಿದೆ. ಅಂಬೇಡ್ಕರ್ ಬಗೆಗಿನ ಲೇಖನವೇ ಇದನ್ನು ಸಾಧಿಸುತ್ತದೆ. ಪ್ರಶ್ನಿಸಲಾಗದ ನೈತಿಕತೆಯನ್ನು ಪಡೆಯುವ ಏಕೈಕ ದಾರಿಯೆಂದರೆ, ಸಮಾನ ಅವಕಾಶಗಳು ಮತ್ತು ಮನುಷ್ಯತ್ವದ ನೆಲೆಯಲ್ಲಿ ಮನುಷ್ಯರು ಮತ್ತು ಬದುಕನ್ನು ಮೌಲ್ಯವ್ಯವಸ್ಥೆಯೊಳಗೆ ತರುವ ಕ್ರಮ.
 
ಇದನ್ನು ಅಂಬೇಡ್ಕರ್ ಬದುಕಿನುದ್ದಕ್ಕೂ ತನ್ನ ವರ್ಗದವರಲ್ಲಿ ಈ ಅರಿವನ್ನು ತರಲು ನಡೆಸಿದ ಶ್ರಮ, ಇತರರಲ್ಲಿಯೂ ಪರೋಕ್ಷವಾಗಿ ತಂದ ಅರಿವು ಈ ಹೊತ್ತಿನ ಅಗತ್ಯ ಎನ್ನುವುದನ್ನು ಇರ್ಷಾದ್ ಸರಿಯಾಗಿಯೇ ಗ್ರಹಿಸಿದ್ದಾರೆ.
 
ಇದನ್ನೇ ‘ಕ್ರಿಟಿಕಲ್ ಇನ್‌ಸೈಡರ್’ ಎನ್ನುವ ಪರಿಭಾಷೆಯಲ್ಲಿ ಆಧುನಿಕ ಭಾರತದ ಮರು ನಿರೂಪಣೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ಇರ್ಷಾದ್ ಅವರ ಕೃತಿಯುದ್ದಕ್ಕೂ ಈ ಇನ್‌ಸೈಡರ್‌ನ ಗುಣಗಳು ದಟ್ಟವಾಗಿವೆ.
 
ಅಂಬೇಡ್ಕರ್ ಜೊತೆಯಲ್ಲಿಯೇ ಮುಸ್ಲಿಂ ಸಮುದಾಯಕ್ಕೆ ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿರುವ ಇತರ ವ್ಯಕ್ತಿತ್ವಗಳನ್ನೂ, ಅದರ ಚಹರೆಗಳನ್ನೂ ವಿವರಿಸುತ್ತಾರೆ. ಹಾಗೆಯೇ ಮೂಲಭೂತವಾದಿಗಳು ಮಾಡಬಹುದಾದ ಅಪಾಯವನ್ನು ಹೇಳುವುದಕ್ಕೆ ಬೇಕಾದ ಸ್ಥೈರ್ಯವನ್ನೂ ತೋರಿಸುತ್ತಾರೆ. 
 
ಇದರ ಪ್ರಸ್ತುತತೆಯನ್ನು ಈ ಸಂಕಲನದ ಬರಹಗಳು ಕಟ್ಟುತ್ತಾ ಹೋಗುತ್ತವೆ. ಯಾವ ಧರ್ಮಕ್ಕೂ ಹೆಣ್ಣು, ಗಂಡು ಆಳಬಹುದಾದ ಆಸ್ತಿಯೇ. ಅದೆಷ್ಟು ಕ್ರೂರವಾಗಿ ಅವಳನ್ನು ‘ವಸ್ತು ವಿಶೇಷ’ ಎಂದು ಪರಿಭಾವಿಸುತ್ತಾ ಅವಳ ಮೇಲಿನ ಇಲ್ಲದ ಹಕ್ಕನ್ನು ಸ್ಥಾಪಿಸಿಕೊಂಡು ಬಿಟ್ಟಿದೆ ಎನ್ನುವುದರ ಅರಿವು ಗಂಡು–ಹೆಣ್ಣು ಇಬ್ಬರಿಗೂ ಮೂಡಬೇಕು. ಆ ಅರಿವು ಗಂಡಿನಲ್ಲಿ ಮೂಡಿದಷ್ಟೂ ಬದಲಾವಣೆಯ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.
 
ಇರ್ಷಾದ್ ಬುರ್ಖಾದ ಬಗೆಗೆ ಹೆಣ್ಣಿನ ಸ್ವಗತದಂತೆ ಬರೆದಿರುವ ಲೇಖನ ಇಂಥ ಪಲ್ಲಟಕ್ಕೆ ಗಂಡು ತನ್ನ ಬುದ್ಧಿಯ ಜೊತೆಗೇ ಭಾವವನ್ನೂ ಒಳಗಾಗಿಸಿಕೊಳ್ಳಬೇಕಾದ ಕ್ರಮಕ್ಕೆ ಒಂದು ಮಾದರಿಯಂತಿದೆ. ಬುರ್ಖಾದೊಳಗಿನ ಹೆಣ್ಣು ಲೋಕವನ್ನು ‘ಕಾಣುವ’ ರೀತಿಯೇ ಹೆಣ್ಣಿನ ಜೀವಪ್ರೀತಿಯನ್ನು ಧ್ವನಿಸುವಂತಿದೆ.
 
ಯಾರನ್ನೂ ಪ್ರತಿಸ್ಪರ್ಧಿಗಳೆಂದು ಕಾಣದೇ ಇರುವ ಹೆಣ್ಣಿನ ಗುಣವನ್ನು ಬುರ್ಖಾದ ಸಮಸ್ಯೆಯನ್ನು ಚರ್ಚಿಸುವ ರೀತಿಯೇ ಹೇಳುತ್ತದೆ. ತನ್ನ ಪರವಾಗಿ ಮಾತನಾಡುವವರ ಬಗ್ಗೆ ಗೌರವದ ಜೊತೆಗೇ ಹೆಣ್ಣಿನ ಪರವಾದ ನಿಲುವುಗಳನ್ನು ಹೊಂದಿದ ಕಾರಣಕ್ಕಾಗಿಯೇ ಒಂದು ಕೋಮಿನ ವಿರೋಧವನ್ನು ಯಾಕೆ ಎದುರಿಸಬೇಕು ಎನ್ನುವ ಕಾಳಜಿ ಹೆಣ್ಣಿಗೆ ಮಾತ್ರ ಹುಟ್ಟಲು ಸಾಧ್ಯ. ಇಷ್ಟರಮಟ್ಟಿಗೆ ಹೆಣ್ಣನ್ನು ಆವಾಹಿಸಿಕೊಳ್ಳಲು ಸಾಧ್ಯವಾದರೆ ಇದಕ್ಕಿಂತ ಹೆಚ್ಚಿನದೇನು ಬೇಕು?
 
ಸಹಶಿಕ್ಷಣವನ್ನು ಕುರಿತಂತೆ, ತಲಾಕನ್ನು ಕುರಿತಂತೆ ಈ ಕೃತಿ ಎತ್ತುವ ಸಂಗತಿಗಳೂ ಸಂಗತವಾಗಿವೆ. ಎಲ್ಲ ಬಗೆಯ ಮೂಲಭೂತವಾದಗಳು ಅಲ್ಲೋಲಕಲ್ಲೋಲಗಳನ್ನೇ ಸೃಷ್ಟಿಸಿ ನಮ್ಮ ಪರಿಸರವನ್ನೇ ಹಾಳುಮಾಡುತ್ತಾ ಸೌಹಾರ್ದ ಎನ್ನುವುದು ಅಸಾಧ್ಯವೇನೋ ಎನ್ನುವ ಆತಂಕವನ್ನು ನಮ್ಮಲ್ಲಿ ಸಕಾರಣವಾಗಿ ಹುಟ್ಟಿಸುತ್ತಿವೆ.
 
ಇಂಥ ದುರ್ಬರ ಗಳಿಗೆಯಲ್ಲಿ ಇದನ್ನು ಸುಧಾರಿಸಲು ಅಗತ್ಯವಾಗಿರುವ ಸ್ವಅವಲೋಕನದ ಮೊದಲ ಹೆಜ್ಜೆಯ ಮೂಲಕ ಇರ್ಷಾದ್ ಏಕಕಾಲಕ್ಕೆ ಒಳಹೊರಗುಗಳೆರಡನ್ನೂ ಎದುರಿಸುವ ಪ್ರಯತ್ನ ಮಾಡಿದ್ದಾರೆ. ಆರೋಗ್ಯಪೂರ್ಣ ಮನಸ್ಥಿತಿಯ ನಿರ್ಮಾಣದ ಈ ಆರ್ದ್ರ ಪ್ರಯತ್ನ ಅನೇಕರಿಗೆ ಒತ್ತಾಸೆಯಾಗಬಲ್ಲದು. ಸಮಷ್ಟಿ ಪ್ರಜ್ಞೆಯೇ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಇದೊಂದು ಸ್ವಾಗತಾರ್ಹ ನಿಲುವು. ಈ ಕಾರಣಕ್ಕಾಗಿಯೇ ಈ ಎಳೆಯ ಬರಹಗಾರನಿಗೆ ನಮ್ಮ ಅಭಿನಂದನೆಗಳು ಸಲ್ಲಬೇಕು.
 
Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ