ಮಹಾತ್ಮ : ಗಾಂಧೀವಾದದ ಗೊತ್ತುಗುರಿಗಳು

‘ಗಾಂಧೀವಾದ’ವೇ ಗಾಂಧಿಯ ನಿಜವಾದ ಶತ್ರು


ಲೇಖಕ : ಅನುವಾದ: ಡಾ.ಟಿ.ಎನ್. ವಾಸುದೇವಮೂರ್ತಿ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್‌, 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ ಬೆಂಗಳೂರು - 560 010
ಪ್ರಕಟವಾದ ವರ್ಷ : .
ಪುಟ : 164
ರೂ : ₹150
ಬಹುಶಃ ನಮ್ಮ ದೇಶದಲ್ಲಿ ಮಹಾತ್ಮಾ ಗಾಂಧಿಯವರ ಕುರಿತು ಬಂದಷ್ಟು ಸ್ತುತಿ ಮತ್ತು ನಿಂದೆಯ ಸಾಹಿತ್ಯ ಬೇರೆ ಯಾರ ಕುರಿತೂ ಬಂದಂತಿಲ್ಲ. ಕಳೆದ ಆರೇಳು ದಶಕಗಳಲ್ಲಿ ಹಲವು ಲೇಖಕರು, ಚಿಂತಕರು, ಸಮಾಜೋ-ಅರ್ಥಶಾಸ್ತ್ರಜ್ಞರು, ಅನುಭಾವಿಗಳು ಕೂಡ ಗಾಂಧೀಜಿ ಬದುಕು ಮತ್ತು ಸಾಧನೆಗಳನ್ನು ತಮ್ಮ ಬುದ್ಧಿ-ಭಾವಗಳ ನಿಕಷಕ್ಕೊಡ್ಡುತ್ತಲೇ ಬಂದಿದ್ದಾರೆ.
 
ಕೆಲವರಿಗೆ ಗಾಂಧೀಜಿ ರಾಷ್ಟ್ರಪಿತರಾಗಿ, ಅಹಿಂಸಾಮೂರ್ತಿಯಗಿ, ಅಧ್ಯಾತ್ಮ ಪುರುಷರಾಗಿ, ಮಹಾತ್ಮರೂ ಆಗಿ ಕಂಡರೆ, ಇನ್ನು ಕೆಲವರಿಗೆ ಅವರು ಶುದ್ಧ ವ್ಯಾಪಾರಿಯಾಗಿ, ಕುತಂತ್ರ ರಾಜಕಾರಣಿಯಾಗಿ ರಾಷ್ಟ್ರ ವಿಭಜಕರಾಗಿ ಕೂಡ ಕಂಡಿದ್ದಾರೆ. ವ್ಯಕ್ತಿಯೊಬ್ಬನ ಬದುಕು ಸಂಕೀರ್ಣವಾಗಿದ್ದಷ್ಟೂ ಇಂಥ ಗೊಂದಲಗಳಿಗೆ ಅವಕಾಶ ಹೆಚ್ಚು ಎಂದು ಕಾಣುತ್ತದೆ. ಏನೇ ಇದ್ದರೂ ಗಾಂಧೀಜಿ ಎಂಬ ಮಹಾರ್ಣವವನ್ನು ಆಯಾ ಕಾಲದ ಸೂಕ್ಷ್ಮ ಮನಸ್ಸುಗಳು ತಮ್ಮ ತಮ್ಮ ಬಿಂದಿಗೆಯಲ್ಲಿ ಹಿಡಿಯಲು ಪ್ರಯತ್ನಿಸಿದ್ದಂತೂ ನಿಜ.
 
ಓಶೋ (ರಜನೀಶ) ಕೂಡ ಅಂಥ ಪ್ರಯತ್ನ ಮಾಡಿದವರಲ್ಲಿ ಒಬ್ಬರು. ಇಲ್ಲಿ ನಾನು ಪರಿಚಯಿಸ ಹೊರಟಿರುವುದು ಟಿ.ಎನ್. ವಾಸುದೇವಮೂರ್ತಿಯವರು ಸಮರ್ಥವಾಗಿ ಅನುವಾದಿಸಿರುವ ಓಶೋರ 'ಮಹಾತ್ಮ’ ಎಂಬ ಕೃತಿಯನ್ನು. (ಓಶೋ ಕುರಿತ ಇದೇ ಲೇಖಕರ ಇನ್ನೂ ಕೆಲವು ಕೃತಿಗಳೆಂದರೆ: ಅಧ್ಯಾತ್ಮದ ಮಧ್ಯೆ ಬಿಡುವು, ಕಾವ್ಯಧರ್ಮ, ದೇವರು ಮತ್ತು ಧರ್ಮ. ಇವೆಲ್ಲ ಓಶೋ ವಿಚಾರ ಸಂಗ್ರಹಗಳೇ.) ಇದೊಂದು ಅಪರೂಪದ ಕೃತಿ.
 
ಇಂಗ್ಲಿಷ್‌ ಮತ್ತು ಹಿಂದಿಯಲ್ಲಿರುವ ಓಶೋರ ಪ್ರವಚನ ಹಾಗೂ ಲೇಖನಗಳಿಂದ ಕೆಲವು ಆಯ್ದ ಭಾಗಗಳನ್ನು ಅನುವಾದಿಸಿ ಮೂರ್ತಿಯವರು ಇಲ್ಲಿ ಸಂಗ್ರಹಿಸಿದ್ದಾರೆ. ಅನುವಾದ ಸರಳವೂ, ಸ್ಪಷ್ಟವೂ ಆಗಿದೆ. ಇದೊಂದು ಸೃಜನೇತರ ಕೃತಿಯಾದುದರಿಂದ ಇಲ್ಲಿ ರೂಪಕ್ಕಿಂತ ವಸ್ತು ಮಹತ್ವದ್ದಾಗುತ್ತದೆ. ಈ ಲೇಖನದ ಲಕ್ಷ್ಯ ಕೂಡ ವಸ್ತುವೇ ಆಗಿದೆ.
 
ಪುಸ್ತಕದ ಬಹುಭಾಗದಲ್ಲಿ ಗಾಂಧಿ ಮೂರ್ತಿಭಂಜನೆಯಿದೆ. ಕೃತಿಯುದ್ದಕ್ಕೂ ಓಶೋ ಗಾಂಧಿ ಬದುಕಿನ ವೈರುಧ್ಯ ಮತ್ತು ‘ಗಾಂಧೀವಾದ’ವನ್ನು ಕಟುಟೀಕೆಗೆ ಒಳಪಡಿಸಿದ್ದಾರೆ. ಕೆಲವೊಮ್ಮೆ ನಿರ್ದಯ ಎನ್ನಿಸುವಷ್ಟು ಕಟುವಾಗಿ. ಆದರೆ, ಇದಕ್ಕೆ ಓಶೋ ಒಂದು ತಾತ್ವಿಕ ಸಮರ್ಥನೆ ನೀಡುತ್ತಾರೆ. ವಿಗ್ರಹ ಭಂಜನೆಯ ಮೂಲಕ ಗಾಂಧಿಯವರನ್ನು ‘ವಾದ’ದಿಂದ ಮುಕ್ತಗೊಳಿಸುವುದೇ ತಮ್ಮ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ. 
 
ಬ್ರಿಟಿಷರು ಭಾರತ ಬಿಟ್ಟು ತೊಲಗಲು ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹವೇ ಕಾರಣ ಎಂಬ ಮೂಲ ನಂಬಿಕೆಯನ್ನೇ ಅವರು ಪ್ರಶ್ನಿಸುತ್ತಾರೆ. ಭಾರತ ಬ್ರಿಟಿಷರಿಗೆ ಆರ್ಥಿಕ ಹೊರೆಯಾಗಿ ಕಂಡದ್ದೇ ಅವರು ಭಾರತ ಬಿಡಲು ಕಾರಣ ಎಂಬುದು ಓಶೋ ಪ್ರತಿಪಾದನೆ. ಗಾಂಧೀ ಅಹಿಂಸಾ ಮಾರ್ಗ ಕೂಡ ಅವರಿಗೆ ದ್ವಂದ್ವಾತ್ಮಕವಾಗಿ ಕಾಣುತ್ತದೆ. ಸಾಮಾಜಿಕವಾಗಿ ಗಾಂಧಿ ಅಹಿಂಸೆಯನ್ನು ಬೋಧಿಸುತ್ತಿದ್ದರು.
 
ಆದರೆ ಮಗ ಹರಿಲಾಲನಿಗೆ, ‘ನೀನು ಶಾಲೆಯ ಮೆಟ್ಟಿಲು ಹತ್ತಿದರೆ, ನನ್ನ ಮನೆಯಲ್ಲಿ ನಿನಗೆ ಪ್ರವೇಶವಿಲ್ಲ’ ಎಂದರು. ಅವನೇ ಮುಂದೆ ಮುಸ್ಲಿಮನಾದಾಗ ಅದನ್ನು ಸಹಿಸಲಿಲ್ಲ. ಇದೆಲ್ಲ ಅಹಿಂಸೆಯೇ? ಎಂದು ಓಶೋ ಪ್ರಶ್ನಿಸುತ್ತಾರೆ. ಗಾಂಧೀಜಿ ಭಾರತೀಯರ ಹಿಂಸಾತ್ಮಕ ಮನಸ್ಸನ್ನು ನಿಗ್ರಹಿಸಿದರೇ ವಿನಾ ಅದನ್ನು ಪರಿವರ್ತಿಸಲಿಲ್ಲ.
 
ಭಾರತೀಯರ ಸಹಜ ಸಿಟ್ಟು ಮತ್ತು ಕ್ರೌರ್ಯಗಳ ದಾರಿ ತಪ್ಪಿಸಿದ ಅವರ ಅಹಿಂಸಾಮಾರ್ಗ ಒಂದು ಶುದ್ಧ ರಾಜಕೀಯ ಲೆಕ್ಕಾಚಾರವಾಗಿತ್ತೇ ಹೊರತು ಅದಕ್ಕೆ ಯಾವುದೇ ಆಧ್ಯಾತ್ಮಿಕ ಮೌಲ್ಯವಿರಲಿಲ್ಲ ಎಂದು ಗಾಂಧಿಜೀಯವರ ತಥಾಕಥಿತ ಹೃದಯ ಪರಿವರ್ತನೆಯ ಸಿದ್ಧಾಂತವನ್ನೇ ಅವರು ಅಣಕಿಸಿಬಿಡುತ್ತಾರೆ. ಆದರೆ, ಕಾಮವನ್ನು ನಿಗ್ರಹಿಸದೆ ಅದನ್ನು ರೂಪಾಂತರಿಸಿಕೊಳ್ಳುವ ಪ್ರಯತ್ನವಾಗಿ ಗಾಂಧೀಜಿ ನಗ್ನ ಮಹಿಳೆಯರ ಮಧ್ಯೆ ಮಲಗಿದ್ದನ್ನು ಓಶೋ ಬೆಂಬಲಿಸುವುದು ಮತ್ತು ಆ ದಿನಗಳೇ ಅವರ ಸಾಧನೆಯ ಅತ್ಯಂತ ಸಾರ್ಥಕ ದಿನಗಳು ಎಂದು ಹೇಳುವುದು ಓದುಗರ ಹುಬ್ಬೇರುವಂತೆ ಮಾಡುತ್ತವೆ. ಆದರೆ, ಮುಕ್ತ ಲೈಂಗಿಕತೆಯ ಪ್ರತಿಪಾದಕರಾಗಿದ್ದ ಓಶೋಗೆ ಇದನ್ನು ಒಪ್ಪದೆ ಗತ್ಯಂತರವಿರಲಿಲ್ಲವೇನೋ! 
 
ಈ ಕೃತಿಯಲ್ಲಿ ಓಶೋರ ಕೆಲವು ಪ್ರಖರ ಒಳನೋಟಗಳಿವೆ.  ಅವುಗಳಲ್ಲಿ ಕೆಲವು ಚರ್ಚಾರ್ಹವೂ, ಮತ್ತೆ ಕೆಲವು ವಿವಾದಾಸ್ಪದವೂ ಆಗಿವೆ. ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿಟ್ಟು, ಸ್ವಾತಂತ್ರ್ತೋತ್ತರ ಸಾಮಾಜಿಕ ವ್ಯಾಧಿಗಳಿಗೆಲ್ಲ ಡಾ.ಅಂಬೇಡ್ಕರರಲ್ಲಿ ಪರಿಹಾರ ಹುಡುಕುವ ಈ ಕಾಲಘಟ್ಟದಲ್ಲಿ ಓಶೋ ಮಂಡಿಸುವ ಕೆಲ ಪ್ರಮೇಯಗಳಾದರೂ ಗಾಂಧಿ ಕುರಿತ ವಾಗ್ವಾದಗಳನ್ನು ಮರಳಿ ಮುನ್ನೆಲೆಗೆ ತರುವ ಉತ್ಸಾಹವುಳ್ಳವು.
 
 ಸಮಾನತೆಯ ಸ್ಥಾಪನೆ ಪ್ರಕೃತಿಯಲ್ಲಿ ಬೆಳವಣಿಗೆಯ ಲಕ್ಷಣವೇ ಅಲ್ಲ ಎಂದು  ಅಭಿಪ್ರಾಯಪಡುವ ಓಶೋ, ಗಾಂಧಿಗೆ ಸಂಕೀರ್ಣತೆ ಎಂದರೇನೆಂದೇ ತಿಳಿದಿರಲಿಲ್ಲ, ಚರಕದಿಂದ ಬಟ್ಟೆ ನೇಯ್ದುಕೊಳ್ಳುವುದೇ ಬೆಳವಣಿಗೆ ಎಂದು ತಿಳಿದಿದ್ದರು ಎನ್ನುತ್ತಾರೆ. ಇದು ಸಮಾನತೆ ಮತ್ತು ಸಮಾನ ಅವಕಾಶ ಇತ್ಯಾದಿ ಗಾಂಧಿತತ್ವಕ್ಕೆ ಓಶೋರ ಪ್ರತಿ ಚಿಂತನೆಯಂತಿದೆ.
 
ಎರಡನೆಯದಾಗಿ, ದಾರಿದ್ರ್ಯವನ್ನು ತತ್ವೀಕರಿಸಿದ್ದು ಭಾರತೀಯ ಪರಂಪರೆಯ ಒಂದು ಅಚಾತುರ್ಯ ಎನ್ನುತ್ತಾರೆ ಓಶೋ. ಹಾಗೆಯೇ ದಾರಿದ್ರ್ಯವನ್ನು ‘ದರಿದ್ರ ನಾರಾಯಣ’ ಎಂದು ಶಾಶ್ವತವಾಗಿ ಉಳಿಸಿಕೊಳ್ಳುವ, ಉದಾತ್ತೀಕರಿಸುವ ದಾರಿಯನ್ನು ತೋರಿದ್ದು ಗಾಂಧೀಜಿ ಬದುಕಿನ ಒಂದು ವೈರುಧ್ಯ ಎನ್ನುತ್ತಾರೆ. (ಅಸ್ಪೃಶ್ಯರನ್ನು 'ಹರಿಜನ'ರೆಂದು ಗಾಂಧೀಜಿ ಕರೆದಾಗ ಕೂಡ, ಇದು ಅಸ್ಪೃಶ್ಯರ ಸಹಜ ಸಿಟ್ಟು ಮತ್ತು ಆಕ್ರೋಶಗಳನ್ನು ಶಮನಗೊಳಿಸಿ ರಮಿಸುವ ತಂತ್ರ ಎಂಬ ಆಕ್ಷೇಪ ವ್ಯಕ್ತವಾಗಿತ್ತು.) ಜನ ಗಾಂಧಿಯವರ ಅಹಿಂಸಾಮಾರ್ಗವನ್ನು ಅಷ್ಟು ಸುಲಭವಾಗಿ ಸ್ವೀಕರಿಸಿದ್ದಕ್ಕೆ ಸಹ ಓಶೋ ತಮ್ಮದೇ ಆದ ಕಾರಣ ಕಂಡುಕೊಂಡಿದ್ದಾರೆ.
 
ಭಾರತ ಎರಡು ಸಾವಿರ ವರ್ಷಗಳಿಂದ ಗುಲಾಮಗಿರಿಯಲ್ಲಿದ್ದುದು,  ಭಾರತೀಯರ ಶಾಂತಿಪ್ರಿಯತೆ ಹಾಗೂ ಅವರಿಗೆ ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಹೋರಾಡುವ ಶಕ್ತಿ ಇಲ್ಲದ್ದು -ಇವು ಗಾಂಧೀಪ್ರಣೀತ  ಅಹಿಂಸಾಮಾರ್ಗವನ್ನು ದೇಶ ಒಪ್ಪಲು ಕಾರಣ ಎಂದು ಓಶೋ ಭಾವಿಸುತ್ತಾರೆ. ಓಶೋರ ಈ ವಿಚಾರಗಳಲ್ಲಿ ಕೆಲವು  ಇಂದೂ ಪ್ರಸ್ತುತವಾಗಿವೆ ಎನ್ನಿಸುತ್ತದೆ.  
 
ಈಗಾಗಲೇ ಹೇಳಿದಂತೆ, ಓಶೋ ಗಾಂಧೀದ್ವೇಷಿಯಲ್ಲ. 'ಗಾಂಧೀವಾದ'ದ ವಿರೋಧಿ. ಅದಕ್ಕೂ ಹೆಚ್ಚಾಗಿ, ಹೇಳಹೆಸರಿನ ಗಾಂಧೀವಾದಿಗಳ ವಿರೋಧಿ. ಸಾಮಾನ್ಯವಾಗಿ ಇಂದು ನಾವು ಗಾಂಧೀವಾದಿಗಳೆಂದು ಹೆಸರಿಸುವ ಗಾಂಧೀಯುಗದ ಬಹುತೇಕ ಎಲ್ಲ ನೇತಾರರನ್ನೂ ಓಶೋ ನಿರಾಕರಿಸುತ್ತಾರೆ. ಉದಾಹರಣೆಗಾಗಿ, ಅರಮನೆಯಂಥ ರಾಷ್ತ್ರಪತಿಭವನದಲ್ಲಿದ್ದು ಚಾಪೆಯ ಮೇಲೆ ಕುಳಿತುಕೊಳ್ಳುವ ಬಾಬು ರಾಜೇಂದ್ರ ಪ್ರಸಾದರಲ್ಲಿ ಅವರು ದ್ವಂದ್ವವನ್ನು ಕಾಣುತ್ತಾರೆ. ಜಯಪ್ರಕಾಶ ನಾರಾಯಣ ಅವರಿಗೆ ಅಹಂಕಾರಿಯಾಗಿ ಕಾಣುತ್ತಾರೆ. ಮೊರಾರ್ಜಿ ಒಬ್ಬ ಫ್ಯಾಸಿಸ್ಟ್‌ ಆಗಿ ತೋರುತ್ತಾರೆ. ಲಾಲ್ ಬಹದ್ದೂರ್‌ ಶಾಸ್ತ್ರಿಯವರನ್ನು ಮಾತ್ರ ಅವರು ಅತ್ಯುತ್ತಮ ಗಾಂಧೀವಾದಿ ಎಂದು ಹೆಸರಿಸುತ್ತಾರೆ.
 
ಈ ತೀರ್ಮಾನಗಳು ವ್ಯಕ್ತಿನಿಷ್ಠವಾಗಿದ್ದು, ಓಶೋ ಈ ವ್ಯಕ್ತಿಗಳೊಂದಿಗೆ ಹೊಂದಿದ್ದ ಸಂಬಂಧದಿಂದ ಪ್ರೇರಿತವಾಗಿರುವಂತೆ ತೋರುತ್ತದೆ. ಓಶೋರ ಸೂಕ್ಷ್ಮಗ್ರಹಿಕೆ, ವಿಶ್ಲೇಷಣ ಶಕ್ತಿ ಮತ್ತು ಅಭಿವ್ಯಕ್ತಿ ಸ್ಪಷ್ಟತೆ ಅಗಾಧವಾದದ್ದು. ಸಮಾನತೆ ಮತ್ತು ಸಮಾಜವಾದದಲ್ಲಿ ಮಾಡಿದಂತೆ, ಅವರು ಗಾಂಧಿ ಮತ್ತು ಗಾಂಧೀವಾದದ ನಡುವೆ ಸಹ ಒಂದು ಸೂಕ್ಷ್ಮ ವಿಭಜಕ ರೇಖೆಯನ್ನೆಳೆಯುತ್ತಾರೆ.  
 
ಗಾಂಧೀವಾದವನ್ನು ತಾತ್ವಿಕವಾಗಿ ವಿರೋಧಿಸುತ್ತಲೇ, ಗಾಂಧಿಯನ್ನು ಅವರು ವ್ಯಕ್ತಿಯಾಗಿ ಒಪ್ಪುತ್ತಾರೆ. ಗಾಂಧಿಯ ಸತ್ಯನಿಷ್ಠೆ, ಶುಚಿತ್ವ, ಸರ್ವಧರ್ಮ ಸಮಭಾವ, ಸರಳತೆ, ಸಂವೇದನಶೀಲತೆ- ಇತ್ಯಾದಿ ಗುಣಗಳನ್ನು ಅವರು ಮೆಚ್ಚುತ್ತಾರೆ. ಚರಕಗಳ ಬಗ್ಗೆ ಓಶೋರ ವಿರೋಧವಿಲ್ಲ. ಆದರೆ, ಅದು ನಮ್ಮ ದುಡಿಮೆಯ ರೂಪಕವಾಗಬಾರದು.
 
ಖಾದಿ ಸರಿ. ಆದರೆ, ದೇಶದ ಆರ್ಥಿಕತೆ ಖಾದಿಯನ್ನು ಪೂರ್ಣ ಅವಲಂಬಿಸಬಾರದು. ಖಾದಿ ಒಂದು ವೈಯಕ್ತಿಕ ಆಯ್ಕೆಯಾಗಬೇಕು. ಗಾಂಧೀಜಿಯವರ ಉದ್ದೇಶ ಬಹುತೇಕ ಸರಿಯಿತ್ತು. ಆದರೆ, ಅವರು ಅದನ್ನು ನೆರವೇರಿಸಿಕೊಂಡ ಮಾರ್ಗ ಮಾತ್ರ ಸರಿ ಇರಲಿಲ್ಲ ಎಂದು Means and Ends ತತ್ವಪ್ರತಿಪಾದಕರಿಗೇ  ಪ್ರತಿಪಾಠ  ಮಾಡುತ್ತಾರೆ.
 
ಗಾಂಧಿ ರಾಜಕಾರಣಿಯಾಗಲೀ ಅರ್ಥಶಾಸ್ತ್ರಜ್ಞರಾಗಲೀ ಆಗಿರಲಿಲ್ಲ. ಆಂತರ್ಯದಲ್ಲಿ ಅವರೊಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಅಧ್ಯಾತ್ಮವನ್ನು ಸಾಮಾಜಿಕ ಜೀವನದೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸಿದ್ದು ಅವರ ಸಾಧನೆ. ಅವರ ಎಲ್ಲ ವಿಚಾರಗಳೂ ಕಣ್ಣೆದುರಿನ ಸಮಸ್ಯೆಗಳನ್ನು ಪರಿಶೀಲಿಸುತ್ತಲೇ ಹುಟ್ಟಿದವಾದ್ದರಿಂದ ಅವುಗಳಿಗೆ ವಾಸ್ತವ ನೆಲೆಯಿದೆ ಎಂಬುದು ಓಶೋ ಅಭಿಪ್ರಾಯ.
 
ಕೊನೆಯದಾಗಿ, ಗಾಂಧಿ ಭಕ್ತರಿಗೆ ಆಘಾತಕಾರಿಯೆನಿಸುವ ಮತ್ತು ಭೂತವನ್ನು ಬಡಿದೆಬ್ಬಿಸುವ ಇಂಥ ಪುಸ್ತಕವನ್ನು ಸ್ವೀಕರಿಸುವುದು ಹೇಗೆ? ಎಂಬ ಪ್ರಶ್ನೆ. ಇದಕ್ಕೆ ಎರಡು ಬಗೆಯ ಉತ್ತರ ಸಾಧ್ಯ. ಪ್ರಸ್ತಾವನೆಯಲ್ಲಿ ಡಿ.ವಿ. ಪ್ರಹ್ಲಾದ ಹೇಳಿರುವಂತೆ, ಇದನ್ನು ಗಾಂಧಿಯುಗದ ಒಂದು ಪರ್ಯಾಯ ಇತಿಹಾಸವಾಗಿ ನೋಡಬಹುದು. ಹಾಗೆಯೇ ಗಾಂಧಿಯವರ ಪ್ರೇರಣೆ ಇಲ್ಲಿಯೇ ಸ್ಥಗಿತಗೊಳ್ಳಬಾರದು ಎಂಬ ಓಶೋರ ಕಳಕಳಿಯ ದೃಷ್ಟಿಯಿಂದ ಇದನ್ನು ನಾವು ಸ್ವೀಕರಿಸಬಹುದು.
 
ನಮ್ಮ ಸೋಗಲಾಡಿತನದಿಂದ ಗಾಂಧಿ ನಾಶವಾಗಬಾರದು. ಗಾಂಧೀ ವಿಚಾರಗಳು ಅವುಗಳನ್ನು ಪ್ರಶ್ನಿಸುವುದರಿಂದ ಮಾತ್ರ ವಿಕಾಸವಾಗಬಲ್ಲವು, ಅಂಧ ಅಭಿಮಾನದಿಂದಲ್ಲ. ಗಾಂಧೀವಾದವೇ ಗಾಂಧೀಜಿಯವರ ಮೊದಲ ಶತ್ರು. ಅವರನ್ನು ಎಲ್ಲ ವಾದದಿಂದ ಮುಕ್ತಗೊಳಿಸುವುದೇ ತಮ್ಮ ಗುರಿ ಎಂದು ಓಶೋ ಹೇಳಿದ್ದನ್ನು ನಾವು ಅನುಮಾನಿಸಬೇಕಿಲ್ಲ. ಗಾಂಧಿ-ಗಾಂಧೀವಾದವನ್ನು ಬೇಕಾಬಿಟ್ಟಿ ಬಳಸುತ್ತಿರುವ ನಮ್ಮ ಕಾಲಕ್ಕೂ ಈ ಕೃತಿ ಪ್ರಸ್ತುತವೇ ಆಗಿದೆ. 
 
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.