ಅಮ್ಮ ಆದ ಅಮ್ಮು ಜಯಲಲಿತಾ

ಓದು ಗೀಳಾಗದ ಪೀಳಿಗೆಗೆ 'ಅಮ್ಮ'ನ ಚರಿತೆ


ಲೇಖಕ : ಎನ್.ಕೆ. ಮೋಹನ್‌ರಾಂ
ಪ್ರಕಾಶಕರು : ಐಒಎಚ್ ಪ್ರಕಾಶನ ೭೭, ೨ನೇ ಮುಖ್ಯರಸ್ತೆ, ರಾಮರಾವ್ ಲೇಔಟ್‌ ಬನಶಂಕರಿ ೩ನೇ ಹಂತ, ಬೆಂಗಳೂರು - ೮೫
ಪ್ರಕಟವಾದ ವರ್ಷ : .
ಪುಟ : 262
ರೂ : ₹200
ಜಗದ ಕತೆಯೇ ಹೀಗೆ. ಭೌತಸಂಪತ್ತಿನ ಅಮಲು, ಐಷಾರಾಮಿ ಬದುಕಿನ ಗೀಳು, ಅಧಿಕಾರದ ಹುಚ್ಚು, ಅದು ತರುವ ಶ್ರೇಷ್ಠತೆಯ ಆನಂದ, ಎನಗಿಂತ ದೊಡ್ಡವರಿಲ್ಲ ಎನ್ನುವ ಭ್ರಮೆ ಮತ್ತು ಇವೆಲ್ಲವುಗಳನ್ನು ಸಮಗ್ರವಾಗಿಸಿಕೊಂಡ ಭ್ರಷ್ಟರನ್ನು ವೈಭವೀಕರಿಸಿ ಹೊತ್ತು ಮೆರೆಯುವ ಸಮೂಹ ಸನ್ನಿಗೊಳಗಾದ ಜನ ಒಂದು ಕಾಲಘಟ್ಟದ ವಾಸ್ತವ ಆಗಬಹುದಷ್ಟೆ.

ಇದರ ಅಂತ್ಯ ಇರುವುದೇ ಬದುಕಿನ ಮತ್ತೊಂದು ಕಾಲಘಟ್ಟದ ವಿಷಾದ, ವೈರಾಗ್ಯ ಅಥವಾ ವಿರಕ್ತಿಯಲ್ಲಿ. ಆಸ್ತಿ, ಅಧಿಕಾರ ಮತ್ತು ಅಪಾರ ಅ(ಂಧಾ)ಭಿಮಾನಿಗಳು ಶಾಶ್ವತವಲ್ಲ ಎಂದು ತಿಳಿದಿದ್ದರೂ ಅವುಗಳ ಹಿಂದೆ ಬಿದ್ದು ನೊಂದವರೆಷ್ಟೋ ಜನ. ಅದರಲ್ಲೂ, ರಾಜಸತ್ತೆಗಳೂ ಒಳಗೊಂಡಂತೆ ದೊಡ್ಡ ದೊಡ್ಡ ಮನೆತನಗಳು, ಮತ್ತು ಭೌತಿಕ- ಸಾಂಸ್ಕೃತಿಕ ಸಂಪತ್ತನ್ನು ಕ್ರೋಡೀಕರಣಗೊಳಿಸಿಕೊಂಡು ಒಂದು ಕಾಲದ ಶ್ರೇಷ್ಠರು ಎನಿಸಿಕೊಂಡವರು ಹಾಗೂ ಅವರ ನಂತರದ ಪೀಳಿಗೆ ಕಂಡ ದುರಂತಗಳು ಇತಿಹಾಸದ ಪುಟಗಳಲ್ಲಿ ಕರಗಿಹೋಗಿವೆ.
 
ಇನ್ನು ತಮ್ಮ ಸಮುದಾಯಗಳ ಚಾರಿತ್ರಿಕ ಅಸ್ಮಿತೆಗಳನ್ನು ಹೇಳಿಕೊಳ್ಳಲಾರದಷ್ಟು ಕುಗ್ಗಿ ಹೋದ, ಚದುರಿದ ವ್ಯಕ್ತಿ-ಸಂಸ್ಥೆ-ಸಂಘಟನೆಗಳು ಅವೆಷ್ಟೋ. ಇವರ ಬಗೆಗಿನ ವಿವರ ಮತ್ತು ವಿಶ್ಲೇಷಣೆಗಳು ವರ್ತಮಾನದ ಬದುಕಿಗೆ ಒಂದಷ್ಟು ಅರ್ಥ ಮತ್ತು ಆದರ್ಶಗಳನ್ನು ತಂದುಕೊಟ್ಟರೆ ಅವುಗಳ ಬಗೆಗಿನ ಅಧ್ಯಯನ-ಅಭಿವ್ಯಕ್ತಿ ಕಾಳಜಿಯಾದರೂ ಸಾರ್ಥಕವಾದೀತು. ಇಂಥ ಒಂದು ಅಧ್ಯಯನ ಮತ್ತು ಸಾರ್ಥಕ ಅನುಸರಣೆಗೆ ಆಕರವಾಗುವ ಮಾಹಿತಿಯನ್ನು ಇತ್ತೀಚೆಗೆ ಕಣ್ಮರೆಯಾದ ಜನಪ್ರಿಯ ಚಲನಚಿತ್ರ ನಟಿ, ಹಠಕ್ಕೆ ಬಿದ್ದು ಘಟ ಉಳಿಸಿಕೊಂಡು ತಮಿಳುನಾಡಿನ ಮುಖ್ಯ ಮಂತ್ರಿಯಾಗಿ, ವಿವಾದ-ಭ್ರಷ್ಟಾಚಾರಗಳ ಸುಳಿ ಯಲ್ಲಿ ಸಿಕ್ಕು, ಸ್ವಂತ ಬದುಕು ಎನ್ನುವುದಕ್ಕೆ ತಿಲಾಂಜಲಿ ಕೊಟ್ಟು, ಸಿಕ್ಕ ಸಾಂದರ್ಭಿಕ ಅವಕಾಶಗಳನ್ನೇ ಬದುಕನ್ನು ಎತ್ತರಿಸಿಕೊಳ್ಳುವ ಮೆಟ್ಟಿಲಾಗಿಸಿಕೊಂಡು, ಕೊನೆಯವರೆಗೂ ‘ಕುಮಾರಿ’ ಎನ್ನುವ ಅವಯೋಮಾನ ವಿಶೇಷತೆಗೆ ಒಳಗಾದ ಜಯಲಲಿತಾ ಅವರ ಕುರಿತ ಜೀವನ ಚರಿತ್ರೆ ಎನ್ನಬಹುದಾದ, ‘ಅಮ್ಮ ಆದ ಅಮ್ಮು ಜಯಲಲಿತಾ’, ಎನ್ನುವ ಕೃತಿಯಲ್ಲಿ ಕಾಣಬಹುದಾಗಿದೆ.

ಇದರ ಕತೃವಾದ ಸಂವಹನ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯರೂ, ಅನುಭವಿಗಳೂ ಆದ ಎನ್.ಕೆ. ಮೋಹನರಾಂರವರು, ಜಯಲಲಿತಾ ಅವರ ಕೌಟುಂಬಿಕ ಹಿನ್ನೆಲೆಯ ವೈಶಿಷ್ಟ್ಯಗಳನ್ನು, ಹುಟ್ಟು, ಬಾಲ್ಯ, ಯೌವ್ವನ, ಮತ್ತು ಸಂಧ್ಯಾಕಾಲದ ಬಹುಮುಖ್ಯ ಘಟನೆಗಳ ತುಣುಕುಗಳನ್ನು ಆಯ್ದು, ಸರಳ ಸಂವಹನ ಸರಣಿಯಲ್ಲಿ ಪೋಣಿಸಿ, ಅತ್ಯಂತ ಸೂಕ್ಷ್ಮವಾಗಿ ಹಲವು ಹತ್ತು ಆಲೋಚನೆಗಳಿಗೆ, ಸಾತ್ವಿಕ ಬದುಕಿನ ಒಳನೋಟಗಳಿಗೆ ಬೀಜವಾಗುವಂತೆ ನೀಡಿರುವ ಕೃತಿ ಸೌಂದರ್ಯ ಇದರಲ್ಲಿದೆ. ಅಯ್ಯಂಗಾರ್ ಜನಾಂಗದ ಸ್ವಭಾವ ಲಕ್ಷಣಗಳನ್ನೊಳಗೊಂಡಂತೆ ಕುಟುಂಬದ ಮೂಲ ಪುರುಷ ಲಕ್ಷ್ಮೀಪುರಂ ಶ್ರೀನಿವಾಸ್ ಅಯ್ಯಂಗಾರ್‌ರಿಂದ ಮೊದಲುಗೊಂಡು ಜಯಲಲಿತಾರ ತಂದೆ-ತಾಯಿ, ಅವರು ಸ್ಟಾರ್ ಆದ ಬಗೆ, ರಾಜಕೀಯ ಬದುಕು, ಗೆಳತಿ ಶಶಿಕಲಾಳ ಪಾತ್ರ, ಮೊದಲಾದವುಗಳ ಬಗ್ಗೆ ಸೂಕ್ಷ್ಮ ವಿವರಗಳಿವೆ. ಅದರಲ್ಲೂ ಜಯಲಲಿತಾರ ಮಲಸಹೋದರ ವಾಸುದೇವನ್‌ರ ಅಭಿಪ್ರಾಯಗಳನ್ನು ಒರೆಗೆ ಹಚ್ಚಿ ಹೇಳುವಾಗ ತಾರ್ಕಿಕ, ವೈಜ್ಞಾನಿಕ ವಿಧಾನದ ಶೈಕ್ಷಣಿಕ ಶಿಸ್ತಿನ ಅನುಸರಣೆಯಿದೆ. ಓದನ್ನು ಗೀಳಾಗಿಸಿಕೊಳ್ಳಲು ಸಾಧ್ಯವಾಗದ ಇಂದಿನ ಬಹುತೇಕ ಜನರಿಗೆ ಓದಿಸಿಕೊಂಡು ಹೋಗುವಂತೆ ಬರೆಯುವುದೇ ಒಂದು ಸವಾಲು. ಅದರಲ್ಲೂ ವ್ಯಕ್ತಿ ಚರಿತ್ರೆ ವಿಷಯದಲ್ಲಂತೂ ಇದು ಅತಿಮುಖ್ಯ. ಲಕ್ಷಾಂತರ ಚಿತ್ರಾಭಿಮಾನಿಗಳನ್ನು ಹುಟ್ಟು ಹಾಕಿಕೊಂಡು ರಾಜಕೀಯ ಪ್ರಭುತ್ವ ಬೆಳೆಸಿಕೊಂಡ ಧುರೀಣರುಗಳ ಬಗ್ಗೆ ಬರೆಯುವಾಗ ವಹಿಸಬೇಕಾದ ಎಲ್ಲ ಎಚ್ಚರಿಕೆ, ಕಾಳಜಿಯನ್ನು ಕೃತಿಕಾರರು ಜಯಲಲಿತಾರ ಬದುಕಿನ ಚಿತ್ರಣ ನೀಡುವಲ್ಲಿ ತೋರಿದ್ದಾರೆ.

ಜಯಲಲಿತಾರಿಗೆ ಸರ್ವವೂ ಆಗಿದ್ದ ಎಂ.ಜಿ.ಆರ್ ಬಗ್ಗೆಯಾಗಲೀ, ಸಂಸಾರದ ದೋಣಿಯಲ್ಲಿ ಕಾಲಿರಿಸ ಬಯಸಿ, ಕನಸು ಕಟ್ಟಿಕೊಂಡು ತಾಳಿ ಕಟ್ಟಿಸಿಕೊಳ್ಳುವ ಅವಕಾಶದಿಂದ ವಂಚಿತಳಾಗಿ ನಿರಾಶೆಯಲ್ಲಿ ಬೆಂದು ಹೋಗುವಂಥ ಶೋಬನ್‌ಬಾಬು ಅವರ ಸಾಂಗತ್ಯದ ಸಂದರ್ಭ, ಕೊನೆಗಾಲದಲ್ಲಿ ‘ಅಪೊಲೋ’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಂತ್ಯಕಂಡ ಕ್ಷಣಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಓಘವಿದೆ. ಸಂಶೋಧನಾ ಆಕರವಾಗಬಹುದಾದ ಘಟನೆಗಳ ಸೂಕ್ಷ್ಮತೆಗಳಿವೆ.

ಡಾಕ್ಟರೋ, ಅಧಿಕಾರಿಯೋ ಆಗುವ ಕನಸು ಹೊತ್ತ ಚಿಕ್ಕ ಹುಡುಗಿ ಜಯಲಲಿತಾ ತಂದೆಯ ಮಸುಕು ನೆನಪುಗಳ ಮತ್ತು ತಾಯಿಯ ಭಗ್ನ ಕನಸುಗಳ ನಡುವೆಯೂ ಜಗ್ಗದೆ ಬಗ್ಗದೆ ರಾಜ್ಯವನ್ನು ಮುನ್ನಡೆಸುವ ಅಧಿಕಾರ ಚುಕ್ಕಾಣಿ ಹಿಡಿದು, ಕೊನೆಗೆ ಅಧಿಕಾರದ ಗದ್ದುಗೆಯಲ್ಲೇ ಕೊನೆಯುಸಿರೆಳೆದ ನಾಯಕಿಯ ಬದುಕಿನ ಗಾಥೆಗಳನ್ನು,  ಯಶಸ್ಸು-ದುರಂತಗಳ ಸಂಘರ್ಷ ಸರಣಿಯನ್ನು ಓದು-ಅಧ್ಯಯನ, ಸಂಶೋಧನೆಗೆ ಪ್ರೇರಣೆಯಾಗುವಂತೆ ಚಿತ್ರಿಸಿರುವುದು ಕೃತಿಕಾರರ ಹಿರಿತನಕ್ಕೆ ಹಿಡಿದ ಕನ್ನಡಿ. ನೀಡಿರುವ ಮಾಹಿತಿಗೆ ಸಾಕ್ಷ್ಯಾಧಾರಗಳ ಸಮರ್ಥನೆಗಳಿವೆ.
 
ಭಾಷೆಯಲ್ಲಿ ವ್ಯಕ್ತಿ ವ್ಯಕ್ತ ಕೌಶಲ್ಯವಿದೆ. ಇನ್ನೊಂದಿಷ್ಟು ಮಾಹಿತಿ ನೀಡಿದ್ದರೆ ಚೆನ್ನಾಗಿತ್ತೇನೋ ಎನ್ನುವ ಭಾವನೆ ಬರದೆ ಇರಲಾರದು. ಒಟ್ಟಾರೆಯಾಗಿ ಎಲ್ಲೂ ಅನಗತ್ಯ ವಿವಾದ ಎಡವಟ್ಟುಗಳಿಗೆ ಗ್ರಾಸವಾಗದ ಸರಳ, ಸುಂದರ ನಿರೂಪಣೆ, ಮಾಹಿತಿಯ ರವಾನೆ ಇಲ್ಲಿದೆ.
Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.