ಭೂಮಿಯೆಂಬ ಗಗನನೌಕೆ


ಎರಡು– ಮೂರು ವರ್ಷಗಳಲ್ಲಿ ನಾಗೇಶ ಹೆಗಡೆ ಅವರು ಉಪನ್ಯಾಸಗಳಿಗಾಗಿ ಮತ್ತು ವಿವಿಧ ಪತ್ರಿಕೆಗಳ ವಿಶೇಷಾಂಕಗಳಿಗೆ ಬರೆದ ಲೇಖನಗಳ ಗುಚ್ಛವೇ ‘ಭೂಮಿಯೆಂಬ ಗಗನನೌಕೆ’. ಅವರ ‘ಇರುವುದೊಂದೇ ಭೂಮಿ’ ಕೃತಿಯ ಮುಂದುವರಿದ ಆಖ್ಯಾಯಿಕೆ.
ಇದು ಕೇವಲ ಉಪನ್ಯಾಸಗಳ ಸಂಗ್ರಹವಷ್ಟೇ ಅಲ್ಲ. ಭೂಮಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದೆ. ಮುಖಪುಟದಲ್ಲಿರುವ ‘ಇಲ್ಲಿ ನಾವು ಯಾರೂ ಪ್ರಯಾಣಿಕರಲ್ಲ. ಎಲ್ಲರೂ ಪೈಲಟ್ಗಳೇ...’ ಎನ್ನುವ ಸಾಲುಗಳು ನೈಸರ್ಗಿಕ ಸಂಪತ್ತನ್ನು ದೋಚಿ ಗುಡ್ಡೆ ಹಾಕಿಕೊಂಡರೆ ಭವಿಷ್ಯದಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ಮಾರ್ಮಿಕವಾಗಿ ಎಚ್ಚರಿಸುತ್ತವೆ.
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ‘ನೀವು ನಿಮ್ಮ ಜೀವನದಲ್ಲಿ ಯಾರಿಗೆ ಕೃತಜ್ಞತೆ ಹೇಳಲು ಬಯಸುತ್ತೀರಿ’ ಎಂದು ಯಾರೋ ಹಾಕಿದ ಸವಾಲಿನಿಂದ ರೂಪುಗೊಂಡ ಲೇಖನವೇ ‘ಅವನಿ’ಗೆ, ಅವರೆಲ್ಲರಿಗೂ ನಮನ’. ಲೇಖನದಲ್ಲಿ ನಮ್ಮನ್ನು ನಿತ್ಯ ಪೊರೆಯುತ್ತಿರುವ ಪೃಥ್ವಿ, ವರ್ಣತಂತುಗಳು, ಸೂರ್ಯ, ಶತಶತಕೋಟಿ ಪರಮಾಣುಗಳು, ಭಾರತಾಂಬೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
‘ಒಳಮನೆಯ ಕನ್ನಡಕ್ಕೆ ಪ್ರಾಣವಾಯು ಬೇಕು’ ಲೇಖನದಲ್ಲಿ ವಿಶ್ವವಿದ್ಯಾನಿಲಯಗಳು ಅಸಾಂಪ್ರದಾಯಿಕ ವಿಜ್ಞಾನವನ್ನು ಪೋಷಿಸುವ, ದೇಸಿ ವಿಜ್ಞಾನವನ್ನು ಸೃಷ್ಟಿಸುವ ಸಂಸ್ಥೆಗಳಾಗಿ, ಆಧುನಿಕ ವಿಜ್ಞಾನಕ್ಕೆ ಹೊಸ ಪಾಠ ಹೇಳಬೇಕು ಎಂಬ ಆಶಯ ಅಡಗಿದೆ.
ಪ್ರಸ್ತುತ ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಯ ನಂತರ ವಿಶ್ವದಲ್ಲಿ ಕುಖ್ಯಾತಿ ಪಡೆದಿರುವ ಮೂರನೇ ದಂಧೆ ವನ್ಯಜೀವಿ ಕಳ್ಳವ್ಯಾಪಾರದ್ದು. ವಿಶ್ವದಾದ್ಯಂತ ಉಂಟಾಗಿರುವ ಈ ವಿಷವರ್ತುಲಕ್ಕೆ ಅಮಾಯಕ ಕಾಡುಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಅದರಲ್ಲೂ ಹುಲಿ, ಚಿರತೆ, ಆನೆ ಅಳಿವಿನಂಚಿಗೆ ತಲುಪಿವೆ. ‘ನೀವೇ ಹುಲಿಯಾಗಿ, ನವಿಲಾಗಿ ನಿಲ್ಲಿ ಬನ್ನಿ’ ಲೇಖನದಲ್ಲಿ ವನ್ಯಜೀವಿಗಳ ಸಂಕಷ್ಟ ಅನಾವರಣಗೊಂಡಿದೆ. ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ ಎನ್ನುವ ಆಶಯ ಲೇಖನದಲ್ಲಿ ಪಡಿಮೂಡಿದೆ.
ಕೊನೆಯಲ್ಲಿರುವ ‘ಭೂಮಿಯೆಂಬ ಗಗನನೌಕೆ’ ಲೇಖನವು ಭೂಮಿಯು ಸಮತೋಲನ ತಪ್ಪಿದರೆ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುತ್ತವೆ. 21 ಲೇಖನಗಳು ಈ ಕೃತಿಯಲ್ಲಿವೆ. ಕೃತಿ ಇದೇ 4ರಂದು 'ಸಿದ್ದವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿ'ಗೆ ಭಾಜನವಾಗಲಿದೆ. ಶಿಕ್ಷಕರು, ವಿದ್ಯಾರ್ಥಿಗಳ ಅರಿವಿನ ಜ್ಞಾನವನ್ನು ಮತ್ತಷ್ಟು ವಿಸ್ತರಿಸಲು ಈ ಕೃತಿ ಸಹಕಾರಿಯಾಗಿದೆ.