ಕಾಣದ ಕಡಲು(ಕಥಾ ಸಂಕಲನ)

ಕಾಣದ ಕಡಲು(ಕಥಾ ಸಂಕಲನ)


ಲೇಖಕ : ಇಂದ್ರಕುಮಾರ್‌ ಎಚ್‌.ಬಿ
ಪ್ರಕಾಶಕರು : ಇಂಪನಾ ಪ್ರಕಾಶನ, ನಂ. 164, ಮಾತೃಪಿತೃ ನಿಲಯ, ಡಿಸಿಎಂ ಟೌನ್‌ಶಿಪ್‌, ‘ಸಿ’ ಬ್ಲಾಕ್‌, ದಾವನಗೆರೆ– 577003
ಪ್ರಕಟವಾದ ವರ್ಷ : .
ಪುಟ : ₹ 162
ರೂ : 150

ಕನ್ನಡದ ಹೊಸ ಪೀಳಿಗೆಯ ಬಹುಮುಖ್ಯ ಕಥೆಗಾರರಲ್ಲೊಬ್ಬ ಇಂದ್ರಕುಮಾರ್‌ಎಚ್. ಬಿ. ಅವರ ನಾಲ್ಕನೇ ಕಥಾ ಸಂಕಲನ ‘ಕಾಣದ ಕಡಲು’. ಕಥೆಗಾರನ ಅನುಭವವೂ, ಕಥನಗಾರಿಕೆಯ ಕೌಶಲವೂ ಸಮರ್ಥವಾದ ಭಾಷಾಪಾತ್ರೆಯಲ್ಲಿ ಪಾಕಗೊಳ್ಳುತ್ತಿರುವ ಸೂಚನೆ ಇಲ್ಲಿನ ಹಲವು ಕಥೆಗಳಲ್ಲಿ ಎದ್ದು ಕಾಣುತ್ತದೆ.

ಇಂದ್ರಕುಮಾರ್‌ ಅವರ ಕಥನಕಲೆ, ಅನುಭವವನ್ನು ರೋಚಕವಾಗಿ ಪ್ರಸ್ತುತಪಡಿಸುವ ಮಟ್ಟದಿಂದ, ಬದುಕಿನ ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಏರುತ್ತಿರುವುದನ್ನೂ ಗಮನಿಸಬಹುದು. ಉಂಡ ಅನುಭವಗಳನ್ನು ಹೇಳುವ ಹಂತ ದಾಟಿ, ಕಂಡ ಅನುಭವಗಳ ಮೂಲಕ ಕಾಣದ ಜೀವನಸತ್ಯಗಳನ್ನು ಅದರೆಲ್ಲ ಸಂಕೀರ್ಣತೆಯೊಟ್ಟಿಗೇ ಹಿಡಿದಿಡುವ ಪ್ರಯತ್ನದಲ್ಲಿ ಅವರಿದ್ದಾರೆ.

ಇಲ್ಲಿನ ಕಥೆಗಳ ವಸ್ತುವೈವಿಧ್ಯ, ಅವರ ಈ ಹುಡುಕಾಟದ ಬೇರೆ ಬೇರೆ ಪ್ರಯೋಗ ಮಾದರಿಗಳಾಗಿಯೂ ಕಾಣುತ್ತವೆ. ’ಚಾಕರಿಯಮ್ಮ’ನಂಥ ಸದಾ ನೆನಪಿನಲ್ಲುಳಿಯುವ ಗಟ್ಟಿ ಹೆಣ್ಣು ಪಾತ್ರದ ಜತೆಯಲ್ಲಿಯೇ ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತ ಚಮತ್ಕಾರಿಯಾಗಿ ಬೆಳೆಯುವ, ಆ ಕ್ಷಣದ ಓದಿನ ಮಜಾ ಕೊಡುವ ’ಸುಳಿಯಲ್ಲಿನ ಸುಳಿವನ ಸುರುಳಿ’ಯಂಥ ಕಥೆಯನ್ನೂ ಬರೆದಿದ್ದಾರೆ. ಈ ಭಿನ್ನ ಮಾದರಿಗಳ ಹುಡುಕಾಟವೇ ಇಲ್ಲಿನ ಹಲವು ಕಥೆಗಳನ್ನು ಗೆಲ್ಲಿಸಿದೆ; ಹಾಗೆಯೇ ಕೆಲ ಕಥೆಗಳ ಸೋಲಿಗೆ ಕಾರಣವಾಗಿದೆ ಕೂಡ!

ಸನ್ನಿವೇಶಗಳ ಮೂಲಕವೇ ಕಥೆ ಬೆಳೆಸುತ್ತ ಹೋಗುವುದು ಇಂದ್ರಕುಮಾರ್‌ ಅವರ ಎಲ್ಲ ಕಥೆಗಳಲ್ಲಿಯೂ ಕಾಣಸಿಗುವ ಸಾಮಾನ್ಯ ತಂತ್ರಗಾರಿಕೆ. ಆ ಸನ್ನಿವೇಶಗಳನ್ನು ಅವರು ಬಹುಸೂಕ್ಷ್ಮ ವಿವರಗಳ ಮೂಲಕ ‘ಕಲ್ಪಿಸಿ’ಕೊಳ್ಳುತ್ತ, ಅವುಗಳನ್ನು ಜೋಡಿಸಲೆಂಬಂತೆ ಕಥೆ ಕಟ್ಟುತ್ತ ಹೋಗುತ್ತಾರೆ. ಆದ್ದರಿಂದಲೇ ಇಲ್ಲಿನ ಹಲವು ಕಥೆಗಳಲ್ಲಿನ ದಟ್ಟವಾದ ಇಮೇಜ್‌ಗಳು ನಮ್ಮನ್ನು ಕಾಡಿದಷ್ಟು ಇಡೀ ಕಥೆ, ಅಥವಾ ಪಾತ್ರಗಳು ಕಾಡುವುದಿಲ್ಲ (’ಒಳಗೊಂದು ವಿಲಕ್ಷಣ ಮಿಶ್ರಣ’ ಕಥೆ ನಡೆಯುವ ಸನ್ನಿವೇಶ ಗಮನಿಸಿ). ಆದರೆ ಈ ಮೇಲಿನ ಹೇಳಿಕೆಗೆ ಪೂರ್ತಿ ವಿರುದ್ಧವಾದ ’ಚಾಕರಿಯಮ್ಮ’ದಂಥ ಬಲು ಗಟ್ಟಿ ಪಾತ್ರವನ್ನೂ ಅವರು ಕಟ್ಟಿಕೊಟ್ಟಿದ್ದಾರೆ.

ಇಲ್ಲಿನ ಹಲವು ಕಥೆಗಳ ಪ್ಲೇಸ್‌ಮೆಂಟಾಗಿರುವುದು ಮೇಲ್ನೋಟಕ್ಕೆ ಅಸಂಗತ ಎನಿಸುವಂಥ ನೆಲೆಯಲ್ಲಿ. ಅದು ನಡೆಯುವ ವಾತಾವರಣದಲ್ಲಿಯೂ ಆ ಛಾಯೆ ಕಾಣಿಸುತ್ತದೆ. ಆದರೆ ಬದುಕಿನ ಇಂಥ ಹಲವು ಅಸಂಗತ ತುಣುಕುಗಳ ನಡುವೆ ಆಳದಲ್ಲಿ ಇರುವ ಸುಸಂಗತ ಹೆಣಿಗೆಯನ್ನು ತೋರಿಸುವುದೇ ಕಥೆಗಾರರ ಮುಖ್ಯ ಕಾಳಜಿ.

‘ಚಾಕರಿಯಮ್ಮ’ ಅತ್ಯಂತ ಯಶಸ್ವಿ ಕಥೆಯೇನಲ್ಲ. ಆದರೆ ಆ ಪಾತ್ರ ಮಾತ್ರ ಕಥೆಯ ಸೋಲು–ಗೆಲುವುಗಳಾಚೆಗೂ ನಮ್ಮನ್ನು ಕಾಡುವಂತಿದೆ. ಹಲವು ಧ್ವನಿಗಳನ್ನು ಹೊಮ್ಮಿಸಿ ನಮ್ಮ ರೂಢಿಗತ ನಂಬಿಕೆಗಳನ್ನು ಕೆಡವಿ ಕಂಗೆಡಿಸುವಂತಿದೆ. ಮೇಲ್ನೋಟಕ್ಕೆ ‘ಚಾಕರಿಯಮ್ಮ’ ಮಹಾ ಬಜಾರಿ.

ಆದರೆ ಬಜಾರಿಯಾಗಿರುವುದೂ ಅವಳ ಮೂಲ ಸ್ವಭಾವ ಅಲ್ಲ. ಇಷ್ಟವೂ ಅಲ್ಲ. ಅದು ಅವಳ ಬದುಕಿನ ಅನಿವಾರ್ಯತೆ. ಮೇಲು ಮೇಲಿಂದ ಮಹಾನ್‌ ಧೈರ್ಯವಂತೆ ಎಂಬಂತೆ ಪೋಸು ಕೊಡುತ್ತಿರುವ ಅವಳು ಒಳಗೊಳಗೇ ಹೆದರಿ ನಡುಗುತ್ತಿರುತ್ತಾಳೆ. ಸದ್ಗೃಹಿಣಿ, ಸಂಸ್ಕೃತಿಯ ರಕ್ಷಕಿ, ಭೂಮಿತಾಯಿ, ಮಮತಾಮಯಿ, ದೇವಿ ಎಂಬೆಲ್ಲ ಹೆಣ್ಣಿಗೆ ಆರೋಪಿಸಲಾಗುವ ಕೃತಕ ಮಾದರಿಗಳಂತೆಯೇ ’ಬಜಾರಿ’ ಅನ್ನುವುದೂ ಪರೋಕ್ಷವಾಗಿ ಇಂಥದ್ದೇ ಇನ್ನೊಂದು ಮುಖವಾಡವೇ ಆಗಿರಬಹುದು ಎಂಬುದನ್ನು ಚಾಕರಿಯಮ್ಮನ ಪಾತ್ರ ಸೂಕ್ಷ್ಮವಾಗಿ ನಮ್ಮೊಳಗೆ ಹೊಳೆಸುತ್ತದೆ.

ಹೊರಜಗತ್ತಿಗೆ ತನ್ನ 'ಮನಸಿಗೆ ಕಂಡಂತೆ ಬದುಕ್ತೇನೆ, ಅದನ್ನು ಕೇಳಲು ನೀವ್ಯಾರು’ ಎಂದು ದಿಟ್ಟವಾಗಿ ಹೇಳುವಾಗಲೂ ಆ ಮಾದರಿಯನ್ನೂ ಪರೋಕ್ಷವಾಗಿ ಸಮಾಜವೇ ರೂಪಿಸುತ್ತಿರುತ್ತದೆ. ಅದೂ ಅವಳಿಗಿಷ್ಟ ಇಲ್ಲದ, ಅನಿವಾರ್ಯವಾಗಿ ತೊಡಲೇಬೇಕಾದ ಮುಖವಾಡವಷ್ಟೇ ಆಗಿರುತ್ತದೆ. ಆದ್ದರಿಂದಲೇ ಚಾಕರಿಯಮ್ಮನಿಗೆ ಕಾಲ್ಪನಿಕ ಗಂಡನನ್ನೂ, ಒಂದು ಗಂಡುಮಗುವನ್ನೂ ಸೃಷ್ಟಿಸಿಕೊಳ್ಳುವ ಅಗತ್ಯ ಎದುರಾಗುತ್ತದೆ. ಕೊನೆಗೆ ಬಸ್ಸಿನಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯನ್ನೇ ಒಪ್ಪಿಕೊಂಡುಬಿಡಬೇಕಾಗುವ ಸ್ಥಿತಿಗೆ ಮುಟ್ಟುತ್ತದೆ.

ಮೊದಲು ತುಂಬಾ ಆರ್ದ್ರವಾಗಿ ಆರಂಭವಾಗಿ ದಟ್ಟವಾಗಿ ಬೆಳೆಯುವ ಕಥೆ ಕೊನೆಗೆ ಕಥೆಗಾರನ ’ದಡ ಮುಟ್ಟಿಸುವ ಜಬಾಬ್ದಾರಿ’ಗೆ ತನ್ನನ್ನು ತಾನು ಒಪ್ಪಿಸಿಕೊಂಡು ಪೇಲವವಾಗಿಬಿಡುತ್ತದೆ. ಚಾಕರಿಯಮ್ಮನಿಗೆ ತಾನೆಣಿಸಿದಂಥದ್ದೇ ಗಂಡ–ಮಗು ಸಿಕ್ಕಿಬಿಡುವುದು, ಅದಕ್ಕೆಂದೇ ಕಾದಿದ್ದಂತೆ ಅವಳು ಹೊಂದಿಕೊಳ್ಳುವುದೆಲ್ಲ ಕೃತಕವಾಗಿದೆ. ಕರಿಯಮ್ಮನಿದುಗೆ ಗಂಡ, ಮಗು ಸಿಕ್ಕಿದರು ಎಂಬಲ್ಲಿಗೆ ಇದುವರೆಗಿನ ಅವಳ ಸಂಕಟಗಳೆಲ್ಲವೂ ಕಥೆಯಲ್ಲಷ್ಟೇ ಅಲ್ಲ; ಓದುಗನ ಮನಸಲ್ಲೂ ಮುಗಿದು ಹೋಗುತ್ತದೆ. ಹೀಗೆ ಪುಸ್ತಕದಲ್ಲಿ ಮೊದಲ ಓದಿಗೇ ಮುಗಿದುಹೋಗುವ ಇನ್ನೂ ಕೆಲವು ಕಥೆಗಳು ಈ ಸಂಕಲನದಲ್ಲಿವೆ.

‘ಹಳಿಗಳು ಕೂಡಿದವು’ ಕೂಡ ಕಥೆಗಾರನ ತಂತ್ರಕ್ಕೆ ಬಲಿಯಾದ ಇನ್ನೊಂದು ಕಥೆ. ಇಡೀ ಕಥೆ ಸಂಭಾಷಣೆ ರೂಪದಲ್ಲಿದೆ. ಬದುಕಿನ ಬೇರೆ ಬೇರೆ ಆಯಾಮಗಳತ್ತ ವಿಸ್ತರಿಸುತ್ತಾ ಆಸಕ್ತಿ ಕುದುರಿಸಿಕೊಳ್ಳುತ್ತಿರುವಾಗಲೇ ಚಮತ್ಕಾರಿಯಾಗಿ ಕೊನೆಗೊಳ್ಳುವ ಸಾಧಾರಣ ಪ್ರೇಮಕಥೆಯಾಗಿಯಷ್ಟೇ ಮುಗಿದುಹೋಗುತ್ತದೆ.

’ಕಾಣದ ಕಡಲು' ಈ ಸಂಕಲನದ ಯಶಸ್ವಿ ಕಥೆಗಳಲ್ಲೊಂದು. ಭಾಸ್ಕರನ ಭೌತಿಕ ಅಸ್ತಿತ್ವವೇ ಇಲ್ಲದೆಯೂ ಇದು ಭಾಸ್ಕರನ ಕಥೆಯಾಗಿಯೇ ಮನಸ್ಸಿಗೆ ತಟ್ಟುತ್ತದೆ. ಖಾಲಿ ಜಾಗದ ಮೂಲಕವೇ ಗೈರುಹಾಜರಿಯನ್ನು ನೀರಜಾಳ ನಿರೀಕ್ಷೆಯ ಮೂಲಕವೇ ದಟ್ಟವಾಗಿ ಕಟ್ಟಿಕೊಡುತ್ತ ಅದು ಅವಳ ಕಥೆಯೂ ಆಗಿಬಿಡುತ್ತದೆ.

ಕೂಡು ಕುಟುಂಬದಲ್ಲಿ ಅಸಡ್ಡೆಗೆ ಒಳಗಾದ ನೀರಜಾಳಿಗೆ ಮೈದುನ ಭಾಸ್ಕರನ ಇರುವಿಕೆ ಅವಳ ಅಸ್ತಿತ್ವದ ಗುರುತೂ ಹೌದು. ಹಾಗಾಗಿಯೇ ಅವನ ಬರುವಿಕೆಯಲ್ಲಿ ಅವಳ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯೂ ಇದೆ. ಒಬ್ಬ ವ್ಯಕ್ತಿಯ ಬದುಕು ಉಳಿದವರಿಗೆ ಕುತೂಹಲ ತಣಿಸಿಕೊಳ್ಳುವ ಸಂಗತಿಯಷ್ಟೇ ಆಗಿಬಿಡುವ ಕುಚೋದ್ಯವೂ ಈ ಕಥೆಯಲ್ಲಿ ಸಶಕ್ತವಾಗಿ ಧ್ವನಿಸಿದೆ.

ಒಂದು ಸ್ಟೇಟ್‌ಮೆಂಟ್‌ನಂತೆ ಕೇಳಿಸುವ ’ಹಳಿಗಳು ಕೂಡಿದವು’ ಎಂಬ ಹೆಸರಿನ ಕಥೆ ಶೀರ್ಷಿಕೆಯಲ್ಲಿನ ಸ್ಟೇಟ್‌ಮೆಂಟ್ ಅನ್ನು ಸತ್ಯವಾಗಿಸಿ ಮುಗಿದುಹೋಗುತ್ತದೆ. ಆದರೆ ’ದೂರ ತೀರದ ಕನಸು’ ಕಥೆ ಹಾಗಲ್ಲ. ಅದು ಒಂದು ಸ್ಟೇಟ್‌ಮೆಂಟ್‌ನೊಂದಿಗೆ ಶುಭಂ ಆಗುವ ಕಥೆಯಲ್ಲ, ಮುಗಿದರೂ ಬೆಳೆಯುವ ಕಥೆ. ಹೀಗೆ ಬೆಳೆಯುವ ಕಥೆಗಳೇ ಉಳಿಯುವ ಕಥೆಗಳೂ ಆಗಿರುತ್ತವೆ.

ಈ ಕಥೆಯಲ್ಲಿ ಅವರ ಕಥೆಯ ಮೆಕ್ಯಾನಿಸಮ್ ಕೊಂಚ ಹಿಂದೆ ಸರಿದು ಕಥನ ಮುನ್ನೆಲೆಗೆ ಬಂದಿದೆ. ಒಂದೊಮ್ಮೆ ಮೆಕ್ಯಾನಿಸಮ್ ಮೇಲುಗೈ ಸಾಧಿಸಿದ್ದರೆ ಕಥೆಯಲ್ಲಿನ ಗಂಡು ಹೆಣ್ಣು ಕೊನೆಯಲ್ಲಿ ಒಂದಾಗಿಬಿಡುತ್ತಿದ್ದರು. ಹಾಗಾಗದೇ, ಕಥೆಗಾರನ ದಡ ಸೇರುವ ತವಕಕ್ಕಿಂತ ಜಲದ ಈಜಿನ ಶೋಧನೆಯೇ ಮುಖ್ಯವಾಗಿದ್ದರಿಂದಲೇ ಕಥೆ ಗೆದ್ದಿದೆ.

’ಮುರಿಯದ ಮನೆಗಳು’ ಈ ಸಂಕಲನದ ಇನ್ನೊಂದು ಯಶಸ್ವೀ ಕಥೆ. ಸಾಮಾನ್ಯವಾಗಿ ಕಥನಕಲೆಯ ಕುರಿತಾಗಿಯೇ ಇರುವ ಕಥೆಗಳು ಪ್ರಯೋಗದ ನೆಪದಲ್ಲಿ ಅನವಶ್ಯಕವಾಗಿ ಅಸಂಗತ ಆಗಿರುವುದೇ ಹೆಚ್ಚು. ಆದರೆ ಇಲ್ಲಿ ಸುರೇಶಪ್ಪನ ಬದುಕಿನ ಕಥೆಯನ್ನು ಹೇಳುತ್ತಲೇ ಕಥೆ– ಕಥೆ ಕಥೆಗಾರನ ಸಂಬಂಧ, ಕಥೆ– ಓದುಗನ ಸಂಬಂಧ, ಕಥನಕ ಕಲೆಯ ಉದ್ದೇಶ– ಸಾರ್ಥಕ್ಯ, ಸಮಾಜ ಮತ್ತು ಕಥೆಗಾರನ ಸಂಬಂಧ ಹೀಗೆ ಹಲವು ನೆಲೆಗಳಲ್ಲಿಯೂ ಬೆಳೆಯುತ್ತ ಹೋಗುತ್ತದೆ.

ಇಲ್ಲಿ ಕಥೆಗಾರನಿಗೆ ತನ್ನದೇ ವಯಸ್ಸಿನ ನೆರೆಯ ಸುರೇಶಪ್ಪನ ಬದುಕನ್ನು ತನ್ನೊಂದಿಗೆ ಹೋಲಿಸಿಕೊಳ್ಳುವ ಚಟ. ಅವನ ಮಗಳು ಲಚ್ಚಿಯ ಕುರಿತಾಗಿಯೂ ಅವನಿಗೆ ಚಟವಿದೆ. ಹಾಗೆಯೇ ಒಳ್ಳೆಯವನೆನಿಸಿಕೊಳ್ಳುವ ಚಪಲವೂ ಇದೆ. ಸುರೇಶನ ಕುಟುಂಬಕ್ಕೆ ಸಹಾಯ ಮಾಡುವಾಗಲೂ ಅವನ ಇವೇ ಒಳಗಿಂದ ಪ್ರೇರಕವಾಗಿರುವುದು. ಮಧ್ಯವಯಸ್ಸಿಗೆ ಕಥೆಗಾರನೆನಿಸಿಕೊಂಡು ನಾಲ್ಕು ಜನರಲ್ಲಿ ಗುರ್ತಿಸಿಕೊಳ್ಳಲು ತೊಡಗಿದ್ದ ಅವನಿಗೆ ಈಗ ಆ ಬರವಣಿಗೆಯೂ ಕೈಕೊಡತೊಡಗಿದೆ. ಸುರೇಶಪ್ಪನ ಮಗಳು ಲಚ್ಚಿಗೂ ರಫೀಕನಿಗೂ ಪ್ರೇಮ.

ರಫೀಕ ಮನೆ ಕೆಡವುವ ಕೆಲಸದಲ್ಲಿ ಅಚಾನಕ್ಕಾಗಿ ಸತ್ತುಹೋಗುತ್ತಾನೆ. ಅವನೊಟ್ಟಿಗೆ ಲಚ್ಚಿಯ ಜೀವನಚೈತನ್ಯವೂ... ಅವಳಿಗೆ ಕಥೆಗಾರನ ಬಗ್ಗೆ ಭಕ್ತಿ. ತನ್ನ ಬಗ್ಗೆ ಕಥೆ ಬರೆದು ಅದರಲ್ಲಿ ತಾನು ಮತ್ತು ರಫೀಕ ಒಂದಾಗುವಂತೆ ಚಿತ್ರಿಸಬೇಕೆಂಬ ಬಯಕೆ. ಈಗ ಕಥೆಗಾರ ಬರೆವ ಕಥೆಗೆ ಒಂದು ಜೀವ ಉಳಿಸುವ ಶಕ್ತಿ ಬಂದಿದೆ.

ಆದರೆ ಆ ಕಥೆಯನ್ನು ಬರೆಯಹೊರಟಷ್ಟೂ ಅವನು ವಿಫಲನಾಗುತ್ತಾನೆ. ಕೊನೆಗೆ ಒಂದು ದಿನ ಕಥೆ ಬರೆದುಮುಗಿಸಿ ಸೈಕಲ್‌ನಲ್ಲಿ ಬರುವ ಸುರೇಶಪ್ಪನಿಗಾಗಿ ಕಾದು ಕೂಡುವಲ್ಲಿಗೆ ಕಥೆ ಮುಗಿಯುತ್ತದೆ. ಕಥೆಗಾರ ಬರೆದ ಕಥೆಯಲ್ಲಿ ಓದುಗಳಾದ ಲಚ್ಚಿಯ ಜೀವನ; ಕಥೆ ಓದಿ ಸುರೇಶಪ್ಪ ನೀಡುವ ಪ್ರತಿಕ್ರಿಯೆಯಲ್ಲಿ ಕಥೆಗಾರನ ಬರವಣಿಗೆಯ ಜೀವ ಇರುವಂಥ ವಿಚಿತ್ರ ಸಂಕೀರ್ಣ ಸ್ಥಿತಿಯಲ್ಲಿ ಕತೆ ಮುಗಿಯುತ್ತದೆ. ತಂತ್ರಗಾರಿಕೆ, ಕಥನಗಾರಿಕೆ ಮತ್ತು ಪಕ್ವಗೊಂಡ ಅನುಭವದ್ರವ್ಯ ಮೂರು ಹದವಾಗಿ ಬೆರೆತ ಕಥೆ ಇದು.

ಇದರ ಕೊನೆಗೆ ಹಲವು ಧ್ವನಿಗಳನ್ನು ಹೊಮ್ಮಿಸಬಲ್ಲ ಶಕ್ತಿ ಇದೆ. ಇದರ ನಿರೂಪಣೆಯಲ್ಲಿಯೇ ತೆಳುವಾಗಿ ಸೇರಿಕೊಂಡಿರುವ ಲೇವಡಿಯ ಗುಣವೂ ಇದರ ಸತ್ವವನ್ನು ಹೆಚ್ಚಿಸಿದೆ.ಓದುಗನ ಮನಸ್ಸಿನೊಳಗೆ ಚಿಂತನೆಯ ಕವಲು ದಾರಿಗಳನ್ನು ತೆರೆಯಬಹುದಾದ ರಿಂಗಣಶಕ್ತಿ ಇರುವ ಹಲವು ಕಥೆಗಳು ಈ ಸಂಕಲನದಲ್ಲಿವೆ.  ತಮ್ಮ ಬರವಣಿಗೆಯ ದಾರಿಯಲ್ಲಷ್ಟೇ ಅಲ್ಲ, ಸದ್ಯದ ಕನ್ನಡ ಸಾಹಿತ್ಯ ಜಗತ್ತಿನಲ್ಲಿಯೂ ಗುರುತಿಸಬೇಕಾದ ಗಟ್ಟಿ ಹೆಜ್ಜೆಯೊಂದನ್ನು ಇಂದ್ರಕುಮಾರ್‌ ಈ ಸಂಕಲನದ ಮೂಲಕ ಇರಿಸಿದ್ದಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು.

Comments (Click here to Expand)
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ