ನಾ ಕಂಡ ನಮ್ಮವರು ವ್ಯಕ್ತ ಚಿತ್ರಗಳು

ಅಂತಃಕರಣದ ಪ್ರಭೆಯಲ್ಲಿ ಬೆಳಗುವ ಅ- ಸಾಮಾನ್ಯರು!


ಲೇಖಕ : ಭಾರ್ಗವಿ ನಾರಾಯಣ್
ಪ್ರಕಾಶಕರು : ಅಂಕಿತ ಪ್ರಕಾಶನ, ಶ್ಯಾಮ್‌ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು
ಪ್ರಕಟವಾದ ವರ್ಷ : ..
ಪುಟ : 152
ರೂ : ₹130

ವ್ಯಕ್ತಿ ಚಿತ್ರಗಳು ಎಂದ ತಕ್ಷಣ ನಮ್ಮೆಲ್ಲರ ಮನಸಿಗೆ ಬರುವುದು ಪ್ರಸಿದ್ಧರ, - ಸಾಧಕರ ಕುರಿತಾದ ಲೇಖನಗಳು. ಈಗಾಗಲೇ ಜನಮಾನಸದಲ್ಲಿ ಸ್ಥಾಪಿತರಾಗಿರುವ ದಿಗ್ಗಜರ ವ್ಯಕ್ತಿತ್ವವನ್ನು ತಾವು ಕಂಡಂತೆ ಅಕ್ಷರಗಳಲ್ಲಿ ಕೆತ್ತುವ ಸಾಕಷ್ಟು ಪುಸ್ತಕಗಳು ಈಗಾಗಲೇ ಬಂದಿವೆ. ಆದರೆ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ 'ನಾ ಕಂಡ ನಮ್ಮವರು' ಪುಸ್ತಕ ಅದಕ್ಕಿಂತ ಕೊಂಚ ಭಿನ್ನವಾದ ಕೃತಿ. ಇಲ್ಲಿ ಅವರ ಅಕ್ಷರಗಳಲ್ಲಿ ಕೆತ್ತಲ್ಪಟ್ಟವರು ಹೆಸರಾಂತರಲ್ಲ; ಹೊರಜಗತ್ತಿಗೆ ಸಾಮಾನ್ಯರು. ಪುಸ್ತಕದಲ್ಲಿ ಇರುವ 'ನಮ್ಮವರು' ಎಂಬ ಶಬ್ದವೇ ಇದರ ವಿಶಿಷ್ಟತೆಯನ್ನೂ ಹೇಳುವಂತಿವೆ.

 

ಸುಮ್ಮನೆ ಈ ಪುಸ್ತಕದ ಪರಿವಿಡಿ ಗಮನಿಸೋಣ; ಮಾವಯ್ಯ, ಕೆಲಸದ ಅಮ್ಮಯ್ಯಮ್ಮ, ಲಲಿತ, ಅತ್ತಿಗೆಮ್ಮ, ನಮ್ಮಣ್ಣ ಚಿಂತಾಮಣಿ, ನಮ್ನ ಶೇಷಕ್ಕ, ಪಾಪಚ್ಚಿ, ಮೇಷ್ಟ್ರು... ಹೀಗೆ ತಮ್ಮ ಅನುದಿನದ ಬದುಕಿನಲ್ಲಿ ಕಂಡು ಒಡನಾಡಿದ- ಅವರ ಸಂತಸ - ಸಂಕಟದ ಜೀವನದ ಭಾಗವಾದ ಸಾಮಾನ್ಯರ ಕುರಿತಾಗಿಯೇ ಭಾರ್ಗವಿ ಆಪ್ತವಾಗಿ ಬರೆಯುತ್ತ ಹೋಗುತ್ತಾರೆ.

 

ಮನೆಯ ಹಿರಿಯಜ್ಜಿಯೊಬ್ಬರು ಮೊಮ್ಮಕ್ಕಳನ್ನು ಕೂಡ್ರಿಸಿಕೊಂಡು ತಮ್ಮ ಅನುಭವವನ್ನು ಕಥನವಾಗಿಸಿ ಹೇಳುತ್ತಿರುವ ಮಾದರಿಯಲ್ಲಿಯೇ ಇಲ್ಲಿನ ಬಹುತೇಕ ಬರಹಗಳಿವೆ. ಹೀಗೆ ಅನುಭವವನ್ನು ಕಥನವಾಗಿಸುವುದು ಸುಲಭದ ಕೌಶಲವಲ್ಲ. ಕಥನವಾದಾಗ ಅಲ್ಲಿನ ವ್ಯಕ್ತಿಗಳು ನಮ್ಮವರಷ್ಟೇ ಆಗಿರುವುದೂ ಇಲ್ಲ. 'ಇದು ನನ್ನದು; ನನ್ನದು ಮಾತ್ರ ಅಲ್ಲ' ಉಕ್ತಿಯಂತೆ ವೈಯಕ್ತಿಕವನ್ನು ಸಾರ್ವತ್ರಿಕ ಮಾಡುವ- ಅದು ಸರ್ವರ ಅನುಭವವೂ ಆಗುವಂತೆ ಮಾಡುವ ಸೃಜನಶೀಲ ಪ್ರಕ್ರಿಯೆ ಅದು. ಭಾರ್ಗವಿ ಅವರಿಗೆ ಈ ಕೌಶಲ ತುಂಬ ಸಹಜವಾಗಿಯೇ ಲಭಿಸಿರುವುದು ಅವರ ಎಲ್ಲ ಬರಹಗಳಲ್ಲಿಯೂ ವೇದ್ಯವಾಗುತ್ತದೆ. ಇದಕ್ಕೆ ಅವರ ದೀರ್ಘಕಾಲದ ನಟನಾ ಅನುಭವವೂ ಕಾರಣವಾಗಿರಬಹುದು.

 

ಈ ಕೃತಿಯ ಮೊದಲ ಬರಹವೇ ಮಾವಯ್ಯನ ಕುರಿತಾದದ್ದು. ಅದರ ನಿರೂಪಣಾ ವಿಧಾನದಲ್ಲಿಯೇ ಹಲವು ವಿನ್ಯಾಸಗಳಿವೆ. ಆರಂಭದಲ್ಲಿ ಕೇಳಿದ ಕಥೆಯನ್ನು ಕಾಣುತ್ತಿರುವಂತೇ ನಿರೂಪಿಸುತ್ತ ಹೋಗುವ ಈ ಬರಹ ನಂತರ ಅನುಭವಕಥನವಾಗಿ ಬದಲಾಗುತ್ತದೆ. ಕಾಲದ ಕ್ರಮದಲ್ಲಿಯೂ ಹಿಂದಕ್ಕೆ ಮುಂದಕ್ಕೆ ಜಿಗಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಬರಹಗಳಿಗೆ ಒಂದು ರೀತಿಯ ವಾಚನ ಗುಣವಿದೆ. ಅದು ತನ್ನ ಮಾತಲ್ಲಿ ಹಾದುಬಂದ ವ್ಯಕ್ತಿಗಳನ್ನು ಎಲ್ಲರಿಗೂ ಪರಿಚಿತಗೊಳಿಸುವಂಥ ಗುಣ.

 

ಇಲ್ಲಿನ ಎಲ್ಲ ಬರಹಗಳಲ್ಲಿ ಎದ್ದು ಕಾಣುವ ಒಂದು ತಂತು ಭಾರ್ಗವಿ ಅವರ ಅಂತಃಕರಣ. ತಾಯಿಯ ಮಮತೆ ಮತ್ತು ಮಗುವಿನ ಮುಗ್ಧಸಹಜ ಕುತೂಹಲ ಎರಡೂ ಸೇರಿದ ಪ್ರಭಾವಳಿಯಲ್ಲಿ ಸಾಮಾನ್ಯರೂ ಅಸಾಮಾನ್ಯರಾಗಿ ಕಾಣಿಸುತ್ತಾರೆ. ಆ ಅವಕಾಶದಲ್ಲಿ ಡಾಕ್ಟರ್ ಆಗಿದ್ದ ಮಾವಯ್ಯನಿಗೂ, ಮನೆಗೆಲಸಕ್ಕೆ ಸಿಂಬಳಸುರುಕ ಮಕ್ಕಳೊಂದಿಗೆ ಬರುತ್ತಿದ್ದ ಅಮ್ಮಯ್ಯಮ್ಮನಿಗೂ ಒಂದೇ ಪಂಕ್ತಿ. ಎದುರು ಮನೆ ಕಮಲಮ್ಮನೂ, ದೂರದ ಪರಿಚಯದ - ಮದುವೆಯಾಗದೇ ಉಳಿದ ನಾಗಮ್ಮನೂ ಅವರಿಗವರೇ ಸಾಟಿ.

 

ಈ ಬರಹಗಳಿಗೆ ವಾಚನಗುಣವಿದೆ ಎಂದು ಮೊದಲೇ ಹೇಳಿದೆ. ಈ ಗುಣದಿಂದಲೇ ವ್ಯಕ್ತಿಗಳ ದೊಡ್ಡತನವನ್ನು ಹೇಳಿದಷ್ಟೇ ಸಹಜವಾಗಿ (ಯಾವ ಉದ್ವಿಗ್ನತೆ- ಸೆಡವು- ತೋರಿಕೆಯ ಕೃತಕ ಪ್ರಾಮಾಣಿಕತೆಗಳೂ ಇಲ್ಲದೆಯೇ) ಆ ವ್ಯಕ್ತಿಗಳ ಸಣ್ಣತನವನ್ನೂ ಹೇಳಲು ಅವರಿಗೆ ಸಾಧ್ಯವಾಗಿದೆ.

 

ಇಲ್ಲಿ ಹದಿನೈದು ವ್ಯಕ್ತಿಗಳ ಕುರಿತ ಬರಹಗಳಿವೆ. ಅಷ್ಟನ್ನೂ ಓದಿಮುಗಿಸುತ್ತಲೇ ನಮ್ಮ ಮನಸ್ಸಿನೊಳಗೆ ಹದಿನಾರನೇ ವ್ಯಕ್ತಿಚಿತ್ರವೊಂದು ತಂತಾನೆಯೇ ಕಟ್ಟಿಕೊಳ್ಳುತ್ತದೆ. ಆ ಪುಸ್ತಕದಲ್ಲಿ ಪತ್ಯಕ್ಷವಾಗಿ ಇಲ್ಲದ, ಆದರೆ ಪ್ರತಿ ಸಾಲಿನ ಹಿಂದೆಯೂ ಇರುವ ಸ್ಪಷ್ಟ ಚಹರೆಗಳಿಂದ ಕಟ್ಟಿಕೊಳ್ಳುವ ಆ ಹದಿನಾರನೆಯ ವ್ಯಕ್ತಿ ಚಿತ್ರ ಭಾರ್ಗವಿ ನಾರಾಯಣ್ ಅವರದೇ! ಈ ಪುಸ್ತಕದ ಸಾರ್ಥಕ್ಯವಿರುವುದೂ ಅಲ್ಲಿಯೇ.

Comments (Click here to Expand)
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.