ಸಿಲೋನ್‌ ಸೈಕಲ್‌

ಸಿಲೋನ್‌ ಸೈಕಲ್‌


ಲೇಖಕ : ಕನಕರಾಜ್‌ ಆರನಕಟ್ಟೆ
ಪ್ರಕಾಶಕರು : ಪಲ್ಲವ ಪ್ರಕಾಶನ
ಪ್ರಕಟವಾದ ವರ್ಷ : 2017
ಪುಟ : 166
ರೂ : ₹ 130

ಸಾಹಿತ್ಯ ಕೃತಿಯೊಂದು ಏನೆಲ್ಲಾ ಪಾತ್ರಗಳನ್ನು ನಿಭಾಯಿಸಬಲ್ಲದು? ಗಾಯಗೊಂಡ ಜೀವಕೋಶಕ್ಕೆ ಔಷಧಿಯಾಗಿ, ಸಾಂತ್ವನದ ದನಿಯಾಗಿ, ಮುಗ್ಧ ರಮ್ಯತೆಗೆ ವಾಸ್ತವದ ಕನ್ನಡಿಯಾಗಿ, ಸಿನಿಕತನಕ್ಕೆ ಬದುಕಿನ ಬಗ್ಗೆ ಪ್ರೀತಿ ಹುಟ್ಟಿಸುವ ಜೇವಣಿಯಾಗಿ, ಕಂಡ ಬದುಕಿನಾಚೆಗಿನ ಕಾಣದ ಬದುಕನ್ನು ಕುರಿತ ಪಾಠವಾಗಿ, ನಮಗೆ ನಾವೇ ಒಡ್ಡಿಕೊಳ್ಳಬಹುದಾದ ನಿಕಷವಾಗಿ... ಹೀಗೆ ಕೊನೆಯೇ ಇಲ್ಲದ ಪಾತ್ರಾವಳಿಗಳನ್ನು ಸಾಹಿತ್ಯ ಕೃತಿಗಳು ನಿಭಾಯಿಸುತ್ತಿರುತ್ತವೆ. ಕನಕರಾಜ್ ಆರನಕಟ್ಟೆಯವರ ‘ಸಿಲೋನ್ ಸೈಕಲ್’ ಕಥಾ ಸಂಕಲನವು (ಪಲ್ಲವ ಪ್ರಕಾಶನ) ಸುರಕ್ಷಿತ ವಲಯದ ಅನುಭವ, ನಂಬಿಕೆ, ನಿಲುವು, ಗ್ರಹಿಕೆ ಎಲ್ಲವನ್ನೂ ಬುಡಮೇಲು ಮಾಡಬಲ್ಲ ತನ್ನ ಶಕ್ತಿಯ ಕಾರಣಕ್ಕಾಗಿ ನಮ್ಮ ಗಮನ ಸೆಳೆಯುತ್ತದೆ. ಈ ಕಾರಣಕ್ಕಾಗಿಯೇ ಇದು ಮುಖ್ಯವೂ ಆಗುತ್ತದೆ.

ಮೊದಲ ಓದಿಗೆ ಇಲ್ಲಿನ ಕತೆಗಳು ಓದುಗರನ್ನು ದಿಗ್ಭ್ರಮೆಗೊಳಿಸುವುದು ಮಾತ್ರವಲ್ಲ ಕಕ್ಕಾಬಿಕ್ಕಿಯಾಗಿಸುತ್ತವೆ. ಅದು ಬದುಕಿನ ಅನೂಹ್ಯತೆಗಳನ್ನು ಮಾತ್ರ ಕುರಿತದ್ದಲ್ಲ, ಬದಲಿಗೆ ಬದುಕಿನ ದಾರುಣವಾದ, ನಮ್ಮ ಬುದ್ಧಿ ಭಾವಗಳು ಒಪ್ಪಲು ನಿರಾಕರಿಸುವ ಮಟ್ಟಿಗಿನ ಕ್ರೂರ ವಾಸ್ತವದ ಅನಾವರಣಗಳಾಗಿವೆ. ಎಲ್ಲಿಂದೆಲ್ಲಿಗೋ ಒಯ್ಯುತ್ತಾ, ಬೇಕೆಂದ ಕಡೆ ಮನುಷ್ಯರನ್ನೂ, ಸಂಬಂಧಗಳನ್ನೂ ಎತ್ತಿ ಒಗೆಯುತ್ತಾ, ಬದುಕಿನ ಗತಿಯೇ ಚಿತ್ರವಿಚಿತ್ರವಾದ ಆಕಾರಗಳನ್ನು ಪಡೆಯುತ್ತಾ, ಈ ಬದುಕಿನಲ್ಲಿ ಯಾವುದಕ್ಕಾದರೂ ಅರ್ಥವಿದೆಯೇ ಎಂದು ಆಕ್ರಂದನ ಮಾಡುತ್ತಾ ಮನುಷ್ಯ ಜನ್ಮವೇ ಸಾಕು ಸಾಕು ಎಂದು ಸುಸ್ತಾಗಿ ಒರಗುವ ಮನುಷ್ಯರ ಮೆರವಣಿಗೆಯೇ ಇಲ್ಲಿನ ಕತೆಗಳಲ್ಲಿ ಕಾಣ ಸಿಗುತ್ತದೆ. ಇದು ಕತೆಗಾರನ ನೇಯ್ಗೆ, ಬದುಕು ಮತ್ತು ಸಂಬಂಧಗಳು ಇಷ್ಟು ಅಸಂಬದ್ಧವಾಗಿರಲಾರವು ಎಂದು ನಂಬಲು ಓದುಗರ ಮನಸ್ಸು ಎಷ್ಟು ಹಂಬಲಿಸಿದರೂ ಕತೆಗಳ ವಾಸ್ತವದ ಎಳೆಗಳು ಆ ನಂಬಿಕೆಯನ್ನು ಅಲ್ಲೇ ಚಿವುಟಿ ಹಾಕುತ್ತವೆ. ಈ ಕತೆಗಳನ್ನು ಓದಿದ್ದಾದ ಮೇಲೆ ಕೆಲ ಹೊತ್ತು ಬೇರೆ ಏನನ್ನು ಯೋಚಿಸಲೂ ಸಾಧ್ಯವಾಗದ ಮಟ್ಟಿಗೆ ಅವು ನಮ್ಮನ್ನು ಆವರಿಸಿಕೊಳ್ಳುತ್ತವೆ.

ಈ ಸಂಕಲನದ ಕಥೆಗಳು ಕನ್ನಡ ಮನಸ್ಸು ಮತ್ತು ಸಂವೇದನೆಗೆ ಸಂಪೂರ್ಣವಾಗಿ ಹೊಸದಾದವು. ಈ ದೃಷ್ಟಿಯಿಂದ ಇವು ಹೊಚ್ಚ ಹೊಸ ಕಥೆಗಳು. ಮುನ್ನುಡಿಯಲ್ಲಿ ರಾಜೇಂದ್ರ ಚೆನ್ನಿಯವರು ಸರಿಯಾಗಿಯೇ ಗುರುತಿಸಿರುವಂತೆ ವಲಸೆಗಾರರ ಅನುಭವವನ್ನು ಈ ತನಕ ಕನ್ನಡದ ಮತ್ತು ಭಾರತೀಯ ಮನಸ್ಸು ಚರ್ಚಿಸಿರುವುದಕ್ಕೂ ಈ ಕತೆಗಳು ಬಿಚ್ಚಿಡುವ ಲೋಕಕ್ಕೂ ಅರ್ಥಾತ್ ಸಂಬಂಧವಿಲ್ಲದಿರುವ ಮಟ್ಟಿಗೆ ಇಲ್ಲಿನ ಕಥೆಗಳಿವೆ. ವಲಸಿಗತನದ ರಮ್ಯ, ಸಾಹಸಿ ನಿರೂಪಣೆಗೂ ಇಲ್ಲಿನ ಕರುಳು ಕತ್ತರಿಸುವ ದುರ್ಭರ ಮಾನವೀಯ ಸನ್ನಿವೇಶಗಳಿಗೂ ಇರುವ ವ್ಯತ್ಯಾಸ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.

ಈ ಕಥಾ ಸಂಕಲನದ ಒಂದು ದುರ್ದಮ್ಯ ಆರ್ತತೆಯೆಂದರೆ, ‘ದೇವರೇ ಹೇಗಾದರಾಗಲಿ, ಏನಾದರಾಗಲೀ ಆತುಕೊಳ್ಳಲು ಸಂಬಂಧವೊಂದನ್ನು, ಕಾಯುವ ಕರುಳೊಂದನ್ನು ಕೊಡು’ ಎನ್ನುವುದು. ಆದರೆ, ಇಲ್ಲಿನ ಕತೆಗಳಲ್ಲಿನ ಪಾತ್ರಗಳು, ಅವರ ಬದುಕಿನ ಅನಿವಾರ್ಯತೆಗಳು, ಸಂದಿಗ್ಧಗಳು ಹೇಗಿರುತ್ತವೆಯೆಂದರೆ, ಮೂಲ ಸಂಬಂಧಗಳು, ಇವೇ ಬದುಕಿನ ಆಧಾರಗಳು ಎಂದು ತಿಳಿದಿರುವುದು ಮನುಷ್ಯನ ದುರಂತದ ಮೂಲವೇನೋ ಎಂದು ಭಾಸವಾಗುವ ಮಟ್ಟಿಗೆ. ಇಲ್ಲಿ ಯಾರು ಯಾರನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಎನ್ನುವ ಕ್ರೌರ್ಯ ಉದ್ದಕ್ಕೂ ರಾಚುತ್ತದೆ.

ಗಂಡ- ಹೆಂಡತಿಯ ಸಂಬಂಧ, ತಂದೆ ಮಕ್ಕಳ ಸಂಬಂಧ, ಗೆಳೆಯರ ನಡುವಿನ ಸ್ನೇಹ, ಕೊನೆಗೆ ತಾಯಿ ಮಕ್ಕಳ ಸಂಬಂಧವೂ ವಿಷಮವಾಗಿರುವ ವಿವರಗಳನ್ನು ಇಲ್ಲಿನ ಕತೆಗಳಲ್ಲಿ ಓದುತ್ತಿದ್ದರೆ, ಇದು ನಿಜವಾಗಿ ಈ ಕತೆಗಾರರ ನಿಲುವೋ ಇಡೀ ವಲಸಿಗ ಸಮುದಾಯದ ಸಂಕೀರ್ಣ ಪರಿಸ್ಥಿಯ ಪರಿಣಾಮವೋ ಎನ್ನುವ ಪ್ರಶ್ನೆ ಏಳುತ್ತದೆ.

ಈ ಸಂಕಲನದ ಕಥೆಗಳು ಒಂದೋ ಮುಖ್ಯವಾಗಿ ಅರಬ್ ರಾಷ್ಟ್ರಗಳಿಗೆ ವಲಸೆ ಹೋಗಿ ಅಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವರನ್ನು, ಇಲ್ಲವೇ ಶ್ರೀಲಂಕಾದಿಂದ ವಲಸೆ ಬಂದು ತಮ್ಮ ನೆಲೆ ಕಂಡುಕೊಳ್ಳಲು ಹೆಣಗುತ್ತಿರುವವರನ್ನು ವಸ್ತುವಾಗಿಸಿಕೊಂಡಿವೆ. ಕನಕರಾಜ್ ಈ ಎರಡೂ ಸಂದರ್ಭಗಳನ್ನು ಅವುಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಆಯಾಮಗಳಿಂದ ಮಾತ್ರ ನೋಡುವುದಿಲ್ಲ. ಅಥವಾ ಇವರು ಈ ಸಂದರ್ಭಗಳನ್ನು ಬದುಕಿನ ಜೀವಸೆಲೆಯ ನೆಲೆಯಿಂದ ನೋಡಲು ಹಾತೊರೆಯುತ್ತಾರೆ ಎನ್ನುವುದೇ ಸರಿ. ಬಹುಶಃ ಈ ಕಾರಣಕ್ಕಾಗಿಯೇ ಇವು ಒಳದನಿಗಳ ಮರ್ಮರದಂತೆ ಕೇಳಿಸುತ್ತವೆ. ಬದುಕಿಡೀ ಒಂದಲ್ಲ ಒಂದು ಬಗೆಯ ಹೋರಾಟವೇ ಆಗಿಬಿಡುತ್ತಾ, ಸದಾ ಅಸುರಕ್ಷತೆಯ ಭಾವದಲ್ಲೇ ಒದ್ದಾಡುತ್ತಾ ಅದರಿಂದ ಹೊರಬರಲು ನಡೆಸುವುದು ಪ್ರಯತ್ನ ಮಾತ್ರವಾಗದೇ ತನ್ನ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬಿಡುತ್ತವೆ. ಈ ಹೋರಾಟದ ನಿರಂತರತೆ ಮತ್ತು ಅನಿವಾರ್ಯತೆಯೇ ವ್ಯಕ್ತಿಗಳನ್ನು ರೂಕ್ಷವಾಗಿಸಿಬಿಡುತ್ತದೋ ಎನ್ನುವ ಸ್ವಗತದ ಪ್ರಶ್ನೆಯನ್ನು ಕತೆಗಾರರು ಇಲ್ಲಿನ ಬಹುತೇಕ ಕತೆಗಳಲ್ಲಿ ಧ್ವನಿಸುತ್ತಾರೆ. ಆದರೆ ಕೆಲವೊಮ್ಮೆ ಇದೊಂದು ಆಬ್ಸೆಷನ್ ಕೂಡ ಆಗಿಬಿಟ್ಟು ಇಲ್ಲಿನ ಕೆಲವು ಕತೆಗಳು ಸೋದ್ದಿಶ್ಯವಾದ ರಚನೆಗಳಾಗಿ ಕಾಣಿಸುತ್ತವೆ. ‘ಕಾಮಾಲೆ ಕಣ್ಣು’ ಕತೆ ಇಂತಹ ಒಂದು ಕತೆ. ಸಿಲೋನ್ ಸೈಕಲ್ ಕತೆ ಇದಕ್ಕೆ ಪ್ರತಿಯಾಗಿ ಈ ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣ– ಅಲ್ಲಿ ಕತೆಗಾರರ ಆಲೋಚನೆಗಿಂತ ಬದುಕಿನ ಸಹಜ ಗತಿಯೇ ಮೇಲುಗೈ ಪಡೆದಿರುವುದು. ಹೇಗೋ ಹೊಟ್ಟೆ ಹೊರೆಯುವುದೇ ದಿನಪ್ರತಿಯ ಸವಾಲಾಗಿರುವಾಗ ಮಗ ಹೋಗಬೇಕೆಂದು ಬಯಸುವ ಪ್ರವಾಸ, ಅದಕ್ಕೆ ಬೇಕಾದ ಹಣ ಎಲ್ಲವೂ ತಂದೆಗೆ ಸಹಜವಾಗಿಯೇ ಬೇಡ ಮಾತ್ರವಲ್ಲ, ಹಾಗೆ ಮಗ ಬಯಸುವುದೇ ಅನೈತಿಕವೆಂದೂ ಅನ್ನಿಸುತ್ತದೆ. ತಂದೆಯ ಜೊತೆ ಜಗಳಾಡಿದ ಮಗ, ತನ್ನ ತಂದೆ ತನ್ನ ಶ್ರೀಲಂಕಾದ ಮೂಲದ ಬೇರೋ, ಸಂಕೇತವೋ ಎನ್ನುವಂತೆ ಕಾಪಿಟ್ಟುಕೊಂಡಿದ್ದ ಸೈಕಲ್‌ಅನ್ನು ಕಲ್ಲಿನಿಂದ ಜಜ್ಜಿ, ಮೋರಿಗೆ ಬಿಸಾಕಿ ಅಲ್ಲಿಂದ ಪಲಾಯನ ಮಾಡುವುದು, ಅದೆಷ್ಟೋ ದಿನಗಳ ನಂತರ ತನ್ನ ತಂದೆ ತಾಯಿಗೆ, ತನ್ನ ಮೂಲಕ್ಕೆ, ಭೂತಕ್ಕೆ, ತನ್ನದೇ ಪರಿವಾರಕ್ಕೆ ಹಂಬಲಿಸುವುದು ಸಹಜವಾಗಿ ಕತೆಯಲ್ಲಿ ಬೆಳವಣಿಗೆಯನ್ನು ಪಡೆದಿದೆ. ತನ್ನ ಬೌದ್ಧಿಕ ನಿಲುವು, ಭಾವುಕ ಅನಿಸಿಕೆಗಳು, ಅನುಭವವನ್ನು ಉದ್ದೇಶಪೂರ್ವಕವಾಗಿ ಸಾಧಾರಣೀಕರಣಗೊಳಿಸುವ ಹಠ ಈ ಎಲ್ಲವನ್ನೂ ಬಿಟ್ಟುಕೊಟ್ಟು ಕತೆಗಾರ ಬದುಕಿಗೆ ಶರಣಾಗಿರುವುದರಿಂದಲೇ ಈ ಕತೆ ಯಶಸ್ವಿಯಾಗಿದೆ.

ಎಂದರೆ ಕನಕರಾಜ್ ಇಲ್ಲಿ ಬದುಕಿನ ಕೆಲವು ವಾಸ್ತವ ಸನ್ನಿವೇಶಗಳನ್ನು ಇಡೀ ಸಮುದಾಯದ ವ್ಯಾಖ್ಯಾನವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಕತೆಗಾರನಾಗಿ ಕಲೆಗೆ ತನ್ನನ್ನು ಕೊಟ್ಟುಕೊಂಡಾಗಲೆಲ್ಲ ಸಂಪೂರ್ಣವಾಗಿ ಗೆದ್ದಿದ್ದಾರೆ. ಆದರೆ ತನ್ನ ಆಲೋಚನೆಗಳನ್ನು ಕತೆಗಳಾಗಿಸಲು ಹಂಬಲಿಸಿದಾಗ ಕತೆಗಳು ತುಸು ದುರ್ಬಲವಾದಂತೆ ಕಾಣಿಸುತ್ತವೆ. ಇದು ಕತೆಗಾರನಾಗಿ ಕನಕರಾಜ್ ಎದುರಿಸಲೇಬೇಕಾದ ಸವಾಲು ಕೂಡ ಹೌದು. ಕತೆಗಾರ ತನ್ನದನ್ನು ಕತೆಯಾಗಿಸುವ, ಬದುಕಿನ ಸತ್ಯಗಳನ್ನು ಕತೆಯಾಗಿಸುವ ಕತ್ತಿಯಂಚಿನ ದಾರಿಯಲ್ಲಿ ನಡೆಯಲೇಬೇಕು. ಈ ಎರಡೂ ಅಖಂಡವಾಗಿ ಬೆರೆತಾಗಲೇ ಅಪ್ಪಟ ಕತೆಗಳ ಸೃಷ್ಟಿ. ನೂರು ಬಿಕ್ಕಟ್ಟುಗಳ ನಡುವೆಯೂ ಬದುಕು ಪ್ರೀತಿ ಮತ್ತು ಗೌರವಕ್ಕೆ ಅರ್ಹವಾದುದು ಎನ್ನುವ ನಿಲುವಿಗೆ ಕನಕರಾಜ್ ಬಹುಬೇಗ ತಲುಪಲಿ. ಕನ್ನಡಕ್ಕೆ ಒಳ್ಳೆಯ ಕತೆಗಾರನೊಬ್ಬನ ಪ್ರವೇಶವಾಗಿದೆ ಎನ್ನುವುದನ್ನು ಸಮರ್ಥವಾಗಿ ದಾಖಲಿಸಿರುವ ಈ ಕತೆಗಳು ಇವರು ಅತ್ಯುತ್ತಮ ಕತೆಗಾರನಾಗುವ ಹಾದಿಯಲ್ಲಿ ಎದುರಿಸಬೇಕಾದ ಸವಾಲುಗಳನ್ನೂ ಸೂಚಿಸುತ್ತಿವೆ. ಮನುಷ್ಯನ ಕ್ರೌರ್ಯ, ಅಸಹಾಯಕತೆಗಳೇ ಇವರ ಕತೆಗಳ ಕೇಂದ್ರವನ್ನು ನಿರ್ಧರಿಸುತ್ತಿರುವಂತೆ ಕಾಣಿಸುತ್ತಿದೆ. ಇವುಗಳನ್ನು ಕುರಿತ ವ್ಯಗ್ರತೆಯೂ ಇಲ್ಲಿನ ಕತೆಗಳಲ್ಲಿ ಮೇಲುಗೈಯನ್ನು ಪಡೆದಿದೆ. ವ್ಯವಧಾನದಲ್ಲಿ ಹೊರಳಿ ನೋಡುವ, ಬದುಕನ್ನೂ ಮನುಷ್ಯರನ್ನೂ ಕಾಯುವ ಕರುಳನ್ನು ಕುರಿತ ನಂಬಿಕೆ ಇವರ ಕತೆಗಳಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಸಹಜವಾಗಿಯೇ ಕೊಟ್ಟೀತು.

Comments (Click here to Expand)
ಬೇರು
ಬೇರು
ಫಕೀರ
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್
ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ವರ್ಣಮಾಲೆಯಲ್ಲಿ ಕನ್ನಡ ಚರಿತೆ
ಲಲಿತಾ ಕೆ. ಹೊಸಪ್ಯಾಟಿ
ಮಲೆನಾಡಿನ ಶಿಕಾರಿಯ ನೆನಪುಗಳು
ಮಲೆನಾಡಿನ ಶಿಕಾರಿಯ ನೆನಪುಗಳು
ಕಡಿದಾಳು ಕೆ.ಎಸ್. ರಾಮಪ್ಪಗೌಡ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ಡಾ. ಜಿ. ಭಾಸ್ಕರ ಮಯ್ಯ
ಮೈಲಾರಲಿಂಗ ಪರಂಪರೆ
ಮೈಲಾರಲಿಂಗ ಪರಂಪರೆ
ಎಫ್‌.ಟಿ.ಹಳ್ಳಿಕೇರಿ
ಗದ್ದೆಯಂಚಿನ ದಾರಿ (ಪ್ರಬಂಧ)
ಗದ್ದೆಯಂಚಿನ ದಾರಿ (ಪ್ರಬಂಧ)
ಎಲ್.ಸಿ.ಸುಮಿತ್ರಾ
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ದಮತೀಯರು
ರಾಮಚಂದ್ರ ಗುಹಾ
ದೇವರ ದಾರಿ
ದೇವರ ದಾರಿ
ಮೊಗಳ್ಳಿ ಗಣೇಶ್‌
ಟೈರ‍್ಸಾಮಿ
ಟೈರ‍್ಸಾಮಿ
ಚೀಮನಹಳ್ಳಿ ರಮೇಶಬಾಬು
ನುಡಿಯೊಡಲು
ನುಡಿಯೊಡಲು
ಮಾಧವ ಚಿಪ್ಪಳಿ
ಸೂರ್ಯನ ನೆರಳು
ಸೂರ್ಯನ ನೆರಳು
ಕನ್ನಡಕ್ಕೆ : ಸಹನಾ ಹೆಗಡೆ
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.