ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಕಾಂಗ್ರೆಸ್‌ ಬೆನ್ನೇರಲು ಬಿಜೆಪಿ ಹವಣಿಕೆ!

ಮೇಲ್ದರ್ಜೆಗೇರಿ ಎರಡು ವರ್ಷದ ಬಳಿಕ ಕುಡುತಿನಿ ಪಟ್ಟಣ ಪಂಚಾಯಿತಿ ಚುನಾವಣೆ
Last Updated 29 ಆಗಸ್ಟ್ 2018, 9:30 IST
ಅಕ್ಷರ ಗಾತ್ರ

ಬಳ್ಳಾರಿ: ಸಂಡೂರು ತಾಲ್ಲೂಕಿನ ಕುಡುತಿನಿ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಎರಡು ವರ್ಷಗಳಿಗೂ ಅಧಿಕ ಕಾಲದ ಬಳಿಕ ಈಗ ಚುನಾವಣೆ ನಡೆಯುತ್ತಿದೆ.

2016ರಲ್ಲಿ ಮೇಲ್ದರ್ಜೇಗೇರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಒಪ್ಪದ ಜನ, ಕುಡುತಿನಿ ಪುರಸಭೆಯಾಗಲೇಬೇಕು ಎಂದು ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಅಲ್ಲಿಂದ ಇಲ್ಲೀವರೆಗೆ ಜನಪ್ರತಿನಿಧಿಗಳ ಆಡಳಿತ ಮಂಡಳಿ ಎಂಬುದೊಂದು ಇಲ್ಲದೆ ಈ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳೂ ಕುಂಟುತ್ತಿದ್ದವು.

ಇಲ್ಲಿ 2009ರಲ್ಲಿ ನಡೆದ ಗ್ರಾಮ ಪಂಚಾಯಿತಿಯ ಕೊನೇ ಚುನಾವಣೆ ರಾಜಕೀಯದ ನೆನಪುಗಳು ಈಗಿನ ಬಹಳ ಮಂದಿಗೆ ಇಲ್ಲ. ಆ ಅವಧಿಯಲ್ಲಿ ಆಯ್ಕೆಯಾಗಿದ್ದ ಬಹುತೇಕ ಸದಸ್ಯರು ಅದನ್ನು ಮರೆತುಬಿಟ್ಟಿದ್ದಾರೆ. ವಿವಿಧ ಪಕ್ಷಗಳ ಹಿರಿಯ ಮುಖಂಡರು ಮತ್ತು ಕೆಲವು ಸದಸ್ಯರಿಗೆ ಅದು ಮಸುಕಾದಂತೆ ನೆನಪಿನಲ್ಲಿದ್ದರೂ ಪ್ರಯೋಜನವಿಲ್ಲ. ಹೆಚ್ಚು ಕಡಿಮೆ ಒಂದು ದಶಕದ ಬಳಿಕವೇ ಇಲ್ಲಿ ಚುನಾವಣೆ ಕಾಲಿಟ್ಟಿದೆ.

ಈಗಿನ ಚುನಾವಣೆಯೇ ಎಲ್ಲರಿಗೂ ಮುಖ್ಯ. ಪಂಚಾಯಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣವಾಗಿಯೇ ಪಕ್ಷ ರಾಜಕೀಯ ಮತ್ತು ಸಂಘಟನೆಯೂ ಇಲ್ಲಿ ಬಲವಾಗಿಲ್ಲ. ಸ್ಥಳೀಯವಾಗಿ ಪ್ರಭಾವ ಬೀರಬಲ್ಲ ಮುಖಂಡರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ, ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ವರ್ಚಸ್ಸನ್ನು ಪಣಕ್ಕಿಟ್ಟು, ಪಕ್ಷದ ಬಲವನ್ನು ನೆಚ್ಚಿಕೊಂಡು ಮುಂದುವರಿದಿದ್ದಾರೆ.

ಕಾಂಗ್ರೆಸ್‌ ಬೆನ್ನೇರಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಕಾಂಗ್ರೆಸ್‌–ಜೆಡಿಎಸ್‌ ಇಲ್ಲಿ ಬದ್ಧ ಎದುರಾಳಿಗಳಾಗಿಯೇ ಉಳಿದಿವೆ.

ಕಾಂಗ್ರೆಸ್‌ ಪ್ರಭಾವ: 2008ರ ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಕುರುಗೋಡು ಕ್ಷೇತ್ರಕ್ಕೆ ಸೇರಿದ್ದ ಕುಡುತಿನಿ, ನಂತರ ಸಂಡೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡಿತು. ‘ಅಲ್ಲೀವರೆಗೂ ಇಲ್ಲಿ ಜೆಡಿಎಸ್‌ ಪ್ರಬಲವಾಗಿತ್ತು’ ಎಂದು ಇಲ್ಲಿನ ಕೆಲವರು ಹೇಳುತ್ತಾರೆ. ಆದರೆ ‘ಇದು ಕಾಂಗ್ರೆಸ್‌ನ ಭದ್ರ ಕೋಟೆ’ ಎಂಬುದು ಆ ಪಕ್ಷದವರ ಪ್ರತಿಪಾದನೆ.

ಮೂರನೇ ಅವಧಿಗೆ ಶಾಸಕರಾಗಿರುವ ಈ.ತುಕಾರಾಂ ಅವರು ತಮ್ಮ ಅನುದಾನದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು 14 ಅಂಶಗಳಾಗಿ ವಿಂಗಡಿಸಿ ಎಲ್ಲ ಅಭ್ಯರ್ಥಿಗಳ ಮಾಹಿತಿಯುಳ್ಳ ಕರಪತ್ರದಲ್ಲಿ ಮುದ್ರಿಸಿ ಹಂಚುವ ಕೆಲಸ ಭರದಿಂದ ನಡೆದಿದೆ.

ಈ ಪಟ್ಟಿಯನ್ನು ಮತದಾರರ ಮುಂದೆ ಇಟ್ಟರೆ ಅವರು ತಾವು ಭೂಮಿ ಕಳೆದುಕೊಂಡಿದ್ದನ್ನು ಸ್ಮರಿಸಿ, ಶಾಸಕರು ಸ್ಪಂದಿಸಲಿಲ್ಲ ಎಂದು ದೂರುತ್ತಾರೆ.

‘ಕೈಗಾರಿಕೆಗಳ ಸ್ಥಾಪನೆಗಾಗಿ ನಮ್ಮ ಜಮೀನನ್ನು ಕೊಟ್ಟೆವು. ಸರಿಯಾದ ಪರಿಹಾರವೂ ಸಿಗಲಿಲ್ಲ. ಕಾರ್ಖಾನೆಗಳೂ ಸ್ಥಾಪನೆಯಾಗಲಿಲ್ಲ. ನಮ್ಮ ಜಮೀನನ್ನು ವಾಪಸು ಕೊಡಿಸಿ ಎಂದರೆ ಯಾರೂ ಸ್ಪಂದಿಸುತ್ತಿಲ್ಲ. ಶಾಸಕರೂ ಗಮನ ಹರಿಸಿಲ್ಲ’ ಎಂಬುದು 8ನೇ ವಾರ್ಡಿನ ಸತೀಶ್‌, ವೆಂಕಟೇಶ್‌ ದೂರಿದರು.

ಈ ನಡುವೆ, ಇದೇ ಅಸಮಾಧಾನವನ್ನು ತಮ್ಮ ಬತ್ತಳಿಕೆಯ ಬಾಣವನ್ನಾಗಿ ಬಳಸಲು ಬಿಜೆಪಿಯವರಿಗೆ ಇಷ್ಟವಿದ್ದರೂ ಅದು ಆಗುತ್ತಿಲ್ಲ. ಏಕೆಂದರೆ ಭೂಮಿ ಸ್ವಾಧೀನ ಮಾಡಿಕೊಂಡಿರುವವರ ಅರ್ಸಲ್‌ ಮಿತ್ತಲ್‌ ಕಂಪೆನಿಯ ಜೊತೆಗೆ ಅವರ ಪಕ್ಷದವರೇ ಆದ ಜಿ.ಜನಾರ್ದನ ರೆಡ್ಡಿಯವರ ಬ್ರಹ್ಮಿಣಿ ಕಂಪೆನಿಯೂ ಇದೆ!

‘ಇದೆಲ್ಲವನ್ನೂ ಚುನಾವಣೆಯ ಸಂದರ್ಭದಲ್ಲಿ ಮಾತನಾಡಲು ಆಗುವುದಿಲ್ಲ. ಸತತ ಹತ್ತು ವರ್ಷದಿಂದ ಅಧಿಕಾರದಲ್ಲಿದ್ದ ಶಾಸಕರು ಸಂತ್ರಸ್ತರಿಗೆ ಪರಿಹಾರವನ್ನು ಕೊಡಿಸಬಹುದಿತ್ತಲ್ಲವೇ’ ಎನ್ನುತ್ತಾರೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ, 11ನೇ ವಾರ್ಡಿನ ಅಭ್ಯರ್ಥಿ ಜಿ.ಎಸ್‌.ವೆಂಕಟರಮಣ.

‘ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋತರೂ ಅತ್ಯಧಿಕ ಮತಗಳನ್ನು ಗಳಿಸಿತ್ತು. ಇಲ್ಲಿ ಪಕ್ಷದ ಪ್ರಭಾವ ಹೆಚ್ಚಿದೆ ಎಂಬುದಕ್ಕೆ ಅದೇ ನಿದರ್ಶನ. ’ ಎಂದು ಅವರು ಹೇಳಿದರು.

ಈ ಎರಡೂ ಪಕ್ಷಗಳ ನಡುವೆಯೇ ನೇರ ಪೈಪೋಟಿ ಏರ್ಪಟ್ಟಿದೆ. ಈ ಎರಡರ ನಡುವೆ ಜೆಡಿಎಸ್‌ ಕೂಡ ಎಂಟು ವಾರ್ಡ್‌ಗಳಲ್ಲಿ ಸ್ಪರ್ಧಿಸಿದೆ. ಅದರ ಅರ್ಧದಷ್ಟು ವಾರ್ಡ್‌ಗಳಲ್ಲಿ ಮಾತ್ರ ಗೆಲುವನ್ನು ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT