ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವಿ.ವಿಗಳ 300 ಅಂಕಪಟ್ಟಿ ಮಾರಿದ್ದರು!

* ಕೋರಮಂಗಲದಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ * ಆಂಧ್ರ, ಬಿಹಾರದ ಎಂಬಿಎ ಪದವೀಧರರ ಬಂಧನ
Last Updated 27 ಸೆಪ್ಟೆಂಬರ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು:‌ ನಿರುದ್ಯೋಗಿ ಯುವಕರಿಗೆ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಪ್ರಮಾಣಪತ್ರ ಹಾಗೂ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಎಂಬಿಎ ಪದವೀಧರರು ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯವನಾದ ಅರ್ಜುನ್ (30) ಹಾಗೂ ಬಿಹಾರದ ಹರೀಶ್ (28) ಎಂಬುವರನ್ನು ಬಂಧಿಸಲಾಗಿದೆ.ತಮಿಳುನಾಡಿನ ಪೆರಿಯಾರ್, ಛತ್ತೀಸಗಡದ ಸಿ.ವಿ.ರಾಮನ್, ಆಂಧ್ರಪ್ರದೇಶದ ಗೀತಂ ವಿಶ್ವವಿದ್ಯಾಲಯಗಳ ಹೆಸರುಗಳಲ್ಲಿದ್ದ 150 ನಕಲಿ ಅಂಕಪಟ್ಟಿಗಳು ಹಾಗೂ 50 ಪದವಿ ಪ್ರಮಾಣ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಉತ್ತರ ಪತ್ರಿಕೆಯ ಪ್ರತಿಗಳೂ ಅವರ ಬಳಿ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅರ್ಜುನ್, ಕೋರಮಂಗಲದ ‘ಜೋರ್ಕೆ ಸ್ಟಡಿ ಸೆಂಟರ್‌’ನಲ್ಲಿ ಬಿಸಿನೆಸ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಗಳಿಸಲು ಅಂಕಪಟ್ಟಿ ದಂಧೆ ನಡೆಸಲು ನಿರ್ಧರಿಸಿದ ಆತ, ಆ ಕಂಪನಿ ತೊರೆದು ತಾನೇ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ರಸ್ತೆಯಲ್ಲಿ ‘ಗುಡ್ ಗೈಡ್’ ಅಕಾಡೆಮಿ ಪ್ರಾರಂಭಿಸಿದ್ದ. ಅಲ್ಲಿ ಹರೀಶ್‌ನನ್ನೂ ಕೆಲಸಕ್ಕೆ ಸೇರಿಸಿಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೌಕರಿ ಡಾಟ್ ಕಾಮ್‌ ಸೇರಿದಂತೆ ಉದ್ಯೋಗಕ್ಕೆ ಸಂಬಂಧಿಸಿದ ಜಾಲತಾಣಗಳನ್ನು ಶೋಧಿಸುತ್ತಿದ್ದ ಆರೋಪಿಗಳು, ಅಲ್ಲಿ ಸಲ್ಲಿಕೆಯಾಗಿರುವ ರೆಸ್ಯುಮ್‌ಗಳನ್ನು (ಸ್ವ–ವಿವರ) ಪರಿಶೀಲಿಸುತ್ತಿದ್ದರು. ಪಿಯುಸಿವರೆಗೆ ಮಾತ್ರ ವ್ಯಾಸಂಗ ಮಾಡಿರುವವರನ್ನು ಸಂಪರ್ಕಿಸಿ, ‘₹ 45 ಸಾವಿರ ಕೊಟ್ಟರೆ ಮೂರೇ ತಿಂಗಳಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ಕೋರ್ಸ್‌ಗಳ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಕೊಡುತ್ತೇವೆ. ಅದಕ್ಕೆ ನೀವು ಪರೀಕ್ಷೆ ಬರೆಯುವ ಅಗತ್ಯವೂ ಇಲ್ಲ’ ಎಂದು ಹೇಳುತ್ತಿದ್ದರು. ಅದಕ್ಕೆ ಒಪ್ಪಿದವರನ್ನು ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದರು.

ಹಣ ಪಡೆದ ಬಳಿಕ ವಿಶ್ವವಿದ್ಯಾಲಯಗಳ ಲೋಗೊ ಬಳಸಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಸಿದ್ಧಪಡಿಸುತ್ತಿದ್ದರು. ಕುಲಸಚಿವರ ಸಹಿ ಹಾಗೂ ಸೀಲನ್ನು ಅಸಲಿ ಅಂಕಪಟ್ಟಿಯಿಂದ ಸ್ಕ್ಯಾನ್ ಮಾಡಿಕೊಂಡು, ನಕಲಿ ಅಂಕಪಟ್ಟಿ ಮೇಲೆ ಮುದ್ರಿಸುತ್ತಿದ್ದರು. ಇವರಿಂದ ಪಡೆದ ಶೈಕ್ಷಣಿಕ ದಾಖಲೆಗಳನ್ನೇ ಕಂಪನಿಗಳಿಗೆ ಸಲ್ಲಿಸಿ ಹಲವರು ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿಗಳು ಈವರೆಗೆ ಸುಮಾರು 300 ಮಂದಿಗೆ ಅಂಕಪಟ್ಟಿ ಕೊಟ್ಟಿದ್ದು, ₹ 1.20 ಕೋಟಿ ಸಂಪಾದನೆ ಮಾಡಿದ್ದಾರೆ. ಅವರ ಬಳಿ ಕೆಲ ಅಸಲಿ ಅಂಕಪಟ್ಟಿಗಳೂ ಸಿಕ್ಕಿದ್ದು, ವಿಶ್ವವಿದ್ಯಾಲಯಗಳ ಕೆಲ ನೌಕರರೂ ದಂಧೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಆಯಾ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗೆ ಪತ್ರ ಬರೆದಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಂ.ಡಿಗೆ ನೋಟಿಸ್: ‘ಚಾಮರಾಜಪೇಟೆಯ ‘ಎಸ್‌.ಎಸ್.ಬೆಂಗಳೂರು ಎಜುಕೇಷನ್ ಟ್ರಸ್ಟ್‌’ ವ್ಯವಸ್ಥಾಪಕ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಸಿ.ವಿ ರಾಮನ್‌ ವಿಶ್ವವಿದ್ಯಾಲಯದಿಂದ ಅಂಕಪಟ್ಟಿಗಳನ್ನು ತರಿಸಿಕೊಡುತ್ತಾರೆ’ ಎಂದು ಅರ್ಜುನ್ ಹೇಳಿದ್ದಾನೆ. ಹೀಗಾಗಿ, ನಾಗೇಂದ್ರ ಪ್ರಸಾದ್ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದೇವೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT