ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಜಿಲ್ಲೆಯಲ್ಲಿ ತಪ್ಪದ ಕನ್ನಡದ ಬವಣೆ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಯಾದಗಿರಿ: ಇತಿಹಾಸ, ಸಂಸ್ಕೃತಿ, ಸಾಹಿತ್ಯ, ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ ಯಾದಗಿರಿ. ಧಾನ್ಯ ಸಂಪತ್ತಿನಿಂದ ಸಮೃದ್ಧವಾಗಿರುವ ಜಿಲ್ಲೆಯಲ್ಲಿ ಸಾಹಿತ್ಯಿಕ ಸಿರಿಗೂ ಕೊರತೆ ಏನಿಲ್ಲ. ಆದರೆ ನೂತನ ತೆಲಂಗಾಣ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣವೇ ಸಿಗುತ್ತಿಲ್ಲ ಎನ್ನುವ ಕೊರಗು ಮಾತ್ರ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರನ್ನು ಕಾಡುತ್ತಿದೆ.

ಶಾತವಾಹನರು, ಚಾಲುಕ್ಯರು, ರಾಷ್ಟ್ರ­ಕೂಟರು, ಕಲ್ಯಾಣದ ಚಾಲು­ಕ್ಯರು, ಹೈಹಯರು, ಕಳಚೂರ್ಯರು, ಶಿಲಾಹಾರರು, ಮಾಸವಾಡಿಯ ಸೇವು­ಣರು, ಮಗದ ವಂಶಜರು, ಬಹುಮನಿ ಅರಸರು, ಯಾದವರು, ಸುರಪುರದ ಗೋಸಲ ವಂಶದ ನಾಯಕರು ಸೇರಿದಂತೆ ಅನೇಕ ರಾಜಮನೆತನಗಳ ಆಳ್ವಿಕೆಯನ್ನೂ ಜಿಲ್ಲೆ ಕಂಡಿದೆ. ರಾಜರ ಕಾಲದಿಂದಲೂ ಈ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹುಲುಸಾಗಿಯೇ ಬೆಳೆದಿದೆ.

ಸುರಪುರದ ಗರುಡಾದ್ರಿ ಕಲೆ, ಮುದನೂರಿನ ದಾಸಿಮಯ್ಯನ ವಚನಗಳು, ತಿಂಥಣಿ ಮೌನೇಶ್ವರರು, ಕೆಂಭಾವಿ ಭೋಗಣ್ಣನವರ ವಚನಗಳು ಹೀಗೆ ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುವ ಅನೇಕ ಉದಾಹರಣೆಗಳು ಜಿಲ್ಲೆಯಲ್ಲಿವೆ. ಇನ್ನು ಲಕ್ಷ್ಮೀಶನ ಜನ್ಮಸ್ಥಳದ ಬಗ್ಗೆ ವಿವಾದವಿದ್ದರೂ, ಆತ ಸುರಪುರ ತಾಲ್ಲೂಕಿನ ದೇವಪುರದ ಎನ್ನುವ ವಾದಗಳೂ ಇವೆ. ಹೀಗಾಗಿ ಸಾಹಿತ್ಯದ ದೃಷ್ಟಿಯಿಂದ ಜಿಲ್ಲೆಗೆ ಐತಿಹಾಸಿಕ ಪ್ರಾಮುಖ್ಯತೆ ಇದೆ. ಜೊತೆಗೆ ಇಲ್ಲಿ ಸಿಕ್ಕಿರುವ ಅನೇಕ ಶಾಸನಗಳು ಕನ್ನಡದ ಹಿರಿಮೆಯನ್ನು ಸಾರಿ ಹೇಳುತ್ತಿವೆ.

ಕನ್ನಡಕ್ಕೆ ಸಿಗದ ಪ್ರಾಮುಖ್ಯ:   ಗಡಿ ಜಿಲ್ಲೆಯಾದ ಯಾದಗಿರಿಯಲ್ಲಿ ಈಗಲೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಅದಕ್ಕೆ ತಕ್ಕಂತೆ ಕನ್ನಡದ ಬೆಳವಣಿಗೆಗೆ ಪೂರಕವಾದ ವಾತಾವರಣವೇ ನಿರ್ಮಾಣ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಜಿಲ್ಲಾ ಕೇಂದ್ರದಿಂದ ಕೇವಲ 10–12 ಕಿ.ಮೀ. ದೂರದಲ್ಲಿಯೇ ತೆಲಂಗಾಣ ರಾಜ್ಯದ ಗಡಿ ಆರಂಭ­ವಾಗುತ್ತದೆ. ಈ ಭಾಗದಲ್ಲಿರುವ ಗ್ರಾಮ­ಗಳಲ್ಲಿ ಈಗಲೂ ತೆಲಗು ಭಾಷೆಯೇ ಪ್ರಧಾನವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಈ ಭಾಗಕ್ಕೆ ಬರುವ ರಾಜ­ಕೀಯ ನಾಯಕರೂ, ತೆಲಗು ಭಾಷೆ­ಯಲ್ಲಿ ಮತಯಾಚಿಸಿದ ಉದಾಹರಣೆ­ಗಳೂ ಇವೆ.

ಇಂತಹ ಪರಿಸ್ಥಿತಿ ಇದ್ದರೂ, ಗಡಿ ಭಾಗದಲ್ಲಿ ಕನ್ನಡದ ಉಳಿವಿಗಾಗಿ ವಿಶೇಷ ಕಾರ್ಯಕ್ರಮಗಳೂ ಜಾರಿ­ಯಾಗು­ತ್ತಿಲ್ಲ. ಅಲ್ಲದೇ ಇಲ್ಲಿಯವರೆಗೂ ಜಿಲ್ಲೆಯ ಗಡಿ ಗ್ರಾಮಗಳಿಗೆ ಭೇಟಿ ನೀಡುವ ಸೌಜನ್ಯವನ್ನೂ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ತೋರುತ್ತಿಲ್ಲ. ಅಷ್ಟೇ ಏಕೆ, ಜಿಲ್ಲಾ ಕೇಂದ್ರದಲ್ಲಿಯೇ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಒಂದೇ ಒಂದು ಸೂರೂ ಇಲ್ಲ!

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವೇನೋ ರಚನೆಯಾಗಿದೆ. ಈಗಾಗಲೇ ಒಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೂರೈಸಿದ್ದು, ಎರಡನೇ ಸಮ್ಮೇಳನಕ್ಕೆ ಸಿದ್ಧತೆ ಆರಂಭಿಸಿದೆ. ಆದರೆ ಸಾಹಿತ್ಯ ಪರಿಷತ್ತಿನ ಕಚೇರಿಯನ್ನೂ ಬಾಡಿಗೆ ಕಟ್ಟಡದಲ್ಲಿ ನಡೆಸುವ ಸ್ಥಿತಿ ಜಿಲ್ಲೆಯಲ್ಲಿದೆ.
ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಕ್ಕೆ ನೀಡಲಾಗಿದ್ದ ನಿವೇಶನದಲ್ಲಿ ಪರಿಷತ್ತಿನ ಭವನದ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ, ಅಗತ್ಯ ಅನುದಾನ ಹೊಂದಿಸಲು ಪರಿಷತ್ತಿನ ಪದಾಧಿಕಾರಿಗಳು ಪ್ರಯಾಸ ಪಡುವಂತಾಗಿದೆ.

ಜಿಲ್ಲೆಗೆ ತಲಾ ₨ 2 ಕೋಟಿ ವೆಚ್ಚದಲ್ಲಿ ಕನ್ನಡ ಭವನ, ರಂಗಮಂದಿರಗಳು ಮಂಜೂರಾಗಿದ್ದರೂ, ಇನ್ನು ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಹೀಗಾಗಿ ಕನ್ನಡದ ಕಾರ್ಯಕ್ರಮಗಳನ್ನು ಮಾಡಬೇಕಾದರೆ, ಕಲ್ಯಾಣ ಮಂಟಪಗಳನ್ನು ಬಾಡಿಗೆ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿಗಳು ಹೇಳುತ್ತಾರೆ.

ಬದಲಾಗದ ಹೆಸರು:   ರಾಜ್ಯದ 12 ನಗರಗಳ ಹೆಸರನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮಗಳ ಹೆಸರುಗಳು ಮಾತ್ರ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ನಲಗುತ್ತಿವೆ.ಜಿಲ್ಲಾ ಕೇಂದ್ರವಾದ ಯಾದ­ಗಿರಿಯು, ಸರ್ಕಾರಿ ದಾಖಲೆಗಳಲ್ಲಿ ಈಗಲೂ ‘ಯಾದಗಿರ್‌’ ಎಂದೇ ಇದೆ. ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ಸುರಪುರವೂ ಸರ್ಕಾರಿ ದಾಖಲೆಗಳ ಪ್ರಕಾರ ‘ಶೋರಾಪುರ’ ಎಂದಾಗಿದೆ.

ಇಷ್ಟೇ ಅಲ್ಲದೇ, ಗಡಿ ಭಾಗದಲ್ಲಿರುವ ಅನೇಕ ಗ್ರಾಮಗಳ ಹೆಸರುಗಳು ತೆಲಗುಮಯವಾಗಿವೆ. ದದ್ದಲ್, ಬದ್ದೇಪಲ್ಲಿ, ದುಪ್ಪಲ್ಲಿ, ನಸಲವಾಯಿ, ಚಲ್ಹೇರಿ, ಫುಟ್‌ಪಾಕ್‌, ಚಪೇಟ್ಲಾ ಹೀಗೆ ಬಹುತೇಕ ಗ್ರಾಮಗಳ ಹೆಸರನ್ನು ಕೇಳಿದರೆ, ನೆರೆಯ ತೆಲಂಗಾಣದಲ್ಲಿ ಇರಬಹುದು ಎಂಬ ಭಾವನೆ ಬರದೇ ಇರಲಾರದು.
ಅನೇಕ ಇಲ್ಲಗಳ ನಡುವೆಯೂ ಕನ್ನಡದ ಬೆಳವಣಿಗೆಗೆ ಜಿಲ್ಲೆಯ ಅನೇಕ ಸಾಹಿತಿಗಳು, ಸಂಘ–ಸಂಸ್ಥೆಗಳು ಈಗಲೂ ಶ್ರಮಿಸುತ್ತಿವೆ. ಕನ್ನಡವನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಸರ್ಕಾರವೂ ಅಗತ್ಯ ಪ್ರೋತ್ಸಾಹ ನೀಡಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT