ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಚಿವರ ಚಾಮರಾಜನಗರ ಕ್ಷೇತ್ರದ ಶಾಲೆಯ ದುಃಸ್ಥಿತಿ ಕೇಳುವವರಿಲ್ಲ

ಶಿಥಿಲಗೊಂಡು ಆರು ವರ್ಷಗಳು ಕಳೆದರೂ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು
Last Updated 15 ಆಗಸ್ಟ್ 2018, 13:38 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಈ ಹಿಂದೆ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನವಾಗಿದ್ದ ಸಂತೇಮರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಗೆ ತಲುಪಿ ಆರು ವರ್ಷಗಳಾದರೂ ದುರಸ್ತಿ ಮಾಡಲು ಇದುವರೆಗೆ ಯಾರೂ ಕ್ರಮ ಕೈಗೊಂಡಿಲ್ಲ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರ ಕ್ಷೇತ್ರಕ್ಕೆ‌ಒಳಪಡುವ ಈ ಶಾಲೆಯ ದುಃಸ್ಥಿತಿಯ ಬಗ್ಗೆ ಅರಿವಿದ್ದರೂ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅದರ ದುರಸ್ತಿಗೆ ಗಮನಹರಿಸಿಲ್ಲ. ಹಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಅದರಿಂದ ಪ್ರಯೋಜನ ಆಗಿಲ್ಲ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಬೋಧಿಸಲಾಗುತ್ತಿದೆ. ಸದ್ಯ ಇಲ್ಲಿ 104 ವಿದ್ಯಾರ್ಥಿಗಳಿಗೆ ಐವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಶಾಲೆಯ ಕೊಠಡಿಗಳ ಮೇಲ್ಚಾವಣಿಸಂಪೂರ್ಣವಾಗಿ ಹೋಗಿದೆ. ಕಿಟಕಿ ಬಾಗಿಲುಗಳು ಮುರಿದು ಬಿದ್ದಿವೆ. ಮಳೆ ಗಾಳಿಗೆ ಗೋಡೆಗಳು ಶಿಥಿಲಗೊಂಡು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದೆ.

ಶಿಥಿಲಗೊಂಡಿರುವ ಕೊಠಡಿಗಳಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಆದರೆ, ಈ ಕೊಠಡಿಗಳ ಗೋಡೆಗೆ ಶಿಥಿಲಗೊಂಡಿರುವ ಕೊಠಡಿಗಳ ಮೂಲಕ ಮಳೆ ನೀರು ತಾಗಲು ಆರಂಭವಾಯಿತು. ಜೊತೆಗೆ ಗೋಡೆಗಳೂ ಬಿರುಕು ಬಿಟ್ಟವು. ಇದರಿಂದಾಗಿ ಶಿಕ್ಷಕರು ಇವುಗಳಿಗೂ ಬೀಗ ಜಡಿದಿದ್ದಾರೆ.

ಹಾಗಾಗಿ,ವಿದ್ಯಾರ್ಥಿಗಳು ಅನಿವಾರ್ಯವಾಗಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರದಲ್ಲಿ ಪಾಠ ಕೇಳುವಂತಹ ಸ್ಥಿತಿ ಒದಗಿ ಬಂದಿದೆ.

ಸ್ಥಳಕ್ಕೆ ಶಿಕ್ಷಣ ಅಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ,ತಾಲ್ಲೂಕು ಪಂಚಾಯಿತಿಯ ಸಭೆಯಲ್ಲಿ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಅವರು ಇದುವರೆಗೂ ಇತ್ತ ಗಮನ ಹರಿಸಿಲ್ಲ.

ಉಪವಿಭಾಗಾಧಿಕಾರಿಗಳು ಶಾಲೆಯ ಪರಿಶೀಲನೆ ನಡೆಸಿದ್ದಾಗ,ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೋಷಕರಿಗೆ ನೀಡಿದ ಭರವಸೆಯೂ ಸುಳ್ಳಾಗಿದೆ.

ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಉದಾಸೀನ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪೋಷಕರು, ತಕ್ಷಣವೇ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT